ವೃದ್ಧಾಪ್ಯಕ್ಕೆ ಹೊರಳುತ್ತಿರುವ ಕಾಂಗ್ರೆಸ್

Prasthutha: November 24, 2020

ಶಬೀರ್ ಕೆ.

ಕಾಂಗ್ರೆಸ್ ಪಕ್ಷವನ್ನೊಳಗೊಂಡ ಆರ್.ಜೆ.ಡಿ ನೇತೃತ್ವದ ಮಹಾ ಘಟಬಂಧನದ ಸೋಲು, ವಿವಿಧ ರಾಜ್ಯಗಳ ಉಪಚುನಾವಣೆಗಳಲ್ಲಿ ಕೋಮುವಾದಿ ಬಿಜೆಪಿಯ ಗೆಲುವು ದೇಶದ ಜಾತ್ಯತೀತ ಪಾಳಯವನ್ನು ಇನ್ನಷ್ಟು ನಿರಾಶೆಗೆ ತಳ್ಳಿರುವುದಷ್ಟೇ ಅಲ್ಲ. ದೇಶದಲ್ಲಿ ಕಾಂಗ್ರೆಸ್ ನ ಪ್ರಸ್ತುತತೆಯ ಕುರಿತು ಪ್ರಶ್ನೆ ಹಾಕಿದೆ.
243 ಸದಸ್ಯ ಬಲದ ಬಿಹಾರ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ಎಲ್ಲಾ ಚುನಾವಣೋತ್ತರ ಸಮೀಕ್ಷೆಗಳನ್ನು ಸುಳ್ಳಾಗಿಸಿ ಎನ್.ಡಿ.ಎ 125 ಸೀಟುಗಳೊಂದಿಗೆ ಅಧಿಕಾರವನ್ನೇರಿತು. ಚುನಾವಣೆಯಲ್ಲಿ ಬಿಜೆಪಿ ತನ್ನ ಪಾಲು ಹೆಚ್ಚಿಸಿಕೊಂಡಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. 2015ರ ಬಿಹಾರ ಚುನಾವಣೆಯಲ್ಲಿ ಆರ್.ಜೆ.ಡಿ 81 ಸೀಟುಗಳೊಂದಿಗೆ ಅತೀ ದೊಡ್ಡ ಪಕ್ಷವಾಗಿ ಹೊರಹೊಮ್ಮಿದರೆ ಜೆಡಿಯು 70 ಸೀಟುಗಳನ್ನು ಪಡೆದಿತ್ತು. ಬಿಜೆಪಿ 53 ಸೀಟುಗಳನ್ನಷ್ಟೇ ಪಡೆದಿತ್ತು. ಕೊರೋನಾ ತಡೆಗಟ್ಟುವುದರಲ್ಲಾದ ವೈಫಲ್ಯ, ಅವೈಜ್ನಾನಿಕ ಲಾಕ್ ಡೌನ್ ಹೇರಿಕೆಯಿಂದಾಗಿ ವಲಸೆ ಕಾರ್ಮಿಕರ ಬಿಕ್ಕಟ್ಟು (ಇದರಿಂದ ಅತ್ಯಧಿಕ ಬಿಹಾರಿಗಳು ಸಮಸ್ಯೆಯನ್ನು ಎದುರಿಸಿದ್ದರು) ಆರ್ಥಿಕ ವೈಫಲ್ಯ, ನಿರುದ್ಯೋಗ, ಕರಾಳ ಕೃಷಿ ಮಸೂದೆ ಜಾರಿ, ಚೀನಾ ಗಡಿ ಬಿಕ್ಕಟ್ಟು ಇವೆಲ್ಲದರ ಹೊರತಾಗಿಯೂ ಬಿಜೆಪಿ ಈ ಬಾರಿ ತನ್ನ ಸೀಟುಗಳನ್ನು ಹೆಚ್ಚಿಸಿಕೊಂಡಿದೆ.


ರಾಜ್ಯದಲ್ಲಿ 70 ಸೀಟುಗಳಿಗೆ ಸ್ಪರ್ಧಿಸಿದ ದೇಶದ ಅತೀ ದೊಡ್ಡ ವಿರೋಧ ಪಕ್ಷ ಕಾಂಗ್ರೆಸ್ ಜುಜುಬಿ 9.5 ಶೇಕಡಾ ಮತಗಳೊಂದಿಗೆ 19 ಸೀಟುಗಳನ್ನಷ್ಟೇ ಪಡೆಯುವುದು ಸಾಧ್ಯವಾಯಿತು. ಬಿಹಾರವನ್ನು ಎರಡು ದಶಕಗಳ ಕಾಲ ಆಳಿದ್ದ ಕಾಂಗ್ರೆಸ್, 2015ರ ಬಿಹಾರ ವಿಧಾನ ಸಭಾ ಚುನಾವಣೆಯಲ್ಲಿ 41 ಸೀಟುಗಳಲ್ಲಿ ಸ್ಪರ್ಧಿಸಿ, 27 ಸೀಟುಗಳನ್ನು ಗೆದ್ದಿತ್ತು. ಆಗ 41 ಸೀಟುಗಳಲ್ಲಿ ಸ್ಪರ್ಧಿಸಿ ಅದು 6.7 ಶೇಕಡಾ ಮತವನ್ನು ಪಡೆದಿತ್ತು. ಈ ಬಾರಿ ಹೆಚ್ಚುವರಿ 29 ಕ್ಷೇತ್ರಗಳಲ್ಲಿ ಸ್ಪರ್ಧಿಸಿಯೂ ಅದು ಪಡೆದಿರುವುದು 9.5 ಶೇಕಡಾ ಮತಗಳೊಂದಿಗೆ 19 ಸ್ಥಾನಗಳಷ್ಟೆ. ಕಾಂಗ್ರೆಸ್ ನ ಇಂದಿನ ಪರಿಸ್ಥಿಯನ್ನು ಇದು ತೋರಿಸುತ್ತದೆ.


2003ರ ಬಳಿಕ ಮೊದಲ ಬಾರಿಗೆ 2018ರಲ್ಲಿ ಮಧ್ಯಪ್ರದೇಶದಲ್ಲಿ ಆಡಳಿತಕ್ಕೆ ಬಂದ ಕಾಂಗ್ರೆಸ್ ಸರಕಾರಕ್ಕೆ ಅಲ್ಲಿ ತನ್ನ ಸರಕಾರವನ್ನು ಉಳಿಸಿಕೊಳ್ಳುವುದು ಸಾಧ್ಯವಾಗಲಿಲ್ಲ. ಕಾಂಗ್ರೆಸ್ ನ ಆಂತರಿಕ ಕಲಹದಿಂದಾಗಿ ಜ್ಯೋತಿರಾದಿತ್ಯ ಸಿಂಧ್ಯಾ ಮತ್ತು ಇತರ 21 ಶಾಸಕರು ಬಿಜೆಪಿಗೆ ಪಕ್ಷಾಂತರಗೊಂಡರು. ಕಾಂಗ್ರೆಸ್ ಬಳಿ 88 ಶಾಸಕರಷ್ಟೇ ಉಳಿದುಕೊಂಡರು. ಇದರೊಂದಿಗೆ ಶಿವರಾಜ್ ಸಿಂಗ್ ಚೌಹಾನ್ ನೇತೃತ್ವದ ಬಿಜೆಪಿ ಸರಕಾರ ಮತ್ತೆ ಅಧಿಕಾರವನ್ನು ಏರಿತು. ಇದೀಗ ರಾಜ್ಯದಲ್ಲಿ ಪಕ್ಷಾಂತರಿ ಶಾಸಕರ ಕ್ಷೇತ್ರವನ್ನೊಳಗೊಂಡಂತೆ 28 ಸ್ಥಾನಗಳಿಗೆ ಉಪ ಚುನಾವಣೆ ನಡೆಯಿತು. ಅಧಿಕಾರ ಹಿಡಿಯಬೇಕಾದರೆ ಕಾಂಗ್ರೆಸ್ ಮ್ಯಾಜಿಕ್ ಸಂಖ್ಯೆ 116 ತಲುಪಲು 28 ಸೀಟುಗಳನ್ನು ಗೆಲ್ಲುವುದು ಅಗತ್ಯವಿತ್ತು. ಆದರೆ 7 ಸೀಟುಗಳನ್ನಷ್ಟೇ ಕಾಂಗ್ರೆಸ್ ಗೆದ್ದುಕೊಂಡಿತು. 16 ಸೀಟುಗಳನ್ನು ಪಡೆದ ಬಿಜೆಪಿ ತನ್ನ ಸ್ಥಾನವನ್ನು ಗಟ್ಟಿಗೊಳಿಸಿತು.


ಗುಜರಾತ್ ನಲ್ಲಿ 8 ಸೀಟುಗಳಿಗೆ ಉಪ ಚುನಾವಣೆ ನಡೆಯಿತು. 182 ಸಂಖ್ಯಾಬಲದ ವಿಧಾನಸಭೆಯಲ್ಲಿ ಬಿಜೆಪಿ ಸರಕಾರ 99 ಶಾಸಕರನ್ನು ಹೊಂದಿತ್ತು. 74 ಶಾಸಕರನ್ನು ಹೊಂದಿದ್ದ ಕಾಂಗ್ರೆಸ್ ನಿಂದ 8 ಶಾಸಕರು ಬಿಜೆಪಿ ಸೇರುವುದರೊಂದಿಗೆ ಕೋಮುವಾದಿ ಪಕ್ಷವು ತನ್ನ ಸರಕಾರವನ್ನು ಗಟ್ಟಿಗೊಳಿಸಿತು. ಇದೀಗ ಆ ಎಂಟು ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಎಲ್ಲಾ ಸ್ಥಾನಗಳನ್ನು ಬಿಜೆಪಿ ಗೆದ್ದುಕೊಂಡಿದೆ.
2018ರ ಕರ್ನಾಟಕ ಅಸೆಂಬ್ಲಿ ಚುನಾವಣೆಯಲ್ಲಿ 78 ಸೀಟುಗಳನ್ನು ಹೊಂದಿದ್ದ ಕಾಂಗ್ರೆಸ್ ಜೆ.ಡಿ.ಎಸ್ (37) ನೊಂದಿಗೆ ಸೇರಿ ಸಮ್ಮಿಶ್ರ ಸರಕಾರ ರಚಿಸಿತು. ಆದರೆ ಆದದ್ದೇನು? ಕಾಂಗ್ರೆಸ್ ನ 13 ಶಾಸಕರು ಜೆಡಿಎಸ್ ನ 3 ಶಾಸಕರು ಬಿಜೆಪಿ ಸೇರುವುದರೊಂದಿಗೆ ಯಡ್ಡಿ ನೇತೃತ್ವದ ಸರಕಾರ ಅಸ್ತಿತ್ವಕ್ಕೆ ಬಂತು. ನಂತರ 15 ಕ್ಷೇತ್ರಗಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ 12 ಸೀಟುಗಳನ್ನು ಪಡೆದುಕೊಂಡರೆ ಕಾಂಗ್ರೆಸ್ ಎರಡು ಸೀಟುಗಳನ್ನಷ್ಟೇ ಉಳಿಸಿಕೊಳ್ಳಲು ಸಾಧ್ಯವಾಯಿತು.


2014ರಲ್ಲಿ ಫ್ಯಾಶಿಸ್ಟ್ ಸರಕಾರವು ಎಲ್ಲಾ ಶಕ್ತಿಯೊಂದಿಗೆ ಅಧಿಕಾರವನ್ನು ಏರಿದ ಬಳಿಕ ಕೋಮುವಾದಿಗಳನ್ನು ಎದುರಿಸುವ ಶಕ್ತಿಯನ್ನು ತಾನು ಹೊಂದಿಲ್ಲ ಎಂಬುದನ್ನು ಕಾಂಗ್ರೆಸ್ ಮತ್ತೆ ಮತ್ತೆ ಸಾಬೀತುಪಡಿಸುತ್ತಿದೆ. ದೇಶದ ಬದಲಾದ ಪರಿಸ್ಥಿತಿಯಲ್ಲಿ ತನ್ನ ಹಳೆಯ ತಂತ್ರಗಾರಿಕೆಗಳು ಕೆಲಸಕ್ಕೆ ಬಾರದು ಎಂಬ ವಾಸ್ತವವನ್ನು ಕಾಂಗ್ರೆಸ್ ಅರ್ಥೈಸಿಕೊಂಡಿಲ್ಲ ಎಂಬುದು ದುರಂತವಾಗಿದೆ.
ಪ್ರಸ್ತುತ ಕಾಂಗ್ರೆಸ್ ಮೂರು ಪ್ರಮುಖ ಸಮಸ್ಯೆಗಳನ್ನು ಎದುರಿಸುತ್ತಿದ್ದು ಅವುಗಳನ್ನು ಸರಿಪಡಿಸದ ಹೊರತು ‘ಕಾಂಗ್ರೆಸ್ ಮುಕ್ತ ಭಾರತ’ ಎಂಬ ಫ್ಯಾಶಿಸ್ಟರ ಅಜೆಂಡಾವು ಬಹು ಬೇಗನೇ ಪೂರ್ಣಗೊಳ್ಳಲಿದೆ. ಸಂಘಟನಾ ಸಮಸ್ಯೆ, ಸೈದ್ಧಾಂತಿಕ ಸಮಸ್ಯೆ, ನಾಯಕತ್ವದ ಸಮಸ್ಯೆ ಕಾಂಗ್ರೆಸ್ ಎದುರಿಸುತ್ತಿರುವ ಪ್ರಮುಖ ಬಿಕ್ಕಟ್ಟು.


ಸಂಘಟನಾ ಸಮಸ್ಯೆ:
ತನ್ನ ಶತ್ರುವನ್ನು ಅರಿಯದವ ಯುದ್ಧ ಗೆಲ್ಲುವುದು ಅಸಾಧ್ಯದ ಮಾತು. ಶತ್ರುವಿನ ಶಕ್ತಿ, ಸಾಮರ್ಥ್ಯ, ದೌರ್ಬಲ್ಯ ವೆಲ್ಲವನ್ನೂ ಒಪ್ಪಿಕೊಂಡು ಯೋಜನೆ ರೂಪಿಸುವುದು ಯುದ್ಧರಂಗದಲ್ಲಿ ಪ್ರಮುಖ ಅಗತ್ಯ. ಭಾರತದಲ್ಲಿ ಅಧಿಕಾರದಲ್ಲಿರುವ ಹಿಂದುತ್ವ ಫ್ಯಾಶಿಸ್ಟರು ಪ್ರಬಲ ತತ್ವಸಿದ್ಧಾಂತವನ್ನು ಹೊಂದಿಲ್ಲ. ಅವರಿಗೆ ಅಧಿಕಾರದ ಅನುಭವವಿಲ್ಲ, ಆರ್ಥಿಕತೆಯ ಅರಿವಿಲ್ಲ. ಸುಳ್ಳುಗಳು, ಅಪಪ್ರಚಾರ, ತಿರುಚಿದ ಇತಿಹಾಸ ಅವರ ಬಂಡವಾಳ. ಕಪ್ಪು ಹಣ ಹಿಂದಿರುಗಿಸುವ ಹೆಸರಿನಲ್ಲಿ ಅತಿ ಮೂರ್ಖತನದ ನೋಟು ನಿಷೇಧವನ್ನು ಜಾರಿಗೆ ತಂದು ದೇಶದ ಇಡೀ ಜನಸಂಖ್ಯೆಯನ್ನೇ ಅವರು ಸಂಕಷ್ಟಕ್ಕೆ ತಳ್ಳಿದರು. ಬೆನ್ನಿಗೆ ಜಿ.ಎಸ್.ಟಿ ತಂದು ಆರ್ಥಿಕತೆಯನ್ನು ಇನ್ನಷ್ಟು ದುಸ್ತರಗೊಳಿಸಿದರು. ಕಂಪೆನಿಗಳು ಮುಳುಗಿಹೋದವು, ಸಣ್ಣ-ದೊಡ್ಡ ಕೈಗಾರಿಕೆಗಳು ಮುಚ್ಚಲು ಆರಂಭವಾಯಿತು. ನಿರುದ್ಯೋಗ ಹೆಚ್ಚಾಯಿತು. ಕಾರ್ಮಿಕ ವಿರೋಧಿ ಕಾನೂನುಗಳು ಅಸ್ತಿತ್ವಕ್ಕೆ ಬಂದವು. ಕೊನೆಗೆ ಕೊರೋನಾ ಸಾಂಕ್ರಾಮಿಕ ಬಂದಿತು. ಕೇವಲ 4 ಗಂಟೆಗಳ ನೊಟೀಸಿನೊಂದಿಗೆ ಲಾಕ್ಡೌನ್ ಹೇರಿ ದೇಶದ ನೂರು ಕೋಟಿಗೂ ಅಧಿಕ ಮಂದಿಯನ್ನು ಅಕ್ಷರಶ: ಬಂಧನದಲ್ಲಿಟ್ಟರು. ಜನರು ಆಹಾರ, ಅನ್ನಪಾನೀಯವಿಲ್ಲದೆ ಪರದಾಡಿದರು, ಕೆಲವರು ಸತ್ತು ಹೋದರು. ವಲಸಿಗ ಕಾರ್ಮಿಕರು ನೂರಾರು ಸಾವಿರಾರು ಮೈಲಿ ನಡೆದು ಮನೆ ಸೇರಬೇಕಾಯಿತು. ಕೆಲವರು ದಾರಿ ಮಧ್ಯೆಯೇ ಜೀವಬಿಟ್ಟರು; ಇನ್ನು ಕೆಲವರು ಕಾಯಿಲೆ ಪೀಡಿತರಾಗಿ, ಅಪಘಾತಗಳಲ್ಲಿ, ಹಸಿವಿನಿಂದ ಬಳಲಿ ಜೀವ ಬಿಟ್ಟರು. ಆದರೆ ಏನಾಯಿತು? ಆಡಳಿತದಲ್ಲಿರುವವರಿಗೆ ಅದರ ಪರಿಣಾಮ ತಟ್ಟಿತೇ? ಅವರು ಮತ್ತೆ ಮತ್ತೆ ಅಧಿಕಾರಕ್ಕೆ ಬರುತ್ತಲೇ ಇದ್ದಾರೆ. ರಾಜ್ಯ ಚುನಾವಣೆಗಳಲ್ಲಿ, ಉಪಚುನಾವಣೆಗಳಲ್ಲಿ ಅವರು ಅಧಿಕಾರಕ್ಕೆ ಬರುತ್ತಲೇ ಇದ್ದಾರೆ. ಅದೂ ಏಕೆ? ವಲಸಿಗ ಕಾರ್ಮಿಕರ ಬಿಕ್ಕಟ್ಟು ಎದುರಿಸಿದ ಬಿಹಾರದಲ್ಲಿ ಅವರು 53 ಸ್ಥಾನಗಳಿಂದ 73 ಸ್ಥಾನಗಳಿಗೆ ಹಾರಿದರು. ಎಲ್ಲಾ ವೈಫಲ್ಯಗಳ ಮಧ್ಯೆಯೂ ಅವರು ಹೀಗೇಕೆ ಗೆಲ್ಲುತ್ತಾರೆ? ಉತ್ತರವೊಂದೇ – ಅವರ ಸಂಘಟನಾ ಶಕ್ತಿ.


ಅವರು ಸಂಘಟಿತರಾಗಿದ್ದಾರೆ. ಬಿಜೆಪಿ ಆರೆಸ್ಸೆಸ್ ನ ಒಂದು ಭಾಗವಾಗಿದೆ. ಆರೆಸ್ಸೆಸ್ ಗೆ ಸುಮಾರು ನೂರರಷ್ಟು ಇರುವ ಅಂಗಸಂಘಟನೆಗಳಲ್ಲೊಂದು ಬಿಜೆಪಿ. ಸಮಾಜದ ಎಲ್ಲಾ ವರ್ಗಗಳನ್ನು ಒಳಗೊಳ್ಳುವುದಕ್ಕಾಗಿ ಅಂಗಸಂಸ್ಥೆಗಳನ್ನು ಅದು ಹೊಂದಿದೆ. ಕಾರ್ಮಿಕನಿಂದ ಹಿಡಿದು ಒಡೆಯರ ತನಕ, ಮೂಢರಿಂದ ಹಿಡಿದು ವಿಜ್ನಾನಿಗಳ ತನಕ, ಪೋಲಿ, ರೌಡಿಗಳಿಂದ ಹಿಡಿದು ಸರಕಾರಿ ಅಧಿಕಾರಿಗಳ ತನಕ ಎಲ್ಲರಿಗಾಗಿ ಸಂಘಟನೆಗಳನ್ನು ರಚಿಸಿಕೊಂಡಿದೆ. ಚುನಾವಣೆಗಳ ವೇಳೆ ಎಲ್ಲಾ ಯಂತ್ರಾಂಗಗಳನ್ನು ಬಳಸಲಾಗುತ್ತದೆ. ಆರೆಸ್ಸೆಸ್ ನ ಪ್ರಚಾರಕರು, ಕಾರ್ಯಕರ್ತರು ಎಲ್ಲಾ ಕ್ಷೇತ್ರಗಳಲ್ಲಿ ತಳಮಟ್ಟದಲ್ಲಿ ಎಲ್ಲಾ ಹಂತಗಳಲ್ಲೂ ದೇಶದ ಪ್ರತಿಯೊಬ್ಬ ನಾಗರಿಕನನ್ನೂ ತಲುಪುತ್ತಾರೆ. ಸಂವಹನದ ಎಲ್ಲಾ ಮಾರ್ಗಗಳನ್ನು ತಮ್ಮ ವಿಭಜನಕಾರಿ ಸಿದ್ಧಾಂತದ ಪ್ರಚಾರಕ್ಕೆ ಬಳಸುತ್ತಾರೆ. ಮೊದಲು ಸಂಬಂಧಿಸಿದ ಕ್ಷೇತ್ರವನ್ನು ಎತ್ತಿಕೊಳ್ಳಲಾಗುತ್ತದೆ. ಅಲ್ಲಿ ಯಾವ ವಿಷಯಗಳನ್ನು ಮತದಾರರ ಮುಂದಿಡಬೇಕೆಂದು ನಾಯಕತ್ವವು ತೀರ್ಮಾನಿಸುತ್ತದೆ. ಕಾರ್ಯಕರ್ತರು ಬೀದಿ ಸಭೆಗಳು, ಡೋರ್ ಟು ಡೋರ್ ಕ್ಯಾಂಪೈನ್ ಗಳು ಮತ್ತು ಗುಂಪು ಸಭೆಗಳನ್ನು ನಡೆಸುತ್ತಾರೆ. ರಾಷ್ಟ್ರೀಯ ಭದ್ರತೆ, ಹಿಂದೂಗಳ ಅಭದ್ರತೆ, ಭಯೋತ್ಪಾದನೆ, ಹಿಂದುತ್ವ, ಮಂದಿರ-ಮಸೀದಿ ಮುಂತಾದ ವಿಭಜನಕಾರಿ ಸಿದ್ಧಾಂತಗಳನ್ನು ಅವರು ಬಹುಸಂಖ್ಯಾತರಲ್ಲಿ ತುಂಬುತ್ತಾರೆ.


ದುರ್ಬಲ ಸಿದ್ಧಾಂತದೊಂದಿಗೆ ಬಲಿಷ್ಠ ಸಂಘಟನಾ ವ್ಯವಸ್ಥೆಯನ್ನು ಹೊಂದಿರುವ ಹಿಂದುತ್ವ ಫ್ಯಾಶಿಸ್ಟರನ್ನು ಎದುರಿಸಲು ಕಾಂಗ್ರೆಸ್ ನೊಂದಿಗೆ ಇರುವ ಮಾರ್ಗವೇನು. ಅವರ ಸೇವಾ ದಳವಾಗಲೀ ಕಾರ್ಮಿಕ ಸಂಘಟನೆಗಳಾಗಲೀ ಯಾವುದೇ ಪರಿಣಾಮವನ್ನುಂಟುಮಾಡಬಲ್ಲ ಸಾಮರ್ಥ್ಯವನ್ನು ಹೊಂದಿಲ್ಲ. ರಫೇಲ್ ಹಗರಣ, ನೋಟು ನಿಷೇಧ ಮತ್ತು ಜಿ.ಎಸ್.ಟಿಯ ಪರಿಣಾಮ, ಬಾಂಗ್ಲಾ ದೇಶಕ್ಕಿಂತಲೂ ಕೆಳಮಟ್ಟಕ್ಕಿಳಿದ ಭಾರತದ ಅರ್ಥವ್ಯವಸ್ಥೆ, ಕೊರೋನಾ ಸಾಂಕ್ರಾಮಿಕ ತಡೆಯಲು ನರೇಂದ್ರ ಮೋದಿ ವೈಫಲ್ಯ, ನಿರುದ್ಯೋಗ ಇನ್ನೇನೋ ವಿಷಯಗಳ ಕುರಿತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪತ್ರಿಕಾಗೋಷ್ಠಿ ನಡೆಸುತ್ತಿದ್ದಾರೆ, ಭಾಷಣಗಳನ್ನು ಮಾಡುತ್ತಿದ್ದಾರೆ, ಟ್ವೀಟ್ ಮಾಡುತ್ತಿದ್ದಾರೆ. ಆದರೆ ಇವ್ಯಾವುದೂ ಪರಿಣಾಮ ಬೀರುವುದಿಲ್ಲ. ಯಾಕೆಂದರೆ ಅವುಗಳ ವಿರುದ್ಧ ಪ್ರಬಲ ಹೋರಾಟವನ್ನು ನಡೆಸಲು, ತಳಮಟ್ಟದಲ್ಲಿ ಜನರನ್ನು ತಲುಪಲು ಕಾಂಗ್ರೆಸ್ ವಿಫಲವಾಗಿದೆ. ಅದು ನಾಯಕರೇ ಇರುವ ಕಾರ್ಯಕರ್ತರಿಲ್ಲದ ಪಕ್ಷವಾಗಿದೆ. ಸ್ಥಳೀಯ ಗ್ರಾಮ ಮಟ್ಟದಿಂದ ಹಿಡಿದು, ಪಟ್ಟಣ, ನಗರ, ರಾಜ್ಯ, ದೇಶ ಮಟ್ಟದವರೆಗೆ ಎಲ್ಲರೂ ನಾಯಕರಾಗ ಬಯಸುವವರೇ ಇರುತ್ತಾರೆ. ಪಕ್ಷದ ಸಿದ್ಧಾಂತದ ಜ್ನಾನವಿಲ್ಲದ, ಯಾವುದೇ ಸಂದರ್ಭದಲ್ಲಿ ಯಾವ ಕಡೆಗೂ ವಾಲಬಲ್ಲ ಆದರ್ಶವಿಲ್ಲದ ಸ್ಥಳೀಯ ಪುಡಿ ರಾಜಕಾರಣಿಗಳು ಮತ್ತು ಅವರ ಅನುಯಾಯಿಗಳು ತಳಮಟ್ಟದಲ್ಲಿ ಅವರಿಗಾಗಿ ಕೆಲಸ ಮಾಡುವ ಕಾಲಾಳುಗಳಾಗಿದ್ದಾರೆ. ಅತ್ಯಂತ ದುರ್ಬಲ ಸಂಘಟನಾ ರಚನೆಯ ಕಾರಣಕ್ಕಾಗಿ ಅದಕ್ಕೆ ತದ್ವಿರುದ್ಧವಾಗಿರುವ ಫ್ಯಾಶಿಸ್ಟ್ ಸರಕಾರವನ್ನು ಎದುರಿಸಲು ಎಲ್ಲಾ ರೀತಿಯಲ್ಲಿ ಕಾಂಗ್ರೆಸ್ ವಿಫಲವಾಗಿದೆ.
ಬಿಜೆಪಿಯ ವಿರುದ್ಧ ಪ್ರಬಲ ಹೋರಾಟವನ್ನು ಸಂಘಟಿಸಿ ಆಡಳಿತವನ್ನೇ ಸಂಪೂರ್ಣವಾಗಿ ಸ್ಥಗಿತಗೊಳಿಸಬಹುದಾದಂತಹ ವಿಚಾರಗಳಿದ್ದರೂ ಸಂಘಟನಾ ಕೊರತೆಯ ಕಾರಣದಿಂದ ಕಾಂಗ್ರೆಸ್ ವಿಫಲವಾಯಿತು. ಮಾತ್ರವಲ್ಲ ಅದು ತನ್ನ ವೈಫಲ್ಯಗಳನ್ನು ಮುಂದುವರಿಸುತ್ತಲೇ ಇದೆ.


ಸೈದ್ಧಾಂತಿಕ ಸಮಸ್ಯೆ:

ಪ್ರಜಾಪ್ರಭುತ್ವ, ರಾಷ್ಟ್ರೀಯತೆ, ಜಾತ್ಯತೀತತೆ, ಎಲ್ಲರನ್ನೊಳಗೊಂಡ ಅಭಿವೃದ್ಧಿ, ಸಾಮಾಜಿಕ ನ್ಯಾಯವನ್ನು ತನ್ನ ಮೌಲ್ಯಗಳೆಂದು ಪ್ರತಿಪಾದಿಸುವ ಕಾಂಗ್ರೆಸ್ ನ ಹಿಂದೆ ಈ ದೇಶದ ಜನತೆ ಒಟ್ಟಾಗಿ ನಿಂತಿದ್ದರು. ಆದರೆ ಕಾಂಗ್ರೆಸ್ ತನ್ನ ಸಿದ್ಧಾಂತವನ್ನು ಪ್ರಚುರಪಡಿಸಲು, ಅದನ್ನು ಭಾರತದ ಜನರಲ್ಲಿ ವಿಶೇಷವಾಗಿ ಬಹುಸಂಖ್ಯಾತರ ಮನಸ್ಸಿನಲ್ಲಿ ಬಿತ್ತಲು ಮತ್ತು ತನ್ನ ಸಿದ್ಧಾಂತಕ್ಕೆ ಬದ್ಧವಾಗಿ ನಡೆದುಕೊಳ್ಳಲು ಸಂಪೂರ್ಣವಾಗಿ ವಿಫಲಗೊಂಡಿತು. ಪ್ರಜಾಪ್ರಭುತ್ವವನ್ನು ಮೌಲ್ಯವೆಂದು ಹೇಳಿಕೊಂಡ ಕಾಂಗ್ರೆಸ್ ತನ್ನ ಪಕ್ಷದೊಳಗೆಯೇ ಪ್ರಜಾಪ್ರಭುತ್ವವನ್ನು ಉಳಿಸಿಕೊಳ್ಳಲು ವಿಫಲವಾಯಿತು. ಕುಟುಂಬ ಬಲ, ಜಾತಿಬಲ, ಹಣಬಲ, ತೋಳ್ಬಲವಿರುವವರು ಕಾಂಗ್ರೆಸ್ ನ ನಾಯಕರಾಗಬಹುದಾಗಿದೆ. ಅಲ್ಲಿ ಅನುಭವ, ತತ್ವ-ಸಿದ್ಧಾಂತ, ಆದರ್ಶಗಳಿಗೆ ಯಾವುದೇ ಸ್ಥಳವಿಲ್ಲ.


ಹಿಂದೂವಾಗಲೀ ಮುಸಲ್ಮಾನನಾಗಲೀ ಪಾರ್ಸಿಯಾಗಲೀ ಕ್ರಿಶ್ಚಿಯನ್ ಆಗಲಿ ಎಲ್ಲದ್ದಕ್ಕಿಂತಲೂ ಹೆಚ್ಚಾಗಿ ಭಾರತೀಯನೆಂಬ ಗುರುತು ಮೇಲು ಎಂದು ಕಾಂಗ್ರೆಸ್ ನ ರಾಷ್ಟ್ರೀಯತೆ ವ್ಯಾಖ್ಯಾನಿಸುತ್ತದೆ. ಆದರೆ ಬ್ರಾಹ್ಮಣ್ಯ ಸಿದ್ಧಾಂತದ ಪ್ರತಿಪಾದಕರಾದ ಹಿಂದೂ ರಾಷ್ಟ್ರೀಯವಾದಿಗಳು ದಿನಬೆಳಗಾಗುವುದರೊಳಗಾಗಿ ದೇಶದ ಆಡಳಿತವನ್ನು ಹಿಡಿದಿಲ್ಲ. ಅವರು ನಿರಂತರವಾಗಿ ಧ್ವಂಸ, ಕೋಮು ಸಂಘರ್ಷಗಳ ಮೂಲಕ ಜನರನ್ನು ಒಡೆದರು. ಅಲ್ಪಸಂಖ್ಯಾತರ ಹತ್ಯಾಕಾಂಡಗಳನ್ನು ನಡೆಸಿದರು. ಅವರು ಜನರ ಮನಸ್ಸನ್ನು ವಿಷವನ್ನು ತುಂಬುವ ವೇಳೆ ಕಾಂಗ್ರೆಸ್, ಜಾತ್ಯತೀತತೆಯ ಮಹತ್ವದ ಕುರಿತು, ಹಿಂದುತ್ವವು ಹೇಗೆ ಹಿಂದೂ ವಿರೋಧಿಯಾಗಿದೆ ಎಂಬುದನ್ನು ಬಹುಸಂಖ್ಯಾತರಿಗೆ ಮನವರಿಕೆ ಮಾಡಿಕೊಡಲು ವಿಫಲವಾಯಿತು. ಅಂತಹ ಸಂಘಟನಾ ಶಕ್ತಿಯಾಗಲೀ ಇಚ್ಛಾ ಶಕ್ತಿಯಾಗಲೀ ಕಾಂಗ್ರೆಸ್ ಗೆ ಇದ್ದಿಲ್ಲ ಎಂಬುದೂ ವಾಸ್ತವವಾಗಿದೆ. ಎಲ್ಲಕ್ಕಿಂತ ಹೆಚ್ಚಾಗಿ ಕಾಂಗ್ರೆಸ್ ನ ಮೌಲ್ಯ, ಆದರ್ಶಗಳೆಲ್ಲಾ ಕೇವಲ ಕಾಗದಗಳಿಗೆ ಸೀಮಿತವಾಯಿತು. ಇಂದಿರಾ ಗಾಂಧಿಯ ಆಡಳಿತದ ಬಳಿಕ ಕಾಂಗ್ರೆಸ್ ಹಿಂದುತ್ವದೆಡೆಗೆ ವಾಲಿತು. ಆರೆಸ್ಸೆಸ್ ಅನ್ನು ಒಪ್ಪಿಕೊಳ್ಳುವುದಿಲ್ಲ ಎಂದರೂ ಆರೆಸ್ಸೆಸ್ ನ ವಿಚಾರಗಳನ್ನು ಒಪ್ಪಿಕೊಂಡಿತು. ರಾಜ ಕುಮಾರನಿಗೂ ಬಡವನಿಗೂ ಸಮಾನ ನ್ಯಾಯವಿರುವ ಗಾಂಧೀಜಿಯ ರಾಮರಾಜ್ಯದ ಕಲ್ಪನೆಯನ್ನು ತನ್ನ ನಾಯಕರು, ಕಾರ್ಯಕರ್ತರಲ್ಲಿ ಮತ್ತು ದೇಶದ ಜನರಲ್ಲಿ ಹರಡುವ ಬದಲು ಕಾಂಗ್ರೆಸ್ ಸ್ವತ: ಹಿಂದುತ್ವದ ರಾಮರಾಜ್ಯ ಕಲ್ಪನೆಯನ್ನು ಅಪ್ಪಿಕೊಂಡಿತು.

ಅದರ ಸೈದ್ಧಾಂತಿಕ ಬದ್ಧತೆಯ ಕೊರತೆಗೆ ಉತ್ತಮ ಉದಾಹರಣೆ ಬಾಬರಿ ಮಸ್ಜಿದ್ ಆಗಿದೆ. 1984ರಲ್ಲಿ ವಿಶ್ವ ಹಿಂದೂ ಪರಿಷತ್ ಬಾಬರಿ ಮಸೀದಿ ದ್ವಾರವನ್ನು ತೆರೆಯಲು ಮತ್ತು ರಾಮಮಂದಿರ ನಿರ್ಮಾಣಕ್ಕಾಗಿ ಅಭಿಯಾನ ಆರಂಭಿಸಿತು. 1985ರಲ್ಲಿ ಸಂಘಪರಿವಾರದ ರಾಮಜನ್ಮಭೂಮಿ ಕಲ್ಪನೆಯನ್ನು ಪ್ರಚುರಪಡಿಸುವ ರಾಮಾನಂದ್ ಸಾಗರ್ ರ ‘ರಾಮಾಯಣ’ವನ್ನು ದೂರದರ್ಶನದಲ್ಲಿ ಪ್ರಸಾರ ಮಾಡಲು ಕಾಂಗ್ರೆಸ್ ನಾಯಕ ರಾಜೀವ್ ಗಾಂಧಿ ಸೂಚಿಸಿದರು. ಅವರು 1986ರಲ್ಲಿ ಪೂಜೆಗಾಗಿ ಬಾಬರಿ ಮಸ್ಜಿದ್ ನ ದ್ವಾರವನ್ನು ಹಿಂದೂಗಳಿಗಾಗಿ ತೆರೆದುಕೊಟ್ಟರು. 1989ರಲ್ಲಿ ವಿ.ಎಚ್.ಪಿ ರಾಮಮಂದಿರ ಶಿಲಾನ್ಯಾಸಕ್ಕಾಗಿ ದೇಶದಾದ್ಯಂತ ಕರಸೇವೆಯನ್ನು ನಡೆಸಿ ಇಟ್ಟಿಗೆ ಸಂಗ್ರಹಿಸಲು ಪ್ರಾರಂಭಿಸಿದಾಗ ರಾಜೀವ್ ಗಾಂಧಿ ಶಿಲಾನ್ಯಾಸಕ್ಕೆ ಅನುಮತಿ ಕೊಟ್ಟರು ಮತ್ತು ತಾನೂ ಅದರಲ್ಲಿ ಪಾಲ್ಗೊಳ್ಳಬಯಸಿದರು. ಇದರಿಂದಾಗಿ ತನ್ನ ನೆಲೆಯಾಗಿದ್ದ ಉತ್ತರ ಪ್ರದೇಶವನ್ನು ಕಾಂಗ್ರೆಸ್ ಕಳೆದುಕೊಂಡಿತು. ಅಲ್ಲಿ ಮುಸ್ಲಿಮರು ಪಕ್ಷವನ್ನು ತಳ್ಳಿಹಾಕಿದರು. ಇಂದಿನವರೆಗೂ ಕಾಂಗ್ರೆಸ್ ಈ ರಾಜ್ಯದಲ್ಲಿ ಚೇತರಿಕೆ ಕಾಣಲು ಸಾಧ್ಯವಾಗಲಿಲ್ಲ. ಮುಂದೆ 1992ರಲ್ಲಿಬಾಬರಿಯನ್ನು ಧ್ವಂಸಗೊಯ್ಯುವುದಕ್ಕೂ ಕಾಂಗ್ರೆಸ್ ಮಾರ್ಗವನ್ನು ತೆರೆದುಕೊಟ್ಟಿತು.


ಇಂದಿಗೂ ಕಾಂಗ್ರೆಸ್ ರಾಮ ಮಂದಿರವನ್ನು ಬೆಂಬಲಿಸುತ್ತದೆ. ಆಗಸ್ಟ್ ಐದರಂದು ರಾಮ ಮಂದಿರಕ್ಕೆ ಭೂಮಿ ಪೂಜೆ ನಡೆಯುವುದಕ್ಕೆ 24 ಗಂಟೆ ಮುಂಚೆ ಹೇಳಿಕೆ ಬಿಡುಗಡೆಗೊಳಿಸಿದ ಕಾಂಗ್ರೆಸ್ ನಾಯಕಿ ಪ್ರಿಯಾಂಕ ಗಾಂಧಿ, “ಶಿಲಾನ್ಯಾಸ ಸಮಾರಂಭವು ರಾಷ್ಟ್ರೀಯ ಏಕತೆ, ಸಹೋದರತೆ ಮತ್ತು ಸಾಂಸ್ಕೃತಿಕ ಸಂಬಂಧದದ ಆಚರಣೆಯಾಗಿ ಕಾಣಬೇಕು” ಎಂದರು. ಈ ಶಿಲಾನ್ಯಾಸ ಸಮಾರಂಭಕ್ಕೆ ಮಧ್ಯ ಪ್ರದೇಶ ಕಾಂಗ್ರೆಸ್ ಯುನಿಟ್ 11 ಬೆಳ್ಳಿಯ ಇಟ್ಟಿಗೆಗಳನ್ನು ಕಳುಹಿಸಿತು. ಗುಜರಾತ್ ನ ಕಾಂಗ್ರೆಸ್ ನಾಯಕ ಹಾರ್ದಿಕ್ ಪಟೇಲ್ ಮಂದಿರ ನಿರ್ಮಾಣಕ್ಕಾಗಿ ಹಣವನ್ನು ದಾನಮಾಡಿದರು. ಹರಿಯಾಣ ಸಂಸದ ದೀಪೇಂದ್ರ ಹೂಡ ರಾಮಮಂದಿರ ಶಿಲಾನ್ಯಾಸವನ್ನು ಪಕ್ಷ ಬೆಂಬಲಿಸಬೇಕೆಂದರು.
ಇಂದು ಸಿದ್ಧಾಂತವಿಲ್ಲದ ಸ್ಪಷ್ಟ ನಿಲುವಿಲ್ಲದ ಅಪ್ರಸ್ತುತ ಪಕ್ಷವಾಗಿ ಕಾಂಗ್ರೆಸ್ ಬದಲಾಗಿದೆ. ಸ್ವಾರ್ಥ, ಅವಕಾಶವಾದ ಮತ್ತು ಕುಟುಂಬ ರಾಜಕಾರಣವೇ ಇಂದು ಕಾಂಗ್ರೆಸ್ ನ ಅಲಿಖಿತ ಸಿದ್ಧಾಂತ.


ನಾಯಕತ್ವದ ಸಮಸ್ಯೆ:
ಪ್ರಸ್ತುತ ಜನರಿಗೆ ಇರುವ ಅಭಿಪ್ರಾಯದ ಪ್ರಕಾರ ಕಾಂಗ್ರೆಸ್ ನಾಯಕರೆಂದರೆ ಯಾರೂ ಖರೀದಿಸಬಲ್ಲ ಸರಕುಗಳಾಗಿದ್ದಾರೆ. ತತ್ವಾದರ್ಶವಿಲ್ಲದ ನಾಯಕರು. ಹಣ ಮತ್ತು ಅಧಿಕಾರಕ್ಕಾಗಿ ಯಾವ ನೀಚಮಟ್ಟಕ್ಕೂ ಇಳಿಯಬಲ್ಲರು. ಹಲವು ಬಾರಿ ಅದು ಸಾಬೀತುಗೊಳ್ಳುತ್ತಿದೆ. ಮಧ್ಯಪ್ರದೇಶ, ಗುಜರಾತ್ ಒಳಗೊಂಡಂತೆ ಹಲವು ರಾಜ್ಯಗಳಲ್ಲಿ ಕಾಂಗ್ರೆಸ್ ನಿಂದ ಬಿಜೆಪಿಗೆ ಶಾಸಕರು ನೆಗೆದ ಕಾರಣಕ್ಕಾಗಿ ಉಪ ಚುನಾವಣೆಗಳು ನಡೆದವು. ಇವುಗಳಲ್ಲಿ 31 ಸ್ಥಾನಗಳನ್ನು ಕಾಂಗ್ರೆಸ್ ಕಳೆದುಕೊಂಡಿತು. ಮಧ್ಯಪ್ರದೇಶ ಮತ್ತು ಕರ್ನಾಟಕಗಳಲ್ಲಿ ಕಾಂಗ್ರೆಸ್ ಆಪರೇಶನ್ ಕಮಲದಿಂದಲೇ ಅಧಿಕಾರವನ್ನು ಕಳೆದುಕೊಂಡಿತು. ರಾಜಸ್ಥಾನದಲ್ಲಿ ಅಶೋಕ್ ಗೆಹ್ಲೋಟ್ ಮತ್ತು ಸಚಿನ್ ಪೈಲಟ್ ನಡುವಿನ ಕಲಹದ ಕಾರಣದಿಂದ ಸರಕಾರ ಬೀಳುವುದರಲ್ಲಿದ್ದರೂ ಅಲ್ಪದರಲ್ಲೆ ಪಾರಾಯಿತು.


ಆದರ್ಶ, ಬದ್ಧತೆಯಿರುವ ವಿಚಾರವಂತ ವ್ಯಕ್ತಿಗಳ ಬದಲು ಸ್ವಾರ್ಥಿಗಳು, ಕ್ರಿಮಿನಲ್ ಗಳು, ಕೋಮುವಾದಿಗಳು, ಭ್ರಷ್ಟರಿಗೆ ಟಿಕೆಟ್ ನೀಡುವ ಕಾರಣದಿಂದ ಪಕ್ಷವು ಬದ್ಧತೆಯಿಲ್ಲದ ನಾಯಕತ್ವದಿಂದ ತುಂಬಿ ಹೋಗಿದೆ. ಅವರು ತಮಗೆ ಸರಿಯಾದ ಸ್ಥಾನಮಾನಗಳು ದೊರೆಯದಾಗ ಪಕ್ಷವನ್ನು ತ್ಯಜಿಸಬಲ್ಲವರಾಗಿದ್ದಾರೆ. ಎಲ್ಲರನ್ನೂ ಒಟ್ಟಾಗಿ ಕೊಂಡೊಯ್ಯುವ ನಾಯಕರ ಕೊರತೆಯನ್ನೂ ಕಾಂಗ್ರೆಸ್ ಎದುರಿಸುತ್ತಿದೆ. ಗಾಂಧಿ ಕುಟುಂಬವೇ ಕಾಂಗ್ರೆಸ್ ನಾಯಕರಾಗಬೇಕೆಂಬ ಅಲಿಖಿತ ವಿಧಿಯನ್ನೂ ಪಾಲಿಸಿಕೊಂಡು ಬರಲಾಗುತ್ತಿದೆ. ಪಕ್ಷ ನಿಷ್ಠೆ, ಬದ್ಧತೆಯುಳ್ಳ ಪ್ರತಿಭಾನ್ವಿತರಾದ ಹಿರಿಯ ಅನುಭವಿ, ಮುತದ್ಧಿ ನಾಯಕರಿಗೆ ಅವಕಾಶವನ್ನು ನಿರಾಕರಿಸಿ ಕುಟುಂಬ ರಾಜಕಾರಣಕ್ಕೆ ಪಕ್ಷವು ಕಟ್ಟುಬಿದ್ದಿದೆ. ಕಾರ್ಯಕರ್ತರಿಂದ ನಾಯಕರನ್ನು ಚುನಾಯಿಸುವ ಕ್ರಮವೂ ಪಕ್ಷದಲ್ಲಿ ಇಲ್ಲ.


ಕಾಂಗ್ರೆಸ್ ನಲ್ಲಿ ಆಂತರಿಕ ಕಲಹವು ಎಲ್ಲಾ ಕಡೆಯೂ ಸಾಮಾನ್ಯವಾಗಿದ್ದು ನಾಯಕರು ವಿಭಜನೆಗೊಂಡಿರುತ್ತಾರೆ. ಈ ನಾಯಕರ ಕೈಕೆಳಗೆ ಕಾರ್ಯಕರ್ತರೂ ವಿಭಜನೆಗೊಂಡಿರುತ್ತಾರೆ. ಚುನಾವಣಾ ಕ್ಷೇತ್ರಗಳಲ್ಲಿ ಓರ್ವ ನಾಯಕನ ಹಿಂಬಾಲಕರು ಇನ್ನೋರ್ವ ನಾಯಕನ ಸೋಲಿಸುವುದಕ್ಕಾಗಿ ಕೆಲಸಮಾಡುತ್ತಾರೆ. ಇದು ಎಲ್ಲರಿಗೂ ತಿಳಿದ ವಿಚಾರವೂ ಆಗಿದೆ.
ಒಟ್ಟಿನಲ್ಲಿ ಹೇಳಬೇಕಾದರೆ ಸಿದ್ಧಾಂತದ ಸ್ಪಷ್ಟತೆ, ಎಲ್ಲಾ ವಿಚಾರಗಳಲ್ಲಿ ದೃಢ ನಿಲುವು, ಕಾರ್ಯಕರ್ತರಿಂದ ಆಯ್ಕೆಯಾದ ಬದ್ಧ ನಾಯಕತ್ವ ಮತ್ತು ನಾಯಕತ್ವದ ಸೂಚನೆಯನ್ನು ಪಾಲಿಸುವ ತಳಮಟ್ಟದಲ್ಲಿ ಜನರನ್ನು ಸಂಪರ್ಕಿಸುವ ಆದರ್ಶಯುತ ಬದ್ಧ ಕಾರ್ಯಕರ್ತರ ಪಡೆಯಿಂದ ಮಾತ್ರವೇ ಇಂದು ಅಧಿಕಾರದಲ್ಲಿರುವ ಫ್ಯಾಶಿಸ್ಟ್ ಸರಕಾರವನ್ನು ಎದುರಿಸಬಲ್ಲುದು. ಈ ಎಲ್ಲಾ ಗುಣಗಳನ್ನೂ ಕಳಕೊಂಡು ಕೃಶವಾಗಿರುವ ಕಾಂಗ್ರೆಸ್ ಮೆಲ್ಲನೆ ಸಾವಿನ ದವಡೆಗೆ ಪ್ರವೇಶಿಸುತ್ತಿರುವಂತೆ ಭಾಸವಾಗುತ್ತಿದೆ.

ನಿಮ್ಮ ಚಂದಾ ಹಣ ಪಾವತಿಸಲು ಈ ಕೆಳಗಿನ ಬಟನ್ ಮೇಲೆ ಕ್ಲಿಕ್ ಮಾಡಿ.

ಜನಪರ ಪತ್ರಿಕೋದ್ಯಮವನ್ನು ಬೆಂಬಲಿಸಿ
ಪ್ರಸ್ತುತದ ಬೆಳವಣಿಗೆಯಲ್ಲಿ ಪಾಲುದಾರರಾಗಿ
ಜನಸಾಮಾನ್ಯರ ಜ್ವಲಂತ ಸಮಸ್ಯೆಗಳಿಗೆ ಸದಾ ಮಿಡಿಯುತ್ತಾ, ಧ್ವನಿ ಇಲ್ಲದ ಸಮುದಾಯಗಳ ಧ್ವನಿಯಾಗುತ್ತಾ ಮಾಧ್ಯಮ ಲೋಕದಲ್ಲಿ ಸ್ವತಂತ್ರವಾಗಿ ಕಾರ್ಯಾಚರಿಸುತ್ತಿರುವ ಪ್ರಸ್ತುತಕ್ಕೆ ನಿಮ್ಮ ಪ್ರೋತ್ಸಾಹ, ಬೆಂಬಲ ಯಾವತ್ತೂ ಇರಲಿ. ಪ್ರಸ್ತುತಕ್ಕೆ ದೇಣಿಗೆ ನೀಡಲು ಬಯಸುವವರು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ಹಣವನ್ನು ಪಾವತಿಸಬಹುದು.

ಧನ್ಯವಾದಗಳು

ಟಾಪ್ ಸುದ್ದಿಗಳು

ವಿಶೇಷ ವರದಿ