ಕಾಂಗ್ರೆಸ್ ನಿಂದ ಅಲ್ಪಸಂಖ್ಯಾತರಿಗೂ ಅನ್ಯಾಯ: ಮುಖ್ಯಮಂತ್ರಿ ಬೊಮ್ಮಾಯಿ

Prasthutha|

ಶಿರಹಟ್ಟಿ: ಕಾಂಗ್ರೆಸ್ ನವರು ದೇಶ ಇಬ್ಭಾಗವಾಗುವಂತೆ ಮಾಡಿದರು. ಪಂಜಾಬ್ ಅನ್ನು ಖಾಲಿಸ್ತಾನ ಮಾಡಲು ಪ್ರಯತ್ನಿಸಿದರು., ದೇಶವನ್ನು ಚೂರು ಮಾಡುವ ಕಾಂಗ್ರೆಸ್ ಪಕ್ಷ ಈಗ ಭಾರತ ಜೋಡೋ ಯಾತ್ರೆ ಮಾಡುತ್ತಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವ್ಯಂಗ್ಯವಾಡಿದರು.

- Advertisement -


ಅವರು ಇಂದು ಶಿರಹಟ್ಟಿಯಲ್ಲಿ ಭಾರತೀಯ ಜನತಾ ಪಕ್ಷ ಜನಸ್ಪಂದನ ಕಾರ್ಯಕ್ರಮದಲ್ಲಿ ಮಾತನಾಡಿದರು. ಸತೀಶ್ ಜಾರಕಿಹೊಳಿ ‘ಹಿಂದು’ ಹೊಲಸು ಪದ ಅಂತ ಹೇಳುವ ಮೂಲಕ ಅಲ್ಪ ಸಂಖ್ಯಾತರ ಓಲೈಕೆ ಮಾಡುವ ಕೆಲಸ ಮಾಡುತ್ತಿದ್ದಾರೆ. ಇಡೀ ಭಾರತ ದೇಶದ ಹಿಂದೂಗಳನ್ನು ಅವಮಾನ ಮಾಡಲಾಗಿದೆ. ಶ್ರೀಮಂತ ಹಾಗೂ ಪುರಾತನ ಪರಂಪರೆ, ಸಂಸ್ಕೃತಿಯುಳ್ಳ ಹಿಂದೂ ಧರ್ಮದ ನಮ್ಮದು.ಈ ಬಗ್ಗೆ ಚರ್ಚೆ ಮಾಡೊಣ ಅಂತಾರೆ. ಇದರಲ್ಲಿ ಚರ್ಚೆ ಮಾಡುವುದೇನಿದೆ. ಸಿದ್ದರಾಮಯ್ಯ , ರಾಹುಲ್ ಗಾಂಧಿ ಇದನ್ನು ಖಂಡಿಸಿಲ್ಲ. ಭಾಜಪ ಇದನ್ನು ಸಹಿಸುವುದಿಲ್ಲ. ಭಾರತದ ಅಸ್ಮಿತೆಯ ಪ್ರಶ್ನೆ ಬಂದರೆ, ಭಾಜಪ ಪುಟಿದೇಳುತ್ತದೆ ಎಂದರು.


ಕಾಂಗ್ರೆಸ್ ನವರು ಅಧಿಕಾರಕ್ಕೆ ಬರುವ ಕನಸು ಕಾಣುತ್ತಿದ್ದಾರೆ:
2018 ರ ಚುನಾವಣೆಯಲ್ಲಿ ಈ ಕ್ಷೇತ್ರದಲ್ಲಿ ಬಿಜೆಪಿಗೆ ಅಭೂತಪೂರ್ವ ಬೆಂಬಲ ಕೊಟ್ಟಿದ್ದೀರಿ. 2018 ರಲ್ಲಿ 10 ಜನರು ಕೇವಲ 500 ಮತಗಳ ಅಂತರದಿಂದ ಸೋತರು. ಅವರು ಗೆದ್ದಿದ್ದರೆ ಸಮ್ಮಿಶ್ರ ಸರ್ಕಾರ ಬರುತ್ತಿಲ್ಲ. ಅಧಿಕಾರ ಇಲ್ಲದೆ ಕಾಂಗ್ರೆಸ್ ಇರಲು ಸಾಧ್ಯವಿಲ್ಲ. ಹಿಂಬಾಗಿಲಿನಿಂದ ಬಂದು ಸರ್ಕಾರ ರಚಿಸಿದರೂ, ಅದೂ ಯಶಸ್ವಿ ಆಗಲಿಲ್ಲ. ಕಾಂಗ್ರೆಸ್ ನವರು ಅಧಿಕಾರವನ್ನು ಕೇವಲ ಸ್ವಾರ್ಥಕ್ಕಾಗಿ ಬಳಸುತ್ತಾರೆ. ಕಾಂಗ್ರೆಸ್ ರಾಜ್ಯದಲ್ಲಿ ಅಧಿಕಾರಕ್ಕೆ ಬರುವ ಕನಸು ಕಾಣುತ್ತಿದ್ದಾರೆ. ಅವರನ್ನು ಮತ್ತೆ ಮನೆಗೆ ಕಳುಹಿಸುವ ಸಂಕಲ್ಪ ಮಾಡಬೇಕು ಎಂದರು.

- Advertisement -


ನಮ್ಮ ನೆಚ್ಚಿನ ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ 27 ಲಕ್ಷ ಕುಟುಂಬಗಳಿಗೆ ಮನೆಗಳಿಗೆ ನೀರು ತಲುಪಿಸುವ ಕೆಲಸ ಮಾಡಿದ್ದೇವೆ. ಕಾಂಗ್ರೆಸ್ ಕಳೆದ ಐವತ್ತು ವರ್ಷದಲ್ಲಿ ಮನೆಗಳಿಗೆ ನೀರು ಕೊಡುವ ಕೆಲಸ ಮಾಡಿಲ್ಲ ಎಂದರು.


ಅಲ್ಪಸಂಖ್ಯಾತರಿಗೂ ಕಾಂಗ್ರೆಸ್ ನಿಂದ ಅನ್ಯಾಯ:
ಒಡೆದು ಆಳುವುದು ಕಾಂಗ್ರೆಸ್ ನೀತಿ. ಸಿದ್ದರಾಮಯ್ಯನವರ ಸರ್ಕಾರ ಇದ್ದಾಗ, ಧರ್ಮವನ್ನು ಒಡೆದು ಆಡಳಿತ ನಡೆಸಿದರು. ಈಗಲೂ ಅದೇ ರೀತಿ ಮಾಡುತ್ತಿದ್ದಾರೆ. ಅಲ್ಪಸಂಖ್ಯಾತರಿಗೂ ಕಾಂಗ್ರೆಸ್ ಅನ್ಯಾಯ ಮಾಡಿದೆ. ವಕ್ಪ್ ಆಸ್ತಿಯನ್ನು ಕಾಂಗ್ರೆಸ್ ನಾಯಕರು ಲಪಟಾಯಿಸಿದ್ದಾರೆ. ಇದಕ್ಕೆ ಸಂಬಂದ ಪಟ್ಟ ವರದಿಯನ್ನು ವಿಧಾನಸಭೆಯಲ್ಲಿ ಮಂಡಿಸಿದ್ದೇವೆ. ಇದಕ್ಕೆ ಪೂರಕ ತನಿಖೆಯನ್ನು ನಡೆಸಲಾಗುವುದು ಎಂದರು.


ಈ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಸಚಿವರಾದ ಗೋವಿಂದ ಕಾರಜೋಳ, ಸಿ.ಸಿ.ಪಾಟೀಲ್, ಬಿ.ಸಿ.ಪಾಟೀಲ್, ರಾಮುಲು, ಸಂಸದ ಶಿವಕುಮಾರ ಉದಾಸಿ ಮತ್ತಿತರರು ಹಾಜರಿದ್ದರು.



Join Whatsapp