ಕಾಂಗ್ರೆಸ್ ಪಕ್ಷ ಚುನಾವಣೆಯಲ್ಲಿ ಸೋತಿದೆ, ಸತ್ತಿಲ್ಲ: ಬಿ.ಕೆ.ಹರಿಪ್ರಸಾದ್

Prasthutha|

ಬೆಂಗಳೂರು: ಚುನಾವಣಾ ಪ್ರಜಾಪ್ರಭುತ್ವ ಪ್ರಕ್ರಿಯೆಯಲ್ಲಿ ಪ್ರಜೆಗಳ ತೀರ್ಪಿಗೆ ತಲೆಬಾಗಬೇಕಿದೆ. ಗುಜರಾತ್ ಚುನಾವಣೆಯಲ್ಲಿ ನಮ್ಮ ಪಕ್ಷದ ನಿರೀಕ್ಷೆ ಹುಸಿಯಾಗಿದೆ. ಜನತೆ ಮಾಡಿದ ನಿರ್ಧಾರವನ್ನು ಸ್ವಾಗತಿಸುತ್ತೇವೆ. ಸಾಲು ಸಾಲು ಅಕ್ರಮಗಳು, ಆಡಳಿತ ಯಂತ್ರದ ದುರ್ಬಳಕೆ, ಪ್ರಜಾತಂತ್ರ ವ್ಯವಸ್ಥೆಯನ್ನೇ ಬುಡಮೇಲು ಮಾಡಿದ ಕೇಂದ್ರದ ಪ್ರಭುತ್ವಕ್ಕೆ ಕಾಲ ಉತ್ತರಿಸಲಿದೆ ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್ ಪ್ರತಿಕ್ರಿಯಿಸಿದ್ದಾರೆ.

- Advertisement -

ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ವಿಪಕ್ಷಗಳ ಹಾಲಿ ಶಾಸಕ ಅಭ್ಯರ್ಥಿಗಳ ಮೇಲೆಯೇ ಬಿಜೆಪಿ ಪಕ್ಷದ ಕಾರ್ಯಕರ್ತರು ನಡೆಸಿದ ಹಲ್ಲೆ, ನಾಮಪತ್ರ ಸಲ್ಲಿಸುವಾಗ ಅಭ್ಯರ್ಥಿಯನ್ನೇ ಅಪಹರಣ ಮಾಡಿದ ಘಟನೆ, ಪ್ರಧಾನಿ ಮೋದಿಯವರ ಚುನಾವಣಾ ಯಾತ್ರೆಗೆ ಸಹಕಾರ, ಚುನಾವಣೆ ದಿನವೂ ರೋಡ್ ಶೋ ಸೇರಿದಂತೆ ಅನೇಕ ಘಟನೆಗಳಿಗೆ ಚುನಾವಣಾ ಆಯೋಗ ತೋರಿದ ಅಸಹಾಯಕತೆಯ ಸಾಕ್ಷಿಯೇ ಗುಜರಾತಿನ ಫಲಿತಾಂಶ ಎಂದು ಹೇಳಿದರು.

ಕಾಂಗ್ರೆಸ್ ಪಕ್ಷ ಚುನಾವಣೆಯಲ್ಲಿ ಸೋತಿದೆ, ಸತ್ತಿಲ್ಲ. ನಮ್ಮ ಪಕ್ಷದ ಬೆನ್ನೆಲುಬಾಗಿರುವ ಕಾರ್ಯಕರ್ತರ ಜೊತೆಗೆ ಪಕ್ಷ ಬಲವಾಗಿ ನಿಲ್ಲಲಿದೆ.  ಕೋಮು ಅಜೆಂಡಾಗಳು, ಮತೀಯ ಭಾವನೆಗಳು, ಹುಸಿ ಭರವಸೆಗಳು, ಕಾರ್ಯಕರ್ತರ ಕುಟುಂಬಗಳಿಗೆ ಹುಟ್ಟಿಸಿದ ಭಯದ ವಾತಾವರಣವನ್ನೂ ಮೀರಿಯೂ ಗುಜರಾತ್ ಜನತೆ ನಮಗೆ ಮತ ನೀಡಿದ್ದಾರೆ. ಅವರೆಲ್ಲರಿಗೂ ನನ್ನ ಕೃತಜ್ಞತೆಗಳು ಎಂದು ಹರಿಪ್ರಸಾದ್ ಹೇಳಿದ್ದಾರೆ.

- Advertisement -

ಬಿದ್ದರೂ ಮೀಸೆ ಮಣ್ಣಾಗಿಲ್ಲ ಎಂಬಂತೆ ಪ್ರಧಾನಿ ಮೋದಿಯ ವರ್ಚಸ್ಸಿನ ಬಗ್ಗೆ ಗೋದಿ ಮೀಡಿಯಾ ಭಜನೆ ಮಾಡುತ್ತಿದೆ. ಹದಿನೈದು ವರ್ಷದ ದೆಹಲಿಯ ಪಾಲಿಕೆ ಬಿಜೆಪಿ ಕೈ ತಪ್ಪಿದೆ, ಅಧಿಕಾರದಲ್ಲಿದ್ದರೂ ಹಿಮಾಚಲ ಪ್ರದೇಶದಲ್ಲಿ ಸೋತು ಸುಣ್ಣವಾಗಿದ್ದರೂ ಪ್ರಧಾನಿಯ ಸುನಾಮಿ ಯಾವ ದಿಕ್ಕಿನಲ್ಲಿ ಎದ್ದಿರುವುದನ್ನು ದುರ್ಭೀನು ಹಾಕಿ ನೋಡಬೇಕಿದೆ ಎಂದು ಅವರು ಹೇಳಿದ್ದಾರೆ.

ಗುಜರಾತ್ ಚುನಾವಣೆಯ ಫಲಿತಾಂಶ ಮಾತ್ರವೇ ಕರ್ನಾಟಕದ ಮೇಲೆ ಪ್ರಭಾವ ಬೀರುವುದಾದರೆ ಹಿಮಾಚಲ ಪ್ರದೇಶದ ಫಲಿತಾಂಶ ಯಾಕೆ ಪ್ರಭಾವ ಬೀರುವುದಿಲ್ಲ?  ರಾಷ್ಟ್ರ ರಾಜಧಾನಿಯಲ್ಲೇ ಮತದಾರರು ಮಣ್ಣು ಮುಕ್ಕಿಸಿರುವುದು ಅಧಿಕಾರದಲ್ಲಿದ್ದ ಯಾವ ಪಕ್ಷಕ್ಕೆ? ಪ್ರಧಾನಿಗಳ ಸುನಾಮಿ, ಬಿರುಗಾಳಿ ದೆಹಲಿ ಮತ್ತು ಹಿಮಾಚಲದ ಜನರತ್ತ ಬೀಸಲಿಲ್ವಾ? ಕರ್ನಾಟಕದ ಭ್ರಷ್ಟ ಬಿಜೆಪಿ ಸರ್ಕಾರವನ್ನ ಕಿತ್ತೊಗೆಯಲು ಜನತೆ ನಿರ್ಧಾರ ಮಾಡಿಯಾಗಿದೆ. ಅದರಿಂದ ಪಾರಾಗಲು ಕರ್ನಾಟದ ಬಿಜೆಪಿ ಗುಜರಾತ್ ಫಲಿತಾಂಶದ ಬಿಲದಲ್ಲಿ ನುಸುಳುತ್ತಿದೆ. ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷವನ್ನ ಅಧಿಕಾರಕ್ಕೆ ತರಲು ಜನ ತೀರ್ಮಾನಿಸಿದ್ದಾರೆ. ಚುನಾವಣೆಯಿಂದ ಪಾಠ ಕಲಿತಿದ್ದೇವೆ. ನಾವು ಮತ್ತೆ ಅದುಮಿದಷ್ಟು ಎದ್ದು ಬರುತ್ತೇವೆ ಎಂದು ಬಿ.ಕೆ.ಹರಿಪ್ರಸಾದ್ ಟ್ವೀಟ್ ಮಾಡಿದ್ದಾರೆ.

Join Whatsapp