►ಮೋದಿ ಸರಕಾರದಿಂದ ಪ್ರಜಾಪ್ರಭುತ್ವದ ಕಗ್ಗೊಲೆ; ರಾಹುಲ್ ಗಾಂಧಿ
ನವದೆಹಲಿ: ಬೆಲೆ ಏರಿಕೆ ಮತ್ತು ನಿರುದ್ಯೋಗ ಹೆಚ್ಚಳ ವಿರೋಧಿಸಿ ಕಾಂಗ್ರೆಸ್ ಶುಕ್ರವಾರ ರಾಷ್ಟ್ರವ್ಯಾಪಿ ಬೃಹತ್ ಪ್ರತಿಭಟನೆ ನಡೆಸುತ್ತಿದೆ.
ಬೆಲೆ ಏರಿಕೆ, ನಿರುದ್ಯೋಗ ಹೆಚ್ಚಳ ವಿರೋಧಿಸಿ ಸೋನಿಯಾ ಗಾಂಧಿ ನೇತೃತ್ವದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಶುಕ್ರವಾರ ಸಂಸತ್ತಿನಿಂದ ರಾಷ್ಟ್ರಪತಿ ಭವನದವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು.
ಮೆರವಣಿಗೆಗೆ ಅನುಮತಿ ನಿರಾಕರಿಸಿ ದೆಹಲಿ ಪೊಲೀಸರು ಬುಧವಾರ ಪಕ್ಷಕ್ಕೆ ಪತ್ರ ಬರೆದಿದ್ದರೂ, ಕಾಂಗ್ರೆಸ್ ಸಂಸದ ದಿಗ್ವಿಜಯ್ ಸಿಂಗ್ ಗುರುವಾರ, “ಬೆಲೆ ಏರಿಕೆ ಮತ್ತು ಹಣದುಬ್ಬರದಂತಹ ವಿಷಯಗಳನ್ನು ಎತ್ತಲು ಎಲ್ಲಾ ಕಾಂಗ್ರೆಸ್ ಸಂಸದರು ನಾಳೆ ರಾಷ್ಟ್ರಪತಿ ಭವನಕ್ಕೆ ಮೆರವಣಿಗೆ ನಡೆಸಲಿದ್ದಾರೆ” ಎಂದು ಹೇಳಿದ್ದರು.
ಪಕ್ಷದ ಹಿರಿಯ ನಾಯಕರು ತಮ್ಮ ಪ್ರತಿಭಟನೆಯ ಭಾಗವಾಗಿ ಪ್ರಧಾನಿ ನರೇಂದ್ರ ಮೋದಿ ಅವರ ನಿವಾಸವನ್ನು ಸುತ್ತುವರೆದಿದ್ದು, ಜಂತರ್ ಮಂತರ್ ಹೊರತುಪಡಿಸಿ ನವದೆಹಲಿಯಾದ್ಯಂತ ಸೆಕ್ಷನ್ 144 ಅನ್ನು ವಿಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಕಪ್ಪು ಅಂಗಿ ಧರಿಸಿ ಆಗಮಿಸಿದ ರಾಹುಲ್ ಗಾಂಧಿ
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ರಾಜ್ಯಸಭೆಯ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಕಪ್ಪು ಅಂಗಿ ಧರಿಸಿ ಸಂಸತ್ ಭವನಕ್ಕೆ ಆಗಮಿಸಿದರು. ಸೋನಿಯಾ ಗಾಂಧಿ ಕಪ್ಪು ಮಾಸ್ಕ್ ಧರಿಸಿ ಪ್ರತಿಭಟನೆಯಲ್ಲಿ ಪಾಲ್ಗೊಂಡದ್ದರು.
ಹಲವರು ವಶಕ್ಕೆ
ಪ್ರಜಾಪ್ರಭುತ್ವದ ಕಗ್ಗೊಲೆ ತಪ್ಪಿಸಿ ಎಂದು ಘೋಷಣೆಯೊಂದಿಗೆ ವಿಜಯ ಚೌಕದಿಂದ ರಾಷ್ಟ್ರಪತಿ ಭವನದತ್ತ ಹೊರಟ ಕಾಂಗ್ರೆಸ್ ಕಾರ್ಯಕರ್ತರು ಮತ್ತು ನಾಯಕರನ್ನು ಅರೆ ಸೇನಾ ಪಡೆ ಮತ್ತು ದಿಲ್ಲಿ ಪೊಲೀಸರು ದಾರಿ ಮಧ್ಯಯೇ ತಡೆದರು. ಬ್ಯಾರಿಕೇಡ್ ದೂಡಿ ಏರಿದ ಹಲವರನ್ನು ವಶಕ್ಕೆ ತೆಗೆದುಕೊಂಡರು.
ವಿಜಯ ಚೌಕದಲ್ಲಿ ಮಾತನಾಡಿದ ರಾಹುಲ್ ಗಾಂಧಿ, ಮೋದಿಯವರ ಸರಕಾರವು ಪ್ರಜಾಪ್ರಭುತ್ವದ ಕಗ್ಗೊಲೆ ನಡೆಸಿದೆ. ರಾಷ್ಟ್ರಪತಿ ಭವನವು ರಬ್ಬರು ಸ್ಟಾಂಪ್ ಆಗಿದೆ ಎಂದು ಆಪಾದಿಸಿದರು.
ದಿಲ್ಲಿ ಪೋಲೀಸರು ಪ್ರತಿಭಟನೆಗೆ ಅವಕಾಶವಿಲ್ಲ ಎಂದು ವಿಜಯ ಚೌಕ್ ರಸ್ತೆಯನ್ನು ಬ್ಲಾಕ್ ಮಾಡಿದರು. ಸಂಸತ್ ಭವನದಿಂದ ರಾಷ್ಟ್ರಪತಿ ಭವನದತ್ತ ಸಾಗುವ ರಸ್ತೆಯಲ್ಲಿ ತಡೆಯಿರಿಸಿದರು.
ಪ್ರತಿಭಟನೆ ನಡೆಸಿರುವ ಕಾಂಗ್ರೆಸ್ ಸಂಸದರಲ್ಲಿ ಮಹಿಳೆಯರೂ ಇದ್ದರು. ಹಾಗಾಗಿ ಬ್ಯಾರಿಕೇಡ್ ಗಳ ಬಲ ಭಾಗದಲ್ಲಿ ಮಹಿಳೆಯರ ಅರೆ ಮಿಲಿಟರಿ ಪಡೆಯು ಸಜ್ಜಾಗಿ ನಿಂತಿತ್ತು. ಭಾರತವನ್ನು ಈ ಸರಕಾರವು ನಿರಂಕುಶಾಧಿಕಾರದತ್ತ ನಡೆಸಿದೆ ಎಂದು ರಾಹುಲ್ ಗಾಂಧಿ ಹೇಳಿದರು.
ಹಲವು ಕಾಂಗ್ರೆಸ್ ನಾಯಕರನ್ನು ಬಂಧಿಸಿ ಪಾರ್ಲಿಮೆಂಟ್ ಹೌಸ್ ಪೊಲೀಸರು ಠಾಣೆಗೆ ಕರೆದೊಯ್ದರು.