►► ಗಲಭೆಯ ಸಂಚು ಇರಲಿಲ್ಲ ಎಂದು ಸ್ಪಷ್ಟನೆ ಕೊಟ್ಟರೂ ಬಾಯಿಗೆ ಬಂದಂತೆ ಸುದ್ದಿ ಬರೆಯುತ್ತೀರಿ ಎಂದು ಪಬ್ಲಿಕ್ ಟಿವಿ ವರದಿಗಾರನನ್ನು ತರಾಟೆಗೆ ತೆಗೆದುಕೊಂಡ ಡಿಸಿಪಿ
ಬೆಂಗಳೂರು: ಬೆಂಗಳೂರಿನಲ್ಲಿ ಕೋಮು ಗಲಭೆ ಸೃಷ್ಟಿಸುವ ಯತ್ನ ನಡೆದಿದೆ ಎಂದು ಬಹುತೇಕ ಕನ್ನಡ ಮಾಧ್ಯಮಗಳು ಇಂದು ಬೆಳಗ್ಗೆಯಿಂದ ಸುದ್ದಿ ಪ್ರಸಾರ ಮಾಡುತ್ತಿದೆ. ಈ ನಡುವೆ ಮಾದ್ಯಮಗಳ ವದಂತಿಗೆ ಬೆಂಗಳೂರು ಪೂರ್ವ ವಿಭಾಗ ಡಿಸಿಪಿ ಡಾ. ಭೀಮಾಶಂಕರ್ ಗುಳೇದ್ ತೆರೆ ಎಳೆದಿದ್ದು, ಗಲಭೆಯ ಸುದ್ದಿ ಸಂಪೂರ್ಣ ಸುಳ್ಳು ಎಂದು ಸ್ಪಷ್ಟನೆ ನೀಡಿದ್ದಾರೆ.
ಮಾದ್ಯಮಗಳೊಂದಿಗೆ ಮಾತನಾಡಿದ ಅವರು, ಮಾದ್ಯಮಗಳಲ್ಲಿ ಇಂದು ಬೆಳಗ್ಗೆಯಿಂದ ‘ಕೊಲೆಗೆ ಸಂಚು ಮಾಡಿದ್ದಾರೆ ಮತ್ತು ಯಾವುದೋ ದೇವಸ್ತಾನವನ್ನು ಧ್ವಂಸ ನಡೆಸಲು ಸಂಚು ರೂಪಿಸಿದ್ದಾರೆ ಎಂಬ ಸುದ್ದಿ ಬರುತ್ತಿದೆ, ವೈಯಕ್ತಿಕ ದ್ವೇಷದ ವಿಚಾರವನ್ನು ತಿರುಚಲಾಗಿದೆ. ಅಲ್ಲದೇ ಇದಕ್ಕೂ ಅದಕ್ಕೂ ಯಾವುದೇ ಸಂಬಂಧವಿಲ್ಲ, ಯಾವುದೇ ಹಿಂದೂ ಮುಖಂಡನನ್ನು ಟಾರ್ಗೆಟ್ ಮಾಡಿರಲಿಲ್ಲ, ಸಾರಾಯಿ ಪಾಳ್ಯದಲ್ಲಿ ಗಲಭೆ ಸೃಷ್ಟಿಸುವ ಯತ್ನ ಇರಲಿಲ್ಲ’ ಎಂದು ತಿಳಿಸಿದ್ದಾರೆ
ಅಝೀಮುಲ್ಲಾ ಎಂಬವರು ಫಯಾಝ್ ಉಲ್ಲಾ ಎಂಬವರ ಮನೆಯನ್ನು 35 ಲಕ್ಷಕ್ಕೆ ಮಾರಾಟ ಮಾಡಿಸಿದ್ದ. ಆದರೆ ಮಾರಾಟದ ಬಳಿಕ ಫಯಾಝ್ 40 ಲಕ್ಷ ಹಣಕ್ಕೆ ಬೇಡಿಕೆ ಇಟ್ಟಿದ್ದಾನೆ. ಇದರಿಂದ ಇಬ್ಬರಲ್ಲೂ ದ್ವೇಷ ಉಂಟಾಗಿ ಫಯಾಝ್ ಸಂಚು ರೂಪಿಸಿ ಅಝೀಮುಲ್ಲಾನನ್ನು ಸಿಲುಕಿಸಲು ಯತ್ನಿಸಿದ್ದಾನೆ. ಈ ಪ್ರಕರಣ ವೈಯಕ್ತಿಕ ದ್ವೇಷದ್ದಾಗಿದೆ, ಹೊರತು ಇದರಲ್ಲಿ ಗಲಭೆಯ ಉದ್ದೇಶವಿಲ್ಲ ಎಂದು ಡಿಸಿಪಿ ಸ್ಪಷ್ಟಪಡಿಸಿದ್ದಾರೆ.
ಕನ್ನಡದ ಕೆಲವೊಂದು ಮಾದ್ಯಮಗಳು ಇಂದು ಬೆಳ್ಳಂಬೆಳಗ್ಗೆ ‘ಬೆಂಗಳೂರಿನಲ್ಲಿ ದೇವಸ್ಥಾನ ಟಾರ್ಗೆಟ್’’ ‘ಹಿಂದೂ ನಾಯಕನ ಹತ್ಯೆ’ ಎಂಬಿತ್ಯಾದಿ ಶೀರ್ಷಿಕೆ ನೀಡಿ ಸುದ್ದಿ ಪ್ರಸಾರ ಮಾಡಿತ್ತು. ಈ ಬಗ್ಗೆ ಸ್ವತಹ ಮಾದ್ಯಮಗಳ ಸುಳ್ಸು ಸುದ್ದಿಗೆ ಬ್ರೇಕ್ ಹಾಕಿ ಸ್ಪಷ್ಟನೆ ನೀಡಿದ್ದಾರೆ.
ಸುದ್ದಿಗೋಷ್ಠಿಯಲ್ಲೇ ಈ ಬಗ್ಗೆ ಪಬ್ಲಿಕ್ ಟಿವಿಯ ಅಪರಾಧ ವಿಭಾಗದ ವರದಿಗಾರ ಮುರಳಿ ಎಂಬವರನ್ನು ತರಾಟೆಗೆ ತೆಗೆದುಕೊಂಡ ಡಿಸಿಪಿ ಭೀಮಾಶಂಕರ್ ಗುಳೇದ್, ಬೆಳಗ್ಗಿನಿಂದ ಸುಳ್ಳು ಸುದ್ದಿ ಪ್ರಸಾರ ಮಾಡುತ್ತಿದ್ದೀರಿ, ವೈಯಕ್ತಿಕ ದ್ವೇಷ ಸಾಧಿಸಲು ಈ ರೀತಿ ಮಾಡಲಾಗಿದೆ ಎಂದು ಸ್ಪಷ್ಟನೆ ಕೊಟ್ಟ ಬಳಿಕವೂ ಅಶಾಂತಿ ಸೃಷ್ಟಿಸಲು ಪ್ರಯತ್ನಿಸುತ್ತಿದ್ದೀರಿ, ಬಜನೆಗೂ ಈ ಘಟನೆಗೂ ಸಂಬಂಧವೇ ಇಲ್ಲ ಎಂದು ಹೇಳಿದರೂ ಬಾಯಿಗೆ ಬಂದಂತೆ ಸುದ್ದಿ ಪ್ರಸಾರ ಮಾಡುತ್ತಿದ್ದೀರಿ ಎಂದು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು.
ಯಾವುದೇ ಸಂಘಟನೆ ಕೈವಾಡವಿಲ್ಲ. ಇಬ್ಬರ ನಡುವಿನ ಕೃತ್ಯವಾಗಿದೆ. ಪೆಟ್ರೋಲ್ ಬಾಂಬ್ ತಯಾರಿಸಿ ಇನ್ನೊಬ್ಬನ ತಲೆಗೆ ಕಟ್ಟುವ ಯೋಜನೆ ಮಾತ್ರ ಇತ್ತು. ಅದರ ಬಳಸುವ ಉದ್ದೇಶವಿರಲಿಲ್ಲ ಎಂಬುದು ತನಿಖೆಯಿಂದ ಸಾಬೀತಾಗಿದೆ ಎಂದು ಡಿಸಿಪಿ ಸ್ಪಷ್ಟಪಡಿಸಿದರು.