ಮಂಗಳೂರು ಕೊರಗಜ್ಜನ ಕಟ್ಟೆಯಲ್ಲಿ ಕಾಂಡೋಮ್: ಆರೋಪಿ ದೇವದಾಸ ದೇಸಾಯಿ ಬಂಧನ

Prasthutha|

18 ಧಾರ್ಮಿಕ ಕ್ಷೇತ್ರಗಳಲ್ಲಿ ದುಷ್ಕೃತ್ಯ ಮೆರೆದಿದ್ದ ಆರೋಪಿ !

- Advertisement -

ಮಂಗಳೂರು: ನಗರದ ಮಾರ್ನಮಿಕಟ್ಟೆಯ ಕೊರಗಜ್ಜನ ಗುಡಿಯ ಎದುರು ಉಪಯೋಗಿಸಿದ ಕಾಂಡೋಮ್ ನ್ನು ಇಟ್ಟು ಅಪವಿತ್ರಗೊಳಿಸಿದ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ಬಂಧಿತ ಆರೋಪಿಯನ್ನು ದೇವದಾಸ್ ದೇಸಾಯಿ(62) ಎಂದು ಗುರುತಿಸಲಾಗಿದ್ದು, ಮಿತ್ರ ನಗರ, ಕೊಂಡಾಣ ಕೋಟೇಕಾರು ನಿವಾಸಿಯಾಗಿದ್ದಾನೆಂದು ತಿಳಿದು ಬಂದಿದೆ.

- Advertisement -

ಆರೋಪಿ ಈ ಹಿಂದೆಯೂ ಹಲವು ದೇವಸ್ಥಾನ, ಧಾರ್ಮಿಕ ಕೇಂದ್ರಗಳನ್ನು ಅಪವಿತ್ರಗೊಳಿಸಿರುವುದು ವಿಚಾರಣೆಯ ವೇಳೆ ಬೆಳಕಿಗೆ ಬಂದಿದೆ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಶಶಿಕುಮಾರ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಈ ಕೆಳಕಂಡ ಸ್ಥಳಗಳಲ್ಲಿನ ದೈವಸ್ಥಾನ, ಕೊರಗಜ್ಜ ಕಟ್ಟೆ, ಮಸೀದಿ, ಸಿಖ್ ಗುರುದ್ವಾರ( ಕೂಳೂರು) ಮುಂತಾದ ಕಡೆಗಳಲ್ಲಿನ ಕಾಣಿಕೆ ಡಬ್ಬಿಗಳಲ್ಲಿ ಕಾಂಡೋಮ್, ಭಿತ್ತಿಪತ್ರ, ಏಸುವಿನ ಕುರಿತ ಲೇಖನ ಹಾಕಿರುವುದಾಗಿ ಆರೋಪಿ ಒಪ್ಪಿಕೊಂಡಿದ್ದಾನೆ.

ಆರೋಪಿ ಹಿಂದೂ ಧರ್ಮದಿಂದ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡಿದ್ದು, ಧಾರ್ಮಿಕ ಕೃತಿಗಳ ಮೂಲಕ ಧರ್ಮ ಪ್ರಚಾರ ನಡೆಸುತ್ತಿದ್ದ ಎಂದು

1. ಮಾರ್ನಮಿಕಟ್ಟೆ ಕೊರಗಜ್ಜ ಕಟ್ಟೆ

2. ಬಾಬುಗುಡ್ಡೆ ಕೊರಗಜ್ಜನ ಕಾಣಿಕೆ ಡಬ್ಬಿ

3. ಕೊಂಡಾಣ ದೈವಸ್ಥಾನ

4. ಮಂಗಳಾದೇವಿ ದೇವಸ್ಥಾನ

5. ಕದ್ರಿ ದೇವಸ್ಥಾನದ ಬಳಿಯಲ್ಲಿರುವ ರಿಕ್ಷಾ ಪಾರ್ಕ್ ನ ಬಳಿ ಕಾಣಿಕೆ ಡಬ್ಬಿ

6. ಕಲ್ಲುರ್ಟಿ ದೈವಸ್ಥಾನ, ಒಮೆಗಾ ಆಸ್ಪತ್ರೆ ಬಳಿ, ಪಂಪ್ ವೆಲ್ ಬಳಿ

7. ಉಳ್ಳಾಲದ ದರ್ಗಾ ಬಳಿಯ ಮಸೀದಿಯ ಕಾಣಿಕೆ ಡಬ್ಬಿ

8. ಕಲ್ಲಾಫು ನಾಗನ ಕಟ್ಟೆ

9. ಕೊಟ್ಟಾರ ಚೌಕಿಯ ಕಲ್ಲುರ್ಟಿ ದೈವಸ್ಥಾನ

10. ಉರ್ವಾ ಮಾರಿಗುಡಿ ದೇವಸ್ಥಾನದ ಕಾಣಿಕೆ ಡಬ್ಬಿ

11. ಕುತ್ತಾರು ಕೊರಗಜ್ಜನ ಕಟ್ಟೆ

12. ಕುಡುಪು ದೈವಸ್ಥಾನ

13. ಉಳ್ಳಾಲದ ಕೊರಗಜ್ಜನ ಕಾಣಿಕೆ ಡಬ್ಬಿ

14. ನಂದಿಗುಡ್ಡೆಯ ಕೊರಗಜ್ಜನ ಗುಡಿ

15. ಎ ಬಿ ಶೆಟ್ಟಿ ವೃತ್ತದ ಬಳಿಯ ದರ್ಗಾ

16. ಸಿಖ್ ಗುರುದ್ವಾರ ಗುಡಿ- ಬಂಗ್ರ ಕೂಳೂರು

17. ಕೋಟ ಶ್ರೀ ಬಬ್ಬು ಸ್ವಾಮಿ ದೈವಸ್ಥಾನ- ಮಂಕಿಸ್ವಾಂಡ್

18. ಆದಿ ಮಾಹೇಶ್ವರಿ ದೈವಸ್ಥಾನ ಭಜನಾ ಮಂಡಳಿ ಕಾಣಿಕೆ ಡಬ್ಬಿ- ಜೆಪ್ಪು ಮಹಾಕಾಳಿ ಪಡ್ಪು

 ಆರೋಪಿಯ ಹಿನ್ನೆಲೆ

1997 ನೇ ಇಸವಿಯಲ್ಲಿ ಕೆಲಸ ಹುಡುಕಿಕೊಂಡು ಮಂಗಳೂರಿಗೆ ಬಂದಿರುವ ದೇಸಾಯಿ ಮಂಗಳೂರಿನ ಬಂದರಿನ ವಿ.ಆರ್.ಎಲ್. ಟ್ರಾನ್ಸ್ ಪೋರ್ಟ್ ಕಚೇರಿಯಲ್ಲಿ ಚಾಲಕನಾಗಿ ಕೆಲಸಕ್ಕೆ ಸೇರಿಕೊಂಡಿದ್ದಾನೆ. ಆ ಸಮಯ ಸುರತ್ಕಲ್ ಸೂರಿಂಜೆಯಲ್ಲಿ ಬಾಡಿಗೆ ಮನೆ ಮಾಡಿಕೊಂಡಿದ್ದ. ಆತನ ಹೆಂಡತಿ ಹಾಗೂ ಮಗಳು ಹುಬ್ಬಳ್ಳಿಯ  ಮನೆಯಲ್ಲಿದ್ದವರು ಅತ್ತಿಗೆಯ ಜೊತೆಗೆ ಮನಸ್ತಾಪ ಮಾಡಿಕೊಂಡು ಅವಳ ಸ್ವಂತ ಊರಾದ ಚಿಕ್ಕಮಗಳೂರಿಗೆ ಹೋದವರು ನಂತರ ಪತಿ ದೇಸಾಯಿಯನ್ನು ದೂರ ಮಾಡಿದ್ದರು.

          1999ನೇ ಇಸವಿಯಲ್ಲಿ ವಿ.ಆರ್.ಎಲ್. ಕಚೇರಿಯ ಕೆಲಸವನ್ನು ಬಿಟ್ಟ ದೇಸಾಯಿ, ಸ್ವಂತ ಊರಾದ ಹುಬ್ಬಳ್ಳಿಗೆ ಹೋಗಿದ್ದು, ಅಲ್ಲಿಂದ ಕೊಡಗು ಜಿಲ್ಲೆಯ ವಿರಾಜಪೇಟೆಯ ಮತ್ತೂರು ಎಂಬಲ್ಲಿ ಶ್ರೀನಿವಾಸ ಕಾಫಿ ಎಸ್ಟೇಟ್ ನಲ್ಲಿ ರೈಟರ್ ಆಗಿ ಕೆಲಸಕ್ಕೆ ಸೇರಿದ್ದಾನೆ.  2000ನೇ ಇಸವಿಯಲ್ಲಿ ಅಲ್ಲಿಂದ ಕೆಲಸ ಬಿಟ್ಟು ಮಂಗಳೂರಿಗೆ ಬಂದು ಬಾಡಿಗೆ ರಿಕ್ಷಾ ಚಲಾಯಿಸಿಕೊಂಡಿದ್ದ. ಈ ಸಮಯದಲ್ಲಿ ಮಂಗಳೂರಿನ ಶಕ್ತಿನಗರದ ಕಾರ್ಮಿಕ ಕಾಲೊನಿಯಲ್ಲಿ ಪೊಲೀಸ್ ಕೃಷ್ಣಪ್ಪ ಎಂಬವರ ಮನೆಯಲ್ಲಿ ಬಾಡಿಗೆ ಮನೆಮಾಡಿಕೊಂಡಿದ್ದ. 2003 ನೇ ಇಸವಿಯಲ್ಲಿ ಮಂಗಳೂರಿನ ಬೆಂದೂರ್ ವೆಲ್ ನ ಕೊಲಾಸೋ ಆಸ್ಪತ್ರೆಯ ಮಾಲಕರಾದ ಮಥಾಯಿಸ್ ಪ್ರಭು ಅವರ ಕಾರಿನ ಚಾಲಕನಾಗಿ ಸುಮಾರು 6 ತಿಂಗಳುಗಳ ಸಮಯ ಕೆಲಸ ಮಾಡಿಕೊಂಡಿದ್ದ ಎಂದು ಶಶಿಕುಮಾರ್ ತಿಳಿಸಿದರು.

          ನಂತರ 2006 ನೇ ಇಸವಿಯಲ್ಲಿ ತಲಪಾಡಿ ಕೆ.ಸಿ. ರೋಡ್ ಬಳಿ ಅಂತೋನಿ ರಾಜ್ ಎಂಬವರ ಮನೆಯನ್ನು ಖರೀದಿ ಮಾಡಿದ್ದು, ಪ್ರಸ್ತುತ ಇದೇ ಮನೆಯಲ್ಲಿ ಒಬ್ಬಂಟಿಯಾಗಿ ವಾಸಮಾಡಿಕೊಂಡಿದ್ದಾನೆ. ಸರಿಯಾದ ಕೆಲಸವಿಲ್ಲದೆ ಗುಜಿರಿ ಪೇಪರ್ ಬಾಕ್ಸ್ ಗಳನ್ನು ಮಾರಿಕೊಂಡು ಒಬ್ಬಂಟಿಯಾಗಿ ಜೀವನ ನಡೆಸುತ್ತಿರುವುದು ವಿಚಾರಣೆಯಿಂದ ತಿಳಿದುಬಂದಿದೆ ಎಂದು ಆಯುಕ್ತರು ಮಾಹಿತಿ ನೀಡಿದರು.

ಕೃತ್ಯದ ಬಗ್ಗೆ ಪಶ್ಚಾತ್ತಾಪವಿಲ್ಲ ಎಂದ ಆರೋಪಿ

ಬೈಬಲ್ ನಲ್ಲಿ ಜಗತ್ತಿನ ಅಂತ್ಯದ ಬಗ್ಗೆ ವಿವರಿಸಿದೆ. ದೇವರು ದುರಾತ್ಮಗಳನ್ನು ಹೊರ ತಳ್ಳಿದ್ದಾನೆ. ಅದನ್ನು ಅನಾದಿ ಕಾಲದಿಂದ ಭೂಮಿಯಲ್ಲಿ ಆರಾಧಿಸಲಾಗುತ್ತಿದೆ. ಜಗತ್ತಿನ ಅಂತ್ಯದ ಸಮಯಕ್ಕೆ ಮುಕ್ತಿ ಹೊಂದಬೇಕಾದರೆ ಏಸುನನ್ನು ಆರಾಧಿಸಬೇಕು. ಹಾಗಾಗಿ ಅಶುದ್ಧಿಯ ತಾಣಗಳಿಗೆ ಅಶುದ್ಧಿಯೇ ಕಾಣಿಕೆಯಾಗಿದೆ. ಆದ್ದರಿಂದ ಅಲ್ಲಲ್ಲಿ ಸಿಕ್ಕ ಬಳಸಿದ ಕಾಂಡೋಮ್ ಹಾಕುತ್ತಿದ್ದೆ ಎಂದು ಆರೋಪಿ ತನ್ನ ಕೃತ್ಯದ ಬಗ್ಗೆ ವಿವರಿಸಿದ್ದಾನೆ.

ನಾನು ಮಾಡಿರುವ ಕೃತ್ಯದ ಬಗ್ಗೆ ಪಶ್ಚಾತ್ತಾಪವಿಲ್ಲ. ಹಿಂದೆ ಬರಹದ ಮೂಲಕ ಧರ್ಮ ಪ್ರಚಾರ ಮಾಡುತ್ತಿದ್ದೆ. ಈಗ ಕಾಂಡೋಮ್ ಮೂಲಕ ಮೂರ್ತಿಗಳನ್ನು ಅವಮಾನಿಸುತ್ತಿದ್ದೇನೆ. ದೇವರು ದುರಾತ್ಮಗಳನ್ನು ಅವಮಾನಿಸಲೆಂದೇ ಕಾಂಡೋಮ್ ಹಾಕಿದ್ದೇನೆ. ಬೈಬಲ್ ನಲ್ಲಿ ಏಸು ಕ್ರಿಸ್ತ ಈ ಕುರಿತು ವಿವರಿಸಿದ್ದಾನೆ ಎಂದು ಆರೋಪಿ ದೇವದಾಸ ದೇಸಾಯಿ ಸ್ಫೋಟಕ ಹೇಳಿಕೆ ನೀಡಿದ್ದಾನೆ.



Join Whatsapp