ಬೆಂಗಳೂರು: ಬಿಜೆಪಿಯಲ್ಲಿ ಎಲ್ಲಿಯೂ ಹೊಂದಾಣಿಕೆ ರಾಜಕಾರಣ ಇಲ್ಲ. ಎಲ್ಲರೂ ಸಿದ್ದರಾಮಯ್ಯ ಐದು ವರ್ಷ ಮುಖ್ಯಮಂತ್ರಿ ಎಂದು ಹೇಳುತ್ತಿದ್ದಾರೆ. ಸಿಎಂ ವಿಚಾರಕ್ಕೆ ಡಿಸೆಂಬರ್ ನಲ್ಲಿ ಸರ್ಕಾರ ಪತನವಾಗಲಿದೆ ಎಂದು ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.
ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯಲ್ಲಿ ಎಲ್ಲೂ ಹೊಂದಾಣಿಕೆ ರಾಜಕಾರಣ ಇಲ್ಲ. ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ವಿರುದ್ಧ ಆರ್. ಅಶೋಕ, ಸಿದ್ದರಾಮಯ್ಯ ವಿರುದ್ಧ ಸೋಮಣ್ಣ ಅವರನ್ನು ಕಣಕ್ಕೆ ಇಳಿಸಿದ್ದೆವು. ಎಲ್ಲಿದೆ ಹೊಂದಾಣಿಕೆ ರಾಜಕಾರಣ ಎಂದು ನಳಿನ್ ಕುಮಾರ್ ಕಟೀಲ್ ಪ್ರಶ್ನಿಸಿದ್ದಾರೆ.
ಪ್ರತಾಪ್ ಸಿಂಹ ಅವರ ಭಾವನೆಗೆ ಅನುಗುಣವಾಗಿ ಮಾತನಾಡಿದ್ದಾರೆ. ಅವರನ್ನು ಕರೆದು ಮಾತನಾಡುತ್ತೇವೆ. ಸರ್ಕಾರ ವಿರುದ್ಧದ ಹೋರಾಟದ ರೂಪರೇಷೆ ಬಗ್ಗೆ ತೀರ್ಮಾನ ಮಾಡುತ್ತೇವೆ. ಸರ್ಕಾರದ ಅಭಿವೃದ್ಧಿ ಪೂರಕ ಕಾರ್ಯಗಳಿಗೆ ನಮ್ಮ ಸಹಕಾರ ಇರುತ್ತದೆ. ಜೂನ್ 22 ರಿಂದ ನಮ್ಮ ನಾಯಕರ ತಂಡ ರಾಜ್ಯ ಪ್ರವಾಸ ಮಾಡಲಿದೆ. ಸಿದ್ದರಾಮಣ್ಣ ಸರ್ಕಾರದಲ್ಲಿ ಏನೇನು ನಡೆಯುತ್ತೋ ನೋಡೋಣ ಎಂದು ನಳಿನ್ ಕುಮಾರ್ ಹೇಳಿದ್ದಾರೆ.