ಮುಂಬೈ: ಬಾಲಿವುಡ್ ನಟ ರಣವೀರ್ ಸಿಂಗ್ ಇತ್ತೀಚೆಗೆ ಸಂಪೂರ್ಣ ಬೆತ್ತಲಾಗಿ ಫೋಟೋಶೂಟ್ ಮಾಡಿಸಿಕೊಂಡು ಟ್ರೋಲ್ ಪೇಜುಗಳಿಗೆ ಆಹಾರವಾಗಿದ್ದರು.
ಅದಾಗ್ಯೂ ಹಲವರು ರಣವೀರ್ ಸಿಂಗನ್ನು ಅಮೆರಿಕ ನಟ ಬುರ್ಟ್ ರೆನಾಲ್ಡ್‌ಗೆ ಹೋಲಿಸಿದರೆ, ಮತ್ತೆ ಕೆಲವರು ಭಾರತದ ಬುರ್ಟ್ ಎಂದು ಹೇಳಿದ್ದರು. ರಣವೀರ್ ಧೈರ್ಯ ಮೆಚ್ಚಲೇಬೇಕು, ರಣವೀರ್‌ಗಿಂತ ಪತ್ನಿ ದೀಪಿಕಾ ಪಡುಕೋಣೆ ಧೈರ್ಯಕ್ಕೆ ಸಲಾಂ ಎಂದು ಇನ್ನು ಕೆಲವರು ಪ್ರತಿಕ್ರಿಯಿಸಿದ್ದರು.
ದೇಶ ವಿದೇಶಗಳಲ್ಲಿ ಭಾರಿ ಸಂಚಲನ ಸೃಷ್ಟಿಸಿದ, ಫೋಟೋಶೂಟ್‌ಗಾಗಿ ಬೆತ್ತಲಾಗಿರುವ ರಣವೀರ್ ಸಿಂಗ್ ವಿರುದ್ಧ ಇದೀಗ ದೂರು ದಾಖಲಾಗಿದೆ. ಮುಂಬೈ ಪೊಲೀಸ್ ಠಾಣೆಯಲ್ಲಿ ರಣವೀರ್ ವಿರುದ್ಧ ದೂರು ದಾಖಲಿಸಿದ್ದಾರೆ.
ರಣವೀರ್ ಬೆತ್ತಲಾಗುವ ಮೂಲಕ ಮಹಿಳೆಯರ ಭಾವನೆಗೆ ದಕ್ಕೆ ತಂದಿದ್ದಾರೆ ಎಂದು ದೂರು ದಾಖಲಾಗಿದೆ. ಇಷ್ಟು ದಿನ ಪರ ವಿರೋಧ ಎದುರಿಸಿದ ರಣವೀರ್ ಸಿಂಗ್ ಇದೀಗ ಕಾನೂನು ಹೋರಾಟ ಎದುರಿಸಬೇಕಾದ ಅನಿವಾರ್ಯತೆಗೆ ಸಿಲುಕಿದ್ದಾರೆ.
ಈ ರೀತಿ ಬೆತ್ತಲಾಗಿರುವ ಫೋಟೋಗಳಿಂದ ಮಹಿಳೆಯರಿಗೆ ಮುಜುಗರ ಮಾತ್ರವಲ್ಲ, ಭಾವನೆಗೆ ಧಕ್ಕೆಯಾಗಿದೆ. ಇದರಿಂದ ಮಕ್ಕಳ ಮನಸ್ಸಿನಲ್ಲೂ ವ್ಯತಿರಿಕ್ತ ಪರಿಣಾಮ ಬೀರಲಿದೆ ಹೀಗಾಗಿ ರಣವೀರ್ ವಿರುದ್ದ ಸೂಕ್ತ ಕ್ರಮ ಕೈಗೊಳ್ಳಬೇಕು. ಇಷ್ಟೇ ಅಲ್ಲ ಇಂತಹ ಘಟನೆಗಳು, ಬೆತ್ತಲಾಗುವ ಮಾದರಿಗಳು ಯಾರಿಗೂ ಮಾದರಿಯಾಗಬಾರದು. ಘಟನೆಗಳು ಮರುಕಳಿಸಬಾರದು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.