ಬಾಗಲಕೋಟೆ: ಆರ್ ಎಸ್ ಎಸ್ ಕಾರ್ಯಕರ್ತರ ಮೇಲೆ ದೂರು ದಾಖಲಿಸಿದ್ದಕ್ಕೆ ಕಾಂಗ್ರೆಸ್ ಕಾರ್ಯಕರ್ತನನ್ನು ಉಚ್ಛಾಟನೆ ಮಾಡಿರುವ ಘಟನೆ ಬಾಗಲಕೋಟೆಯಲ್ಲಿ ನಡೆದಿದೆ.
ಆರೆಸ್ಸೆಸ್ ಸಂಘಟನೆಯ ಪಥಸಂಚಲನದ ವೇಳೆ ತನ್ನನ್ನು ಜಾತಿ ನಿಂದನೆಗೈದು ಅಶ್ಲೀಲ ಪದಬಳಕೆ ಮಾಡಿದ್ದರು ಎಂದು ಆರೋಪಿಸಿ ಫಕೀರಪ್ಪ ಮಾದರ ಎನ್ನುವ ದಲಿತ ಕಾಂಗ್ರೆಸ್ ಕಾರ್ಯಕರ್ತನೋರ್ವ ಪೊಲೀಸ್ ದೂರು ದಾಖಲಿಸಿದ್ದರು. ಬಾಗಲಕೋಟೆ ಶಹರ ಠಾಣೆಯಲ್ಲಿ ಪೊಲೀಸರು ಪ್ರಕರಣದ ದಾಖಲಿಸಿಕೊಂಡಿದ್ದರು. ಅಕ್ಟೋಬರ್ 17 ರಂದು ನಡೆದಿದ್ದ ಆರೆಸ್ಸೆಸ್ ಪಥಸಂಚಲನೆಯ ವೇಳೆ ಈ ಘಟನೆ ನಡೆದಿತ್ತೆನ್ನಲಾಗಿದೆ. ಆರೆಸ್ಸೆಸ್ ಕಾರ್ಯಕರ್ತರಾಗಿದ್ದ ಸಂತೋಷ ಹೊಕ್ರಾಣಿ, ಬಸವರಾಜ ಕಟಗೇರಿ, ಅಶೋಕ ಮುತ್ತಿನಮಠ, ರಾಜು ಗೌಳಿ ವಿರುದ್ಧ FIR ದಾಖಲಾಗಿತ್ತು. ಆದರೆ ಫಕೀರಪ್ಪ ಮಾದರ ಅವರು ಬಿಜೆಪಿಯ ಆಂತರಿಕ ಕಲಹದಲ್ಲಿ ಮೂಗು ತೂರಿಸಿದ್ದಾರೆ ಎಂಬ ಆರೋಪ ಹೊರಿಸಿ ಅವರನ್ನು ಕಾಂಗ್ರೆಸ್ ಪಕ್ಷದಿಂದ ಉಚ್ಛಾಟಿಸಲಾಗಿದೆ.
ಫಕೀರಪ್ಪ ಮಾದರ ಅವರು ಜಿಲ್ಲೆಯ ಕಲಾದಗಿಯ ಪರಿಶಿಷ್ಟ ಜಾತಿ ವಿಭಾಗದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿದ್ದರು. ಅವರನ್ನು ಜಿಲ್ಲಾಧ್ಯಕ್ಷ ರಾಜು ಮನ್ನಿಕೇರಿಯವರು ಕಾಂಗ್ರೆಸ್ ಪಕ್ಷಕ್ಕೆ ಮುಜುಗರ ತಂದ ಕಾರಣಕ್ಕಾಗಿ ಉಚ್ಛಾಟನೆ ಮಾಡಿದ್ದಾರೆ ಎನ್ನಲಾಗಿದೆ.