ಶೃಂಗೇರಿಯಲ್ಲಿ ಕೋಮುಗಲಭೆಗೆ ಷಡ್ಯಂತ್ರ: ಬಿಜೆಪಿ ಮುಖಂಡ ಡಿ.ಎನ್. ಜೀವರಾಜ್ ವಿರುದ್ಧ ಪ್ರಕರಣ ದಾಖಲು; ಸಮನ್ಸ್ ಜಾರಿ

Prasthutha|

ಚಿಕ್ಕಮಗಳೂರು: ಶೃಂಗೇರಿಯಲ್ಲಿ ಶಂಕರಾಚಾರ್ಯರ ಮೂರ್ತಿ ಅಪವಿತ್ರಗೊಳಿಸಿದ ಘಟನೆಗೆ ಸಂಬಂಧಿಸಿದಂತೆ ಖಾಸಗಿ ದೂರನ್ನು ಆಧರಿಸಿ ಮಾಜಿ ಸಚಿವ, ಬಿಜೆಪಿ ಮುಖಂಡ ಡಿ.ಎನ್.ಜೀವರಾಜ್ ಸೇರಿದಂತೆ ನಾಲ್ವರ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು, ವಿಚಾರಣೆಗೆ ಬರುವಂತೆ ನ್ಯಾಯಾಲಯ ಸಮನ್ಸ್ ಜಾರಿಗೊಳಿಸಿದೆ.

- Advertisement -

2020 ರ ಆಗಸ್ಟ್ 13 ರಂದು ಶಂಕರಾಚಾರ್ಯ ಮೂರ್ತಿ ಮೇಲೆ ಹಸಿರು ಶಾಲು ಹೊದಿಸಿ ಅಪವಿತ್ರಗೊಳಿಸಲಾಗಿದೆ ಎಂದು ನೆಪವೊಡ್ಡಿ ಬಿಜೆಪಿ ಮತ್ತು ಸಂಘಪರಿವಾರ ಪ್ರತಿಭಟನೆ ನಡೆಸಿತ್ತು. ಅಲ್ಲದೆ ಈ ಪ್ರತಿಭಟನೆಯಲ್ಲಿ ಸುಹೈಲ್ ಸೇರಿದಂತೆ ಹಲವು ಮುಸ್ಲಿಮರನ್ನು ವೈಯಕ್ತಿಕವಾಗಿ ತೇಜೋವಧೆ ಮಾಡಿತ್ತು. ಸಮಾಜದಲ್ಲಿ ತಪ್ಪು ಕಲ್ಪನೆ ಮೂಡುವಂತೆ ಮಾಡಿ ಶೃಂಗೇರಿಯಲ್ಲಿ ಕೋಮು ಗಲಭೆಗೆ ಷಡ್ಯಂತ್ರ ರೂಪಿಸಲಾಗುತ್ತಿದೆ ಎಂಬ ಆರೋಪದಡಿಯಲ್ಲಿ ಸುಹೈಲ್ ಎಂಬವರು ನ್ಯಾಯಾಲಯದಲ್ಲಿ ಖಾಸಗಿ ದೂರು ಹಿನ್ನೆಲೆಯಲ್ಲಿ ಪ್ರಕರಣ ದಾಖಲಾಗಿದೆ.

ಶಂಕರಾಚಾರ್ಯರ ಪ್ರತಿಮೆಯನ್ನು ಅಪವಿತ್ರಗೊಳಿಸಲಾಗಿದೆ ಎಂದು ನೆಪವೊಡ್ಡಿ ಮೂರ್ತಿಯ ಎದುರು ಹಾಗೂ ಪೊಲೀಸ್ ಸ್ಟೇಶನ್ ಮುಂಭಾಗ ಸಂಘಪರಿವಾರ ಮತ್ತು ಬಿಜೆಪಿ ವತಿಯಿಂದ ಪ್ರತಿಭಟನೆಯೂ ನಡೆದಿತ್ತು. ಈ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ಮಾಜಿ ಸಚಿವ ಡಿ.ಎನ್ ಜೀವರಾಜ್, ಬಿಜೆಪಿ ಮುಖಂಡರಾದ ಹರೀಶ್ ಶೆಟ್ಟಿ, ವೇಣುಗೋಪಾಲ್ ಹಾಗೂ ಶ್ರೀರಾಮಸೇನೆ ಮುಖಂಡ ಅರ್ಜುನ್ ತಮ್ಮ ಬಗ್ಗೆ ಆಧಾರ ರಹಿತ ಸುಳ್ಳು ಆರೋಪ ಮಾಡಿ ತೇಜೋವಧೆ ಮಾಡಿದ್ದರು ಎಂದು ಸುಹೈಲ್ ಖಾಸಗೀ ದೂರು ದಾಖಲಿಸಿದ್ದರು.

- Advertisement -

ಈ ದೂರಿನ ಆಧಾರದಲ್ಲಿ ಮಾಜಿ ಸಚಿವ ಜೀವರಾಜ್ ಸೇರಿದಂತೆ ಇತರೆ ಆರೋಪಿಗಳಾದ ಅರ್ಜುನ್, ಹರೀಶ್ ವಿ ಶೆಟ್ಟಿ ಹಾಗೂ ವೇಣುಗೋಪಾಲ್ ವಿರುದ್ಧ ಐಪಿಸಿ ಸೆಕ್ಷನ್ 153,153ಎ. 182, 211, 295 ಎ ಮತ್ತು 34 ರ ಅಡಿಯಲ್ಲಿ ಶೃಂಗೇರಿ ನ್ಯಾಯಾಲಯದಲ್ಲಿ ದಿನಾಂಕ 16 ಜೂನ್ 2022ರಂದು ಪ್ರಕರಣ ದಾಖಲಿಸಲಾಗಿತ್ತು.

ಸದ್ಯ ಈ ಮೇಲ್ಕಂಡ ಆರೋಪಿಗಳು ವಿಚಾರಣೆಗೆ ಬರುವಂತೆ ನ್ಯಾಯಾಲಯ ಸಮನ್ಸ್ ಜಾರಿಗೊಳಿಸಿದೆ.



Join Whatsapp