ಬೆಂಗಳೂರು: ಬಿಜೆಪಿ ನಾಯಕರು ಹಾಗೂ ಹಿಂದುಳಿದ ವರ್ಗಗಳ ಘಟಕ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಅವರ ಬಗ್ಗೆ ವಿನಾಕಾರಣ ಟೀಕೆ, ಅಪಪ್ರಚಾರ ಮಾಡುತ್ತಿದ್ದಾರೆ. ಅಧಿಕಾರಕ್ಕೋಸ್ಕರ ಕೆಲವರು ಬಿಜೆಪಿಗೆ ಹೋಗಿದ್ದಾರೆ ಎಂದು ಹೇಳಿದ್ದಾರೆಯೇ ಹೊರತು ಹೊಟ್ಟೆಪಾಡಿಗೆ ಹೋಗಿದ್ದಾರೆ ಎಂದು ಹೇಳಿಲ್ಲ. ಬಿಜೆಪಿಯವರು ವಿಚಾರಗಳನ್ನು ತಿರುಚುವುದರಲ್ಲಿ ನಿಪುಣರು. ಸುಳ್ಳು, ವಿಷಯಾಂತರ ಮಾಡುವುದು ಬಿಜೆಪಿ ಹುಟ್ಟುಗುಣ. ರಾಜ್ಯ ಹಾಗೂ ದೇಶದಲ್ಲಿ ಸುಳ್ಳು ಸುದ್ದಿ ಹಬ್ಬಿಸಿ ವಿಷಯಾಂತರ ಮಾಡಿಕೊಂಡು ಬರುತ್ತಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ ವಾಗ್ದಾಳಿ ನಡೆಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2008ರಿಂದ 2013ರವರೆಗೂ ಬಿಜೆಪಿಯ 5 ವರ್ಷ ಸರ್ಕಾರ, 2013ರಿಂದ 2018ರವರೆಗೂ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಹರಿಜನರ ಕಲ್ಯಾಣಕ್ಕೆ ಯಾರು ಏನು ಸಾಧ್ಯನೆ ಮಾಡಿದ್ದಾರೆ ಎಂದು ನೋಡಿದರೆ ಯಾರಿಗೆ ದಲಿತರು, ತುಳಿತಕ್ಕೆ ಒಳಗಾದವರ ಮೇಲೆ ಕಾಳಜಿ ಇದೆ ಎಂದು ಗೊತ್ತಾಗುತ್ತದೆ ಎಂದರು.
ಕಾಂಗ್ರೆಸ್ ಸರ್ಕಾರ ಪರಿಶಿಷ್ಟ ಜಾತಿ ಹಾಗೂ ಪಂಗಡಗಳ ಪಾಲಿಗೆ ಐತಿಹಾಸಿಕ ಕಾನೂನು ತಂದು ಜನಸಂಖ್ಯೆ ಅನುಗುಣವಾಗಿ ಬಜೆಟ್ ನಲ್ಲಿ ಅನುದಾನ ನೀಡಲು ಮುಂದಾಗಿದೆ. ದಲಿತರ ಕಲ್ಯಾಣಕ್ಕೆ ಬಿಜೆಪಿ ಸರ್ಕಾರ 5 ವರ್ಷದಲ್ಲಿ 22,261 ಕೋಟಿ ರೂ. ಕೊಟ್ಟರೆ, ಕಾಂಗ್ರೆಸ್ ಸರ್ಕಾರ ಅವರಿಗಿಂತ ನಾಲ್ಕು ಪಟ್ಟು ಅಂದರೆ 88,395 ಕೋಟಿ ರೂ. ನೀಡಿದೆ. ಸಮಾಜ ಕಲ್ಯಾಣ ಇಲಾಖೆಯಲ್ಲಿ ಬಿಜೆಪಿ 9542 ಕೋಟಿ ರೂ. ಕೊಟ್ಟರೆ, ಕಾಂಗ್ರೆಸ್ ಸರ್ಕಾರ 23,798 ಕೋಟಿ ನೀಡಿದೆ. ಬಿಜೆಪಿ ಕೇವಲ 196 ವಸತಿ ಶಾಲೆಗಳನ್ನು ನಿರ್ಮಾಣ ಮಾಡಿದರೆ ಕಾಂಗ್ರೆಸ್ ಸರ್ಕಾರ ಪ್ರತಿ ಹೊಬಳಿಗೆ ಒಂದು ವಸತಿ ಶಾಲೆಯಂತೆ 270 ವಸತಿಶಾಲೆಗಳು, ಮೆಟ್ರಿಕ್ ನಂತರದ 200 ವಿದ್ಯಾರ್ಥಿ ನಿಲಯಗಳು ಪ್ರಾರಂಭಿಸಿ 24,300 ವಿದ್ಯಾರ್ಥಿಗಳಿಗೆ ನೆರವಾಗಿದ್ದರು ಎಂದು ವಿವರ ನೀಡಿದರು.
ಸಮಾಜ ಕಲ್ಯಾಣ ಇಲಾಖೆಯಲ್ಲಿ ಬಿಜೆಪಿ ಸರ್ಕಾರ 873 ಹುದ್ದೆಗಳ ನೋಮಕಾತಿ ಮಾಡಿದರೆ, ಕಾಂಗ್ರೆಸ್ ಸರ್ಕಾರ 3561 ಹುದ್ದೆಗಳ ನೇಮಕ ಮಾಡಿತ್ತು. ವಿದ್ಯಾರ್ಥಿನಿಲಯಗಳ ಉನ್ನತೀಕರಣಕ್ಕೆ ಜೆಪಿ 560 ಕೋಟಿ ಕೊಟ್ಟರೆ ಕಾಂಗ್ರೆಸ್ ಸರ್ಕಾರ 1494 ಕೋಟಿ ಕೊಟ್ಟಿತ್ತು. ಕಾಂಗ್ರೆಸ್ ಸರ್ಕಾರ ಪರಿಶಿಷ್ಟ ಜಾತಿ ಹಾಗೂ ಪಂಗಡಗಳಲ್ಲಿ ಅಲೆಮಾರಿ, ಅರೆ ಅಲೆಮಾರಿ, ಸೂಕ್ಷ್ಮ ಅತಿಸೂಕ್ಷ್ಮ ಸಮುದಾಯಗಳನ್ನು ಗುರುತಿಸಿ ಅವರ ಶೈಕ್ಷಣಿಕ ಮತ್ತು ಆರ್ಥಿಕ ಅಭಿವೃದ್ಧಿ ಗಾಗಿ 222 ಕೋಟಿ ಜಾರಿ ಗೊಳಿಸಿತ್ತು ಪ್ರಥಮ ದರ್ಜೆಯಲ್ಲಿ ಪ್ರಥಮ ಬಾರಿ ಉತ್ತೀರ್ಣರಾದ ಪ.ಜಾ/ಪ.ಪಂ.ಗಳ ವಿದ್ಯಾರ್ಥಿಗಳಿಗೆ ಹಿಂದಿನ ಸರ್ಕಾರ 750 ರೂ. ರಿಂದ 10,000 ರೂ. ರವರೆಗೆ ಪ್ರೋತ್ಸಾಹ ಧನ ನೀಡುತ್ತಿದ್ದು, ನಮ್ಮ ಸರ್ಕಾರ, 7000 ರೂ. ರಿಂದ 25,000 ರೂ. ರವರೆಗೆ ನೀಡುತ್ತಿದೆ. 55.77 ಲಕ್ಷ ಮೆಟ್ರಿಕ್ ಪೂರ್ವ ಮತ್ತು 18.22 ಲಕ್ಷ ಮೆಟ್ರಿಕ್ ನಂತರದ ಪ.ಜಾ/ಪ.ಪಂ.ಗಳ ವಿದ್ಯಾರ್ಥಿಗಳಿಗೆ ಅನುಕ್ರಮವಾಗಿ 577 ಕೋಟಿ ರೂ. ಹಾಗೂ 1843 ಕೋಟಿ ರೂ.ಗಳ ಡೇ-ಸ್ಕಾಲರ್ ವಿದ್ಯಾರ್ಥಿ ವೇತನ ಮಂಜೂರು ಮಾಡಿದ್ದು, ವಿದ್ಯಾರ್ಥಿಗಳ ಬ್ಯಾಂಕ್ ಖಾತೆಗೆ ಜಮೆ ಮಾಡಿ ಶಿಕ್ಷಣಕ್ಕೆ ಸಹಾಯ ಮಾಡಲಾಗಿದೆ ಎಂದು ರಾಮಲಿಂಗಾ ರೆಡ್ಡಿ ಹೇಳಿದರು.
100 ಬಾರಿ ಸುಳ್ಳು ಹೇಳಿ ಅದನ್ನೇ ನಿಜ ಮಾಡುವುದು ಬಿಜೆಪಿ ಕೆಲಸ. ಬಿಜೆಪಿ ಅವರಿಗೆ ದಲಿತರ ಮೇಲೆ ನಿಜಕ್ಕೂ ಕಾಳಜಿ ಇರುವುದಾದರೆ ಮೋದಿ ಅವರಿಗೆ ಹೇಳಿ ಜನಸಂಖ್ಯೆ ಆಧಾರದ ಮೇಲೆ ಬಜೆಟ್ ನಲ್ಲಿ ಹಣ ಮೀಸಲಿಡುವ ಕಾನೂನನ್ನು ದೇಶದಾದ್ಯಂತ ಮಾಡಲಿ ನೋಡೋಣ. ರಾಜ್ಯದಿಂದ ಆಯ್ಕೆಯಾಗಿರುವ 25 ಸಂಸದರು ರಾಜ್ಯಕ್ಕೆ ಅನ್ಯಾಯ ಆಗುತ್ತಿದ್ದರೂ ಮೋದಿ ಎದುರು ನಿಂತು ಮಾತನಾಡುತ್ತಿಲ್ಲ. ನೆರೆ ಪರಿಹಾರದಿಂದ, ಜಿಎಸ್ಟಿ ಬಾಕಿ, ಆರ್ಥಿಕ ಅನುದಾನ ಸೇರಿದಂತೆ ಪ್ರತಿ ಹಂತದಲ್ಲಿ ರಾಜ್ಯಕ್ಕೆ ಅನ್ಯಾಯವಾಗುತ್ತಿದ್ದರೂ ಅದನ್ನು ಪ್ರಶ್ನಿಸುವ ಧೈರ್ಯ ಯಾರೂ ಮಾಡುತ್ತಿಲ್ಲ ಎಂದು ಹೇಳಿದರು.
ಬಿಜಪಿ ನಾಯಕ ನಾರಾಯಣ ಸ್ವಾಮಿ ಅವರ ಹೇಳಿಕೆ ವಿಚಾರವಾಗಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ‘ನಮ್ಮಲ್ಲಿ ದಲಿತ ಸಮುದಾಯಕ್ಕೆ ಸೇರಿದ ರಂಗನಾಥ್, ರಾಥೋಡ್, ಖರ್ಗೆ, ಪರಮೇಶ್ವರ್ ಅವರು ಕೆಪಿಸಿಸಿ ಅಧ್ಯಕ್ಷರಾಗಿದ್ದರು. ಬಿಜೆಪಿ ಅವರು ಎಷ್ರು ದಲಿತರಿಗೆ ರಾಜ್ಯಾಧ್ಯಕ್ಷ ಸ್ಥಾನ ಕೊಟ್ಟಿದ್ದಾರೆ?’ ಎಂದರು.
ಮಲ್ಲಿಕಾರ್ಜುನ ಖರ್ಗೆ, ಮುನಿಯಪ್ಪ ಹಾಗೂ ಪರಮೇಶ್ವರ್ ಅವರನ್ನು ರಾಜಕೀಯವಾಗಿ ಮುಗಿಸಿದ್ದೇ ಸಿದ್ದರಾಮಯ್ಯ ಎಂಬ ಬಿಜೆಪಿ ನಾಯಕರ ಹೇಳಿಕೆಗೆ ಉತ್ತರಿಸದ ಅವರು, ‘2008ರಲ್ಲಿ ಖರ್ಗೆ ಅವರು ಅಧ್ಯಕ್ಷರಾಗಿದ್ದಾಗ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಕೇವಲ 80 ಸೀಟುಗಳನ್ನು ಮಾತ್ರ ಗೆದ್ದಿತ್ತು. ಆಗ ನಮ್ಮ ಸರ್ಕಾರ ಬಂದಿದ್ದರೆ ಅವರೇ ಸಿಎಂ ಆಗುತ್ತಿದ್ದರು. ಹೀಗಾಗಿ ಅವರಿಗೆ ಅವಕಾಶ ತಪ್ಪಿತ್ತು’ ಎಂದರು.
ಜನ್ಮಕೊಟ್ಟವರನ್ನೇ ಸಾಯಿಸುವ ಸಂಸ್ಕೃತಿ ಸಿದ್ದರಾಮಯ್ಯ ಅವರದು ಎಂಬ ಬಿಜೆಪಿ ನಾಯಕರ ಆರೋಪಕ್ಕೆ ತಿರುಗೇಟು ನೀಡಿದ ಅವರು, ‘ಬಿಜೆಪಿ ಸರ್ಕಾರದಲ್ಲಿ 35 ಮಂತ್ರಿಗಳಿದ್ದಾರೆ. ಅದರಲ್ಲಿ ಮೂಲ ಬಿಜೆಪಿಗರು ಕೇವಲ 7 ಜನ ಮಾತ್ರ. ಉಳಿದ 28 ಜನ ಕಾಂಗ್ರೆಸ್, ಜೆಡಿಎಸ್ ನಿಂದ ವಲಸೆ ಹೋದವರೇ ಆಗಿದ್ದಾರೆ. ಮೂಲ ಬಿಜೆಪಿಯವರ ಕಥೆ ಏನಾಯ್ತು. ನಮ್ಮಲ್ಲಿ ಶೇ.80ರಷ್ಟು ಜನ ಮೂಲ ಕಾಂಗ್ರೆಸಿಗರಾದರೆ, ಶೇ.20ರಷ್ಟು ಜನ ನಮ್ಮ ಪಕ್ಷಕ್ಕೆ ಸೇರಿಕೊಂಡವರಿದ್ದಾರೆ. ಅವರ ಸರ್ಕಾರದಲ್ಲಿ ಇರೋದು ಕೇವಲ 7 ಮೂಲ ಬಿಜೆಪಿಗರು ಮಾತ್ರ. ನಾರಾಯಣ ಸ್ವಾಮಿಗಳು ನಮ್ಮ ಪಕ್ಷದಲ್ಲೇ ಇದ್ದರು. ಆರಂಭದಿಂದಲೂ ತುಳಿತಕ್ಕೆ ಒಳಗಾದ ಸಮಾಜದವರಿಗೆ ನಮ್ಮ ಪಕ್ಷ ಆದ್ಯತೆ ನೀಡುತ್ತಾ ಬಂದಿದೆ. ಅಂಬೇಡ್ಕರ್ ಅವರು ದಲಿತರಿಗೆ ಮೀಸಲಾತಿ ತಂದರೆ ಅದನ್ನು ಕಾಂಗ್ರೆಸ್ ಪಾಲಿಸಿಕೊಂಡು ಬಂದಿದೆ’ ಎಂದರು.
ಬಿಟ್ ಕಾಯಿನ್ ವಿಚಾರವಾಗಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ‘ಬಿಟ್ ಕಾಯಿನ್ ಸುದ್ದಿ ಕಾವು ಪಡೆದುಕೊಳ್ಳುತ್ತಿದ್ದಂತೆ ಜನರ ಗಮನ ಬೇರೆಡೆ ಸೆಳಎಯಲು ಸಿದ್ದರಾಮಯ್ಯ ಅವರ ವಿರುದ್ಧ ಅಪಪ್ರಚಾರ ನಡೆಸುತ್ತಿದೆ. ಬಿಟ್ ಕಾಯಿನ್ ಆನ್ ಲೈನ್ ಮೂಲಕ ನಡೆಯುವ ಡಿಜಿಟಲ್ ಕರೆನ್ಸಿಯಾಗಿದೆ. ಇದರಲ್ಲಿ ಅನೇಕರು ಬಂಡವಾಳ ಹೂಡುತ್ತಿದ್ದಾರೆ. ಆದರೆ ಇದನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ನೆದರ್ ಲೆಂಡ್, ಮಲೇಷ್ಯಾ, ಅಮೆರಿಕ ಬೇರೆ ಬೇರೆ ದೇಶಗಳಲ್ಲಿ ಹ್ಯಾಕ್ ಮಾಡಿ ಸಾವಿರಾರು ಕೋಟಿ ಹಣ ಮಾಡಿರುವುದು ಅಪರಾಧವಾಗಿದೆ. ಹ್ಯಾಕ್ ಮಾಡಿರುವ ವ್ಯಕ್ತಿಗೆ ಪ್ರಭಾವಿ ನಾಯಕರ ಸಂಪರ್ಕವಿದೆ. ಆಡಳಿತ ಪಕ್ಷದಲ್ಲಿರುವವರು ಪ್ರಭಾವಿನಾಯಕರಾಗಿರುತ್ತಾರೆಯೇ ಹೊರತು ವಿರೋಧ ಪಕ್ಷದವರು ಪ್ರಭಾವಿ ನಾಯಕರಾಗಿರುವುದಿಲ್ಲ. ಇದರಲ್ಲಿ ಪ್ರಭಾವಿ ನಾಯಕರ ಮಗ, ಅಧಿಕಾರಿಗಳು ಭಾಗಿಯಾಗಿರುವ ಬಗ್ಗೆ ಊಹಾಪೋಹವಿದೆ. ಸಿಬಿಐಗೆ ಪ್ರಕರಣ ಹೋದಮೇಲೆ ಗೆಜೆಟ್ ಆಗಿರಬೇಕಲ್ಲವೇ? ಅಧಿವೇಶನದಲ್ಲೂ ಈ ಬಗ್ಗೆ ಪ್ರಸ್ತಾಪವಾಗಿಲ್ಲ. ಪ್ರಕರಣದ ತನಿಖೆ ನಡೆಯುತ್ತಿದೆ. ಸರ್ಕಾರ ಯಾವಾಗ ಇದರ ತನಿಖೆಯನ್ನು ಸಿಬಿಐ, ಇಡಿಗೆ ನೀಡಿದೆ ಎಂದು ತಿಳಿಸಲಿ. ಈ ಪ್ರಕರಣದ ತನಿಖೆಯನ್ನು ಪಾರದರ್ಶಕವಾಗಿ ಮಾಡಲಿ. ಕೇಂದ್ರ ಸರ್ಕಾರ ಈ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಒಪ್ಪಿಸಿದರೆ ಮಾತ್ರ ಇದರಲ್ಲಿ ಸತ್ಯಾಂಶ ಹೊರಬರುತ್ತದೆ. ಇಲ್ಲವಾದರೆ ಈ ಪ್ರಕರಣವನ್ನು ಮುಚ್ಚಿಹಾಕಲಾಗುತ್ತದೆ ಎಂಬ ಸುದ್ದಿ ಇದೆ. ಪ್ರಕರಣ ತನಿಖೆ ನಡೆಯುವ ಹಂತದಲ್ಲಿ ನಾವು ಯಾವುದೇ ಮಾಹಿತಿ ಹೇಳಲು ಸಾಧ್ಯವಿಲ್ಲ. ನಿಷ್ಪಕ್ಷಪಾತ ತನಿಖೆಯಾದರೆ ಸರ್ಕಾರಕ್ಕೆ ಕಂಟಕ ಇದೆ ಎಂದು ಹೇಳುತ್ತಿದ್ದಾರೆ. ಸರ್ಕಾರ ಇದ್ದರೂ ಹಗರಣದಲ್ಲಿ ಭಾಗಿಯಾದವರಿಗೆ ಸಮಸ್ಯೆ ಎದುರಾಗುತ್ತದೆ’ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಮಾಜಿ ಸಚಿವ ಆರ್ ಬಿ ತಿಮ್ಮಾಪುರ್, ಬೆಂಗಳೂರು ದಕ್ಷಿಣ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಜಿ ಕೃಷ್ಣಪ್ಪ, ಮಾಜಿ ಮಹಾಪೌರರಾದ ಎಂ ರಾಮಚಂದ್ರಪ್ಪ, ಜೆ ಹುಚ್ಚಪ್ಪ ಅವರೂ ಇದ್ದರು.