ಬೆಂಗಳೂರು : ಬಿಟ್ ಕಾಯಿನ್ ವಿಷಯವನ್ನು ಇಟ್ಟುಕೊಂಡು, ವಿರೋಧ ಪಕ್ಷದ ಕಾಂಗ್ರೆಸ್ ನಾಯಕರು ಅನಗತ್ಯ ಗೊಂದಲ ನಿರ್ಮಿಸುತ್ತಿದ್ದು, ಸೂಕ್ತ ದಾಖಲೆ ಇದ್ದರೆ ತನಿಖಾಧಿಕಾರಿಗಳಿಗೆ ಒದಗಿಸಲಿ, ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಸವಾಲು ಹಾಕಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ” ಈ ವಿಷಯದಲ್ಲಿ ಕಾಂಗ್ರೆಸ್ ನಾಯಕರು, ಹಿಟ್ ಆ್ಯಂಡ್ ರನ್ ಕೆಲಸ ಮಾಡುತ್ತಿದ್ದಾರೆ” ಎಂದು ದೂರಿದ್ದಾರೆ.ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದ್ದ ಸಮಯದಲ್ಲಿಯೇ, ಆರೋಪಿ ಶ್ರಿಕಿಯನ್ನು, ಹೋಟೆಲೊಂದರಲ್ಲಿ ನಡೆದ ದಾಂಧಲೆ ಸಮಯದಲ್ಲಿ ಬಂಧಿಸಲಾಗಿತ್ತು ಎಂದು ನೆನಪಿಸಿದ ಸಚಿವರು, ಶ್ರಿಕಿಯ ಸಹಚರರು ಯಾರ್ಯಾರು ಇದ್ದರು ಎಂದು ಕಾಂಗ್ರೆಸ್ ನಾಯಕರಿಗೆ ತಿಳಿದಿತ್ತು” ಎಂದರು.ಕಾಂಗ್ರೆಸ್ ನಾಯಕರು ಬಿಟ್ ಕಾಯಿನ್ ವಿಷಯದಲ್ಲಿ ರಾಜಕೀಯ ಬೆರೆಸದೆ, ತಮ್ಮಲ್ಲಿರುವ ದಾಖಲೆ ಗಳನ್ನು ಒದಗಿಸಬೇಕು, ಎಂದು ಹೇಳಿದ್ದಾರೆ.
” ಕಾಂಗ್ರೆಸ್ ನಾಯಕರು, ನಮ್ಮ ಚೀಲದಲ್ಲಿ ಹಾವಿದೆ, ಹೊರ ತೆಗೆಯುತ್ತೇವೆ ಎಂದು ಖೊಟ್ಟಿ ಮಾತನಾಡದೆ, ಧೈರ್ಯದಿಂದ ಹೊರಗೆ ಬಿಡಲಿ, ಆಗ ಅದು ಯಾರನ್ನು ಕಚ್ಚುತ್ತದೆ ನೋಡೋಣ” ಎಂದು ಸಚಿವರು ಸವಾಲೆಸೆದರು.ಮುಖ್ಯಮಂತ್ರಿಗಳ ದೆಹಲಿ ಭೇಟಿಗೆ, ವಿಶೇಷ ಅರ್ಥ ಕಲ್ಪಿಸುವ ಅಗತ್ಯವಿಲ್ಲ, ರಾಜ್ಯದ ಅಭಿವೃದ್ಧಿ ಹಾಗೂ ಆಡಳಿತಾತ್ಮಕ ಹಿತದೃಷ್ಟಿ ಯಿಂದ ಹೋಗಿದ್ದಾರೆ, ಎಂದು ತಿಳಿಸಿದ ಸಚಿವರು ” “ಮುಖ್ಯಮಂತ್ರಿಗಳು ದೆಹಲಿಗೆ ಹೋಗುವುದು ಹಾಗೂ ನಾಯಕರನ್ನು ಭೇಟಿ ಮಾಡುವುದು, ಹೊಸದೇನು ಅಲ್ಲ” ಎಂದು ತಿಳಿಸಿದರು.