ಕಾಣಿಯೂರು ದೋಲ್ಪಾಡಿ ಗ್ರಾಪಂ ಅಧ್ಯಕ್ಷ, ಉಪಾಧ್ಯಕ್ಷರಿಂದಲೇ ಮುಸ್ಲಿಮ್ ಜವಳಿ ವ್ಯಾಪಾರಿಗಳ ಮೇಲೆ ಹಲ್ಲೆ: ಕಾಂಗ್ರೆಸ್ ಆರೋಪ

Prasthutha|

►ಗಾಯಾಳುಗಳನ್ನು ಭೇಟಿಯಾದ ಕಾಂಗ್ರೆಸ್ ಅಲ್ಪಸಂಖ್ಯಾತ ನಿಯೋಗ

- Advertisement -

ಮಂಗಳೂರು: ಸಂಘಪರಿವಾರದ ಕಾರ್ಯಕರ್ತರಿಂದ ಕ್ರೂರವಾಗಿ ಹಲ್ಲೆಗೊಳಗಾಗಿ  ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಇಬ್ಬರು ಮುಸ್ಲಿಮ್ ಯುವಕರನ್ನು ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ನಿಯೋಗ ಶನಿವಾರ ಭೇಟಿ ಮಾಡಿ ಆರೋಗ್ಯ ವಿಚಾರಿಸಿತು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಘಟಕದ ಅಧ್ಯಕ್ಷ ಶಾಹುಲ್ ಹಮೀದ್, ಅಡ್ಡೂರಿನ ಜವಳಿ ವ್ಯಾಪಾರಿಗಳಾದ ರಮೀಝ್ ಮತ್ತು ರಫೀಕ್ ಅವರ ಮೇಲೆ ನಡೆದ ಅಮಾನುಷ ಹಲ್ಲೆ, ಕೊಲೆಯತ್ನದಲ್ಲಿ ಕಾಣಿಯೂರು ದೋಲ್ಡಾಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಹಾಗೂ ಉಪಾಧ್ಯಕ್ಷ, ಸಂಘಪರಿವಾರದ ಕಾರ್ಯಕರ್ತರೇ ನೇರವಾಗಿ ಭಾಗಿಯಾಗಿದ್ದು, ಅವರೆಲ್ಲರ ವಿರುದ್ಧ ಕೊಲೆಯತ್ನ ಪ್ರಕರಣ ದಾಖಲಿಸಬೇಕು. ಈಗಾಗಲೇ ಆರೋಪಿಗಳ ವಿರುದ್ಧ ಸಣ್ಣ ಕೇಸುಗಳನ್ನು ಹಾಕಿ ಸ್ಟೇಷನ್ ನಲ್ಲೇ ಜಾಮೀನು ನೀಡುವ ಸಂಚು ನಡೆದಿದೆ. ಆದ್ದರಿಂದ ತಕ್ಷಣ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರು ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳ ಪರಿಸ್ಥಿತಿಯನ್ನು ನೋಡಬೇಕು ಎಂದು ಒತ್ತಾಯಿಸಿದರು.

- Advertisement -

ಗುರುವಾರ ರಫೀಕ್ ಮತ್ತು ರಮೀಝ್ ಜವಳಿ ವ್ಯಾಪಾರಕ್ಕೆಂದು ಕಾಣಿಯೂರಿಗೆ ಹೋದಾಗ 50-60 ಮಂದಿಯಿದ್ದ ಸಂಘಪರಿವಾರದ ಕಾರ್ಯಕರ್ತರು ಪಿಕಪ್ ವಾಹನವನ್ನು ರಸ್ತೆಗೆ ಅಡ್ಡವಾಗಿ ಇಟ್ಟು ಇವರಿಬ್ಬರಿಗೂ ಸುಮಾರು 2 ಗಂಟೆಗಳ ಕಾಲ ಸತತವಾಗಿ ಹಲ್ಲೆ ನಡೆಸಿದ್ದಾರೆ. ಬೈಕ್ ನಲ್ಲಿ ಮೂವರು ಕುಳಿತು ದೇಹದ ಮೇಲೆ ಬೈಕ್ ಹತ್ತಿಸಿದ್ದಾರೆ. ಕೊನೆಗೆ ಇವರು ಸತ್ತು ಹೋಗಿದ್ದಾರೆ ಎಂದು ಭಾವಿಸಿ ಅಲ್ಲಿಂದ ತೆರಳಿದ್ದಾರೆ. ಅಷ್ಟರಲ್ಲಿ ಪೊಲೀಸರಿಗೆ ವಿಷಯ ತಿಳಿದು ಸ್ಥಳಕ್ಕೆ ಧಾವಿಸಿ ಅಕ್ಷರಶಃ ಶವಗಳಂತಿದ್ದ ಇಬ್ಬರನ್ನು ಕಡಬ ಆಸ್ಪತ್ರೆಗೆ ತಲುಪಿಸಿದ್ದಾರೆ. ಆದರೆ ದೇವರ ದಯೆಯಿಂದ ದೇಹದಲ್ಲಿ ಇನ್ನೂ ಜೀವ ಬಾಕಿ ಉಳಿದಿತ್ತು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಪುತ್ತೂರು ಆಸ್ಪತ್ರೆ, ನಂತರ ಮಂಗಳೂರಿನ ಆಸ್ಪತ್ರೆಗೆ ಸಾಗಿಸಲಾಗಿದೆ ಎಂದು ಶಾಹುಲ್ ಹಮೀದ್ ಘಟನೆಯನ್ನು ವಿವರಿಸಿದರು.

 ಅವರಿಬ್ಬರನ್ನೂ ರೈಲು ಹಳಿಗೆ ಎಸೆದು ಹೋಗಲು ಸಂಘಪರಿವಾರದ ಕಾರ್ಯಕರ್ತರು ನಿರ್ಧರಿಸಿದ್ದರು. ಆದರೆ ಅವರು ಸತ್ತು ಹೋಗಿದ್ದಾರೆ ಎಂದು ಭಾವಿಸಿ ಅಲ್ಲೇ ಬಿಟ್ಟು ಹೋಗಿದ್ದರು. ಮುಸ್ಲಿಮರು ಎಂಬ ಕಾರಣಕ್ಕಾಗಿಯೇ ಈ ಕ್ರೂರ ಹಲ್ಲೆ ನಡೆದಿದೆ. ಯು.ಪಿ. ಮಾಡೆಲ್ ಎಂದು ಹೇಳುತ್ತಿದ್ದ ಕೃತ್ಯಗಳು ಇಂದು ನಮ್ಮ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆಯುತ್ತಿದೆ. ಇದು ಯುಪಿ ಮಾದರಿಯ ಒಂದು ಪ್ರಾತ್ಯಕ್ಷಿಕೆ ಮಾತ್ರ. ಚುನಾವಣೆಗೆ ಇನ್ನು 6 ತಿಂಗಳು ಇರುವುದರಿಂದ ಇಂತಹ ಘಟನೆಗಳನ್ನು ಹಳ್ಳಿ ಹಳ್ಳಿಗಳಲ್ಲಿ ನಡೆಸಲು ವೇದಿಕೆ ಸಜ್ಜುಗೊಳ್ಳುತ್ತಿದೆ ಎಂದು ಅವರು ಆರೋಪಿಸಿದರು.

ಹಲ್ಲೆಗೊಳಗಾದವರ ವಿರುದ್ಧವೇ ಮಹಿಳೆಯೊಬ್ಬರಿಂದ ಮಾನಭಂಗ ಯತ್ನ ದೂರು ದಾಖಲಿಸಲಾಗಿದೆ.  ಅವರಲ್ಲಿದ್ದ 30 ಸಾವಿರ ರೂ. ನಗದನ್ನು ದೋಚಲಾಗಿದೆ. 50 ಸಾವಿರ ರೂ.ಮೌಲ್ಯದ ಬೆಡ್ ಶೀಟ್ ಗಳನ್ನು ನಾಶ ಮಾಡಲಾಗಿದೆ. ಇಡೀ ಘಟನೆಯನ್ನು ಅಪಘಾತವೆಂಬಂತೆ ಬಿಂಬಿಸಿ ಆರೋಪಿಗಳನ್ನು ರಕ್ಷಿಸುವ ಪ್ರಯತ್ನ ಕೂಡ ನಡೆಯುತ್ತಿದೆ. ಆದ್ದರಿಂದ ಜಿಲ್ಲಾಧಿಕಾರಿ ಮತ್ತು ಪೊಲೀಸ್ ವರಿಷ್ಠಾಧಿಕಾರಿಯವರು ಆಸ್ಪತ್ರೆಗೆ ಭೇಟಿ ನೀಡಿ ಯುವಕರ ಪರಿಸ್ಥಿತಿಯನ್ನು ವೀಕ್ಷಿಸಿ ಆರೋಪಿಗಳ ವಿರುದ್ಧ ಕೊಲೆಯತ್ನ ಪ್ರಕರಣ ದಾಖಲಿಸಬೇಕು. ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ವತಿಯಿಂದ ಎಸ್.ಪಿ.ಅವರನ್ನು ಭೇಟಿ ಮಾಡಿ ಅವರಿಗೆ ಮನವರಿಕೆ ಮಾಡಿಕೊಡಲಾಗುವುದು. ಪಕ್ಷದ ವತಿಯಿಂದ ಘಟನೆಯನ್ನು ಖಂಡಿಸಿ ಉಗ್ರ ಹೋರಾಟ ನಡೆಸಲಾಗುವುದು ಎಂದು ತಿಳಿಸಿದರು.

Join Whatsapp