ಉಳ್ಳಾಲ ಜೆಡಿಎಸ್ ಅಭ್ಯರ್ಥಿಗೆ ಬೆದರಿಕೆ ಒಡ್ಡಿ ನಾಮಪತ್ರ ಹಿಂಪಡೆಯುವಂತೆ ಮಾಡಿದ ಕಾಂಗ್ರೆಸ್ ನಡೆ ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾಡಿದ ಅಣಕ: ರಿಯಾಝ್ ಫರಂಗಿಪೇಟೆ ಆಕ್ರೋಶ

Prasthutha|

ಉಳ್ಳಾಲ: ಕರ್ನಾಟಕ ವಿಧಾನಸಭಾ ಚುನಾವಣೆಗೆ ಮಂಗಳೂರು ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದ ಅಲ್ತಾಫ್ ಕುಂಪಲ ರವರಿಗೆ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಬೆದರಿಕೆ ಹಾಕಿ ನಾಮಪತ್ರವನ್ನು ಹಿಂಪಡೆಯುವಂತೆ ಮಾಡಿದ ಕೃತ್ಯವು ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾಡಿದ ಅಣಕ ಎಂದು ಎಸ್’ಡಿಪಿಐ ರಾಷ್ಟ್ರೀಯ ಕಾರ್ಯದರ್ಶಿ ಮತ್ತು ಉಳ್ಳಾಲ ಕ್ಷೇತ್ರದ ಪಕ್ಷದ ಅಭ್ಯರ್ಥಿ ರಿಯಾಝ್ ಫರಂಗಿಪೇಟೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

- Advertisement -


ಈ ಬಗ್ಗೆ ಪತ್ರಿಕಾ ಪ್ರಕಟಣೆ ಹೊರಡಿಸಿರುವ ಅವರು, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಾರಿಗೆ ಬೇಕಾದರೂ ಚುನಾವಣೆಗೆ ಸ್ಪರ್ಧೆ ಮಾಡಬಹುದು. ಅದರಂತೆ ಮಂಗಳೂರು(ಉಳ್ಳಾಲ) ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯಾಗಿ ಉಮೇದುವಾರಿಕೆ ಸಲ್ಲಿಸಿದ ಅಶ್ರಫ್ ಕುಂಪಲರವರಿಗೆ ನಾಮಪತ್ರ ಹಿಂಪಡೆಯಲು ಬೆದರಿಕೆ ಒಡ್ಡಿರುವ ಬಗ್ಗೆ ಚುನಾವಣಾಧಿಕಾರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದು ಅದನ್ನು ಚುನಾವಣಾಧಿಕಾರಿಯವರು ತಮ್ಮ ಹಿಂಬರಹದಲ್ಲಿ ಉಲ್ಲೇಖಿಸಿದ್ದಾರೆ.

ಇಂದು ಮಾಧ್ಯಮಗಳ ಮುಂದು ಮಾತನಾಡಿದ ಅಶ್ರಫ್ ಕುಂಪಲರವರು ತನ್ನನ್ನು ಕಾಂಗ್ರೆಸ್ ಪಕ್ಷದ ಕೆಲವು ಸ್ಥಳೀಯ ನಾಯಕರು ಅಪಹರಿಸಿ ಬೆದರಿಕೆ ಒಡ್ಡಿದ್ದಾರೆ ಎಂದು ಮೂವರ ಹೆಸರನ್ನು ಉಲ್ಲೇಖಿಸಿ ಹೇಳಿಕೆ ನೀಡಿದ್ದಾರೆ. ಚುನಾವಣಾ ನೀತಿಸಂಹಿತೆಯ ಪ್ರಕಾರ ಮತದಾರರಿಗೆ ಅಥವಾ ಅಭ್ಯರ್ಥಿಗೆ ಬೆದರಿಕೆ/ ಆಮಿಷ ಒಡ್ಡುವುದು ಕಾನೂನುಬಾಹಿರ ಮತ್ತು ಶಿಕ್ಷಾರ್ಹ ಅಪರಾಧ ಕೂಡ ಆಗಿದೆ. ಈ ಹಿನ್ನೆಲೆಯಲ್ಲಿ ಜೆಡಿಎಸ್ ಅಭ್ಯರ್ಥಿಗೆ ಬೆದರಿಕೆ ಒಡ್ಡಿದ ಕಾಂಗ್ರೆಸ್ ಅಭ್ಯರ್ಥಿ ಮತ್ತು ಅವರ ಪಟಾಲಂ ವಿರುದ್ಧ ಚುನಾವಣಾಧಿಕಾರಿಯವರು ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ರಿಯಾಝ್ ಆಗ್ರಹಿಸಿದ್ದಾರೆ.

- Advertisement -


ನೇರಾ ನೇರ ಚುನಾವಣೆ ಎದುರಿಸಿ ಗೆಲ್ಲುವ ಧೈರ್ಯ ವಿಲ್ಲದೆ ಬೆದರಿಸಿ ಅಪಪ್ರಚಾರ ನಡೆಸಿ ಹಾಗೂ ಬಿಜೆಪಿಯನ್ನು ತೋರಿಸಿ ಸರ್ವಾಧಿಕಾರಿ ಮರೆಯುತ್ತಿರುವ ಕಾಂಗ್ರೆಸ್ ನಡೆ ಖಂಡನೀಯ. ಕಾಂಗ್ರೆಸ್ ಕಾರ್ಯಕರ್ತರ ಈ ನಡೆ ಸರ್ವಾಧಿಕಾರಿ ಧೋರಣೆಯಾಗಿದ್ದು ಅಭ್ಯರ್ಥಿಗಳನ್ನು ಹಿಂದೆ ಸರಿಯುವಂತೆ ಒತ್ತಡ ಹೇರುವ ಮೂಲಕ ನೇರಾ ನೇರ ಚುನಾವಣೆ ಎದುರಿಸಲು ಅಸಮರ್ಥವಾಗಿರುವುದು ಅಲ್ಲದೆ ಸೋಲಿನ ಭೀತಿ ಆವರಿಸಿರುವುದರಿಂದ ಇಂತಹ ಸಂವಿಧಾನ ವಿರೋಧಿ ಕೃತ್ಯಗಳಿಗೆ ಮುಂದಾಗಿರುವುದು ಖಂಡನೀಯ. ಚುನಾವಣಾ ಆಯೋಗ ಇಂತಹ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ರಿಯಾಝ್ ಫರಂಗಿಪೇಟೆ ಒತ್ತಾಯಿಸಿದ್ದಾರೆ.

Join Whatsapp