ಅಕ್ರಮ ಆಸ್ತಿ ಸಂಪಾದಿಸಿದ ಬಿಜೆಪಿ ನಾಯಕರ ಆಸ್ತಿ ಮುಟ್ಟುಗೋಲು ಹಾಕಿ: ಭರತ್ ಶೆಟ್ಟಿ ಹೇಳಿಕೆಗೆ SDPI ತಿರುಗೇಟು

Prasthutha|

ಮಂಗಳೂರು: ಗೋ ಹತ್ಯೆ ಮಾಡಿದರೆ ಆಸ್ತಿ ಮುಟ್ಟುಗೋಲು ಹಾಕಲಾಗುವುದು ಎಂಬ ಶಾಸಕ ಭರತ್ ಶೆಟ್ಟಿ ಹೇಳಿಕೆಗೆ ಎಸ್ ಡಿಪಿಐ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದು, ಮೊದಲು ಬ್ರಹ್ಮಾಂಡ ಭ್ರಷ್ಟಾಚಾರದ ಮೂಲಕ ಅಕ್ರಮ ಆಸ್ತಿ ಸಂಪಾದಿಸಿದ ಬಿಜೆಪಿ ನಾಯಕರ ಹಾಗೂ ಕದ್ದು ಮುಚ್ಚಿ ಗೋ ಮಾಂಸ ತಿನ್ನುವ ಮತ್ತು ವ್ಯಾಪಾರ ಮಾಡುವ ಸಂಘಪರಿವಾರದವರ ಆಸ್ತಿಗಳನ್ನು ಮುಟ್ಟುಗೋಲು ಹಾಕಿ ನಿಮ್ಮ ತಾಕತ್ತನ್ನು ಪ್ರದರ್ಶಿಸಿ ಎಂದು ಎಸ್ ಡಿಪಿಐ ದ.ಕ ಜಿಲ್ಲಾಧ್ಯಕ್ಷ ಅಬೂಬಕ್ಕರ್ ಕುಳಾಯಿ ಸವಾಲು ಹಾಕಿದ್ದಾರೆ.

- Advertisement -

ಶಾಸಕ ಭರತ್ ಶೆಟ್ಟಿ ಕ್ಷೇತ್ರದಲ್ಲಿ ಅಭಿವೃದ್ಧಿ ತೀವ್ರ ಕುಂಠಿತಗೊಂಡಿದ್ದು, ಈಗ ನಿರಂತರವಾಗಿ ಸುರಿಯುತ್ತಿರುವ ಭಾರಿ ಮಳೆಗೆ ಅಲ್ಲಲ್ಲಿ ಗುಡ್ಡೆ ಕುಸಿತ, ಚರಂಡಿ ವ್ಯವಸ್ಥೆ ಸರಿ ಇಲ್ಲದೆ ಮಾರ್ಗದಲ್ಲಿ ಕೊಳಚೆ ನೀರು ಹರಿಯುತ್ತಿದೆ. ಹಲವು ಕಡೆ ಪ್ರಾಕೃತಿಕ ವಿಕೋಪ ಸಂಭವಿಸಿದ್ದರೂ ಶಾಸಕರು ಅಂತಹ ಸ್ಥಳಗಳಿಗೆ ಭೇಟಿ ನೀಡಿ ಸ್ಥಳ ವೀಕ್ಷಣೆ ನಡೆಸಿ ಪರಿಹಾರ ಕಾರ್ಯ ಮಾಡದೇ ಇರುವುದರಿಂದ ಕ್ಷೇತ್ರದ ಜನತೆ ಶಾಸಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇದರಿಂದ ಕಂಗೆಟ್ಟಿರುವ ಶಾಸಕ ಭರತ್ ಶೆಟ್ಟಿ ಜನರ ದಿಕ್ಕು ತಪ್ಪಿಸುವ ಸಲುವಾಗಿ ಭಾವನಾತ್ಮಕ ವಿಚಾರಗಳನ್ನು ಮುನ್ನೆಲೆಗೆ ತಂದು ಈ ರೀತಿಯ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.

ಬಿಜೆಪಿ ಸಂಘಪರಿವಾರದ ಹಲವಾರು ನಾಯಕರು 40% ಕಮಿಷನ್ ದಂಧೆ, ಪಿಎಸೈ ಹಗರಣ, ಬಿಡಿಎ ಹಗರಣ ಸೇರಿದಂತೆ ಹಲವಾರು ಹಗರಣಗಳ ಸರೆಮಾಲೆಯನ್ನೇ ನಡೆಸಿದ್ದಾರೆ. ಶಾಸಕ ಭರತ್ ಶೆಟ್ಟಿಗೆ ತಾಕತ್ತಿದ್ದರೆ ಮೊದಲು ಅಂತಹ ಬಿಜೆಪಿ ಸಂಘಪರಿವಾರ ನಾಯಕರ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಿ ಎಂದು ಅವರು ಸವಾಲು ಹಾಕಿದ್ದಾರೆ.

- Advertisement -

ಅದೇ ರೀತಿ ವಿದೇಶಕ್ಕೆ ಬೀಫ್ ಸರಬರಾಜಿನಲ್ಲಿ ವಿಶ್ವದಲ್ಲೇ ಬಿಜೆಪಿ ಆಡಳಿತ ಸರ್ಕಾರ ಇರುವ ಭಾರತ ಮೊದಲನೇ ಸ್ಥಾನದಲ್ಲಿದೆ. ಬಿಜೆಪಿ ಶಾಸಕ ಸಂಗೀತ್ ಸೋಮ್, ಸಂಸದ ರಾಜೀವ್ ಚಂದ್ರಶೇಖರ ಸೇರಿದಂತೆ ಹಲವು ಬಿಜೆಪಿ ನಾಯಕರ ಒಡೆತನದಲ್ಲಿ ಇರುವ ಫ್ಯಾಕ್ಟರಿಗಳೇ ಭಾರತದಿಂದ ಬೀಫ್ ರಪ್ತು ಮಾಡುವ ಪ್ರಮುಖ ಕಂಪನಿಗಳಾಗಿದೆ. ಹಾಗಾಗಿ ಜನ ಸಾಮಾನ್ಯರು ಬಿಜೆಪಿಯ ಭಾವನಾತ್ಮಕ ವಿಚಾರಗಳಿಗೆ ಬಲಿ ಬೀಳಬಾರದೆಂದು ಆಗ್ರಹಿಸಿದ್ದಾರೆ.

ಅದಲ್ಲದೇ ಸ್ವತಃ ಭರತ್ ಶೆಟ್ಟಿ ಶಾಸಕರಾದ ನಂತರ ಕೋಟಿಗಟ್ಟಲೆ ಅಕ್ರಮ ಬೇನಾಮಿ ಹೆಸರಿನಲ್ಲಿ ಆಸ್ತಿ ಸಂಪಾದಿಸಿದ ಬಗ್ಗೆ ಜನ ಸಾಮಾನ್ಯರೆಡೆಯಲ್ಲಿ ಚರ್ಚೆಯ ವಿಷಯವಾಗಿ ಮಾರ್ಪಟ್ಟಿದೆ. ಹಾಗಾಗಿ ಶಾಸಕರು ತಮ್ಮ ಆಸ್ತಿಯ ಬಗ್ಗೆ ಸಂಬಂಧಪಟ್ಟ ಇಲಾಖೆಯ ನಿಷ್ಪಕ್ಷಪಾತ ಅಧಿಕಾರಿಗಳಿಂದ ತನಿಖೆಗೆ ಆದೇಶಿಸಲಿ, ಅದು ಬಿಟ್ಟು ಉತ್ತರ ಪ್ರದೇಶದ ರೀತಿಯಲ್ಲಿ ದಕ್ಷಿಣ ಕನ್ನಡದಲ್ಲಿ ಕ್ರೌರ್ಯ ನಡೆಸಬಹುದು ಎಂಬ ಕನಸು ನನಸಾಗದು ಎಂದು ಅವರು ಪ್ರಕಟಣೆಯಲ್ಲಿ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ.

Join Whatsapp