ಬೆಂಗಳೂರು: ಕರ್ನಾಟಕ ಉಚ್ಚನ್ಯಾಯಾಲಯದ ಕಲಾಪದ ದೃಶ್ಯವನ್ನು ಕಾನೂನುಬಾಹಿರವಾಗಿ ನಕಲು ಮಾಡಿಕೊಂಡು, ಆ ವಿಡಿಯೋವನ್ನು ತನ್ನ ರಾಜಕೀಯ ಹಿತಾಸಕ್ತಿಗಾಗಿ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿ ಕಾಂಗ್ರೆಸ್ ಹಿರಿಯ ನಾಯಕ ರಾಹುಲ್ ಗಾಂಧಿಯವರ ವಿರುದ್ಧ ಬೆಂಗಳೂರು ನಗರ ಪೊಲೀಸ್ ಆಯುಕ್ತರಿಗೆ ದೂರು ಸಲ್ಲಿಸಲಾಗಿದೆ.
ಕರ್ನಾಟಕ ಉಚ್ಚ ನ್ಯಾಯಾಲಯದಲ್ಲಿ ಕೋರ್ಟ್ ಕಲಾಪದ ವೇಳೆಯಲ್ಲಿ ಇತ್ತೀಚೆಗೆ ಪ್ರಕರಣವೊಂದರ ವಾದ ನಡೆಯುವಾಗ ನ್ಯಾಯಮೂರ್ತಿಗಳು ಭ್ರಷ್ಟಾಚಾರ ವಿರುದ್ಧವಾಗಿ ಮಾತುಗಳನ್ನಾಡಿದ್ದರು. ರಾಹುಲ್ ಗಾಂಧಿಯವರು ಈ ಕೋರ್ಟ್ ಕಲಾಪದ ವಿಡಿಯೋ ನಕಲು ಮಾಡಿ ಅದನ್ನು ರಾಜಕೀಯ ದುರುದ್ದೇಶಕ್ಕೆ ಬಳಸಿಕೊಂಡಿರುವುದು ಕಾನೂನುಬಾಹಿರ ಮತ್ತು ಶಿಕ್ಷಾರ್ಹವು ಆಗಿರುತ್ತದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಈ ಬಗ್ಗೆ ಬೆಂಗಳೂರಿನ ವಕೀಲರಾದ ಎ.ಶ್ರೇಯಸ್ ಎಂಭವರು ಬೆಂಗಳೂರು ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದಾರೆ. ಈ ಬಗ್ಗೆ ರಾಹುಲ್ ಗಾಂಧಿಯವರ ವಿರುದ್ಧ ನ್ಯಾಯಾಲಯದ ಕ್ರಿಮಿನಲ್ ನಿಂದನೆ (ಕ್ರಿಮಿನಲ್ ಕಂಟೆಮ್ಟ್) ಅಪರಾಧದ ಅಡಿಯಲ್ಲಿ ಸೂಕ್ತ ಕ್ರಮಕ್ಕಾಗಿ ಕರ್ನಾಟಕ ಹೈಕೋರ್ಟಿನ ಮುಖ್ಯ ನ್ಯಾಯಾದೀಶರಿಗೆ ಮತ್ತು ಹೈಕೋರ್ಟಿನ ರಿಜಿಸ್ಟ್ರಾರ್ ಜನರಲ್ ಅವರಿಗೂ ದೂರು ಸಲ್ಲಿಸಲಾಗಿದೆ ಎಂದು ಬಿಜೆಪಿ ಕಾನೂನು ಪ್ರಕೋಷ್ಠದ ಸಂಚಾಲಕ ಯೋಗೇಂದ್ರ ಹೊಡಘಟ್ಟ ತಿಳಿಸಿದ್ದಾರೆ.