ಕಾಂಗ್ರೆಸ್ ದ.ಕ ಜಿಲ್ಲಾಧ್ಯಕ್ಷ ಸ್ಥಾನ : ಐವನ್ ಡಿಸೋಜಾ ಮತ್ತು ಪದ್ಮರಾಜ್ ಪೂಜಾರಿ ಮಧ್ಯೆ ರೇಸ್?

Prasthutha|

►ಬಂಟ, ಬಿಲ್ಲವ, ಅಲ್ಪಸಂಖ್ಯಾತ, ಕುಲಾಲ್.. ಯಾರಿಗೆ ಮಣೆ ಹಾಕುತ್ತೆ ಹೈಕಮಾಂಡ್?

- Advertisement -

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಸಮಿತಿಗೆ ನೂತನ ಅಧ್ಯಕ್ಷರ ಆಯ್ಕೆ ಸಂಬಂಧ ಐವರು ನಾಯಕರ ಹೆಸರು ಕೇಳಿಬಂದಿದೆ. ಶೀಘ್ರದಲ್ಲೇ ಕಾಂಗ್ರೆಸ್ ಜಿಲ್ಲಾಧ್ಯಕ್ಷರ ಆಯ್ಕೆ ನಡೆಯಲಿದ್ದು, ದ.ಕ ಜಿಲ್ಲಾ ಕಾಂಗ್ರೆಸಿಗೆ ಯಾರು ಸಾರಥಿಯಾಗುತ್ತಾರೆ ಎಂಬ ಕುತೂಹಲ ಮೂಡಿದೆ.


ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ, ಲೋಕಸಭಾ ಅಭ್ಯರ್ಥಿಯಾಗಿದ್ದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಪದ್ಮರಾಜ್ ಆರ್. ಪೂಜಾರಿ ಮತ್ತು ಮಿಥುನ್ ರೈ, ಮಾಜಿ ಮೇಯರ್ ಶಶಿಧರ್ ಹೆಗ್ಡೆ ಮತ್ತು ಕೆಪಿಸಿಸಿ ಸದಸ್ಯ ಆರ್.ಕೆ ಪೃಥ್ವಿರಾಜ್ ಹೆಸರನ್ನು ವರಿಷ್ಠರಿಗೆ ಕಳುಹಿಸಿಕೊಡಲಾಗಿದೆ ಎಂದು ಬಲ್ಲ ಮೂಲಗಳಿಂದ ತಿಳಿದುಬಂದಿದೆ.

- Advertisement -


ಅಲ್ಪಸಂಖ್ಯಾತ ಸಮುದಾಯದ ಐವನ್ ಡಿಸೋಜಾ, ಬಂಟ ಸಮುದಾಯದ ಮಿಥುನ್ ರೈ ಮತ್ತು ಶಶಿಧರ್ ಹೆಗ್ಡೆ, ಬಿಲ್ಲವ ಸಮುದಾಯದ ಪದ್ಮರಾಜ್ ಆರ್ ಪೂಜಾರಿ ಮತ್ತು ಕುಲಾಲ್ ಸಮುದಾಯದ ಆರ್.ಕೆ ಪೃಥ್ವರಾಜ್ ಅವರನ್ನು ಪರಿಗಣಿಸಲಾಗಿದೆ.


ಈ ಬಾರಿ ಅಲ್ಪಸಂಖ್ಯಾತರಿಗೆ ಅವಕಾಶ ನೀಡಬೇಕು ಎಂಬ ಆಗ್ರಹಗಳ ಹಿನ್ನೆಲೆಯಲ್ಲಿ ಐವನ್ ಡಿಸೋಜಾ ಅವರ ಹೆಸರು ಮುಂಚೂಣಿಯಲ್ಲಿದೆ. ಬಿಲ್ಲವ ಕೋಟಾದಡಿ ಪದ್ಮರಾಜ್ ಆರ್ ಪೂಜಾರಿ ಹೆಸರು ಕೂಡ ಮುನ್ನಲೆಯಲ್ಲಿದೆ. ಬಂಟ ಸಮುದಾಯದ ಶಶಿಧರ್ ಹೆಗ್ಡೆ ಜೊತೆ ಮಿಥುನ್ ರೈ ಅವರನ್ನು ಪರಿಗಣಿಸಲಾಗಿದೆ. ಕುಲಾಲ್ ಸಮುದಾಯದ ಪೃಥ್ವರಾಜ್ ಅವರ ಹೆಸರು ಅಚ್ಚರಿಯ ಆಯ್ಕೆ.
ಬಲ್ಲ ಮೂಲಗಳ ಪ್ರಕಾರ ಐವನ್ ಡಿಸೋಜಾ ಅವರು ನೂತನ ಜಿಲ್ಲಾಧ್ಯಕ್ಷರಾಗುವುದು ಖಚಿತ ಎನ್ನಲಾಗುತ್ತಿದ್ದು, ಪದ್ಮರಾಜ್ ಪೂಜಾರಿ ಅವರಿಗೂ ಮಣೆಹಾಕುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ಒಬ್ಬರಿಗೆ ಒಂದೇ ಹುದ್ದೆ ಎಂಬ ನಿರ್ಣಯ ಪಾಲನೆಯಾಗುವುದಾದರೆ ಐವನ್ ಡಿಸೋಜಾ ಅವರಿಗೆ ಜಿಲ್ಲಾಧ್ಯಕ್ಷ ಸ್ಥಾನ ಸಿಗುವ ಸಾಧ್ಯತೆ ಕಡಿಮೆ ಇದೆ, ಉಳಿದ ನಾಲ್ವರ ಪೈಕಿ ಪದ್ಮರಾಜ್ ಪೂಜಾರಿ ಮತ್ತು ಮಿಥುನ್ ರೈ ಅವರನ್ನು ವರಿಷ್ಠರು ಪರಿಗಣಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ಕರ್ನಾಟಕ ಕಾಂಗ್ರೆಸ್ ಪಕ್ಷದಲ್ಲಿ ಶೀಘ್ರವೇ ಮೇಜರ್ ಸರ್ಜರಿ ನಡೆಯುವ ಸಾಧ್ಯತೆ ಇದ್ದು, ಕೆಪಿಸಿಸಿ ಮತ್ತು ಜಿಲ್ಲಾ ಕಾಂಗ್ರೆಸ್ ಸಮಿತಿಗಳ ಪುನಾರಚನೆಗೆ ವರಿಷ್ಠರು ಮುಂದಾಗಿದ್ದಾರೆ ಎಂದು ತಿಳಿದುಬಂದಿದೆ. ನೂತನ ಕೆಪಿಸಿಸಿ ಅಧ್ಯಕ್ಷರ ಆಯ್ಕೆ ಮತ್ತು ಕೆಪಿಸಿಸಿಯ ನೂತನ ಸಮಿತಿ ರಚನೆಯ ಜೊತೆಯಲ್ಲೇ ಬಹುತೇಕ ಎಲ್ಲಾ ಜಿಲ್ಲಾ ಸಮಿತಿಗಳ ಪುನರ್ ರಚನೆಯಾಗಲಿದೆ ಎಂದು ತಿಳಿದುಬಂದಿದೆ. ಆ ಪೈಕಿ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಸಮಿತಿಯ ಪುನರ್ ರಚನೆಯಾಗುವುದು ನಿಚ್ಚಳವಾಗಿದೆ.



Join Whatsapp