ಬೆಂಗಳೂರು: ಸಚಿವ ಈಶ್ವರಪ್ಪ ಬಂಧನಕ್ಕೆ ಆಗ್ರಹಿಸಿ ವಿಧಾನಸೌಧದ ಮುಂಭಾಗ ಕಾಂಗ್ರೆಸ್ ಹಮ್ಮಿಕೊಂಡಿದ್ದ 24 ಗಂಟೆಗಳಿಂದ ನಡೆಸುತ್ತಿದ್ದ ಪ್ರತಿಭಟನೆ ಮುಕ್ತಾಯಗೊಂಡಿದೆ. ಈ ವೇಳೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರು ಜಂಟಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು.
ನಿನ್ನೆ ಪಕ್ಷದ ವತಿಯಿಂದ ರಣದೀಪ್ ಸಿಂಗ್ ಸುರ್ಜೆವಾಲಾ ಅವರನ್ನು ಒಳಗೊಂಡಂತೆ ಎಲ್ಲ ರಾಜ್ಯ ನಾಯಕರು ಮುಖ್ಯಮಂತ್ರಿಗಳಿಗೆ ಘೇರಾವ್ ಹಾಕುವ ಪ್ರಯತ್ನ ಮಾಡಿದ್ದೆವು. ಕಾಂಗ್ರೆಸ್ ಕಚೇರಿಯಿಂದ ಸಿಎಂ ನಿವಾಸದ ವರೆಗೆ ಕಾಲ್ನಡಿಗೆ ಮೂಲಕ ತೆರಳಬೇಕಿತ್ತು, ಆದರೆ ಮಾರ್ಗಮಧ್ಯದಲ್ಲಿ ಪೊಲೀಸರು ನಮ್ಮನ್ನು ತಡೆದು, ಬಂಧಿಸಿದರು. ಈ ಸಂದರ್ಭದಲ್ಲಿ ನಾವು ಪೊಲೀಸ್ ಠಾಣೆಯಲ್ಲೆ ಕುಳಿತು ವಿಧಾನಸೌಧದ ಮುಂಭಾಗ ಇಪ್ಪತ್ನಾಲ್ಕು ಗಂಟೆಗಳ ಕಾಲ ಅಹೋರಾತ್ರಿ ಧರಣಿ ಮಾಡೋಣ ಎಂದು ನಿರ್ಧಾರ ಮಾಡಿದೆವು. ಈಗ ನಮ್ಮ ಧರಣಿ ಮುಕ್ತಾಯಗೊಂಡಿದೆ ಎಂದು ಸಿದ್ದರಾಮಯ್ಯ ಪ್ರಕಟಿಸಿದರು.
ರಾಜ್ಯದಲ್ಲಿ ಭ್ರಷ್ಟಾಚಾರ ಮುಗಿಲು ಮುಟ್ಟಿದೆ, ಸರ್ಕಾರದ 40% ಕಮಿಷನ್ ಕಿರುಕುಳಕ್ಕೆ ಸಂತೋಷ್ ಪಾಟೀಲ್ ಎಂಬ ಗುತ್ತಿಗೆದಾರ ಬಲಿಯಾಗಿದ್ದಾನೆ. ಈ ತಿಂಗಳ 11 ತಾರೀಖು ರಾತ್ರಿ 10 ರಿಂದ 12 ರ ಬೆಳಿಗ್ಗೆ 6 ಗಂಟೆಯೊಳಗೆ ಸಂತೋಷ್ ಪಾಟೀಲ್ ಉಡುಪಿಯ ಹೋಟೆಲ್ ನಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ಪಿರ್ಯಾದಿನಲ್ಲಿ ನಮೂದಾಗಿದೆ. ಆದರೆ ಎಫ್.ಐ.ಆರ್ ಆಗಿರುವುದು 13 ನೇ ತಾರೀಖು. ಅದು ಕೂಡ ನಾವೆಲ್ಲ ಒತ್ತಡ ಹಾಕಿದ ಮೇಲೆ ತಡವಾಗಿ ದಾಖಲಾದದ್ದು. ಪ್ರಶಾಂತ್ ಗೌಡ ಪಾಟೀಲ್ ಅವರು ನೀಡಿರುವ ದೂರಿನಲ್ಲಿ ‘ಹಿಂಡಲಗಾ ಗ್ರಾಮದಲ್ಲಿ ಜಾತ್ರೆ ಇತ್ತು, ಸಾಕಷ್ಟು ಜನ ಸೇರುತ್ತಾರೆಂಬ ಕಾರಣಕ್ಕೆ ಒಂದಷ್ಟು ಕಾಮಗಾರಿಗಳನ್ನು ಮಾಡಬೇಕು ಎಂದು ಊರಿನ ಜನ, ಗ್ರಾಮ ಪಂಚಾಯತಿ ಅಧ್ಯಕ್ಷ ಮತ್ತು ಸಂತೋಷ್ ಪಾಟೀಲ್ ಅವರು ಈಶ್ವರಪ್ಪ ಅವರನ್ನು ಭೇಟಿಮಾಡಿ ಮನವಿ ಮಾಡಿದ್ದಾರೆ, ಅದಕ್ಕೆ ಈಶ್ವರಪ್ಪ ಅವರು ಕೆಲಸ ಮಾಡಿ ಮುಗಿಸಿ, ನಂತರ ಹಣ ಬಿಡುಗಡೆ ಮಾಡಿಸುತ್ತೇನೆಂಬ ಭರವಸೆ ನೀಡಿದ್ದಾರೆ, ಸಚಿವರ ಮೌಖಿಕ ಆದೇಶದ ಮೇರೆಗೆ ಸಂತೋಷ್ ಪಾಟೀಲ್ ಮತ್ತವರ ಸ್ನೇಹಿತರು ಸುಮಾರು ರೂ. 4 ಕೋಟಿ ವೆಚ್ಚದ ಕಾಮಗಾರಿಯನ್ನು ಮಾಡಿ ಮುಗಿಸಿ, ಬಿಲ್ ಹಣ ಪಾವತಿಸುವಂತೆ ಕೇಳಿದ್ದಾರೆ, ಅದಕ್ಕೆ ಸಚಿವರು ಹಣ ಬಿಡುಗಡೆ ಮಾಡಲು 40% ಕಮಿಷನ್ ನೀಡುವಂತೆ ಬೇಡಿಕೆ ಇಟ್ಟಿದ್ದಾರೆ ಎಂದು ‘ ಸ್ಪಷ್ಟವಾಗಿ ಹೇಳಿದ್ದಾರೆ.
ಕಾಮಗಾರಿ ಮಾಡಲು ಖಾಸಗಿ ವ್ಯಕ್ತಿಗಳಿಂದ ಅಧಿಕ ಬಡ್ಡಿಗೆ ಮತ್ತು ಪತ್ನಿಯ ಒಡವೆಗಳನ್ನು ಅಡವಿಟ್ಟು ಸಾಲ ತಂದಿದ್ದಾರೆ. ಸಚಿವರು ಬಿಲ್ ಹಣಕ್ಕಾಗಿ ಸಾಕಷ್ಟು ಬಾರಿ ಅಲೆದಾಡಿಸಿದ್ದಾರೆ, ಇನ್ನೊಂದು ಕಡೆ ಸಾಲ ಕೊಟ್ಟವರು ಹಣ ಮರುಪಾವತಿಸುವಂತೆ ಒತ್ತಡ ಹೇರಿದ್ದಾರೆ. ಇದರಿಂದ ನೊಂದು ಆತ ಆತ್ಮಹತ್ಯೆಗೆ ಶರಣಾಗಿದ್ದಾನೆ. ಪ್ರಕರಣದ ದೂರಿನಲ್ಲಿ ಸಚಿವರ ವಿರುದ್ಧ ಭ್ರಷ್ಟಾಚಾರ ನಡೆಸಿರುವ ಆರೋಪ ಸ್ಪಷ್ಟವಾಗಿರುವುದರಿಂದ ಭ್ರಷ್ಟಾಚಾರ ತಡೆ ಕಾಯ್ದೆಯ ಸೆಕ್ಷನ್ 7(a) ಹಾಗೂ 13 ಕ್ಲಾಸ್ 1ರಡಿ ಭ್ರಷ್ಟಾಚಾರ ಪ್ರಕರಣ ದಾಖಲಿಸಬೇಕಿತ್ತು. ಇದನ್ನು ಉದ್ದೇಶಪೂರ್ವಕವಾಗಿ ಕೈಬಿಟ್ಟು ಸೆಕ್ಷನ್ 34 ಹಾಗೂ 306 ರಡಿ ಕೇಸ್ ದಾಖಲಿಸಿದ್ದಾರೆ.
ಈಶ್ವರಪ್ಪ ವಿರುದ್ಧ ಭ್ರಷ್ಟಾಚಾರ ತಡೆ ಕಾಯ್ದೆಯ ಸೆಕ್ಷನ್ -13 ರಡಿ ಪ್ರಕರಣ ದಾಖಲು ಮಾಡಬೇಕು. ಈಗ ಕೇವಲ ಸೆಕ್ಷನ್ 34 ಹಾಗೂ 306 ರಡಿ ಕೇಸ್ ದಾಖಲಾಗಿದೆ. ಇದೊಂದು ಅಮಾನವೀಯ ಅಪರಾಧ, ಇಂತಹಾ ಅಪರಾಧ ಪ್ರಕರಣಗಳಲ್ಲಿ ಎಫ್.ಐ.ಆರ್ ಆದ ಕೂಡಲೇ ಅಪರಾಧಿಯನ್ನು ಬಂಧಿಸಬೇಕು ಎಂದು ಈ ನೆಲದ ಕಾನೂನು ಹೇಳುತ್ತದೆ, ಹಾಗಾಗಿ ಈ ಕೂಡಲೇ ಈಶ್ವರಪ್ಪ ಅವರನ್ನು ಬಂಧಿಸಬೇಕು ಎಂದು ಸಿದ್ದರಾಮಯ್ಯ ಆಗ್ರಹಿಸಿದರು. ಸಂತೋಷ್ ಪಾಟೀಲ್ ಅವರ ತಾಯಿ ಮತ್ತು ಪತ್ನಿಯನ್ನು ಭೇಟಿ ಮಾಡಿ ಅವರಿಗೆ ಧೈರ್ಯ ತುಂಬಿ, ನ್ಯಾಯ ಕೊಡಿಸುವ ಭರವಸೆ ನೀಡಿದ್ದೇವೆ. ಸಂತೋಷ್ ಪಾಟೀಲ್ ಕುಟುಂಬಸ್ಥರಿಗೆ ರೂ. 1 ಕೋಟಿ ಪರಿಹಾರ ನೀಡಬೇಕು, ಮೃತನ ಪತ್ನಿಗೆ ಅನುಕಂಪದ ಆಧಾರದ ಮೇಲೆ ಸರ್ಕಾರಿ ಉದ್ಯೋಗವನ್ನು ನೀಡಬೇಕು. ಒಂದು ವೇಳೆ ಇದು ವಿಳಂಬವಾದರೆ ನಮ್ಮ ಪಕ್ಷದ ಮುಖಂಡರು ಆಕೆಗೆ ತಾತ್ಕಾಲಿಕ ಉದ್ಯೋಗ ನೀಡುತ್ತಾರೆ. ಜೊತೆಗೆ ನಾಳೆ ನಮ್ಮ ಡಿ.ಕೆ ಶಿವಕುಮಾರ್ ಅವರು ಪಕ್ಷದ ವತಿಯಿಂದ ಮೃತರ ಕುಟುಂಬಕ್ಕೆ ರೂ. 11 ಲಕ್ಷದ ಚೆಕ್ ಅನ್ನು ನೀಡುತ್ತಾರೆ. ಸಂತೋಷ್ ಪಾಟೀಲ್ ಪೂರ್ಣಗೊಳಿಸಿರುವ ಕಾಮಗಾರಿಯ ಒಟ್ಟು ರೂ. 4 ಕೋಟಿ ಬಿಲ್ ಅನ್ನು ರಾಜ್ಯ ಸರ್ಕಾರ ಕೂಡಲೇ ಪಾವತಿ ಮಾಡಬೇಕು ಎಂದರು.
ಈ ಎಲ್ಲಾ ಒತ್ತಾಯಗಳ ಈಡೇರಿಕೆಗೆ ಆಗ್ರಹಿಸಿ ಈಗಾಗಲೇ ನಾವು ಇಪ್ಪತ್ನಾಲ್ಕು ಗಂಟೆಗಳ ಕಾಲ ಅಹೋರಾತ್ರಿ ಧರಣಿ ಮಾಡಿದ್ದೇವೆ, ನಾಳೆಯಿಂದ 9 ತಂಡಗಳಾಗಿ ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಿಗೆ ಭೇಟಿನೀಡಿ ಅಲ್ಲಿ ಪಾದಯಾತ್ರೆ ಹಾಗೂ ಪ್ರತಿಭಟನೆ ನಡೆಸಿ ನಂತರ ಆಯಾ ಜಿಲ್ಲೆಯ ಜಿಲ್ಲಾಧಿಕಾರಿಗೆ ಮನವಿ ಪತ್ರ ನೀಡುತ್ತೇವೆ.
ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣದ ನಿಷ್ಪಕ್ಷಪಾತ ತನಿಖೆ ಆಗಬೇಕು. ಸ್ವತಃ ಮುಖ್ಯಮಂತ್ರಿಗಳೇ ಈಶ್ವರಪ್ಪ ಅವರು ಅಮಾಯಕ ಎಂಬಂತ ಹೇಳಿಕೆ ನೀಡಿದ್ದಾರೆ, ಹಾಗಾಗಿ ರಾಜ್ಯ ಸರ್ಕಾರ ನಡೆಸುವ ತನಿಖೆಯಿಂದ ನ್ಯಾಯ ಸಿಗುವ ಯಾವುದೇ ನಂಬಿಕೆ ಇಲ್ಲ. ಗೌರವಾನ್ವಿತ ಹೈಕೋರ್ಟ್ ನ ನ್ಯಾಯಾಧೀಶರ ಮೇಲ್ವಿಚಾರಣೆಯಲ್ಲಿ ಪ್ರಕರಣದ ತನಿಖೆಯಾಗಬೇಕು. ಯಾಕೆಂದರೆ ಈಶ್ವರಪ್ಪ ಸಾಮಾನ್ಯ ಮನುಷ್ಯ ಅಲ್ಲ, ಅವರು ಸಾಕ್ಷ್ಯ ನಾಶ ಮಾಡುವ, ಪ್ರತ್ಯಕ್ಷ ಸಾಕ್ಷಿಗಳಿಗೆ ಬೆದರಿಸುವ ಸಾಧ್ಯತೆಗಳು ಕೂಡ ಇವೆ. ಗ್ರಾಮ ಪಂಚಾಯತಿ ಅಧ್ಯಕ್ಷ ನಾನೇ ಈಶ್ವರಪ್ಪ ಬಳಿಗೆ ಸಂತೋಷ್ ಪಾಟೀಲರನ್ನು ಕರೆದುಕೊಂಡು ಹೋಗಿದ್ದೆ ಎಂದಿದ್ದಾರೆ, ನಾಳೆ ಇವರಿಗೆ ಈಶ್ವರಪ್ಪ ಬೆದರಿಕೆ ಹಾಕಿದರೆ ಏನು ಮಾಡೋದು? ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.
ಕಾಂಗ್ರೆಸ್ ಪಕ್ಷ ಹೋರಾಟದ ಮೂಲಕ ಈ ಪ್ರಕರಣವನ್ನು ತಾರ್ತಿಕ ಅಂತ್ಯಕ್ಕೆ ಕೊಂಡೊಯ್ಯಲು ಎಲ್ಲ ರೀತಿ ಪ್ರಯತ್ನ ಮಾಡಲಿದೆ. ನಾವಿದನ್ನು ರಾಜಕಾರಣಕ್ಕಾಗಿ ಮಾಡುತ್ತಿಲ್ಲ, ಮೃತ ಸಂತೋಷ್ ಪಾಟೀಲ್ ಕುಟುಂಬದವರಿಗೆ ನ್ಯಾಯ ಸಿಗಬೇಕು ಎಂಬುದು ನಮ್ಮ ನೈಜ ಆಶಯ. ಸಂವಿಧಾನಬದ್ಧ ವಿರೋಧ ಪಕ್ಷವಾಗಿ ರಾಜ್ಯವನ್ನು ಭ್ರಷ್ಟಾಚಾರದಿಂದ ಮುಕ್ತಗೊಳಿಸುವುದು ನಮ್ಮ ಕರ್ತವ್ಯ ಕೂಡ ಆಗಿದೆ. ಬಿಜೆಪಿ ಕಾರ್ಯಕಾರಣಿ ಸಭೆ ನಡೆಯುವ ವಿಜಯನಗರ ಜಿಲ್ಲೆಯ ಹೊಸಪೇಟೆಯಲ್ಲೂ ನಾವು ಪ್ರತಿಭಟನೆ ಮಾಡುತ್ತೇವೆ. ಹೆಚ್.ಕೆ ಪಾಟೀಲ್ ಅವರು ಈ ತಂಡವನ್ನು ಮುನ್ನಡೆಸಲಿದ್ದಾರೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು