ತಿರುವನಂತಪುರಂ: ಬಿಜೆಪಿ ಆಡಳಿತ ರಾಜ್ಯಗಳ ಬುಲ್ಡೋಝರ್ ಕಾರ್ಯಾಚರಣೆಯನ್ನು ಹೋಲುವ ಕಾರ್ಯಾಚರಣೆಯೊಂದು ಕೇರಳದ ಕಲಮಸ್ಸೆರಿ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ನಡೆದಿದೆ. ಇಲ್ಲಿ ಕಾಂಗ್ರೆಸ್ ಆಡಳಿತವಿದೆ.
ಜೈಗನ್ ಬೀಬಿ ಹಾಗೂ ಆಕೆಯ ಪತಿ ಸಾಬೂ ಮೊಂಟೋಲ್ ಕಲಮಸ್ಸೆರಿಯ ಖಾಲಿ ಜಾಗವೊಂದರಲ್ಲಿ ಗುಜರಿ ಸಾಮಾನುಗಳನ್ನು ಸಂಗ್ರಹಿಸಿಡಲು ಶೆಡ್ ನಿರ್ಮಿಸಿಕೊಂಡಿದ್ದರು. ನಿವೇಶನಕ್ಕೆ ಮಾಸಿಕ ರೂ. 30,000 ಬಾಡಿಗೆ ನೀಡಿ, ರೂ. 5 ಲಕ್ಷ ವೆಚ್ಚ ಮಾಡಿ ಈ ತಾತ್ಕಾಲಿಕ ಶೆಡ್ ಅನ್ನು ಅವರು ಹಾಕಿಕೊಂಡಿದ್ದರು.
ಈ ಶೆಡ್‌ನಿಂದ ಸುತ್ತಮುತ್ತಲಿನ ನಾಗರಿಕರಿಗೆ ತೊಂದರೆಯಾಗುತ್ತಿದೆ, ಸಾಂಕ್ರಾಮಿಕ ರೋಗಗಳು ಹರಡುವ ಭೀತಿಯಿದೆ ಎಂದು ಕಾರಣ ನೀಡಿ ಕಲಮಸ್ಸೆರಿ ಮಹಾನಗರ ಪಾಲಿಕೆ ಈ ದಂಪತಿಗೆ ನೋಟಿಸ್ ಜಾರಿಗೊಳಿಸಿತ್ತು. ಈ ನೋಟಿಸ್ ವಿರುದ್ಧ ನಿವೇಶನದ ಮಾಲಕ ಮುಹಮ್ಮದ್ ಸೈಯದ್ ಕೆ.ಎ. ಕಾನೂನು ತಜ್ಞರಿಂದ ತಡೆಯಾಜ್ಞೆ ತರಲು ತೆರಳಿದ್ದ ಸಂದರ್ಭದಲ್ಲಿಯೇ ಏಕಾಏಕಿ ಬುಲ್ಡೋಝರ್ ಕಾರ್ಯಾಚರಣೆ ನಡೆದಿದೆ. ಜೈಗನ್ ಬೀಬಿ ಮತ್ತು ಸಾಬು ಮೊಂಟೋಲ್ ದಂಪತಿಯ ತಾತ್ಕಾಲಿಕ ಶೆಡ್ ಅನ್ನು ನೆಲಸಮಗೊಳಿಸಲಾಗಿದೆ.
ಘಟನೆ ಕುರಿತು ಪ್ರತಿಕ್ರಿಯಿಸಿರುವ ‘ಪ್ರೊಗ್ರೆಸ್ಸಿವ್ ವರ್ಕರ್ಸ್ ಆರ್ಗನೈಸೇಷನ್’ ಎಂಬ ಸರಕಾರೇತರ ಸಂಸ್ಥೆಯ ಅಧ್ಯಕ್ಷ ಜಾರ್ಜ್ ಮ್ಯಾಥ್ಯೂ, ಉತ್ತರ ಪ್ರದೇಶ, ಹರ್ಯಾಣ, ದಿಲ್ಲಿಯಲ್ಲಿ ಬಡವರ ಮನೆಗಳನ್ನು ನೆಲಸಮಗೊಳಿಸುವ ಬಿಜೆಪಿಗರಿಗೂ , ಕಾಂಗ್ರೆಸ್ ಆಡಳಿತದ ಕಲಮಸ್ಸೆರಿ ಮಹಾನಗರ ಪಾಲಿಕೆ ಹಾಗೂ ಅದರ ಸ್ಥಳೀಯ ನಾಯಕರಿಗೂ ಯಾವ ವ್ಯತ್ಯಾಸವಿದೆ? ರಾಹುಲ್ ಗಾಂಧಿ ಶ್ರಮಿಕರ ಪರವಾಗಿದ್ದಾರೆ ಎಂದು ಸಾಮಾಜಿಕ ಮಾಧ್ಯಮ ಹಾಗೂ ಮುಖ್ಯ ವಾಹಿನಿಗಳಲ್ಲಿ ಬಿಂಬಿಸಿಕೊಳ್ಳುತ್ತಿದ್ದಾರೆ. ಆದರೆ, ಕಾಂಗ್ರೆಸ್ ಆಡಳಿತವಿರುವ ಮಹಾನಗರ ಪಾಲಿಕೆಯೇ ಶ್ರಮಿಕರ ತಾತ್ಕಾಲಿಕ ಶೆಡ್ ಅನ್ನು ನೆಲಸಮಗೊಳಿಸಿದೆ ಎಂದು ತೀವ್ರ ಅಸಮಾಧಾನ ಹೊರಹಾಕಿದ್ದಾರೆ.
ಕಲಮಸ್ಸೆರಿ ಮಹಾನಗರ ಪಾಲಿಕೆಯ ಕಾರ್ಯದರ್ಶಿ ಅನಿಲ್ ಕುಮಾರ್ ಈ ಆರೋಪಗಳನ್ನು ಅಲ್ಲಗಳೆದಿದ್ದು, ಮಹಾನಗರ ಪಾಲಿಕೆಯ ಕ್ರಮವನ್ನು ಸಮರ್ಥಿಸಿಕೊಂಡಿದ್ದಾರೆ. ತಾತ್ಕಾಲಿಕ ಶೆಡ್‌ನಲ್ಲಿ ಯಾವುದೇ ಜನವಸತಿ ಇರಲಿಲ್ಲ. ತಾತ್ಕಾಲಿಕ ಶೆಡ್ ಅನ್ನು ವಿದ್ಯುತ್ ತಂತಿಯಡಿ ನಿರ್ಮಿಸಲಾಗಿತ್ತು ಎಂದು ಅವರು ಹೇಳಿದ್ದಾರೆ.