ಕಾಂಗ್ರೆಸ್ ದ.ಕ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್ ವಿರುದ್ಧ ಸಿಡಿದೆದ್ದ ಕಾರ್ಯಕರ್ತರು

Prasthutha|

►ಸೋಲಿನ ನೈತಿಕ ಹೊಣೆಹೊತ್ತು ರಾಜೀನಾಮೆ ನೀಡಲು ಆಗ್ರಹ

- Advertisement -


►ಪದ್ಮರಾಜ್ ಪೂಜಾರಿಗೆ ಜಿಲ್ಲಾಧ್ಯಕ್ಷ ಪಟ್ಟ ನೀಡುವಂತೆ ಬೇಡಿಕೆ

ಮಂಗಳೂರು: ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಪೂಜಾರಿ ಅವರ ಸೋಲು ಜಿಲ್ಲಾ ಕಾಂಗ್ರೆಸ್ ವಲಯದಲ್ಲಿ ಕಂಪನ ಸೃಷ್ಟಿಸಿದೆ. ಗೆಲ್ಲುವ ಅಭ್ಯರ್ಥಿ ಎಂದೇ ಬಿಂಬಿತವಾಗಿದ್ದ ಪದ್ಮರಾಜ್ ಪೂಜಾರಿ ಸೋತಿರುವ ಬಗ್ಗೆ ಪರಾಮರ್ಶೆ ನಡೆಸುತ್ತಿರುವ ಕಾಂಗ್ರೆಸ್ ಕಾರ್ಯಕರ್ತರು, ಈ ಸೋಲಿಗೆ ಕಾಂಗ್ರೆಸ್ ಜಿಲ್ಲಾಧ್ಯಕ್ಷರು ಹಾಗೂ ಜಿಲ್ಲಾ ನಾಯಕರನ್ನು ಹೊಣೆ ಮಾಡಿದ್ದಾರೆ. ಜಿಲ್ಲಾ ನಾಯಕರ ಅಸಹಕಾರದಿಂದ ಪದ್ಮರಾಜ್ ಪುಜಾರಿ ಸೋತಿದ್ದಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

- Advertisement -


ಪದ್ಮರಾಜ್ ಪೂಜಾರಿ ಸೋಲಿಗೆ ದ.ಕ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್ ಪ್ರಮುಖ ಹೊಣೆಗಾರರನ್ನಾಗಿ ಮಾಡಿರುವ ಕಾಂಗ್ರೆಸ್ ಕಾರ್ಯಕರ್ತರು, ಹರೀಶ್ ಕುಮಾರ್ ಅವರ ಬೂತ್ ನಲ್ಲಿಯೇ ಬಿಜೆಪಿ ದೊಡ್ಡ ಮುನ್ನಡೆ ಪಡೆದಿದೆ, ಹೀಗಾಗಿ ಸೋಲಿನ ನೈತಿಕ ಹೊಣೆಹೊತ್ತು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಹರೀಶ್ ಕುಮಾರ್ ರಾಜೀನಾಮೆ ನೀಡಬೇಕು ಎಂದು ಸೋಷಿಯಲ್ ಮೀಡಿಯಾಗಳಲ್ಲಿ ಆಗ್ರಹಿಸಿದ್ದಾರೆ. ಹರೀಶ್ ಕುಮಾರ್ ರಾಜೀನಾಮೆ ನೀಡದಿದ್ದರೆ ಪಕ್ಷ ಅವರ ತಲೆದಂಡ ಪಡೆಯಬೇಕು ಎಂದು ಮನವಿ ಮಾಡಿದ್ದಾರೆ.


ಹರೀಶ್ ಕುಮಾರ್ ಅವರ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷ ಎರಡು ವಿಧಾನಸಭೆ ಚುನಾವಣೆ ಮತ್ತು ಎರಡು ಲೋಕಸಭಾ ಚುನಾವಣೆಯಲ್ಲಿ ಸೋತಿದೆ. ಹರೀಶ್ ಕುಮಾರ್ ಅವರ ನೇತೃತ್ವದಲ್ಲಿ ಪಕ್ಷದ ನೆಲಕಚ್ಚುತ್ತಿದೆ, ಹೀಗಾಗಿ ಜಿಲ್ಲಾಧ್ಯಕ್ಷರು ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು, ಅವರಾಗಿಯೇ ರಾಜೀನಾಮೆ ನೀಡದಿದ್ದರೆ ಪಕ್ಷ ಅವರ ರಾಜೀನಾಮೆ ಪಡೆಯಬೇಕು ಎಂದು ಆಗ್ರಹಿಸಿದ್ದಾರೆ.
ಜಿಲ್ಲಾ ಕಾಂಗ್ರೆಸ್ ನಾಯಕರು ಕೈಕೊಟ್ಟ ಕಾರಣಕ್ಕೆ ಪದ್ಮರಾಜ್ ಪೂಜಾರಿಗೆ ಸೋಲಾಗಿದೆ ಎಂದು ಕಾರ್ಯಕರ್ತರು ಆರೋಪ ಮಾಡಿದ್ದಾರೆ. ಕಾಂಗ್ರೆಸ್ ಜಿಲ್ಲಾಧ್ಯಕ್ಷರು ಸೇರಿದಂತೆ ಜಿಲ್ಲೆಯ ಬಹುತೇಕ ನಾಯಕರು ಕಾಂಗ್ರೆಸ್ ಅಭ್ಯರ್ಥಿಗೆ ಅಸಹಕಾರ ನೀಡಿದ್ದಾರೆ. ನಾಯಕರ ಸರಿಯಾದ ಸಾಥ್ ಸಿಗದೆ ಕಾರಣ ಪದ್ಮರಾಜ್ ಪುಜಾರಿ ಇಬ್ಬರೇ ಹೋರಾಡಿದರು. ಪಕ್ಷದ ನಾಯಕರ ಅಸಹಕಾರ, ಒಳಯೇಟಿನ ಮಧ್ಯೆಯೂ ಪದ್ಮರಾಜ್ ಪೂಜಾರಿ ಉತ್ತಮ ಸಾಧನೆ ಮಾಡಿದ್ದಾರೆ ಎಂದು ಕಾಂಗ್ರೆಸ್ ಅಭ್ಯರ್ಥಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಪುನಶ್ಚೇತನಗೊಳ್ಳಬೇಕಾದರೆ ಪದ್ಮರಾಜ್ ಪೂಜಾರಿಯವರಿಗೆ ಜಿಲ್ಲಾಧ್ಯಕ್ಷ ಹುದ್ದೆ ನೀಡಬೇಕು ಎಂದು ಕಾಂಗ್ರೆಸ್ ಕಾರ್ಯಕರ್ತರು ಆಗ್ರಹಿಸಿದ್ದಾರೆ.



Join Whatsapp