ಬೆಂಗಳೂರು: ಪ್ರಧಾನ ಮಂತ್ರಿ ಸ್ಥಾನದ ಕಾಂಗ್ರೆಸ್ ಗೆ ಆಸಕ್ತಿಯಿಲ್ಲ ಎಂದು ವಿಪಕ್ಷಗಳ ಸಭೆಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಅವರು ಕಾಂಗ್ರೆಸ್ ನಿಲುವನ್ನು ಸ್ಪಷ್ಟಪಡಿಸಿದರು.
ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಒಗ್ಗಟ್ಟು ಪ್ರದರ್ಶಿಸಲು ಕಾರ್ಯತಂತ್ರ ರೂಪಿಸುವ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ 2ನೇ ದಿನ ನಡೆದ, ಯುಪಿಎ ಮೈತ್ರಿಕೂಟದ ಸಭೆಯಲ್ಲಿ ಮಾತನಾಡಿದ ಅವರು, ಪ್ರಧಾನ ಮಂತ್ರಿ ಸ್ಥಾನ ಕೂಡ ಕಾಂಗ್ರೆಸ್ ಗೆ ಅಗತ್ಯವಿಲ್ಲ. ಸಾಮಾಜಿಕ ನ್ಯಾಯ ಮತ್ತು ಸಂವಿಧಾನ ರಕ್ಷಣೆ ಮಾತ್ರ ನಮ್ಮ ಉದ್ದೇಶ. ನಮ್ಮ ಒಕ್ಕೂಟದ ಬಳಿಕ ಬಿಜೆಪಿ ತನ್ನ ಸ್ನೇಹಿತರನ್ನು ಒಗ್ಗೂಡಿಸುವ ಪ್ರಯತ್ನ ಮಾಡುತ್ತಿದೆ. ಇದು ನಮ್ಮ ಮೊದಲ ಗೆಲುವು ಎಂದು ಹೇಳಿದರು. ಕೆಲವು ರಾಜ್ಯಗಳಲ್ಲಿ ನಮ್ಮ ನಮ್ಮ ಪಕ್ಷಗಳ ನಡುವೆ ಭಿನ್ನಾಭಿಪ್ರಾಯಗಳಿವೆ. ಆದರೆ ನಾವೆಲ್ಲರೂ ಕೂಡ ಈ ಸಂದರ್ಭದಲ್ಲಿ ಒಟ್ಟಾಗಿ ನಿಲ್ಲಬೇಕಿದೆ. ಸಾಮಾನ್ಯ ಜನರ ಸಂಕಷ್ಟ ಪರಿಹಾರದ ಸಲುವಾಗಿ ನಮ್ಮ ಭಿನ್ನಾಭಿಪ್ರಾಯ ದೂರವಿಟ್ಟು ಕೆಲಸ ಮಾಡಬೇಕಿದೆ. ದಲಿತರು, ಆದಿವಾಸಿಗಳ ಸಲುವಾಗಿ ನಮ್ಮ ಬೇಧಗಳನ್ನು ದೂರವಿಟ್ಟು ಒಟ್ಟಾಗಿ ಕೆಲಸ ಮಾಡೋಣ ಎಂದು ವಿಪಕ್ಷಗಳ ನಾಯಕರಿಗೆ ಕರೆ ನೀಡಿದರು.