ಪೊಲೀಸ್ ದೌರ್ಜನ್ಯ ಖಂಡಿಸಿ ರಾಜಭವನ ಚಲೋ: ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರ ಬಂಧನ

Prasthutha|

ಬೆಂಗಳೂರು; ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರನ್ನು ಇ.ಡಿ.ವಿಚಾರಣೆಯ ನೆಪದಲ್ಲಿ ಕಿರುಕುಳ ನೀಡಲಾಗುತ್ತಿದೆ ಎಂದು ಆರೋಪಿಸಿ ಹಾಗೂ ಕಾಂಗ್ರೆಸ್ ಮುಖಂಡರ ಮೇಲೆ ದೆಹಲಿ ಪೊಲೀಸರು ನಡೆಸಿದ ದೌರ್ಜನ್ಯವನ್ನು ಖಂಡಿಸಿ ಬೆಂಗಳೂರಿನಲ್ಲಿಂದು ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ರಾಜಭವನ ಚಲೋ ನಡೆಸಿದರು.

- Advertisement -


ಬೆಳಗ್ಗೆ ನೂರಾರು ಸಂಖ್ಯೆಯಲ್ಲಿ ಕಾರ್ಯಕರ್ತರು ಕೆಪಿಸಿಸಿ ಕಚೇರಿ ಮುಂಭಾಗ ಜಮಾಯಿಸಿ ಘೋಷಣೆ ಕೂಗಿದರು.
ಅಲ್ಲಿಂದ ಕ್ವೀನ್ಸ್ ರಸ್ತೆಯ ಮೂಲಕ ಮೆರವಣಿಗೆಯಲ್ಲಿ ನೂರಾರು ಮಂದಿ ಕಾಂಗ್ರೆಸ್ ಕಾರ್ಯಕರ್ತರು ರಾಜಭವನಕ್ಕೆ ಜಾಥಾ ಹೊರಟರು.


ರಾಜ ಭವನ ಚಲೋದಲ್ಲಿ ಪಾಲ್ಗೊಂಡಿದ್ದ ವಿಧಾನ ಪರಿಷತ್ ವಿಪಕ್ಷ ನಾಯಕ ಬಿ.ಕೆ. ಹರಿಪ್ರಸಾದ್,ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಸೇರಿ ಹಲವು ಮುಖಂಡರನ್ನು ಪೊಲೀಸರು ವಶಕ್ಕೆ ಪಡೆದರು.

ಇದಕ್ಕೂ ಮೊದಲು ಸಿದ್ದರಾಮಯ್ಯ ಮಾತನಾಡಿ, ಬಿಜೆಪಿ ಸರ್ಕಾರದ ಪ್ರಜಾಪ್ರಭುತ್ವ ನೀತಿ ಖಂಡಿಸಿ ಪ್ರತಿಭಟಿಸಲು, ಎಲ್ಲ ರಾಜ್ಯಗಳಲ್ಲೂ ರಾಜಭವನ ಮುತ್ತಿಗೆ ಹಾಕಲು ಕಾಂಗ್ರೆಸ್ ಪಕ್ಷ ಕಾರ್ಯಕ್ರಮ ಹಮ್ಮಿಕೊಂಡಿದೆ. ರಾಜ್ಯದಲ್ಲಿ ಕೆಪಿಸಿಸಿ ವತಿಯಿಂದ ರಾಜಭವನ ಮುತ್ತಿಗೆ ಹಾಕಿ, ನಮ್ಮ ಆಕ್ರೋಶ ವ್ಯಕ್ತಪಡಿಸಿ, ಈ ನೆಲದ ಕಾನೂನು ಉಳಿಸಿ, ಸಂವಿಧಾನ ಉಳಿಸಲು ಈ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದರು.

- Advertisement -

ಕೇಂದ್ರದ ಬಿಜೆಪಿ ಸರ್ಕಾರ ನಮ್ಮ ನಾಯಕಿ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಅವರ ವಿರುದ್ಧ ಹಣಕಾಸು ಅವ್ಯವಹಾರದ ಸುಳ್ಳು ಪ್ರಕರಣ ದಾಖಲಿಸಿದ್ದಾರೆ. ಸುಬ್ರಮಣಿಯನ್ ಸ್ವಾಮಿ ಅವರ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿ ನಮ್ಮ ನಾಯಕರಿಗೆ ಮಾನಸಿಕ ಕಿರುಕುಳ ನೀಡುತ್ತಿದೆ. ನಾವೆಲ್ಲರೂ ಈ ಸಂದರ್ಭದಲ್ಲಿ ಅವರ ಬೆನ್ನಿಗೆ ನಿಲ್ಲಬೇಕಾಗಿದೆ. ತನಿಖೆ ಮಾಡಲು ನಮ್ಮ ವಿರೋಧ ಇಲ್ಲ. ಆದರೆ ದುರುದ್ದೇಶದಿಂದ ಷಡ್ಯಂತ್ರ ರೂಪಿಸಿ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಅವರ ವರ್ಚಸ್ಸು ಹಾಳು ಮಾಡಲು ಸುಳ್ಳು ಪ್ರಕರಣ ದಾಖಲಿಸಿರುವುದು ಖಂಡನೀಯ ಎಂದು ಹೇಳಿದರು.

ಉದಯಪುರ ಸಂಕಲ್ಪ ಶಿಬಿರದಲ್ಲಿ ಎಐಸಿಸಿ ‘ಭಾರತ್ ಜೋಡೋ’ ಎಂಬ ಪಾದಯಾತ್ರೆಯನ್ನು ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಮಾಡಲು ತೀರ್ಮಾನಿಸಲಾಗಿದ್ದು, ಇದನ್ನು ಮಾಡಿದರೆ ರಾಹುಲ್ ಗಾಂಧಿ ಹಾಗೂ ಕಾಂಗ್ರೆಸ್ ವರ್ಚಸ್ಸು ಹೆಚ್ಚುತ್ತದೆ ಎಂದು ಬಿಜೆಪಿ ಈ ಕುತಂತ್ರ ಮಾಡಿದೆ. ಈ ವಿಚಾರವನ್ನು ಜನರಿಗೆ ತಿಳಿಸಬೇಕು.  ದೇಶದಲ್ಲಿ ಅನೇಕ ಪ್ರತಿಭಟನೆ ನಡೆದಿದ್ದು, ಬಿಜೆಪಿ ಕೂಡ ಮಾಡಿದೆ. ಕಾಂಗ್ರೆಸ್ ಯಾವತ್ತೂ ದ್ವೇಷದ ರಾಜಕಾರಣ ಮಾಡಿಲ್ಲ. ಬಿಜೆಪಿ ದ್ವೇಷದ ರಾಜಕಾರಣ ಆರಂಭಿಸಿದೆ. ಆಮೂಲಕ ಕಾಂಗ್ರೆಸ್ ಪಕ್ಷವನ್ನು ಹತ್ತಿಕ್ಕುತ್ತೇವೆ, ಕಾರ್ಯಕರ್ತರ ಮನಸ್ಥೈರ್ಯ ಕುಗ್ಗಿಸುತ್ತೇವೆ, ಆಮೂಲಕ ಸೋನಿಯಾ ಗಾಂಧಿ ಹಾಗೂ ರಾಹುಲ್ ಅವರ ವರ್ಚಸ್ಸು ಕಡಿಮೆ ಮಾಡುತ್ತೇವೆ ಎಂಬ ಕೆಟ್ಟ ಆಲೋಚನೆಯಿಂದ ಸುಳ್ಳು ಕೇಸು ದಾಖಲಿಸಿದ್ದಾರೆ ಎಂದು ದೂರಿದರು.

ಸತತ ಮೂರು ದಿನಗಳ ಕಾಲ 30 ಗಂಟೆಗಳ ವಿಚಾರಣೆ ಮಾಡಿ ಮತ್ತೆ ಸಮನ್ಸ್ ನೀಡಿದ್ದಾರೆ. ಸರ್ಕಾರ ಕೇಂದ್ರ ತನಿಖಾ ಸಂಸ್ಥೆ ಬಳಸಿಕೊಂಡು ಕಿರುಕುಳ ನೀಡುತ್ತಿದ್ದಾರೆ. ಇವರ ದೌರ್ಜನ್ಯ ಹೇಗಿದೆ ಎಂದರೆ ದೆಹಲಿಯ ಕಾಂಗ್ರೆಸ್ ಕಚೇರಿಯನ್ನು ಮುಟ್ಟುಗೋಲು ಹಾಕಿಕೊಂಡಿದ್ದು, ಪಕ್ಷದ ಪದಾಧಿಕಾರಿಗಳು, ಸಂಸದರು ಹೋಗಲು ಅವಕಾಶ ನೀಡುತ್ತಿಲ್ಲ. ಹೋದರೆ ಅವರನ್ನು ಬಂಧಿಸುತ್ತಿದ್ದಾರೆ. ಬ್ರಿಟೀಷರ ಕಾಲದಲ್ಲೂ ಇಂತಹ ಘಟನೆ, ಪ್ರಜಾಪ್ರಭುತ್ವ ವಿರೋಧಿ ಘಟನೆ ನಡೆದಿರಲಿಲ್ಲ.

ಇಡೀ ಪಕ್ಷದ ಕಚೇರಿಯನ್ನು ಪೊಲೀಸರು ಆಕ್ರಮಿಸಿಕೊಂಡು ಅಲ್ಲಿ ಯಾರಿಗೂ ಅವಕಾಶ ನೀಡಿಲ್ಲ. ಇದಕ್ಕಿಂತ ನೀಚ ಕೆಲಸ ಬೇರೆ ಸಾಧ್ಯವಿಲ್ಲ. ನಾವು ಕಾಂಗ್ರೆಸಿಗರು ಈ ನೀಚ ಕೆಲಸ ಮುಂದುವರಿಸಲು ಬಿಟ್ಟರೆ ಇಡೀ ದೇಶ, ಸಮಾಜವನ್ನು ಹಾಳು ಮಾಡುತ್ತಾರೆ. ಪ್ರಜಾಪ್ರಭುತ್ವ ಹತ್ಯೆ ಕಗ್ಗೊಲೆಯಾಗಿದೆ. ಸವಿಧಾನಕ್ಕೆ ಮೂರು ಕಾಸಿನ ಬೆಲೆ ಇಲ್ಲ. ಪ್ರತಿಭಟನೆ ಮಾಡುವುದು ಮೂಲಭೂತ ಹಕ್ಕು. ಇದನ್ನು ತೆಗೆದುಹಾಕಲು ಯಾರಿಂದಲೂ ಸಾಧ್ಯವಿಲ್ಲ. ಬಿಜೆಪಿ ಪ್ರಜಾಪ್ರಭುತ್ವ, ಸಂವಿಧಾನ, ಕಾನೂನಿಗೆ ಬೆಲೆ ಕೊಡದೆ ನಡೆದುಕೊಳ್ಳುತ್ತಿದ್ದಾರೆ. ನಮ್ಮ ಸಂಸದ ಡಿ.ಕೆ. ಸುರೇಶ್, ವೇಣುಗೋಪಾಲ್, ದಿನೇಶ್ ಗುಂಡೂರಾವ್ ಅವರನ್ನು ನಡೆಸಿಕೊಂಡ ರೀತಿ ನಾವು ನೋಡಿದ್ದೇವೆ. ದೇಶದ ಇತಿಹಾಸದಲ್ಲಿ ಇಂತಹ ಘಟನೆ ನಡೆದಿರಲಿಲ್ಲ. ಪ್ರಜಾಪ್ರಭುತ್ವ ಕಗ್ಗೊಲೆಯಾಗಲು ಬಿಡಬಾರದು. ಸಂವಿಧಾನಕ್ಕೆ ಅಗೌರವಕ್ಕೆ ಅವಕಾಶ ನೀಡಬಾರದು. ಈ ನೆಲದ ಕಾನೂನು ನಾಶ ಮಾಡಲು ಅವಕಾಶ ನೀಡಬಾರದು. ಇವರಿಗೆ ತಕ್ಕ ಪಾಠವನ್ನು ಕಾಂಗ್ರೆಸ್ ಕಲಿಸಬೇಕಿದೆ. ಇಂದು ಕಾಂಗ್ರೆಸ್ ಪಕ್ಷಕ್ಕೆ ಆಗಿರುವ ಅನ್ಯಾಯ ನಾಳೆ ಬೇರೆ ಪಕ್ಷಗಳಿಗೆ ಆಗಲಿದೆ ಎಂದು ಸಿದ್ದರಾಮಯ್ಯ ಎಚ್ಚರಿಸಿದರು.

ಇದು ದೇಶಕ್ಕೆ ಒದಗಿರುವ ಆಪತ್ತು. ಎಲ್ಲ ಬಿಜೆಪಿಯೇತ್ತರ ಪಕ್ಷಗಳು ಇದನ್ನು ಖಂಡಿಸಬೇಕು ಎಂದು ಮನವಿ ಮಾಡುತ್ತೇನೆ. ಮಮತಾ ಬ್ಯಾನರ್ಜಿ, ಶರದ್ ಪವಾರ್, ಸ್ಟಾಲಿನ್, ಕಮುನಿಷ್ಟ್ ಪಕ್ಷದವರಿರಬಹುದು, ಅಖಿಲೇಶ್ ಯಾದವ್ ಎಲ್ಲರೂ ಇದನ್ನು ಖಂಡಿಸಬೇಕಾಗುತ್ತದೆ. ಇದು ದೇಶದ ಮೇಲೆ, ಪ್ರಜಾಪ್ರಭುತ್ವ ವ್ಯವಸ್ಥೆ ಮೇಲೆ ಮಾಡಿರುವ ಗದಾಪ್ರಹಾರ. ಹೀಗಾಗಿ ರಾಜ್ಯಪಾಲರಿಗೆ ಮನವಿ ಕೊಟ್ಟು, ರಾಜಭವನಿಗೆ ಮುತ್ತಿಗೆ ಹಾಕಿ, ರಾಷ್ಟ್ರಪತಿಗಳು ಮಧ್ಯಪ್ರವೇಶಿಸಿ ಪ್ರಜಾಪ್ರಭುತ್ವ ಮೌಲ್ಯಗಳನ್ನು ಎತ್ತಿ ಹಿಡಿಯಬೇಕು ಹಾಗೂ ಈ ದೇಶದ ಕಾನೂನು ಎತ್ತಿ ಹಿಡಿಯಲು ಮನವಿ ಮಾಡಲಾಗುವುದು. ಕಾಂಗ್ರೆಸ್ ನಾಯಕರು, ಕಾರ್ಯಕರ್ತರು ರಾಜಭವನಕ್ಕೆ ಮುತ್ತಿಗೆ ಹಾಕಬೇಕು. ಪೊಲೀಸರು ತಡೆಯಬಹುದು. ಯಾರೂ ಎದೆಗುಂದುವ ಅಗತ್ಯವಿಲ್ಲ. ಪೊಲೀಸರು ಬಂಧಿಸಲಿ, ಜೈಲಿಗೆ ಹಾಕಲಿ ನೀವೆಲ್ಲರೂ ಗಟ್ಟಿಯಾಗಿ ನಿಲ್ಲಿ. ನೀವು ಧೈರ್ಯವಾಗಿರಿ. ನಾಳೆ ಜಿಲ್ಲಾ ಮಟ್ಟದಲ್ಲಿ ಈ ಪ್ರತಿಭಟನೆ ನಡೆಯಲಿದೆ. ಎಲ್ಲ ಶಾಸಕರು, ಪದಾಧಿಕಾರಿಗಳು, ಸಂಸದರು ನಿಮ್ಮ ಜಿಲ್ಲೆಗೆ ಹೋಗಿ ಅಲ್ಲಿ ಪ್ರತಿಭಟನೆ ಮಾಡಿ. ಕಾಂಗ್ರೆಸ್ ಹೋರಾಟ ಇಲ್ಲಿಗೆ ನಿಲ್ಲುವುದಿಲ್ಲ ಎಂದು ಸಿದ್ದರಾಮಯ್ಯ ಹೇಳಿದರು.

ಬಿಜೆಪಿಯವರೇ ನೀವೇ ಅಧಿಕಾರದಲ್ಲಿ ಗೂಟ ಹೊಡೆದುಕೊಂಡು ಇರಲು ಸಾಧ್ಯವಿಲ್ಲ. ನಿಮ್ಮ ಕೇಡುಗಾಲ, ಅವನತಿ ಆಗಮಿಸುತ್ತಿದೆ. 2024ರ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದು ಅಧಿಕಾರಕ್ಕೆ ಬರಲಿದೆ. ಬಿಜೆಪಿ ನಿರ್ಣಾಮವಾಗಲಿದೆ. 2023ರಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ. ನಿಮ್ಮ ಗೋಸುಂಬೆ ನಾಯಟ ರಾಜ್ಯದಲ್ಲಿ ನಡೆಯುವುದಿಲ್ಲ. ಜನರಿಗೆ ಅರ್ಥವಾಗಿದೆ. ನಾವು ಬಂಧನವಾದರೂ, ಜೈಲಿಗೆ ಹೋಗಲು ತಯಾರಾಗೋಣ.



Join Whatsapp