ಆರ್ಥಿಕ ನಷ್ಟ ಅಂದಾಜಿಸಲು ಸಮೀಕ್ಷೆ ನಡೆಸಿ, ಸಮಗ್ರ ವರದಿ ನೀಡಿ: ಮುಖ್ಯಮಂತ್ರಿ ಬೊಮ್ಮಾಯಿ

Prasthutha|

ಬೆಂಗಳೂರು: ವ್ಯಾಪಕ ಮಳೆಯಿಂದಾಗಿ ಹಲವು ಬೆಳೆಗಳು ಹಾಗೂ ಮನೆಗಳು ಹಾನಿಯಾಗಿದ್ದು, ಆರ್ಥಿಕ ನಷ್ಟವನ್ನು ಅಂದಾಜಿಸುವ ಸಂಬಂಧ ಸಮೀಕ್ಷೆಯನ್ನು ನಡೆಸಿ, ಸಮಗ್ರ ವರದಿಯನ್ನು ನೀಡುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

- Advertisement -


ಕೋಲಾರ ಜಿಲ್ಲೆಯ ಮಳೆ ಹಾನಿ ಪ್ರದೇಶಗಳಿಗೆ ಭೇಟಿ ನೀಡಲು ತೆರಳುವ ವೇಳೆ, ಮಾರ್ಗ ಮಧ್ಯದಲ್ಲಿ ಹೊಸಕೋಟೆ ನಗರಸಭೆ ವ್ಯಾಪ್ತಿಯಲ್ಲಿರುವ ಮಳೆಬಾಧಿತ ಪ್ರದೇಶಗಳಿಗೆ ಭೇಟಿ ನೀಡಿ, ಪರಿಶೀಲನೆ ನಡೆಸಿ, ಮಾತನಾಡಿದ ಅವರು, ಸ್ಪಷ್ಟವಾದ ವರದಿ ಬಂದ ನಂತರ ಎಷ್ಟು ಪರಿಹಾರ ನೀಡಬೇಕೆಂದು ನಿರ್ಧರಿಸಿ, ಆದ್ಯತೆ ಮೇರೆಗೆ ಅನುದಾನ ಬಿಡುಗಡೆ ಮಾಡಲು ಕ್ರಮವಹಿಸಲಾಗುವುದು ಎಂದರು.


ಹಲವೆಡೆ ಕೃಷಿ ಪ್ರದೇಶಗಳು ನೀರಿನಿಂದ ಮುಳುಗಡೆಯಾಗಿದ್ದು, ಅಪಾರ ಪ್ರಮಾಣದಲ್ಲಿ ಬೆಳೆ ಹಾನಿಯಾಗಿರುವ ಕುರಿತು ಮಾಹಿತಿ ಲಭ್ಯವಾಗಿದೆ ಎಂದರಲ್ಲದೆ ಪೂರ್ಣ ಪ್ರಮಾಣದಲ್ಲಿ ಕುಸಿದ ಮನೆಗಳು ಹಾಗೂ ಭಾಗಶಃ ಕುಸಿದು ಬಿದ್ದ ಮನೆಗಳಿಗೆ ಹಾನಿಗನುಸಾರವಾಗಿ ಪರಿಹಾರವನ್ನು ಅಧಿಕಾರಿಗಳು ನೀಡಬೇಕು ಎಂದು ತಿಳಿಸಿದರು.ಅತಿವೃಷ್ಟಿ ಪರಿಹಾರ ಕಾರ್ಯಕ್ಕೆ ವೇಗವನ್ನು ನೀಡಲು ಚುನಾವಣಾ ನೀತಿ ಸಂಹಿತೆಯಲ್ಲಿ ರಿಯಾಯಿತಿ ನೀಡಲು ಚುನಾವಣಾ ಆಯೋಗಕ್ಕೆ ಪತ್ರವನ್ನು ಬರೆಯಲಾಗಿದ್ದು, ಸಚಿವರು ಮಳೆಬಾಧಿತ ಪ್ರದೇಶಗಳಲ್ಲಿನ ಜನರ ಕಷ್ಟಗಳನ್ನು ಆಲಿಸುವುದರ ಜೊತೆಯಲ್ಲಿ ಪರಿಹಾರ ಕಾರ್ಯಗಳನ್ನು ಕೈಗೊಳ್ಳುವ ಮೂಲಕ ಉತ್ತಮ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ಹೇಳಿದರು.

- Advertisement -


ಈ ವೇಳೆ ಪೌರಾಡಳಿತ, ಸಣ್ಣ ಕೈಗಾರಿಕೆಗಳು ಹಾಗೂ ಸಾರ್ವಜನಿಕ ವಲಯ ಉದ್ದಿಮೆಗಳ ಸಚಿವರಾದ ಎನ್.ನಾಗರಾಜು(ಎಂ.ಟಿ.ಬಿ.), ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್, ಉಪ ವಿಭಾಗಾಧಿಕಾರಿ ಅರುಳ್ ಕುಮಾರ್, ಕೃಷಿ ಇಲಾಖೆ ಜಂಟಿ ನಿರ್ದೇಶಕ ಜಯಸ್ವಾಮಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.

Join Whatsapp