ತನಿಖಾ ಸಂಸ್ಥೆಗಳ ದುರುಪಯೋಗದ ವಿರುದ್ಧ ಧ್ವನಿ ಎತ್ತಬೇಕಾದ ಕಾಂಗ್ರೆಸ್ ಪಕ್ಷದವರು ಎಸ್ ಡಿಪಿಐ ಮೇಲೆ ರಾಜಕೀಯ ದ್ವೇಷ ಕಾರುತ್ತಿದ್ದಾರೆ: ರಿಯಾಝ್ ಕಡಂಬು

Prasthutha|

ಬೆಂಗಳೂರು: ಕಾಂಗ್ರೆಸ್ ನಾಯಕರಾದ ಸೋನಿಯಾ ಗಾಂಧಿ, ರಾಹುಲ್ ಗಾಂಧಿಯನ್ನು ಇ.ಡಿ ವಿಚಾರಣೆಗೆ ಕರೆದಾಗ, ಡಿ.ಕೆ. ಶಿವಕುಮಾರ್ ಅವರನ್ನು ಇಡಿ ವಿಚಾರಣೆ ಮತ್ತು ಬಂಧನ ಮಾಡಿದಾಗ ಕಾಂಗ್ರೆಸ್ ಪಕ್ಷ ಎಲ್ಲೆಡೆ ಪ್ರತಿಭಟನೆಗೆ ಮುಂದಾಗಿತ್ತು. ರಾಜ್ಯ ಘಟಕದ ಯುವ ಕಾಂಗ್ರೆಸ್ ಅಧ್ಯಕ್ಷ ನಲಪಾಡ್ ಅವರೂ ಇದರಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದರು. ಆದರೆ ಅದೇ ಇ.ಡಿ, ಎನ್.ಐ.ಎಗಳು ಇಂದು ನಿರಾಧಾರ ಆರೋಪ ಮಾಡುತ್ತಾ ಪಿ.ಎಫ್.ಐ ಕಚೇರಿ ಮತ್ತು ನಾಯಕರ ಮೇಲೆ ದಾಳಿ ಮಾಡಿ ಬಂಧಿಸುತ್ತಿರುವಾಗ ಫಾಶಿಸ್ಟ್ ಸರ್ಕಾರದ ಈ ತನಿಖಾ ಸಂಸ್ಥೆಗಳ ದುರುಪಯೋಗದ ವಿರುದ್ಧ ಧ್ವನಿ ಎತ್ತಬೇಕಾದ ಕಾಂಗ್ರೆಸ್, ಎಸ್ ಡಿಪಿಐ ಮೇಲಿನ ರಾಜಕೀಯ ದ್ವೇಷದ ಕಾರಣಕ್ಕೆ ಕೋಮುವಾದಿ ಸರ್ಕಾರದ ಸಂವಿಧಾನ ವಿರೋಧಿ ನಡೆಯನ್ನು ಬೆಂಬಲಿಸುತ್ತಿದೆ. ಯುವ ಘಟಕದ ಅಧ್ಯಕ್ಷ ಮುಹಮ್ಮದ್ ನಲಪಾಡ್ ಎಸ್ ಡಿಪಿಐ ಮತ್ತು ಪಿ.ಎಫ್.ಐ ಬ್ಯಾನ್ ಆಗಬೇಕೆಂದು ಹೇಳಿಕೆ ಕೊಡುತ್ತಿದ್ದಾರೆ. ನಲಪಾಡ್ ಅವರ ಈ ಹೇಳಿಕೆಯನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ. ಕಪಟಿ ಕಾಂಗ್ರೆಸ್ ನ ಈ ಬೂಟಾಟಿಕೆಯೇ ದೇಶಕ್ಕೆ ಮಾರಕವಾಗಿದೆ ಎಂದು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್ ಡಿಪಿಐ) ರಾಜ್ಯ ಸಮಿತಿ ಸದಸ್ಯ ರಿಯಾಝ್ ಕಡಂಬು ಹೇಳಿದ್ದಾರೆ.

- Advertisement -


ಕುಡಿದ ಮತ್ತಿನಲ್ಲಿ ಅವರಿವರ ಮೇಲೆ ಹಲ್ಲೆ ಮಾಡಿ “ರೌಡಿ ನಲಪಾಡ್” ಎಂದೇ ಕುಖ್ಯಾತಿ ಗಳಿಸಿರುವ ಇದೇ ನಲಪಾಡ್ ಇಂದು ತಮ್ಮ ಪಕ್ಷದ ನಾಯಕರನ್ನು ಮೆಚ್ಚಿಸಲು ಈ ರೀತಿಯ ಬಾಲಿಶ ಹೇಳಿಕೆ ಕೊಡುತ್ತಿದ್ದಾರೆ. ಅಂತಹ ಗೂಂಡಾ ವರ್ತನೆ ಮಾಡಿದ ಮೇಲೂ ನಾನು ತಪ್ಪು ಮಾಡಿಲ್ಲ ಎಂದು ಮಾಧ್ಯಮಗಳ ಮುಂದೆ ಅಲವತ್ತುಕೊಂಡಿದ್ದ ನಲಪಾಡ್ ಅವರಿಗೆ ಬೇರೆಯವರಿಗೂ ಆ ಹಕ್ಕು ಇರುತ್ತದೆ ಎನ್ನುವುದು ತಿಳಿದಿರಬೇಕು. ಇನ್ನೊಬ್ಬರನ್ನು ಟೀಕಿಸುವ ಮೊದಲು ತಮ್ಮ ಪಕ್ಷದವರು ನಡೆಸಿದ ಸಿಖ್ ನರಮೇಧದ ಬಗ್ಗೆ ಇತಿಹಾಸದ ಪುಟಗಳನ್ನು ತಿರುವಿಹಾಕಿ ನೋಡಲಿ. ಇಂತಹ ರಕ್ತಪಾತದ ಇತಿಹಾಸ ಇರುವ ಕಾಂಗ್ರೆಸ್ ಪಕ್ಷದವರಾಗಿ ಇಂದು ಯಾವ ತಪ್ಪು ಮಾಡಿರುವ ಬಗ್ಗೆ ಎಲ್ಲೂ ಸಾಬೀತಾಗಿರದ ಎಸ್ ಡಿಪಿಐ ಮತ್ತು ಪಿ.ಎಫ್.ಐ ಬ್ಯಾನ್ ಆಗಬೇಕೆಂದು ಕರೆ ಕೊಟ್ಟಿರುವುದು ಹಾಸ್ಯಾಸ್ಪದ ಎಂದು ರಿಯಾಝ್ ಕಡಂಬು ಹೇಳಿಕೆಯಲ್ಲಿ ತಿರುಗೇಟು ನೀಡಿದ್ದಾರೆ.
ಕೇವಲ ನಮ್ಮ ಮೇಲಿನ ರಾಜಕೀಯ ದ್ವೇಷದ ಕಾರಣಕ್ಕೆ ಕಾಂಗ್ರೆಸ್ ಪಕ್ಷ, ಫಾಶಿಸ್ಟ್ ಬಿಜೆಪಿ ಸರ್ಕಾರದ “ಮೋದಿ ತನಿಖಾ ಸಂಸ್ಥೆಗಳ” ಬೆಂಬಲಕ್ಕೆ ನಿಲ್ಲದೆ ದೇಶದಲ್ಲಿ ತನಿಖಾ ಸಂಸ್ಥೆಗಳ ದುರುಪಯೋಗದ ಬಗ್ಗೆ ಧ್ವನಿಯೆತ್ತಲಿ ಎಂದು ಅವರು ಹೇಳಿದ್ದಾರೆ.

Join Whatsapp