ಮಂಗಳೂರು: 2023ರ ಕರ್ನಾಟಕ ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದು ರಾಜಕೀಯ ಪಕ್ಷಗಳ ಕಸರತ್ತುಗಳು ಜೋರಾಗಿವೆ. ವಿಶೇಷವಾಗಿ ಕರಾವಳಿಯ ಮೇಲೆ ಕಣ್ಣಿಟ್ಟಿರುವ ಕಾಂಗ್ರೆಸ್ ಪಕ್ಷ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸ್ಪರ್ಧಿಸಲಿರುವ ಪಕ್ಷದ ಅಭ್ಯರ್ಥಿಗಳನ್ನು ಅಂತಿಮಗೊಳಿಸಲು ಮುಂದಾಗಿದೆ. ಫೆಬ್ರವರಿ 2ನೇ ವಾರದಲ್ಲಿ ಅಭ್ಯರ್ಥಿಗಳ ಮೊದಲ ಪಟ್ಟಿ ಪ್ರಕಟಿಸಲು ಕಾಂಗ್ರೆಸ್ ಪಕ್ಷ ತೀರ್ಮಾನಿಸಿದ್ದು, ಅಭ್ಯರ್ಥಿಗಳ ಮೊದಲ ಪಟ್ಟಿಯಲ್ಲಿ ದಕ್ಷಿಣ ಜಿಲ್ಲೆಯ 8 ಕ್ಷೇತ್ರಗಳ ಪೈಕಿ 4 ಕ್ಷೇತ್ರಗಳ ಅಭ್ಯರ್ಥಿಗಳನ್ನು ಘೋಷಣೆ ಮಾಡಲಿದೆ ಎಂಬ ಮಾಹಿತಿ ಕಾಂಗ್ರೆಸ್ ಮೂಲಗಳಿಂದ ತಿಳಿದುಬಂದಿದೆ.
ಬಂಟ್ವಾಳ, ಮಂಗಳೂರು (ಉಳ್ಳಾಲ), ಬೆಳ್ತಂಗಡಿ ಮತ್ತು ಮಂಗಳೂರು ಉತ್ತರ (ಸುರತ್ಕಲ್) ಈ 4 ಕ್ಷೇತ್ರಗಳ ಅಭ್ಯರ್ಥಿಗಳನ್ನು ಕಾಂಗ್ರೆಸ್ ಹೈಕಮಾಂಡ್ ಅಂತಿಮಗೊಳಿಸಿದೆ ಎಂದು ತಿಳಿದುಬಂದಿದೆ. ಬಂಟ್ವಾಳದಲ್ಲಿ ರಮಾನಾಥ ರೈ, ಮಂಗಳೂರು ಕ್ಷೇತ್ರದಲ್ಲಿ ಯು.ಟಿ ಖಾದರ್, ಬೆಳ್ತಂಗಡಿಯಲ್ಲಿ ರಕ್ಷಿತ್ ಶಿವರಾಂ, ಮಂಗಳೂರು ಉತ್ತರದಲ್ಲಿ ಇನಾಯತ್ ಅಲಿ ಅವರ ಹೆಸರನ್ನು ಹೈಕಮಾಂಡ್ ಅಂತಿಮಗೊಳಿಸಿದೆ, ಫೆಬ್ರವರಿ 2ನೇ ವಾರದಲ್ಲಿ ಬಿಡುಗಡೆಯಾಗಲಿರುವ ಕಾಂಗ್ರೆಸ್ ಅಭ್ಯರ್ಥಿಗಳ ಮೊದಲ ಪಟ್ಟಿಯಲ್ಲಿ ಈ ನಾಲ್ವರು ಅಭ್ಯರ್ಥಿಗಳ ಹೆಸರು ಘೋಷಣೆಯಾಗಲಿದ್ದು, ಉಳಿದ 4 ಕ್ಷೇತ್ರಗಳ ಅಭ್ಯರ್ಥಿಗಳ ಹೆಸರು ಇನ್ನೂ ಚರ್ಚೆಯಲ್ಲಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.
ಜಿಲ್ಲೆಯ ಪ್ರಭಾವಿ ನಾಯಕರಾಗಿರುವ ಹಿರಿಯ ಕಾಂಗ್ರೆಸಿಗ ರಮಾನಾಥ ರೈ ಅವರಿಗೆ ಇದು ಕೊನೆಯ ಚುನಾವಣೆ ಎಂಬ ಕಾರಣಕ್ಕೆ ಹೈಕಮಾಂಡ್ ಮಣೆ ಹಾಕಿದ್ದು, ಕೆಪಿಸಿಸಿಯಿಂದ ಎಐಸಿಸಿಗೆ ರವಾನೆಯಾಗಿದ್ದ ಪಟ್ಟಿಯಲ್ಲಿ ಬಂಟ್ವಾಳ ಕ್ಷೇತ್ರಕ್ಕೆ ರಮಾನಾಥ ರೈ ಅವರ ಒಂದೇ ಹೆಸರು ಕಳಿಸಿಕೊಡಲಾಗಿತ್ತು ಎಂದು ತಿಳಿದುಬಂದಿದೆ. ಬಂಟ್ವಾಳದಲ್ಲಿ ಕಳೆದ ಸಲ ಸೋತರು ಕಳೆದ 5 ವರ್ಷಗಳಿಂದ ಕ್ಷೇತ್ರದಲ್ಲಿ ನಿರಂತರವಾಗಿ ಓಡಾಡಿ ಪಕ್ಷದ ಕಾರ್ಯಕರ್ತರು ಹಾಗೂ ಕ್ಷೇತ್ರದ ಮತದಾರರ ಜೊತೆ ಸಂಪರ್ಕ ಇಟ್ಟುಕೊಂಡಿರುವುದನ್ನು ಗಮನಿಸಿರುವ ಕಾಂಗ್ರೆಸ್ ಹೈಕಮಾಂಡ್ ರಮಾನಾಥ ರೈ ಅವರನ್ನು ಬಂಟ್ವಾಳದಿಂದ ಕಣಕ್ಕಿಳಿಸಲು ತೀರ್ಮಾನಿಸಿದೆ ಎಂದು ಪಕ್ಷದ ಮೂಲಗಳು ತಿಳಿಸಿದೆ.
ಮಂಗಳೂರು ಉತ್ತರ ಕ್ಷೇತ್ರದಿಂದ ಇನಾಯತ್ ಅಲಿ ಅವರ ಹೆಸರು ಅಂತಿಮವಾಗಿದೆ ಎಂದು ತಿಳಿದುಬಂದಿದೆ. ಮುಸ್ಲಿಂ ಸಮುದಾಯದ ಹೊಸ ಮುಖಕ್ಕೆ ಅವಕಾಶ ನೀಡಲು ಹೈಕಮಾಂಡ್ ತೀರ್ಮಾನಿಸಿದ್ದು, ಕೆಪಿಸಿಸಿ ಅಧ್ಯಕ್ಷರಾಗಿರುವ ಡಿ.ಕೆ ಶಿವಕುಮಾರ್ ಅವರ ಆಪ್ತರಾಗಿರುವ ಇನಾಯತ್ ಅಲಿ ಅವರ ಹೆಸರು ಅಂತಿಮ ಮಾಡಿದೆ. ಬೆಳ್ತಂಗಡಿಯಲ್ಲಿ ಹರೀಶ್ ಪೂಂಜಾ ಅವರನ್ನು ಮಣಿಸಲು ಯುವ ಅಭ್ಯರ್ಥಿಯೇ ಸೂಕ್ತ ಎಂಬ ಕಾರಣಕ್ಕೆ ರಕ್ಷಿತ್ ಶಿವರಾಂ ಸ್ಪರ್ಧೆಗೆ ಗ್ರೀನ್ ಸಿಗ್ನಲ್ ಸಿಕ್ಕಿದ್ದು, ಹರೀಶ್ ಪೂಂಜಾ ವಿರುದ್ಧ ಬಿಲ್ಲವ ಸಮುದಾಯ ಅಸಮಾಧಾನಗೊಂಡಿರುವುದರಿಂದ ಅದರ ಲಾಭ ಪಡೆಯಲು ಬಿಲ್ಲವ ಸಮುದಾಯದ ಯುವ ನಾಯಕರಾಗಿರುವ ರಕ್ಷಿತ್ ಅವರನ್ನು ಹೈಕಮಾಂಡ್ ಕಣಕ್ಕಿಳಿಸಲು ತೀರ್ಮಾನಿಸಿದೆ ಎಂದು ತಿಳಿದುಬಂದಿದೆ. ಮಂಗಳೂರು ಕ್ಷೇತ್ರದಲ್ಲಿ ಯು.ಟಿ ಖಾದರ್ ಬದಲಿಗೆ ಬೇರೆ ಯಾವುದೇ ಆಯ್ಕೆ ಇಲ್ಲದಿರುವುದರಿಂದ ಅವರ ಹೆಸರು ಕೂಡ ಅಂತಿಮಗೊಂಡಿದೆ. ಇನ್ನುಳಿದ ನಾಲ್ಕು ಕ್ಷೇತ್ರಗಳಾದ ಸುಳ್ಯ, ಪುತ್ತೂರು, ಮೂಡಬಿದಿರೆ ಮತ್ತು ಮಂಗಳೂರು ದಕ್ಷಿಣ ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆ ಚರ್ಚೆಯಲ್ಲಿರುವುದರಿಂದ ಮೊದಲ ಪಟ್ಟಿಯಲ್ಲಿ ಈ 4 ಕ್ಷೇತ್ರಗಳ ಅಭ್ಯರ್ಥಿಗಳ ಹೆಸರು ಘೋಷಣೆಯಾಗುವ ಸಾಧ್ಯತೆ ಕಡಿಮೆ ಎಂದು ತಿಳಿದುಬಂದಿದೆ.