ಕೋಮು ಪ್ರಚೋದಕ ಶರಣ್ ಪಂಪ್ ವೆಲ್’ನನ್ನು ಬಂಧಿಸಿ: ಜಾತ್ಯತೀತ ಪಕ್ಷಗಳು ಹಾಗೂ ಸಂಘಟನೆಗಳ ಜಂಟಿ ವೇದಿಕೆಯಿಂದ ಸಚಿವರಿಗೆ ಮನವಿ

Prasthutha|

ಮಂಗಳೂರು: ಮಂಗಳಾ ದೇವಿ ದೇವಸ್ಥಾನದ ದಸರಾ ಜಾತ್ರೆಯಲ್ಲಿ ಹಿಂದು ವ್ಯಾಪಾರಸ್ಥರ ಮಳಿಗೆಗಳಿಗೆ ಬಲವಂತದಿಂದ ಕೇಸರಿ ಬಾವುಟ ಕಟ್ಟಿ, “ಮುಸ್ಲಿಂ ವ್ಯಾಪಾರಿಗಳಲ್ಲಿ ಹಿಂದುಗಳು ವ್ಯಾಪಾರ ನಡೆಸಬಾರದು” ಬಹಿರಂಗವಾಗಿ ಕರೆ ನೀಡಿರುವ ಬಜರಂಗ ದಳದ ಶರಣ್ ಪಂಪ್ ವೆಲ್ ಮತ್ತು ಗ್ಯಾಂಗನ್ನು ಕೋಮು ಪ್ರಚೋದಕ ಕಠಿಣ ಸೆಕ್ಷನ್ ಗಳಡಿ ಬಂಧಿಸಿ ಕಾನೂನು ಪ್ರಕಾರ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರಿಗೆ ಇಂದು ದ ಕ ಜಿಲ್ಲಾ ಜಾತ್ಯಾತೀತ ಪಕ್ಷಗಳು ಹಾಗೂ ಸಮಾನ ಮನಸ್ಕ ಸಂಘಟನೆಗಳ ಜಂಟಿ ವೇದಿಕೆಯ ವತಿಯಿಂದ ಮನವಿ ಸಲ್ಲಿಸಲಾಯಿತು.

- Advertisement -


ಜಾತ್ರೆ ವ್ಯಾಪಾರಿಗಳು, ಬೀದಿ ಬದಿ ವ್ಯಾಪಾರಸ್ಥರಿಗೆ ಸೂಕ್ತ ರಕ್ಷಣೆ ಒದಗಿಸಬೇಕು ಎಂದು ಆಗ್ರಹಿಸಲಾಯಿತು. ಬೀದಿ ಬದಿ ವ್ಯಾಪಾರಿಗಳಿಗೆ ಗುರುತಿನ ಕಾರ್ಡ್ ವಿತರಣೆಯನ್ನು ಈ ತಿಂಗಳಾತ್ಯದ ಒಳಗಡೆ ಒದಗಿಸಿ ಸಮಸ್ಯೆ ಬಗೆಹರಿಸಲು ಕೇಳಿಕೊಳ್ಳಲಾಯಿತು.

ನಿಯೋಗದಲ್ಲಿ ಜಂಟಿ ವೇದಿಕೆಯ ಕಾರ್ಯದರ್ಶಿ ಮುನೀರ್ ಕಾಟಿಪಳ್ಳ, ಸಿಪಿಐಎಂ ಜಿಲ್ಲಾ ಕಾರ್ಯದರ್ಶಿ ಕೆ ಯಾದವ ಶೆಟ್ಟಿ, ಸಿಪಿಐ ಜಿಲ್ಲಾ ಕಾರ್ಯದರ್ಶಿ ಬಿ ಶೇಖರ್, ದಲಿತ ಸಂಘರ್ಷ ಸಮಿತಿಯ ಎಂ ದೇವದಾಸ್, ರಘು ಕೆ ಎಕ್ಕಾರು, ಸಾಮಾಜಿಕ ಕಾರ್ಯಕರ್ತರಾದ ಎಂ ಜಿ ಹೆಗ್ಡೆ, ಯಾಸೀನ್ ಕುದ್ರೋಳಿ, ದ. ಕ, ಉಡುಪಿ ಜಿಲ್ಲಾ ಜಾತ್ರೆ ವ್ಯಾಪಾರಸ್ಥರ ಸಂಘದ ಗೌರವಾಧ್ಯಕ್ಷ ಸುನಿಲ್ ಕುಮಾರ್ ಬಜಾಲ್, ಬೀದಿ ಬದಿ ವ್ಯಾಪಾರಸ್ಥರ ಶ್ರೇಯೋಭಿವೃದ್ದಿ ಸಂಘದ ಗೌರವಾಧ್ಯಕ್ಷ ಬಿ ಕೆ ಇಮ್ತಿಯಾಜ್, ಪದಾಧಿಕಾರಿಗಳಾದ ಮುಸ್ತಫಾ, ಶ್ರೀನಿವಾಸ್, ಹಿರಿಯ ಕಾರ್ಮಿಕ ನಾಯಕರಾದ ವಿ ಕುಕ್ಯಾನ್, ಕರುಣಾಕರ ಮಾರಿಪಳ್ಳ, ಡಿವೈಎಫ್ಐ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್, ಸಾಮರಸ್ಯ ಮಂಗಳೂರು ಇದರ ಮಂಜುಳಾ ನಾಯಕ್, ಸಮರ್ಥ್ ಭಟ್ ಸಹಿತ ಹಲವು ಪ್ರಮುಖರು ಉಪಸ್ಥಿತರಿದ್ದರು.