ನವದೆಹಲಿ: ಆದಾಯ ತೆರಿಗೆ ಇಲಾಖೆ ನಡೆಸಿದ ದಾಳಿಯಲ್ಲಿ ಕಾಂಗ್ರೆಸ್ ರಾಜ್ಯಸಭಾ ಸಂಸದ ಧೀರಜ್ ಸಾಹು ಅವರಿಗೆ ಸಂಬಂಧಿಸಿದ ನಿವೇಶನಗಳಿಂದ ವಶಪಡಿಸಿಕೊಂಡ ಹಣದ ರಾಶಿಯ ಎಣಿಕೆ ಇನ್ನೂ ಬಾಕಿ ಇದೆ. ಭಾನುವಾರದೊಳಗೆ ಮುಗಿಸಲು ಅಧಿಕಾರಿಗಳು ಪ್ರಯತ್ನ ಮಾಡಿದರೂ ಸಾಧ್ಯವಾಗಲಿಲ್ಲ. ಡಿಸೆಂಬರ್ 6 ರಂದು ನಡೆದ ದಾಳಿಯ ವೇಳೆ ಸಿಕ್ಕಿದ್ದ ಒಟ್ಟು 176 ಬ್ಯಾಗ್ಗಳಲ್ಲಿ 140 ಬ್ಯಾಗ್ಗಳ ಎಣಿಕೆಯನ್ನು ಈವರೆಗೂ ಪೂರ್ಣ ಮಾಡಲಾಗಿದ್ದು, ಇನ್ನೂ 46 ಹಣದ ಚೀಲದ ಎಣಿಕೆ ಬಾಕಿ ಇದೆ.
ರಾಜ್ಯಸಭಾ ಸಂಸದ ಧೀರಜ್ ಸಾಹು ಅವರ ಆಸ್ತಿಗಳ ಮೇಲೆ ಮಾಡಿದ ದಾಳಿಯಿಂದ ಸಿಕ್ಕಿರುವ ಹಣದ ಪ್ರಮಾಣ 300 ಕೋಟಿಗೆ ತಲುಪುವ ಸಾಧ್ಯತೆ ಇದ್ದು, ಇದು ಒಂದೇ ಕಾರ್ಯಾಚರಣೆಯಲ್ಲಿ ದೊರೆತ ದಾಖಲೆ ಮೊತ್ತವಾಗಿದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಪ್ರಾದೇಶಿಕ ವ್ಯವಸ್ಥಾಪಕ ಭಗತ್ ಬೆಹೆರಾ ಅವರು ಹೇಳಿರುವ ಪ್ರಕಾರ, ಬ್ಯಾಂಕ್ 176 ಬ್ಯಾಗ್ಗಳನ್ನು ಸ್ವೀಕರಿಸಿದ್ದು, ಅವುಗಳಲ್ಲಿ 140 ಅನ್ನು ಎಣಿಕೆ ಮಾಡಲಾಗಿದೆ. ಮೂರು ಬ್ಯಾಂಕ್ ಗಳ ಐವತ್ತು ಅಧಿಕಾರಿಗಳು ಹಣ ಎಣಿಕೆ ಕಾರ್ಯದಲ್ಲಿ ತೊಡಗಿದ್ದು, 40 ಯಂತ್ರಗಳನ್ನು ನಿಯೋಜಿಸಲಾಗಿದೆ.
ಸೋಮವಾರದಿಂದ ಸಾಮಾನ್ಯ ಬ್ಯಾಂಕಿಂಗ್ ಸಮಯ ಪ್ರಾರಂಭವಾಗಲಿದ್ದು, ಯಂತ್ರಗಳನ್ನು ಬ್ಯಾಂಕ್ಗಳಿಗೆ ಹಿಂತಿರುಗಿಸಬೇಕಾಗಿರುವುದರಿಂದ ಭಾನುವಾರದ ಅಂತ್ಯದ ವೇಳೆಗೆ ಎಣಿಕೆಯನ್ನು ಮುಗಿಸಲು ಅಧಿಕಾರಿಗಳು ಪ್ರಯತ್ನ ಮಾಡಿದ್ದರಾದರೂ ಅದು ಸಾಧ್ಯವಾಗಿಲ್ಲ. ಇನ್ನೂ ಗಮನಾರ್ಹ ಪ್ರಮಾಣದ ನಗದು ಉಳಿದಿರುವ ಕಾರಣ, ಪ್ರಕ್ರಿಯೆಯನ್ನು ವೇಗಗೊಳಿಸಲು ಹೆಚ್ಚುವರಿ ನಗದು ಎಣಿಕೆ ಯಂತ್ರಗಳು ಹಾಗೂ ಇನ್ನಷ್ಟು ಅಧಿಕಾರಿಗಳನ್ನು ನಿಯೋಜಿಸಲಾಗಿತ್ತು. ಭಗತ್ ಬೆಹೆರಾ ಪ್ರಕಾರ, ಎಣಿಕೆ ಯಂತ್ರಗಳು ಎದುರಿಸಬಹುದಾದ ಯಾವುದೇ ತಾಂತ್ರಿಕ ಸಮಸ್ಯೆಗಳಿಗೆ ಪರಿಹಾರ ನೀಡಲು ಇಂಜಿನಿಯರ್ಗಳು ಕೂಡ ಸ್ಥಳದಲ್ಲಿದ್ದರು.