ಸ್ಥಳೀಯ ಸಂಸ್ಥೆ ಚುನಾವಣೆಯ ಟಿಕೆಟ್ ಹಂಚಿಕೆಯಲ್ಲಿ ಎಡವಿದ್ದೇವೆ: ಡಿ.ಕೆ.ಶಿವಕುಮಾರ್

Prasthutha|

ಬೆಂಗಳೂರು; ಇತ್ತೀಚೆಗೆ ನಡೆದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಟಿಕೆಟ್ ಹಂಚಿಕೆಯಲ್ಲಿ ಎಡವಿದ್ದು, ಇದು ನಾವು ಮಾಡಿದ ದೊಡ್ಡ ತಪ್ಪು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.

ಹುಬ್ಬಳ್ಳಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಅಲ್ಲಿನ ಸಮಸ್ಯೆಗಳು, ವಿಚಾರಗಳು, ಅಭ್ಯರ್ಥಿ ಶಕ್ತಿ ಮುಖ್ಯವಾಗುತ್ತದೆ. ವಿಧಾನಸಭೆ ಹಾಗೂ ಸಂಸತ್ ಚುನಾವಣೆಯಲ್ಲಿ ಬೇರೆ ವಿಷಯಗಳು ಪ್ರಮುಖವಾಗುತ್ತವೆ. ಪಕ್ಷಗಳು ಏನೇ ಮಾಡಿದರೂ ಮತದಾರರು ಅವರದೇ ಲೆಕ್ಕಾಚಾರ ಮಾಡಿರುತ್ತಾರೆ. ಇದನ್ನು ನಮ್ಮ ಪಕ್ಷದವರು ಅರ್ಥಮಾಡಿಕೊಳ್ಳಬೇಕು ಎಂದರು.

- Advertisement -

ಹುಬ್ಬಳ್ಳಿ – ಧಾರವಾಡದಲ್ಲಿ ನಮಗೆ ಕಡಿಮೆ ಸಂಖ್ಯೆ ಬಂದಿದೆ. ನಮ್ಮ ಪಕ್ಷದ ಐವರು ಬಂಡಾಯ ಸದಸ್ಯರು ಗೆದ್ದಿದ್ದು, ಎಲ್ಲ ಒಟ್ಟಾಗಿ ಸೇರಿಸಿದರೆ ಕಾಂಗ್ರೆಸ್ ವಿಚಾರ ಹೊಂದಿರುವ ಅಭ್ಯರ್ಥಿಗಳಿಗೆ ಹೆಚ್ಚು ಬೆಂಬಲ ಸಿಕ್ಕಿದೆ. ಪಕ್ಷ ಅಧಿಕಾರದಲ್ಲಿಲ್ಲ. ಬಿಜೆಪಿಯವರು 15 ವರ್ಷಗಳಿಂದ ಆಡಳಿತ ಮಾಡುತ್ತಿದ್ದು, ಹಾಲಿ, ಮಾಜಿ ಮುಖ್ಯಮಂತ್ರಿಗಳು, ಕೇಂದ್ರ ಸಚಿವರು ಇಲ್ಲಿನವರೇ ಆಗಿದ್ದರೂ ಸಹ ಮತದಾರರು ನಮ್ಮನ್ನು ಬೆಂಬಲಿಸಿದ್ದಾರೆ ಎಂದು ಹೇಳಿದರು.

ಮೀಸಲಾತಿಯನ್ನು ತಮಗೆ ಬೇಕಾದ ರೀತಿಯಲ್ಲಿ ನಿಗದಿ ಮಾಡಿದ್ದು, ಅಧಿಕಾರ ದುರುಪಯೋಗ ಮಾಡಿಕೊಂಡಿದ್ದಾರೆ. ನಮಗೆ ಸಂಖ್ಯಾಬಲ ಇಲ್ಲದಿದ್ದರೂ ಮತದಾರರು ನಮಗೆ ಉತ್ತಮ ಫಲಿತಾಂಶ ನೀಡಿದ್ದಾರೆ. ನಾವು ಜನರ ಸೇವೆ ಮುಂದುವರೆಸಿಕೊಂಡು ಹೋಗುತ್ತೇವೆ. ನಮ್ಮ ಸದಸ್ಯರು ಜನರ ಸೇವೆ ಮಾಡುತ್ತಾರೆ. ನಮ್ಮ ಬಂಡಾಯ ಅಭ್ಯರ್ಥಿಗಳು ಕರೆ ಮಾಡಿ ನಾವು ಕಾಂಗ್ರೆಸ್ ಪಕ್ಷದ ಸಿದ್ಧಾಂತದಲ್ಲೇ ಉಳಿಯುತ್ತೇವೆ ಎಂದು ಡಿ.ಕೆ. ಶಿವಕುಮಾರ್ ಹೇಳಿದರು.

ಕಲ್ಬುರ್ಗಿ, ಹುಬ್ಬಳ್ಳಿ-ಧಾರವಾಡದ ಫಲಿತಾಂಶ ಸಮಾಧಾನ ತಂದಿದೆ. ತರೀಕೆರೆ, ಬೆಳಗಾವಿಯಲ್ಲಿ ನಾವು ಮೊದಲ ಬಾರಿಗೆ ಚಿಹ್ನೆ ಮೇಲೆ ಸ್ಪರ್ಧೆ ಮಾಡಿದ್ದೆವು. ಹೀಗಾಗಿ ನಾವು ಧೃತಿಗೆಡುವ ಅಗತ್ಯವಿಲ್ಲ. ಈ ಫಲಿತಾಂಶ ಬಿಜೆಪಿ ಸರ್ಕಾರದ ಆಡಳಿತದ ಪರ ಬಂದಿದೆಯಾ? ಅಥವಾ ವಿರೋಧವಾಗಿ ಬಂದಿದೆಯಾ? ಎಂದು ಜಗದೀಶ್ ಶೆಟ್ಟರ್ ಅವರೇ ಹೇಳಬೇಕು. ಅವರೇ ಸರ್ಟಿಫಿಕೇಟ್ ನೀಡಲಿ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯೆ ನೀಡಿದರು.

ಮುಂದೆಯೂ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಸಲಿ. ಬಳ್ಳಾರಿ, ತೀರ್ಥಹಳ್ಳಿ, ರಾಮನಗರದಲ್ಲಿ ಫಲಿತಾಂಶ ಬಂದು ನಾಲ್ಕು ತಿಂಗಳಾಗಿದೆ. ಜನರ ಕೈಗೆ ಅಧಿಕಾರ ನೀಡಬೇಕು. ಹೀಗಾಗಿ ಶೀಘ್ರ ಉಳಿದ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಸಬೇಕು ಎಂದು ಒತ್ತಾಯಿಸಿದರು.

ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ನಾಯಕತ್ವ ಬದಲಾವಣೆ ಮಾಡುತ್ತಿರುವುದು, ರಾಜ್ಯಗಳಲ್ಲಿ ಅವರ ನಾಯಕತ್ವ ಕೋವಿಡ್ ಪರಿಸ್ಥಿತಿ ನಿರ್ವಹಣೆಯಲ್ಲಿ ವೈಫಲ್ಯವಾಗಿದೆ, ಭ್ರಷ್ಟಾಚಾರ ಹೆಚ್ಚಾಗಿದೆ, ಉತ್ತಮ ಆಡಳಿತ ನೀಡಲು ಸಾಧ್ಯವಾಗಿಲ್ಲ ಎಂಬುದಕ್ಕೆ ಸಾಕ್ಷಿ. ಇದೇ ಕಾರಣಕ್ಕೆ ಮುಖ್ಯಮಂತ್ರಿಗಳು ಹಾಗೂ ಕೇಂದ್ರ ಆರೋಗ್ಯ ಸಚಿವರನ್ನು ಬದಲಿಸಿದ್ದಾರೆ ಎಂದರು.

ರಾಜ್ಯದಲ್ಲಿ ಕೋವಿಡ್ ನಿಂದ 4 ಲಕ್ಷಕ್ಕೂ ಹೆಚ್ಚು ಜನ ಸತ್ತಿದ್ದು, ಸಾವಿನ ಸಂಖ್ಯೆಯ ಆಡಿಟ್ ಮಾಡಬೇಕಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಎಲ್ಲ ಮೃತರ ಕುಟುಂಬಗಳಿಗೂ ಪರಿಹಾರ ನೀಡಬೇಕು ಎಂಬುದು ನಮ್ಮ ಬೇಡಿಕೆ. ಈ ವಿಚಾರವನ್ನು ನಾವು ಅಧಿವೇಶನದಲ್ಲಿ ಪ್ರಸ್ತಾಪಿಸುತ್ತೇವೆ ಎಂದರು.

- Advertisement -