ಯಾವುದೇ ನಾಯಕ ಪಕ್ಷ ತ್ಯಜಿಸಿದರೂ ಅದನ್ನು ಜೀರ್ಣಿಸಿಕೊಳ್ಳುವ ಶಕ್ತಿ ಕಾಂಗ್ರೆಸ್ ಗಿದೆ: ಸಲೀಂ ಅಹ್ಮದ್

Prasthutha|

ಬೆಂಗಳೂರು: ಗುಲಾಂ ನಬಿ ಅಜಾದ್ ಅವರು ತಮ್ಮ 50 ವರ್ಷಗಳ ರಾಜಕೀಯ ಜೀವನದಲ್ಲಿ 49 ವರ್ಷಗಳ ಕಾಲ ಪಕ್ಷ ಹಾಗೂ ಸರ್ಕಾರದಲ್ಲಿ ಅಧಿಕಾರ ಅನುಭವಿಸಿದ್ದಾರೆ. ಕೇಂದ್ರ ಮಂತ್ರಿಯಾಗಿ, ಮುಖ್ಯಮಂತ್ರಿಯಾಗಿ, ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿ ವಿವಿಧ ಹಂತಗಳಲ್ಲಿ ಅಧಿಕಾರ ಅನುಭವಿಸಿದ್ದಾರೆ. ಕಳೆದ ವರ್ಷ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಸ್ಥಾನದಲ್ಲಿ ಮುಂದುವರಿಸಲಿಲ್ಲ ಎಂಬ ಒಂದೇ ಕಾರಣಕ್ಕೆ ಈಗ ಪಕ್ಷ ಹಾಗೂ ನಮ್ಮ ನಾಯಕರ ವಿರುದ್ಧ ಆರೋಪ ಮಾಡಿದ್ದಾರೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ಹೇಳಿದ್ದಾರೆ.

- Advertisement -


ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದಲ್ಲಿ ಬೆಲೆ ಏರಿಕೆ, ಭ್ರಷ್ಟಾಚಾರ, ಸಮಾಜ ಒಡೆಯುವ ಪ್ರಯತ್ನ ನಡೆಯುತ್ತಿರುವ ಸಂದರ್ಭದಲ್ಲಿ ಅವರು ಪಕ್ಷ ಬಿಟ್ಟು ಪಲಾಯನ ಮಾಡಿದ್ದಾರೆ. ಅವರ ಹೇಳಿಕೆಯಿಂದ ಕಾಂಗ್ರೆಸ್ ಕಾರ್ಯಕರ್ತರು ನೊಂದಿದ್ದಾರೆ. ಸೋನಿಯಾ ಗಾಂಧಿ ಅವರು ವಿದೇಶ ಪ್ರವಾಸದಲ್ಲಿರುವಾಗ ಇಂತಹ ಹೇಳಿಕೆ ದುರ್ದೈವದ ಸಂಗತಿ. 135 ವರ್ಷಗಳ ಇತಿಹಾಸ ಹೊಂದಿರುವ ಕಾಂಗ್ರೆಸ್ ಪಕ್ಷಕ್ಕೆ ನೂರಾರು ಸಾವಿರಾರು ನಾಯಕರನ್ನು ತಯಾರು ಮಾಡುವ ಶಕ್ತಿ ಇದೆ. ಸೆ.4ರಂದು ದೆಹಲಿಯಲ್ಲಿ ಬೆಲೆ ಏರಿಕೆ ವಿರುದ್ಧ ಪಕ್ಷ ದೊಡ್ಡ ಪ್ರತಿಭಟನೆ ಹಾಗೂ ಸೆ.7ರಿಂದ ದೇಶಾದ್ಯಂತ ಭಾರತ ಜೋಡೋ ಕಾರ್ಯಕ್ರಮ ಹಮ್ಮಿಕೊಂಡಿರುವ ಸಂದರ್ಭದಲ್ಲಿ ಅವರು ರಾಜೀನಾಮೆ ನೀಡಿದ್ದಾರೆ. 3,500 ಕಿ.ಮೀ ಪಾದಯಾತ್ರೆಯಲ್ಲಿ ಗುಲಾಂ ನಬಿ ಅಝಾದ್ ಅವರು ಕೂಡ ಭಾಗಿಯಾಗಬೇಕಿತ್ತು. 15 ದಿನಗಳ ಹಿಂದೆ ಸ್ವಾತಂತ್ರ್ಯದ ಅಮೃತ ಮಹೋತ್ಸವ ಸಂದರ್ಭದಲ್ಲಿ ರಾಹುಲ್ ಗಾಂಧಿ ಅವರ ಜತೆ ಅಜಾದ್ ಅವರು ತ್ರಿವರ್ಣ ಧ್ವಜ ಹಿಡಿದು ಪಾದಯಾತ್ರೆಯಲ್ಲಿ ಭಾಗವಹಿಸಿದ್ದರು. ಕೇವಲ 10 ದಿನಗಳಲ್ಲಿ ಇಂತಹ ಬದಲಾವಣೆ ಆಗಿದೆ. ಇದರ ಹಿಂದೆ ಕಾಣದ ವ್ಯಕ್ತಿಗಳು ಭಾಗಿಯಾಗಿದ್ದಾರೆ. ಬಿಜೆಪಿ ಸರ್ಕಾರ ಪದ್ಮ ಭೂಷಣ ಪ್ರಶಸ್ತಿ ನೀಡಿದ ನಂತರ ಗುಲಾಂ ನಬಿ ಅಜಾದ್ ಅವರಲ್ಲಿ ಸಾಕಷ್ಟು ಬದಲಾವಣೆ ಆಗಿವೆ ಎಂದು ಹೇಳಿದರು.


ದೇಶದಲ್ಲಿ ಜನ ಬೆಲೆ ಏರಿಕೆ, ನಿರುದ್ಯೋಗ, ಅಭಿವೃದ್ಧಿ ವಿಚಾರದಲ್ಲಿ ಭ್ರಮನಿರಸನಾಗಿದ್ದಾರೆ. ಈ ಸಂದರ್ಭದಲ್ಲಿ ಕಾಂಗ್ರೆಸ್ ಹೋರಾಟ ಮಾಡುವಾಗ ಇವರು ಪಕ್ಷ ತ್ಯಜಿಸಿದ್ದಾರೆ. ಈ ಸಮಯದಲ್ಲಿ ಜನ ಕಾಂಗ್ರೆಸ್ ಪರ ನಿಲ್ಲಲಿದ್ದಾರೆ. 2024ರಲ್ಲಿ ಜನ ಕಾಂಗ್ರೆಸ್ ಪಕ್ಷಕ್ಕೆ ಅಧಿಕಾರ ನೀಡುತ್ತಾರೆ ಎಂಬ ವಿಶ್ವಾಸವಿದೆ ಎಂದರು.
ಇನ್ನು ರಾಜ್ಯದ ವಿಚಾರದ ಬಗ್ಗೆ ಮಾತನಾಡುವುದಾದರೆ, ಈ ಸರ್ಕಾರ ಯಾವ ದಿಕ್ಕಿನಲ್ಲಿ ಸಾಗುತ್ತಿದೆ ಅರ್ಥವಾಗುತ್ತಿಲ್ಲ. ಬಿಜೆಪಿ ಸರ್ಕಾರ ಬಂದಾಗಿನಿಂದ ಜನ ಅನಾಥರಾಗಿದ್ದಾರೆ. ಭ್ರಷ್ಟಾಚಾರ ತಾಂಡವವಾಡುತ್ತಿದೆ. ಕೆಂಪಣ್ಣ ಅವರು 40% ಕಮಿಷನ್ ಕುರಿತು ಕಳೆದ ವರ್ಷವೇ ಪ್ರಧಾನಮಂತ್ರಿಗಳಿಗೆ ಪತ್ರ ಬರೆದರೂ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಈಗ ಶಿಕ್ಷಣ ಸಂಸ್ಥೆಗಳ ಸಂಘವು ಪ್ರಧಾನ ಮಂತ್ರಿಗಳಿಗೆ ಪತ್ರ ಬರೆದಿದ್ದಾರೆ. ಶಿಕ್ಷಣ ಇಲಾಖೆಯಲ್ಲಿ ಅನುಮತಿ ನೀಡಲು ರಾಜ್ಯ ಸರ್ಕಾರ 40% ಕಮಿಷನ್ ಪಡೆಯುತ್ತಿದ್ದಾರೆ ಎಂದು ಪತ್ರದಲ್ಲಿ ದೂರಿದ್ದಾರೆ ಎಂದು ಹೇಳಿದರು.

- Advertisement -

ಪ್ರಧಾನಿ ಮೋದಿ ಅವರು ನಾಖಾವೂಂಗಾ, ನಾ ಖಾನೇದೂಂಗಾ ಎಂದು ಹೇಳುತ್ತಲೇ ಬಂದಿದ್ದಾರೆ. ಇದುವರೆಗೂ ಯಾವುದೇ ತನಿಖೆ ಮಾಡಿಲ್ಲ. ಮೋದಿ ಅವರು ಸಿಬಿಐ, ಇಡಿ, ಐಟಿಗೆ ಮಾಹಿತಿ ನೀಡಿ ತನಿಖೆ ಮಾಡಿಸುತ್ತಾರೆ ಎಂದು ಭಾವಿಸಿದ್ದೆವು. ಆದರೆ ಇದುವರೆಗೂ ಆಗಿಲ್ಲ. ಇನ್ನು ಬಿಜೆಪಿ ಕಾರ್ಯಕರ್ತ ಸಂತೋಷ್ ಪಾಟೀಲ್ ನೇರವಾಗಿ ಮಾಜಿ ಸಚಿವ ಈಶ್ವರಪ್ಪ ಅವರ ವಿರುದ್ಧ ಆರೋಪ ಮಾಡಿದರು. ಪ್ರತಿ ಪಕ್ಷಗಳ ಒತ್ತಾಯದ ಮೇರೆಗೆ ರಾಜೀನಾಮೆ ಪಡೆದಿದ್ದು ಬಿಟ್ಟರೆ ಉಳಿದಂತೆ ಯಾವುದೇ ಕ್ರಮ ಕೈಗೊಳ್ಳಲಿಲ್ಲ. ರಾಜ್ಯದ ಇತಿಹಾಸದಲ್ಲಿ ಇಷ್ಟು ಬೇಗ ಬಿ ರಿಪೋರ್ಟ್ ಸಲ್ಲಿಕೆ ಮಾಡಿರಲಿಲ್ಲ ಎಂದರು.
ಪ್ರಧಾನಮಂತ್ರಿಗಳು ಯಾವುದೇ ಕ್ರಮ ಕೈಗೊಳ್ಳದಿದ್ದಾಗ ಗುತ್ತಿಗೆದಾರರ ಸಂಘದವರು ಸಹಜವಾಗಿ ವಿರೋಧ ಪಕ್ಷದ ನಾಯಕರ ಮೊರೆ ಹೋಗಿದ್ದಾರೆ. ಈ ಅಕ್ರಮವನ್ನು ಸಮರ್ಥನೆ ಮಾಡಿಕೊಳ್ಳುತ್ತಿರುವ ಸರ್ಕಾರಕ್ಕೆ ನಾಚಿಕೆಯಾಗಬೇಕು. ಈ ಸರ್ಕಾರಕ್ಕೆ ಬದ್ಧತೆ ಇದ್ದರೆ ನ್ಯಾಯಾಂಗ ತನಿಖೆ ಮಾಡಿಸಲಿ. ಯಾಕೆ ಭಯ? ನಿಮ್ಮಲ್ಲಿ ಪ್ರಾಮಾಣಿಕತೆ ಇದ್ದರೆ ತನಿಖೆ ಮಾಡಿ. ತಪ್ಪು ಮಾಡಿದವರಿಗೆ ಶಿಕ್ಷೆ ಅನುಭವಿಸಲಿ ಎಂದು ಸಲೀಂ ಹೇಳಿದರು.


ಈಗ ಶಿಕ್ಷಣ ಸಂಸ್ಥೆಗಳ ಸಂಘದವರು ಪತ್ರ ಬರೆದಿದ್ದು, ಪ್ರಧಾನಿಗಳು ಏನು ಮಾಡುತ್ತಾರೆ ನೋಡಬೇಕು. ಇದೆಲ್ಲದರಿಂದ ಜನ ಭ್ರಮನಿರಸನರಾಗಿದ್ದು, ಭ್ರಷ್ಟಾಚಾರದಲ್ಲಿ ಹುಟ್ಟಿದ ಈ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದೆ. ಈ ಹಿನ್ನೆಲೆಯಲ್ಲಿ ಹೈಕೋರ್ಟ್ ನ್ಯಾಯಾಧೀಶರ ನೇತೃತ್ವದಲ್ಲಿ ನ್ಯಾಯಾಂಗ ತನಿಖೆ ಮಾಡಿಸಬೇಕು ಎಂದು ಆಗ್ರಹಿಸುತ್ತೇವೆ. ಈ ಸರ್ಕಾರ ಜೀವಂತವಾಗಿಲ್ಲ. ಸರ್ಕಾರ ಸೂಕ್ತ ಕ್ರಮ ಕೈಗೊಳ್ಳದಿದ್ದರೆ, ನಾವು ಜನತಾ ನ್ಯಾಯಾಲಯದ ಮುಂದೆ ಹೋಗುತ್ತೇವೆ. ಕಳೆದ ಮೂರು ವರ್ಷಗಳಲ್ಲಿ ಇವರ ಅಕ್ರಮಗಳನ್ನು ಜನರ ಮುಂದೆ ಇಡುತ್ತೇವೆ. ಕೋವಿಡ್ ಸಮಯದಲ್ಲಿ ಭ್ರಷ್ಟಾಚಾರವನ್ನು ತಿಳಿಸಿದ್ದೆವು. ಈ ಸರ್ಕಾರದ ವಿರುದ್ಧ ಅವರದೇ ನಾಯಕರು ಆರೋಪ ಮಾಡಿದ್ದಾರೆ. ಇಷ್ಟು ದಿನಗಳ ಕಾಲ ಬೊಮ್ಮಾಯಿ ಅವರ ನೇತೃತ್ವದಲ್ಲಿ ಚುನಾವಣೆ ಎದುರಿಸುತ್ತೇವೆ ಎಂದ ಬಿಜೆಪಿ ಈಗ ಸಾಮೂಹಿಕ ನಾಯಕತ್ವ ಎನ್ನುತ್ತಿದ್ದಾರೆ. ನಿಮ್ಮ ಸರ್ಕಾರ ಜನರ ವಿಶ್ವಾಸ ಕಳೆದುಕೊಳ್ಳುತ್ತಿದೆ ಎಂದು ನಿಮಗೂ ಗೊತ್ತಿದೆ. ಅದಕ್ಕಾಗಿ ಈ ರೀತಿ ಹೇಳುತ್ತಿದ್ದಾರೆ ಎಂದರು.


ಸಚಿವರಾದ ಮುನಿರತ್ನ ಅವರ ವಿರುದ್ಧ ಆರೋಪದ ಬಗ್ಗೆ ಕೇಳಿದ ಪ್ರಶ್ನೆಗೆ, ‘ಮುನಿರತ್ನ ಅವರಿಗೆ ನೈತಿಕತೆ ಇದ್ದರೆ ರಾಜೀನಾಮೆ ಕೊಟ್ಟು ತನಿಖೆ ಎದುರಿಸಲಿ. ಇಲ್ಲದಿದ್ದರೆ ಮುಖ್ಯಮಂತ್ರಿಗಳು ಅವರನ್ನು ವಜಾ ಮಾಡಬೇಕು. ನಿಮಗೆ ಅವರ ಮೇಲೆ ನಂಬಿಕೆ ಇದ್ದರೆ ತನಿಖೆ ಮಾಡಿಸಿ, ಅವರು ನಿರ್ದೋಷಿಯಾಗಿ ಬಂದ ಮೇಲೆ ಮತ್ತೆ ಅಧಿಕಾರ ನೀಡಿ’ ಎಂದು ಆಗ್ರಹಿಸಿದರು.
ಸರ್ಕಾರ ದಾಖಲೆ ಕೇಳುತ್ತಿರುವ ಬಗ್ಗೆ ಕೇಳಿದಾಗ, ‘ದಾಖಲೆ ಕಲೆಹಾಕುವುದು ಸರ್ಕಾರ ಹಾಗೂ ಅಧಿಕಾರಿಗಳ ಕೆಲಸ. ವಿರೋಧ ಪಕ್ಷವಾಗಿ ನಮಗೆ ಸಿಗುವ ಮಾಹಿತಿಯನ್ನು ಬಯಲು ಮಾಡುತ್ತೇವೆ. ನಾವು ಇಲ್ಲಿ ಆಡಳಿತ ಮಾಡುತ್ತಿಲ್ಲ. ಮಾಹಿತಿ ಮೇರೆಗೆ ಹೋರಾಟ ಮಾಡುತ್ತಿದ್ದೇವೆ. ದಾಖಲೆ ಕೊಟ್ಟ ಸಂತೋಷ್ ಪಾಟೀಲ್ ಆತ್ಮಹತ್ಯೆ ಮಾಡಿಕೊಂಡು. ಈ ಸರ್ಕಾರ ಏನು ಮಾಡಿತು? ಬಿ ರಿಪೋರ್ಟ್ ಕೊಟ್ಟು ಅವರನ್ನು ನಿರ್ದೋಷಿ ಮಾಡಲು ಕಾಯುತ್ತಿದ್ದಾರೆ’ ಎಂದು ತಿಳಿಸಿದರು.


ಕಾಂಗ್ರೆಸ್ ನಲ್ಲಿ ಹಿರಿಯ ನಾಯಕರನ್ನು ಮೂಲೆಗುಂಪು ಮಾಡಲಾಗುತ್ತಿದೆ ಎಂದು ಕೇಳಿದಾಗ, ‘ಜನ ಕಾಂಗ್ರೆಸ್ ಪಕ್ಷದ ಸಿದ್ಧಾಂತ, ವಿಚಾರಧಾರೆ, ಪಕ್ಷದ ಕೆಲಸಕ್ಕೆ ಮತ ನೀಡುತ್ತಾರೆ. ಯಾವುದೇ ನಾಯಕರು ಪಕ್ಷ ತ್ಯಜಿಸಿದರು ಅದನ್ನು ಜೀರ್ಣಿಸಿಕೊಳ್ಳುವ ಶಕ್ತಿ ಪಕ್ಷಕ್ಕಿದೆ. ಮುನಿಯಪ್ಪನವರು ತಾವು ಯಾವುದೇ ಕಾರಣಕ್ಕೂ ಪಕ್ಷ ಬಿಡುವುದಿಲ್ಲ ಎಂದು ಹೇಳಿದ್ದಾರೆ. ಕಾಂಗ್ರೆಸ್ ಕಟ್ಟಾ ಕಾರ್ಯಕರ್ತ ಎಂದು ಸ್ಪಷ್ಟನೆ ನೀಡಿದ್ದಾರೆ’ ಎಂದರು.

ಕಾಂಗ್ರೆಸ್ ಹಿರಿಯ ನಾಯಕರು ಬಿಜೆಪಿ ಸಂಪರ್ಕದಲ್ಲಿದ್ದಾರೆ ಎಂಬ ಶಾಸಕ ರವಿ ಸುಬ್ಪಮಣ್ಯ ಅವರ ಹೇಳಿಕೆ ವಿಚಾರವಾಗಿ ಕೇಳಿದಾಗ, ‘ರವಿ ಸುಬ್ರಮಣ್ಯ ಅವರು ವಕ್ತಾರರು ಅಲ್ಲ, ಮಂತ್ರಿಯೂ ಅಲ್ಲ. ಇನ್ನು 2 ತಿಂಗಳು ಕಾದು ನೋಡಿ ಎಷ್ಟು ಜನ ಬಿಜೆಪಿ ಹಾಗೂ ಜೆಡಿಎಸ್ ಮುಖಂಡರು ಪಕ್ಷವನ್ನು ಸೇರಲಿದ್ದಾರೆ’ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಕೆಪಿಸಿಸಿ ಸಂವಹನ ವಿಭಾಗದ ಉಪಾಧ್ಯಕ್ಷರಾದ ರಮೇಶ್ ಬಾಬು, ಕೆಪಿಸಿಸಿ ಪ್ರಧಾನಕಾರ್ಯದರ್ಶಿಗಳಾದ ಮೆಹರೋಜ್ ಖಾನ್, ಬಾಲರಾಜ್ ನಾಯ್ಕ್, ಸತ್ಯಾನಾರಾಯಣ್, ಸಯ್ಯದ್ ಅಹಮದ್ ಉಪಸ್ಥಿತರಿದ್ದರು.



Join Whatsapp