ಮಂಗಳೂರು: ನಗರದ ಕಂಕನಾಡಿ ಮಸೀದಿ ಪಕ್ಕದ ಒಳ ರಸ್ತೆಯ ಬದಿಯಲ್ಲಿ ಕಳೆದ ಶುಕ್ರವಾರ ನಮಾಝ್ ನಿರ್ವಹಿಸಿರುವ ವಿರುದ್ಧ ಪೊಲೀಸರು ದಾಖಲಿಸಿದ್ದ ಸ್ವಯಂಪ್ರೇರಿತ ಪ್ರಕರಣವನ್ನು ವಾಪಸ್ ಪಡೆದಿದ್ದು, ಸುಮೋಟೊ ಪ್ರಕರಣ ದಾಖಲಿಸಿದ ಕದ್ರಿ ಪೊಲೀಸ್ ನಿರೀಕ್ಷಕರನ್ನು ಕಡ್ಡಾಯ ರಜೆಯಲ್ಲಿ ಕಳುಹಿಸಲಾಗಿದೆ. ಈ ಮಧ್ಯೆ ಸಂಘಪರಿವಾರದ ಮುಖಂಡ ಶರಣ್ ಪಂಪ್‌ವೆಲ್ ವಿರುದ್ಧ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ.
ರಸ್ತೆಯಲ್ಲಿ ನಮಾಝ್ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಚಾರಕ್ಕೆ ಅಡೆತಡೆ ಮಾಡುವ ಯಾವುದೇ ಉದ್ದೇಶ ಇಲ್ಲದಿರುವುದರಿಂದ ಸದ್ರಿ ಪ್ರಕರಣದಲ್ಲಿ ‘ಬಿ’ ಅಂತಿಮ ವರದಿ ಸಲ್ಲಿಸಲಾಗಿದೆ ಮತ್ತು ಹಿರಿಯ ಅಧಿಕಾರಿಗಳಿಗೆ ಯಾವುದೇ ಮಾಹಿತಿಯನ್ನು ನೀಡದೆ ಸುಮೋಟೊ ಪ್ರಕರಣ ದಾಖಲಿಸಿದ ಕದ್ರಿ ಪೊಲೀಸ್ ನಿರೀಕ್ಷಕರನ್ನು ಕಡ್ಡಾಯ ರಜೆಯಲ್ಲಿ ಕಳುಹಿಸಿ ಎ.ಸಿ.ಪಿ ದರ್ಜೆಯ ಅಧಿಕಾರಿಯನ್ನು ವಿಚಾರಣೆಗೆ ನೇಮಕ ಮಾಡಲಾಗಿದೆ ಎಂದು ಮಂಗಳೂರು ನಗರ ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್ ತಿಳಿಸಿದ್ದಾರೆ.
ಕಳೆದ ಶುಕ್ರವಾರ ಮಸೀದಿ ಪಕ್ಕದ ಒಳ ರಸ್ತೆಯ ಬದಿಯಲ್ಲಿ ನಮಾಝ್ ನಿರ್ವಹಿಸಿರುವ ವಿಡಿಯೋ ವೈರಲ್ ಮಾಡಲಾಗಿತ್ತು. ಸಂಘಪರಿವಾರ ಭಾರೀ ಆಕ್ಷೇಪ ವ್ಯಕ್ತಪಡಿಸಿತ್ತು. ಬಳಿಕ ಪೊಲೀಸರು ಸುಮೋಟೊ ಪ್ರಕರಣ (ಐಪಿಸಿ ಸೆಕ್ಷನ್ 341, 283, 143 ಜೊತೆಗೆ 149 ಸೆಕ್ಷನ್) ದಾಖಲಿಸಿಕೊಂಡಿದ್ದರು. ರಸ್ತೆ ಬಂದ್ ಮಾಡಿ ಇತರ ಧರ್ಮೀಯರು ಕಾರ್ಯಕ್ರಮ ಮಾಡುವಾಗ ಮೌನವಾಗಿದ್ದ ಪೊಲೀಸರು, ಕೆಲವೇ ಮಂದಿ ಐದು ನಿಮಿಷದ ನಮಾಝ್ ಮಾಡಿದ್ದಕ್ಕೆ ಸುಮೋಟೋ ಕೇಸು ದಾಖಲಿಸಿಕೊಂಡ ಕ್ರಮಕ್ಕೆ ಮುಸ್ಲಿಮ್ ಸಮುದಾಯ ಆಕ್ರೋಶ ವ್ಯಕ್ತಪಡಿಸಿತ್ತು.