ಕೋಮು ರಾಜಕಾರಣ

Prasthutha|

ಅಧಿಕಾರ ಚದುರಂಗದಾಟ, ಉರುಳುವ ತಲೆಗಳು, ಪ್ರಭುತ್ವದ ಲೆಕ್ಕಾಚಾರಗಳು

- Advertisement -


ಕರ್ನಾಟಕದ ಪಶ್ಚಿಮ ಸಮುದ್ರ ತೀರದ ಜಿಲ್ಲೆ ದಕ್ಷಿಣ ಕನ್ನಡದಲ್ಲಿ ಇತ್ತೀಚೆಗೆ ಸರಣಿ ಹತ್ಯೆ ನಡೆದವು. ಇಡೀ ಜಿಲ್ಲೆಯ ಜನ ಭಯದಿಂದ ಬೆಚ್ಚಿ ಬಿದ್ದರು. ಶಿಕ್ಷಿತರು, ಸುಸಂಸ್ಕೃತರ ಜಿಲ್ಲೆಯೆಂದೆನಿಸಿದ ದಕ್ಷಿಣ ಕನ್ನಡ ಯಾಕೆ ಇಂತಹ ಹತ್ಯಾಕಾಂಡಕ್ಕಾಗಿ ಸುದ್ದಿಯಾಗುತ್ತಿದೆ?. ಈ ಹತ್ಯೆ ಹಿಂದಿನ ಕಾರಣಗಳೇನು? ಈ ನರಮೇಧವನ್ನು ನಿಲ್ಲಿಸಲು ಯಾವ ಕ್ರಮಗಳನ್ನು ಕೈಗೊಳ್ಳಬೇಕು? ಎಂಬ ಸಹಜ ಪ್ರಶ್ನೆ ಇಡೀ ರಾಜ್ಯದ ಮನಸ್ಸಿನಲ್ಲಿ ಎದ್ದೇಳುತ್ತಿದೆ.


ಹೌದು. ಜನ ಪರಸ್ಪರ ಸ್ನೇಹ, ಸೌಹಾರ್ದತೆ, ಪ್ರೀತಿ-ವಿಶ್ವಾಸದಿಂದ ಬೆರೆತು ನೆಮ್ಮದಿಯಿಂದ ಬಾಳುವ ವಾತಾವರಣವಿದ್ದರೇನೇ ಯಾವುದೇ ಸಮಾಜ-ದೇಶ ಪ್ರಗತಿ ಹೊಂದಲು ಸಾಧ್ಯ. ಹಾಗಿರುವಲ್ಲಿ ದಕ್ಷಿಣ ಕನ್ನಡದ ಇಂತಹ ಕಲುಷಿತ -ದ್ವೇಷ ವಾತಾವರಣದ ಹಿಂದಿನ ರಹಸ್ಯ ಹಾಗೂ ಅದರ ನಿವಾರಣೆಯ ಬಗ್ಗೆ ಇಲ್ಲೊಂದು ಅವಲೋಕನ ನಡೆಸಬೇಕಾಗಿದೆ.

- Advertisement -


ಮೊತ್ತ ಮೊದಲು ಈ ವಿಷವರ್ತುಲದ ರೂಢ ಮೂಲವನ್ನು ಹುಡುಕಬೇಕಾಗಿದೆ. 1976ರಲ್ಲಿ ಕಲ್ಲಡ್ಕದ ಇಸ್ಮಾಯೀಲ್ ಎಂಬ ಕಾಂಗ್ರೆಸ್ ಮುಂಚೂಣಿ ನಾಯಕರೊಬ್ಬರ ಕೊಲೆಗೆ ಮೊದಲು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಿಂದೂ – ಮುಸ್ಲಿಮ್ ದ್ವೇಷ, ತಿಕ್ಕಾಟ ಎಂಬುದಿರಲಿಲ್ಲ. ಆರೆಸ್ಸೆಸ್ ಶಾಖೆಗಳು ಕೆಲವು ಆಯಕಟ್ಟಿನ ಪ್ರದೇಶಗಳಲ್ಲಿ ಯುವಕರಿಗೆ ‘ಹಿಂದುತ್ವ’ದ ತರಬೇತಿ ನೀಡುತ್ತಾ ಮತೀಯವಾದದ ಬೀಜಗಳನ್ನು ಬಿತ್ತಿ ದ್ವೇಷವನ್ನು ನೀರೆರೆದು ಪೋಷಿಸತೊಡಗಿತು. ಆರೆಸ್ಸೆಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್, ಇಸ್ಮಾಯೀಲ್ ಕೊಲೆ ಪ್ರಕರಣದ ಪ್ರಮುಖ ಆರೋಪಿ. ಪೊಲೀಸ್ ವೇಷಧರಿಸಿ ತನ್ನ ಸಹಚರರೊಡನೆ ಸೇರಿ ಕಲ್ಲಡ್ಕ ಇಸ್ಮಾಯೀಲ್ ರನ್ನು ಕೊಂದ ಪ್ರರಕಣದಲ್ಲಿ ಪ್ರಾಸಿಕ್ಯೂಷನ್ ನ ವೈಫಲ್ಯದ ಕಾರಣ ಪ್ರಭಾಕರ್ ಭಟ್ ಹಾಗೂ ಸಹಚರರು ಖುಲಾಸೆಗೊಂಡರು. ಈ ಘಟನೆಯೇ ದಕ್ಷಿಣ ಕನ್ನಡದ ರಕ್ತಸಿಕ್ತ ಅಧ್ಯಾಯಕ್ಕೆ ನಾಂದಿ ಹಾಡಿತು. ಅಲ್ಲಿಂದ ಪ್ರಾರಂಭಗೊಂಡ ಒಂದೊಂದು ಘಟನೆಯನ್ನು ಇಲ್ಲಿ ಮೆಲುಕು ಹಾಕುವುದಕ್ಕಿಂತ ಮುಖ್ಯವಾದ ಕೆಲವು ಪ್ರಕರಣಗಳನ್ನು ಇಲ್ಲಿ ಉಲ್ಲೇಖಿಸಲೇಬೇಕು.
1998ರಲ್ಲಿ ಸುರತ್ಕಲ್ ನಲ್ಲಿ ಪ್ರಾರಂಭ ವಾದ ಹಿಂಸಾಕಾಂಡ, ಇಡೀ ಜಿಲ್ಲೆಗೆ ವ್ಯಾಪಿಸಿತ್ತು. 9 ಮಂದಿ ಮುಸ್ಲಿಮರು ಹಾಗೂ ಇಬ್ಬರು ಹಿಂದೂ ವ್ಯಕ್ತಿಗಳ ಜೀವ ಬಲಿಯಾಗಿತ್ತು. ಮಂಗಳೂರು, ಬಂಟ್ವಾಳ ಮತ್ತಿತರ ತಾಲೂಕಿನಾದ್ಯಂತ ನಿರಂತರ 12 ದಿನಗಳ ಕಾಲ ಕರ್ಫ್ಯೂ ಜಾರಿಯಾಗಿತ್ತು. ಇಡೀ ಜಿಲ್ಲೆಯ ನೆಮ್ಮದಿಯನ್ನು ಕದಡಿ ಜನರನ್ನು ಭಯಭೀತರನ್ನಾಗಿಸಿದ ಈ ಗಲಭೆಯ ಹಿಂದಿನ ರೂವಾರಿ ಆರೆಸ್ಸೆಸ್. ಸುರತ್ಕಲ್ನ ಕಾಲೇಜೊಂದರಲ್ಲಿ ಹಿಂದೂ ವಿದ್ಯಾರ್ಥಿನಿಗೆ ಮುಸ್ಲಿಮ್ ಯುವಕನೊಬ್ಬ ಪ್ರೇಮಪತ್ರ ನೀಡಿದ ಎಂಬ ನೆಪ ಮಾಡಿಕೊಂಡು ಆರೆಸ್ಸೆಸ್ ಸದಸ್ಯರು ಮತ್ತು ಬೆಂಬಲಿತರು ಸುರತ್ಕಲ್ ನಲ್ಲಿ ಭಾರೀ ಪ್ರತಿಭಟನೆಯನ್ನು ನಡೆಸುತ್ತಾ ಮುಸ್ಲಿಮರ ಅಂಗಡಿಗಳನ್ನು ಒಂದೂ ಬಿಡದೆ ಲೂಟಿಗೈದು ಸುಟ್ಟು ಹಾಕಿದರು. ಮುಸ್ಲಿಮ್ ಮನೆಗಳಿಗೆ ನುಗ್ಗಿ ಮಹಿಳೆಯರು ವೃದ್ಧರೆನ್ನದೆ ಕಡಿದರು, ಥಳಿಸಿದರು. ಮಂಗಳೂರು ಶಹರಿನಲ್ಲಿ ರಸ್ತೆ ತಡೆ, ದಾಂಧಲೆ ಎಬ್ಬಿಸಿದರು. ಪರಿಣಾಮ ಹಿಂದೂ-ಮುಸ್ಲಿಮ್ ಗಲಭೆ ಭುಗಿಲೆದ್ದವು. ಗಲಭೆಯ ಕಾರಣವೆಂದು ಹೇಳಲಾದ ಹಿಂದೂ ಹುಡುಗಿಗೆ ಮುಸ್ಲಿಮ್ ಹುಡುಗ ನೀಡಿದ ಪ್ರೇಮ ಪತ್ರ ಪ್ರಕರಣ ಎಂಬುವುದೊಂದು ಯಾವ ನಿಟ್ಟಿನಲ್ಲೂ ಸತ್ಯವೆಂದು ಸಾಬೀತಾಗಲೇ ಇಲ್ಲ. ಅಂತೂ ಆರೆಸ್ಸೆಸ್ ಶಾಖೆಯಲ್ಲಿ ಮುಸ್ಲಿಮರು ‘ಹಿಂದೂ ಧರ್ಮನಾಶಕರು’ ಎಂಬ ದ್ವೇಷ ಪಾಠ ಬಿತ್ತಿದ ಪರಿಣಾಮವೇ ಸುರತ್ಕಲ್ ಗಲಭೆ ಎಂಬುದು ಅಲ್ಲಗಳೆಯಲಾಗದ ಸತ್ಯ.


2003 ಮೇ 13ರಂದು ಮಂಗಳೂರಿನ ಹೃದಯ ಭಾಗವಾದ ಜಿಲ್ಲಾ ಪಂಚಾಯತ್ ಕಚೇರಿ ಮುಂಭಾಗದಲ್ಲಿ ಮಂಗಳೂರು ತಾಲೂಕು ಪಂಚಾಯತ್ ಅಧ್ಯಕ್ಷ ಎಂ.ಡಿ. ಜಬ್ಬಾರ್ ರವರ ಹತ್ಯೆ ಮಾಡಲಾಗುತ್ತದೆ. ಜಬ್ಬಾರ್ ರವರ ಪತ್ನಿ ಮತ್ತು ಮಗಳ ಕಣ್ಣ ಮುಂದೆಯೇ ಹಾಡಹಗಲೇ ನಡೆದ ಈ ಭೀಕರ ಕೃತ್ಯ ಇಡೀ ಜಿಲ್ಲೆಯನ್ನೇ ಬೆಚ್ಚಿ ಬೀಳಿಸಿತ್ತು. ಕಾಂಗ್ರೆಸ್ ಪಕ್ಷದ ಉದಯೋನ್ಮುಖ ನಾಯಕರಾಗಿ ಮೂಡಿ ಬಂದಿದ್ದ ಜಬ್ಬಾರ್ ಅಂದು ಶುಕ್ರವಾರ ಜುಮಾ ನಮಾಝ್ ಗಾಗಿ ತೆರಳಲು ಕಾರನ್ನೇರಿದ್ದರು. ಕಾರಿನಲ್ಲಿ ಪತ್ನಿ ಮತ್ತು ಮಗಳಿದ್ದರು. ಅವರಿಬ್ಬರ ಮುಂದೆ ಜಬ್ಬಾರ್ ರನ್ನು ಕಾರಿನಿಂದ ಹೊರಗೆಳೆದು ಖಡ್ಗದಿಂದ ಕೊಚ್ಚಿ ಕೊಲ್ಲಲಾಗಿತ್ತು. ಪ್ರಾಸಿಕ್ಯೂಶನ್ ವೈಫಲ್ಯವೆಂಬ ಕಾರಣದಿಂದ ಆರೋಪಿಗಳು ಖುಲಾಸೆಗೊಂಡಿದ್ದರು. ಅಂದ ಹಾಗೆ, ಜಬ್ಬಾರ್ ಮುಸ್ಲಿಮ್ ಸಮುದಾಯದ ನಾಯಕರಾಗಿ ಕಾಂಗ್ರೆಸ್ ಪಕ್ಷದಲ್ಲಿ ಮುಂಚೂಣಿಯಲ್ಲಿ ಬರುತ್ತಿರುವುದನ್ನು ಸಹಿಸಲಾಗದ ಆರೆಸ್ಸೆಸ್ ರಕ್ತದೋಕುಳಿ ಹರಿಸಿ ಘೋರ ಕೃತ್ಯವನ್ನೆಸಗಿತ್ತು.


2005 ರಲ್ಲಿ ಸಂಗಬೆಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷರಾಗಿದ್ದ ಅಬ್ದುಲ್ ರಹಿಮಾನ್ ರವರ ಹತ್ಯೆ ಕೂಡ ಜಿಲ್ಲೆಯಲ್ಲಿ ಭಯಭೀತ ಅಲೆಯನ್ನು ಸೃಷ್ಟಿಸಿತ್ತು. ಈ ಕೊಲೆಯ ಪ್ರಮುಖ ಆರೋಪಿಗಳಿಗೆ ರಾಜಕೀಯ ಬೆಂಬಲವಿತ್ತು. ಆತನಿಗೆ ಹಾಗೂ ಸಹಚರರಿಗೆ ಆರೆಸ್ಸೆಸಿನ ನಿಕಟ ಸಂಬಂಧವಿರುವುದು ಪತ್ತೆಯಾಗಿತ್ತು. ಅದೇ ರೀತಿ 2016ರಲ್ಲಿ ನಡೆದ ಕರೋಪಾಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಅಬ್ದುಲ್ ಜಲೀಲ್ ರವರ ಹತ್ಯೆ ಕೂಡ ಇದೇ ತೆರನಾದುದು. ಅವರೆಲ್ಲರಿಗೂ ಭೂಗತ ಪಾತಕಿ ವಿಕಿ ಶೆಟ್ಟಿಯ ನಂಟು ಹಾಗೂ ಆರೆಸ್ಸೆಸ್-ಬಜರಂಗದಳದ ಸಂಪರ್ಕ ವ್ಯಕ್ತವಾಗಿತ್ತು.


1988-90ರ ಅವಧಿಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ರಾಮಜನ್ಮಭೂಮಿ ರಥಯಾತ್ರೆಯ ಅಂಗವಾಗಿ ಅಲ್ಲಲ್ಲಿ ನಡೆಸಿದ ಸಾರ್ವಜನಿಕ ಕಾರ್ಯಕ್ರಮದಿಂದ ಮಸ್ಜಿದ್ ಧ್ವಂಸಗೊಳಿಸಿ ರಾಮಮಂದಿರ ನಿರ್ಮಾಣದ ಕರೆ ನೀಡಿದ ಪ್ರಚೋದನಕಾರಿ ಭಾಷಣಗಳು ಕೂಡ ಜಿಲ್ಲೆಯಲ್ಲಿ ಹಿಂದೂ-ಮುಸ್ಲಿಮ್ ದ್ವೇಷವನ್ನು ಹುಟ್ಟುಹಾಕಿತ್ತು. ಬಾಬರಿ ಮಸ್ಜಿದ್ 1992ಡಿಸೆಂಬರ್ 6ರಂದು ಧ್ವಂಸಗೊಂಡಾಗ ದ.ಕ.ಜಿಲ್ಲೆಯಲ್ಲೂ ಅಹಿತಕರ ಘಟನೆಗಳು ಸರಣಿಯೋಪಾದಿಯಲ್ಲಿ ನಡೆದಿದ್ದವು. ಜಿಲ್ಲೆಯಲ್ಲಿ ಮುಸ್ಲಿಮ್ ನಾಯಕರ ಹತ್ಯೆಯನ್ನು ನಡೆಸಿ ಸಂಘಪರಿವಾರ ಇನ್ನೂ ಅನೇಕ ಮುಸ್ಲಿಮ್ ಯುವಕರನ್ನು ಕೂಡಾ ಕೊಂದಿತ್ತು. ರಫೀಕ್, ಇಕ್ಬಾಲ್, ನಾಸಿರ್ ಮುಂತಾದವರ ಕ್ರೂರ ಹತ್ಯೆಗಳು ಕೂಡ ಸಂಘಪರಿವಾರದ ಕಾರ್ಯಕರ್ತರ ಕೃತ್ಯಗಳೇ ಆಗಿದ್ದವು.


1976ರಲ್ಲಿ ಕಲ್ಲಡ್ಕ ಇಸ್ಲಾಯೀಲ್ ಹತ್ಯೆಯಿಂದ ಮೊದಲ್ಗೊಂಡು 2003ರ ವರೆಗೆ ಮುಸ್ಲಿಮರ ಕಡೆಯಿಂದ ಯಾವುದೇ ಪ್ರತೀಕಾರ ವ್ಯಕ್ತವಾಗಿರಲಿಲ್ಲ. ಯಾವಾಗ ಮುಸ್ಲಿಮರ ಹತ್ಯಾ ಆರೋಪಿಗಳು ಖುಲಾಸೆಗೊಂಡು ಹೊರಗೆ ಬರತೊಡಗಿದರೋ ಹಾಗೂ ಮುಸ್ಲಿಮ್ ದ್ವೇಷದ ಹಲ್ಲೆ ಆಕ್ರಮಣಗಳು, ನಿರಂತರ ನಡೆಯುತ್ತಿದ್ದರೂ ಪೊಲೀಸರು ಯಾವುದೇ ಕ್ರಮಗಳನ್ನು ಕೈಗೊಳ್ಳದೇ ಸಂಘಿಗಳಿಗೆ ಸಹಾಯ ಮಾಡುತ್ತಿದ್ದರೋ, ಆಗ ಇದಕ್ಕೆ ಪ್ರತಿಕ್ರಿಯೆ-ಪ್ರತೀಕಾರ ಕೃತ್ಯಗಳು ಜಿಲ್ಲೆಯಲ್ಲಿ ಪ್ರಾರಂಭವಾದವು. ಅದರ ಪರಿಣಾಮವೇ ಅನಂತು, ಸಂತು, ಸುಖಾನಂದ, ಪ್ರಶಾಂತ್ ಮುಂತಾದವರ ಹತ್ಯೆಯೂ ನಡೆಯಿತು.


ಇದೀಗ ನಡೆದ ಮೂರೂ ಹತ್ಯೆಗಳು ಕೂಡ ಅದೇ ರೀತಿಯದ್ದಾಗಿದೆ. ಮಸೂದ್ ಎಂಬ ಹುಡುಗನನ್ನು ಆರೆಸ್ಸೆಸ್ ಕಾರ್ಯಕರ್ತರು ಥಳಿಸಿ ಕೊಂದ ಘಟನೆಗೆ ಪ್ರತೀಕಾರವೋ ಎಂಬಂತೆ ಪ್ರವೀಣ್ ಕೊಲೆಯಾಯಿತು. ಅದಕ್ಕೆ ಪ್ರತೀಕಾರವೆಂಬಂತೆ ಫಾಝಿಲ್ ಕೊಲೆಯಾಯಿತು. ಅಂತೂ ಮೂರೂ ಅಮೂಲ್ಯ ಜೀವಗಳು ಬಲಿಯಾದವು. ಅದರೊಂದಿಗೆ ಈ ಮೂರೂ ಕುಟುಂಬಗಳು ಕೂಡ ದುಃಖದಲ್ಲಿ ಮುಳುಗಿದವು. ಇದು ಜಿಲ್ಲೆಯಲ್ಲಿ ನಡೆಯುತ್ತಿರುವ ಹತ್ಯಾಕಾಂಡಗಳ ಹಿಂದಿನ ಒಂದು ಸ್ಥೂಲ ಚಿತ್ರಣ.
ಬಹುಶಃ ಆರೆಸ್ಸೆಸ್, ಬಜರಂಗದಳ ಇಲ್ಲದೇ ಇರುತ್ತಿದ್ದರೆ ಜಿಲ್ಲೆಯಲ್ಲಿ ಒಂದೂ ಕೋಮು ಕೊಲೆಗಳು ನಡೆಯುತ್ತಿರಲಿಲ್ಲ. 2008 ಅಕ್ಟೋಬರ್ ನಲ್ಲಿ ಮಂಗಳೂರಿನಲ್ಲಿ ಚರ್ಚ್ ದಾಳಿ ನಡೆಯಿತು. ಆರೆಸ್ಸೆಸ್, ಬಜರಂಗದಳ ಒಂದೇ ಬಾರಿಗೆ 18 ಚರ್ಚ್ ಗಳ ಮೇಲೆ ವ್ಯವಸ್ಥಿತವಾಗಿ ದಾಳಿ ನಡೆಸಿತ್ತು. ನೈತಿಕ ಪೊಲೀಸ್ ಅನೈತಿಕ ಗೂಂಡಾಗಿರಿ ನಡೆಸುತ್ತಿರುವ ಈ ಕ್ಷುದ್ರ ಪಡೆಗಳು ಜಿಲ್ಲೆಯಲ್ಲಿ ಶಾಂತಿಯ ವಾತಾವರಣ ಕದಡುವಲ್ಲಿ ಪ್ರಮುಖ ಪಾತ್ರ ವಹಿಸಿವೆ. ಲವ್ ಜಿಹಾದ್ ನಡೆಸುವ ಮುಸ್ಲಿಮರು ಎಂದು ಸಾಕಷ್ಟು ಅರಚಿದ ಸಂಘಿಗಳಿಗೆ ದೊರೆತದ್ದು ಸಯನೈಡ್ ಮೋಹನ್. ಆತ 20ರಷ್ಟು ಹಿಂದೂ ಮಹಿಳೆಯರನ್ನು ಸಯನೈಡ್ ನೀಡಿ ಕೊಂದಿದ್ದ. ಆರೆಸ್ಸೆಸ್, ಬಜರಂಗದಳ ಮುಂತಾದವುಗಳು ವಿತರಿಸುತ್ತಿರುವ ತ್ರಿಶೂಲ ಜಿಲ್ಲೆಯ ಮನೆ ಮನೆಗಳಲ್ಲಿ ತಲುಪಿವೆ. ಆರೆಸ್ಸೆಸ್ ಶಾಖೆಗಳಲ್ಲಿ ನೀಡುತ್ತಿರುವ ಖಡ್ಗ ಚಲಾವಣೆಯ ತರಬೇತಿ ಯಾವ ಉದ್ದೇಶಕ್ಕಾಗಿ ನಡೆಯುತ್ತಿದೆ?


ಮುಸ್ಲಿಮ್, ಕ್ರೈಸ್ತ ವಿರೋಧಿ ದ್ವೇಷ ಭಾಷಣಗಳನ್ನು ಮಾಡಿ ದಾಳಿಗೆ ಬಹಿರಂಗ ಕರೆ ಕೊಡುತ್ತಿರುವ ಆರೆಸ್ಸೆಸ್ಸಿಗರ ಉದ್ದೇಶವಾದರೂ ಏನು? ಮುಸ್ಲಿಮ್ ದ್ವೇಷ ಎಷ್ಟರ ಮಟ್ಟಿಗೆ ಬೆಳೆದಿದೆ ಎಂದರೆ ಇಂದಿನ ಕಾಲೇಜು ಕ್ಯಾಂಪಸ್ ಗಳು ಹಿಂದೂ-ಮುಸ್ಲಿಮ್ ಎಂದು ಸ್ಪಷ್ಟ ವಿಭಜನೆಗೊಂಡಿವೆ. ಅನೇಕ ಹೊಡೆದಾಟಗಳು ನಡೆಯುತ್ತಿವೆ. ಒಂದು ಕಾಲದಲ್ಲಿ ಆರೆಸ್ಸೆಸ್, ಬಜರಂಗದಳ, ವಿಹಿಂಪ ಮುಂತಾದವುಗಳು ನಡೆಸುತ್ತಿದ್ದ ಆಕ್ರಮಣ, ಹತ್ಯೆ, ದಾಳಿಗಳಿಗೆ ಮಾತೆತ್ತುವವರಿರಲ್ಲ. ಅಂತೂ, ದೇಶ, ಸಮಾಜ ನೆಮ್ಮದಿ, ಶಾಂತಿ ಹಾಗೂ ಪ್ರಗತಿಯೆಡೆಗೆ ಸಾಗಬೇಕಾದರೆ ದ್ವೇಷ, ಹಿಂಸೆ, ಹಗೆ ಹಾಗೂ ವಿಭಜನಾವಾದವನ್ನು ತಡೆದು ನಿಲ್ಲಿಸುವ ವ್ಯವಸ್ಥೆ ಇರಲೇಬೇಕು. ಅದಿಲ್ಲದಿದ್ದಲ್ಲಿ ಅಥವಾ ಅದನ್ನು ನಡೆಸುವಂತಹ ಜವಾಬ್ದಾರಿಯುತ ಇಲಾಖೆಗಳು ಪಕ್ಷಪಾತೀಯ, ಪೂರ್ವಗ್ರಹಪೀಡಿತ ಹಾಗೂ ಕುತ್ಸಿತ ಉದ್ದೇಶಗಳನ್ನು ಹೊಂದಿದಲ್ಲಿ ಜಿಲ್ಲೆಯಲ್ಲಿ ಶಾಂತಿ-ಸೌಹಾರ್ದ, ನೆಮ್ಮದಿ ಹೇಗೆ ತಾನೇ ಕಾಣಲು ಸಾಧ್ಯ. ಪ್ರೀತಿ, ವಿಶ್ವಾಸ, ಸೌಹಾರ್ದಯುತ ಪರಿಸರಕ್ಕೆ ಹೆಸರಾಗಿದ್ದ ದಕ್ಷಿಣ ಕನ್ನಡ ಜಿಲ್ಲೆಯನ್ನು ಮತ್ತೆ ಅದೇ ಸೌಹಾರ್ದದ, ಸಹಬಾಳ್ವೆಯ ಹಾಗೂ ನೆಮ್ಮದಿಯ ಪಥದತ್ತ ತರಬೇಕಾಗಿದೆ.



Join Whatsapp