ನವದೆಹಲಿ: 1947 ರಲ್ಲಿ ಭಾರತಕ್ಕೆ ಲಭಿಸಿದ್ದು ಕೇವಲ ಭಿಕ್ಕೆ, ವಾಸ್ತವದ ಸ್ವಾತಂತ್ರ್ಯ 2014 ರಲ್ಲಿ ಲಭಿಸಿತ್ತು ಎಂಬ ಕಂಗನಾ ಅವರ ವಿವಾದಾತ್ಮಕ ಹೇಳಿಕೆಯ ವಿರುದ್ಧ ಅಂಡಮಾನ್ ಮತ್ತು ನಿಕೋಬಾರ್ ಕಾಂಗ್ರೆಸ್ ಘಟಕ ದೂರು ದಾಖಲಿಸಿದೆ.
ಅಂಡಮಾನ್ ಮತ್ತು ನಿಕೋಬಾರ್ ಪ್ರದೇಶ ಕಾಂಗ್ರೆಸ್ ಸಮಿತಿಯ ಮಹಿಳಾ ವಿಭಾಗದ ಸಂಯೋಜಕಿ ಝುಬೈದಾ ಬೇಗಂ, ಪೋರ್ಟ್ ಬ್ಲೇರ್ ಅಬರ್ಡಿನ್ ಪೊಲೀಸ್ ಠಾಣೆಯಲ್ಲಿ ಬುಧವಾರ ಲಿಖಿತ ದೂರು ದಾಖಲಿಸಿದ್ದಾರೆ.
ಬಾಲಿವುಡ್ ನಟಿಯ ಭಾರತದ ಸ್ವಾತಂತ್ರ್ಯದ ವಿರುದ್ಧದ ಹೇಳಿಕೆಯು ಸಂಪೂರ್ಣ ಆಘಾತಕಾರಿ ಮತ್ತು ಆಕ್ಷೇಪಾರ್ಹ ಅಂಶಗಳನ್ನು ಒಳಗೊಂಡಿದೆ. ಅವರ ಈ ರೀತಿಯ ಹೇಳಿಕೆಯು ಸಭ್ಯತೆ, ಘನತೆ ಮತ್ತು ಸಜ್ಜನ ನಡತೆಯ ವಿರುದ್ಧವಾಗಿದೆ. ದೇಶದ ಅತ್ಯುತ್ತಮ ಪ್ರಶಸ್ತಿ ಪುರಸ್ಕೃತೆಯಿಂದ ಇದನ್ನು ನಿರೀಕ್ಷಿಸುವುದು ಅಸಾಧ್ಯ ಎಂದು ಅಂಡಮಾನ್ ಮತ್ತು ನಿಕೋಬಾರ್ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ರಂಗಲಾಲ್ ಹಲ್ದರ್ ತಿಳಿಸಿದ್ದಾರೆ.
ಮಾತ್ರವಲ್ಲ ಕಂಗನಾ ಅವರ ಹೇಳಿಕೆಯು ದೇಶದ್ರೋಹ ಎಂದು ಬಣ್ಣಿಸಿದ ಕಾಂಗ್ರೆಸ್, ಆಕೆ ಸ್ವಾತಂತ್ರ್ಯ ಸಂಗ್ರಾಮವನ್ನು ಅವಮಾನಿಸಿದ್ದಾರೆ. ಈ ನಿಟ್ಟಿನಲ್ಲಿ ಆಕೆಗೆ ನೀಡಿದ ಪದ್ಮಶ್ರೀ ಪ್ರಶಸ್ತಿಯನ್ನು ಸರ್ಕಾರ ಹಿಂಪಡೆಯ ಬೇಕೆಂದು ಕಾಂಗ್ರೆಸ್, ಸರ್ಕಾರವನ್ನು ಒತ್ತಾಯಿಸಿದೆ.