►ರಾಜಸ್ಥಾನದಲ್ಲಿ ನಾಯಕತ್ವ ಬದಲಾಗಲಿದೆಯೇ?
ಜೈಪುರ: ಸಚಿನ್ ಪೈಲಟ್ ಬಣದ ಶಾಸಕರನ್ನು ರಾಜಸ್ಥಾನ ಸಚಿವ ಸಂಪುಟಕ್ಕೆ ಸೇರಿಸಿಕೊಳ್ಳಲು ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಮೇಲೆ ಒತ್ತಡ ಹೇರಲಾಗಿದೆ ಎಂದು ವರದಿಯಾಗಿದೆ. ಈ ಕುರಿತು ರಾಹುಲ್ ನಿವಾಸದಲ್ಲಿ ಪೈಲೆಟ್ ಬಣದ ಶಾಸಕರು ಸಭೆ ಸೇರಿದ್ದು, ರಾಜಸ್ಥಾನದಲ್ಲಿ ನಾಯಕತ್ವ ಬದಲಾವಣೆಯ ಬಗ್ಗೆ ವ್ಯಾಪಕ ಚರ್ಚೆ ನಡೆಯುತ್ತಿದೆ.
ಸಚಿವ ಸಂಪುಟ ಪುನಾರಚನೆಯಲ್ಲಿ ತಮ್ಮ ಬಣದ ಶಾಸಕರನ್ನು ಸೇರಿಸಿಕೊಳ್ಳುವಂತೆ ಪೈಲಟ್ ಒತ್ತಾಯಿಸಿದ್ದರು. ಆದರೆ ಗೆಹ್ಲೋಟ್ ಈ ಕೋರಿಕೆಯನ್ನು ನಿರಾಕರಿಸಿದ್ದು, ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಪ್ರಿಯಾಂಕಾ ಗಾಂಧಿ ನೇತೃತ್ವದಲ್ಲಿ ಸಭೆ ನಡೆಸಲಾಗಿದೆ ಎಂದು ವರದಿಯಾಗಿದೆ.
ರಾಹುಲ್ ಗಾಂಧಿ ನಿವಾಸದಲ್ಲಿ ನಡೆದ ಸಭೆಯಲ್ಲಿ ಪ್ರಿಯಾಂಕಾ ಗಾಂಧಿ, ಕೆ.ಸಿ. ವೇಣುಗೋಪಾಲ್ ಮತ್ತು ಅಜಯ್ ಮಾಕನ್ ಹಾಜರಿದ್ದರು ಎಂದು ತಿಳಿದು ಬಂದಿದೆ.
ರಾಜ್ಯದಲ್ಲಿನ ಸಮಸ್ಯೆಗಳನ್ನು ಆದಷ್ಟು ಬೇಗ ಪರಿಹರಿಸಲು ಸೂಚಿಸಿರುವ ಹೈಕಮಾಂಡ್, ಸಚಿನ್ ಪೈಲಟ್ ಅವರ ಬೇಡಿಕೆಗೆ ಗೆಹ್ಲೋಟ್ ಸ್ಪಂದಿಸಬೇಕು ಎಂದು ತಿಳಿಸಿದೆ.
ರಾಜಸ್ಥಾನದಲ್ಲಿ 2023ರಲ್ಲಿ ಚುನಾವಣೆ ನಡೆಯಲಿದೆ. ಮುಂದಿನ ಚುನಾವಣೆಯಲ್ಲಿ ಸಚಿನ್ ಪೈಲಟ್ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ಮಾಡುವ ಕಸರತ್ತು ಕೂಡ ನಡೆಯುತ್ತಿದೆ.