ಬೆಥ್ಲೆಹೆಮ್: ಗಾಝಾ ನಾಗರಿಕರ ಹತ್ಯಾಕಾಂಡವನ್ನು ಖಂಡಿಸಿ ಯೇಸುಕ್ರಿಸ್ತನ ಜನ್ಮಸ್ಥಳ ಬೆಥ್ಲೆಹೆಮ್‌ನಲ್ಲಿ ಈ ವರ್ಷ ಸಾಂಪ್ರಾದಾಯಿಕ ಕ್ರಿಸ್ಮಸ್ ಆಚರಣೆ ರದ್ದುಗೊಳಿಸಲಾಗಿದೆ. ಪ್ರತಿ ವರ್ಷ ಕ್ರಿಸ್ಮಸ್‌ಗೆ ತಿಂಗಳ ಮೊದಲೇ ಭಾರೀ ತಯಾರಿಯೊಂದಿಗೆ ಕ್ರಿಸ್ಮಸ್‌ಗೆ ಸಜ್ಜಾಗುತ್ತಿದ್ದ ಬೆಥ್ಲೆಹೆಮ್ ನೀರವ ಮೌನದಲ್ಲಿದೆ. ಪ್ರತಿವರ್ಷ ಬೆಥ್ಲೆಹೆಮ್‌ನ ಮ್ಯಾಂಗರ್ ಲ್ಲಿರುವ ಸ್ಕ್ವೇರ್‌ನಲ್ಲಿನ ಎತ್ತರದ ಕ್ರಿಸ್ಮಸ್ ಮರದ ಫೋಟೋ ಸೆರೆ ಹಿಡಿಯಲು ಜಗತ್ತಿನ ಮೂಲೆ ಮೂಲೆಗಳಿಂದ ಸಾವಿರಾರು ಜನರು ಕ್ಯಾಮರಾ ಹಿಡಿದು ನಿಲ್ಲುತ್ತಿದ್ದರು. ಮಧ್ಯರಾತ್ರಿಯ ಪ್ರಾರ್ಥನೆಗೆ ಭಾರೀ ಸಂಖ್ಯೆಯಲ್ಲಿ ಜನರು ಸೇರುತ್ತಿದ್ದರು. ಆದರೆ ಈ ಬಾರಿ ಮೆರವಣಿ, ಬ್ಯಾಂಡ್, ಸಂಗೀತ, ದೀಪಾಲಂಕಾರ, ಮಾರುಕಟ್ಟೆ ಯಾವುದೂ ಇಲ್ಲ. ಮಕ್ಕಳಿಗೆ ಸಿಹಿ ಹಂಚುವ ಸಂತಸವೇ ಇಲ್ಲ ಎಂದು ವಾಶಿಂಗ್ಟನ್ ಪೋಸ್ಟ್ ವರದಿ ತಿಳಿಸಿದೆ.ಈ ಬಾರಿ ಬೆಥ್ಲೆಹೆಮ್‌ನಲ್ಲಿ ಸಾಂಕೇತಿಕವಾಗಿ ಮೂಲ ಚರ್ಚೊಂದಕ್ಕೆ ಮಾತ್ರ ಸರಳವಾದ ಅಲಂಕಾರ ಮಾಡಲಾಗಿದೆ. ಗಾಝಾದ ಧ್ವಂಸಗೊಂಡ ಕಟ್ಟಡಗಳು ಮತ್ತು ಇಸ್ರೇಲ್ ದಾಳಿಗೆ ಬಲಿಯಾದ ಪುಟ್ಟ ಕಂದಮ್ಮಗಳನ್ನು ಸ್ಮರಿಸಿ ಕಟ್ಟದ ಅವೇಶಗಳ ಮೇಲೆ ಬಾಲ ಏಸುವನ್ನು ಇಡಲಾಗಿದೆ.ಬೆಥ್ಲೆಹೆಮ್ ನೇಟಿವಿಟಿ ಚರ್ಚ್ ನ ಫಾದರ್ ಈಸಾ ಥಲ್ಜಿಯಾ ಕ್ರಿಸ್ಮಸ್ ಸಂದೇಶ ತಿಳಿಸುತ್ತಾ ಗಾಝಾದ ಕ್ರಿಸ್ಮಸ್ ಆಚರಣೆಯ ರದ್ದತಿ ಕುರಿತು ಮಾತನಾಡಿದ್ದಾರೆ. ಕೋವಿಡ್ ಸಾಂಕ್ರಾಮಿಕದ ಸಂದರ್ಭದಲ್ಲೂ ಈ ರೀತಿಯ ಕ್ರಿಸ್ಮಸ್ ಆಚರಿಸಿಲ್ಲ. ಗಾಝಾದಲ್ಲಿವವರು ನಮ್ಮ ಸೋದರರು ಮತ್ತು ಸೋದರಿಯರು. ಅವರು ಸಂಕಷ್ಟದಲ್ಲಿರುವಾಗ ನಾವು ಅದ್ದೂರಿ ಕ್ರಿಸ್ಮಸ್ ಆಚರಿಸಲು ಕಷ್ಟವಾಗುತ್ತದೆ. ಆದರೆ, ಪ್ರಾರ್ಥನೆಯಲ್ಲಿ ಒಂದಾಗಿರುವುದು ಒಳ್ಳೆಯದು. ನಾವು ಅವರಿಗಾಗಿ ಪ್ರಾರ್ಥಿಸುತ್ತೇವೆ ಎಂದು ಅವರು ಹೇಳಿದ್ದಾರೆ.ಬೆಥ್ಲೆಹೆಮ್ ಮಾತ್ರವಲ್ಲದೆ ಜೆರುಸಲೇಂ, ಜೋರ್ಡಾನ್‌ನಲ್ಲಿಯೂ ಕ್ರಿಸ್ಮಸ್ ಸಂಭ್ರಮಾಚರಣೆ ರದ್ದುಗೊಳಿಸಲಾಗಿದೆ ಎಂದು ಕ್ರಿಸ್ತಿಯಾನಿಟಿ ಟುಡೇ ವರದಿ ಮಾಡಿದೆ.