ಸಂತೋಷ್ ಸಾವಿನ ಹಿಂದೆ ಕಾಂಗ್ರೆಸ್ ಕೈವಾಡ: ಸಂಸದ ನಳಿನ್ ಕುಮಾರ್

Prasthutha|

ಮಂಗಳೂರು: ಗುತ್ತಿಗೆದಾರ ಸಂತೋಷ್ ಆತ್ಮಹತ್ಯೆ ಪ್ರಕರಣದ ಕುರಿತಾಗಿ ಕಾಂಗ್ರೆಸ್ ನಡೆಸುತ್ತಿರುವ ಅಹೋರಾತ್ರಿ ಧರಣಿಯ ವಿರುದ್ಧ ವ್ಯಂಗ್ಯವಾಡಿರುವ ಸಂಸದ ನಳಿನ್ ಕುಮಾರ್ ಕಟೀಲ್, ಕಾಂಗ್ರೆಸ್ ನಾಯಕರು ಜೈಲಿನ ಒಳಗಡೆ ಹೋರಾಟ ಮಾಡಬೇಕು, ಅದರ ಎಲ್ಲಾ ನಾಯಕರು ಜೈಲಲ್ಲಿ ಇರಬೇಕಿತ್ತು ಎಂದಿದ್ದಾರೆ.

- Advertisement -


ಮಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕಟೀಲ್, ಸಂತೋಷ್ ಸಾವಿನ ತನಿಖೆಗೆ ಮೊದಲು ಒತ್ತಾಯ ಮಾಡಿದ್ದೇ ಈಶ್ವರಪ್ಪ, ತನಿಖೆಗೆ ಸಹಕಾರ ಆಗುವ ನೆಲೆಯಲ್ಲಿ, ವೈಯಕ್ತಿಕ ನೆಲೆಯಲ್ಲಿ ಯಾರಿಗೂ ಮುಜುಗರ ಆಗಬಾರದೆಂದು ರಾಜೀನಾಮೆ ನೀಡಿದ್ದಾರೆ ಎಂದು ಹೇಳಿದರು.


ಇದೇ ವೇಲೆ ಕಾಂಗ್ರೆಸ್ ನಾಯಕರ ವಿರುದ್ಧ ಕಿಡಿಕಾರಿರುವ ನಳಿನ್, ಕಾಂಗ್ರೆಸ್ಸಿನ ಯಾವ ನಾಯಕರು ಹೊರಗಿರಬಾರದು ಎಲ್ಲರೂ ಜೈಲಿನಲ್ಲಿ ಇರಬೇಕಾದವರು, ಸಿದ್ದರಾಮಯ್ಯ ಸರ್ಕಾರ ಇದ್ದಾಗ ಡಿವೈಎಸ್ಪಿ ಗಣಪತಿ ವಿಡಿಯೋ ಡೆತ್ ನೋಟ್ ಮಾಡಿ ಆತ್ಮ ಹತ್ಯೆ ಮಾಡಿದ್ದರು. ಯಾಕೇ ನೀವು ಜಾರ್ಜ್ ಅವರನ್ನು ಬಂಧನ ಮಾಡಿರಲಿಲ್ಲ ಎಂದು ಪ್ರಶ್ನಿಸಿದರು.

- Advertisement -


ಸಿದ್ದರಾಮಯ್ಯ ಸರ್ಕಾರದಲ್ಲಿ 24 ಮಂದಿ ಹಿಂದೂ ಕಾರ್ಯಕರ್ತರ ಹತ್ಯೆಯಾಗಿತ್ತು, ಆ ಘಟನೆಗಳಲ್ಲಿ ಸಿದ್ದರಾಮಯ್ಯ ಯಾರನ್ನಾದರೂ ಬಂಧಿಸಿದ್ದಾರ? ಹಗರಣವೊಂದರಲ್ಲಿ ಬೇಲ್ ಪಡೆದಿರುವ ಕಾಂಗ್ರೆಸ್ ಅಧ್ಯಕ್ಷರು ಕೂಡ ಜೈಲಿನಲ್ಲಿ ಇರಬೇಕಾಗಿತ್ತು. ಯುವ ಕಾಂಗ್ರೆಸ್ ಅಧ್ಯಕ್ಷ ನಲಪಾಡ್ ಮೇಲೆ ಹತ್ತು ಕೇಸ್ ಇದೆ, ಕಾಂಗ್ರೆಸ್ ನಾಯಕರು ಜೈಲಿನ ಒಳಗಡೆ ಹೋರಾಟ ಮಾಡಬೇಕು ಎಂದು ವ್ಯಂಗ್ಯವಾಡಿದರು.


ಸಂತೋಷ್ ಆತ್ಮಹತ್ಯೆಯ ಬಗ್ಗೆ ಎಲ್ಲೂ ಡೆತ್ ನೋಟ್ ಸಿಕ್ಕಿಲ್ಲ, ಕೇವಲ ವಾಟ್ಸಪ್ ನಲ್ಲಿ ಹರಿದಾಡಿರುವ ಮೆಸೇಜ್ ಗಳು ಸಿಕ್ಕಿವೆ, ಸಂತೋಷ್ ಸಾವಿನ ಹಿಂದೆ ಕಾಂಗ್ರೆಸ್ ಇದೆ. ತನಿಖೆ ನಡೆಯುತ್ತಿದ್ದು ಇದರ ಸತ್ಯಾಸತ್ಯತೆ ಬಯಲಾಗಲಿದೆ ಎಂದು ನಳಿನ್ ಕುಮಾರ್ ಹೇಳಿದ್ದಾರೆ.



Join Whatsapp