ಬಾಗಲಕೋಟೆ: ಬಾಗಲಕೋಟೆಯ ಬಾದಾಮಿ ತಾಲೂಕಿನ ಕೆರೂರಿನಲ್ಲಿ ನಡೆದ ಕೋಮು ಘರ್ಷಣೆ ಘಟನೆಗೆ ಸಂಬಂಧಿಸಿ ಪ್ರಕರಣ ದಾಖಲಿಸುವಲ್ಲಿ ಪೊಲೀಸರು ತಾರತಮ್ಯ ನೀತಿ ಅನುಸರಿಸುತ್ತಿದ್ದು, ಪೊಲೀಸರ ಈ ನಡೆಯನ್ನು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಬಾಗಲಕೋಟೆ ಜಿಲ್ಲಾಧ್ಯಕ್ಷ ಅಸ್ಗರ್ ಅಲಿ ತೀವ್ರವಾಗಿ ಖಂಡಿಸಿದ್ದಾರೆ.
ಸಂಘಪರಿವಾರದ ಗೂಂಡಾಗಳು ಮುಸ್ಲಿಮ್ ಯುವಕನ ಮೇಲೆ ಹಲ್ಲೆ ನಡೆಸಿ, ನಂತರ ಗುಂಪು ಕಟ್ಟಿಕೊಂಡು ಬಂದು ಮನೆ ನುಗ್ಗಿ ದಾಂಧಲೆ ನಡೆಸಿ ಮಹಿಳೆ ಸಹಿತ ಮನೆ ಮಂದಿಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಅದರೊಂದಿಗೆ ಬೈಕು ಮತ್ತು ಅಂಗಡಿಗಳಿಗೂ ಬೆಂಕಿ ಹಚ್ಚಿದ್ದಾರೆ. ಕಿಡಿಗೇಡಿ ಕೃತ್ಯ ನಡೆಸಿದ ಗುಂಪಿನಲ್ಲಿ ನೂರಾರು ಮಂದಿ ಇದ್ದರೂ ಈ ದುಷ್ಕೃತ್ಯಕ್ಕೆ ಸಂಬಂಧಿಸಿದಂತೆ ಪೊಲೀಸರು 8 ಮಂದಿಯ ಮೇಲೆ ಮಾತ್ರ ಪ್ರಕರಣ ದಾಖಲಿಸಿದ್ದಾರೆ. ಇನ್ನು ಸಂಘಪರಿವಾರದ ಇಬ್ಬರು ಕಾರ್ಯಕರ್ತರ ಮೇಲೆ ಹಲ್ಲೆ ಘಟನೆಗೆ ಸಂಬಂಧಿಸಿ ಪೊಲೀಸರು ಮುಸ್ಲಿಮ್ ಸಮುದಾಯದ 32 ಮಂದಿಯ ವಿರುದ್ಧ ಹತ್ಯೆ ಯತ್ನ ಸಹಿತ ಗಂಭೀರ ಸೆಕ್ಷನ್ ಗಳಡಿ ಪ್ರಕರಣ ದಾಖಲಿಸಿದ್ದಾರೆ. ಇದೇ ಪ್ರಕರಣ ಸಂಬಂಧಿಸಿ ಮುಸ್ಲಿಮ್ ಮಹಿಳೆಯನ್ನು ಬಸ್ ನಿಲ್ದಾಣದಿಂದ ಬಂಧಿಸಿ ಕೊಂಡೊಯ್ದು ಅವರ ವಿರುದ್ಧವೂ ಪ್ರಕರಣ ದಾಖಲಿಸಲಾಗಿದೆ. ಮನೆಗೆ ದಾಳಿ ನಡೆಸಿದ ಘಟನೆಯಲ್ಲಿ ಮಾರಣಾಂತಿಕ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದ ವ್ಯಕ್ತಿಯೊಂದಿಗಿದ್ದ ಆತನ ಮಗ ಮತ್ತು ಸಂಬಂಧಿಯನ್ನು ಪೊಲೀಸರು ಆಸ್ಪತ್ರೆಯಿಂದ ಬಂಧಿಸಿದ್ದಾರೆ.
ಈ ಘಟನೆಯ ಮುಂದುವರಿದ ಭಾಗವಾಗಿ ಸಂಘಪರಿವಾರದ ಸುಮಾರು 40 ಮಂದಿ ಗೂಂಡಾಗಳು ಕೆರೂರು ಸಮೀಪದ ಕುಳಗೇರಿ ಕ್ರಾಸ್ ನಲ್ಲಿದ್ದ ಡಾಬಾವೊಂದರ ಮೇಲೆ ದಾಳಿ ನಡೆಸಿ ಅಲ್ಲಿ ಕೆಲಸಕ್ಕಿದ್ದ 3 ಮಂದಿಯ ಮೇಲೆ ಗಂಭೀರ ದಾಳಿ ನಡೆಸಿದ್ದಾರೆ. ಇದರ ವಿರುದ್ಧ ಪ್ರಕರಣ ದಾಖಲಿಸಿದ್ದರೂ ಓರ್ವನ ಹೆಸರನ್ನು ಮಾತ್ರ ಎಫ್.ಐ.ಆರ್ ನಲ್ಲಿ ದಾಖಲಿಸಲಾಗಿದೆ. ಇವೆಲ್ಲವೂ ಪೊಲೀಸರ ತಾರತಮ್ಯ ನೀತಿ ಮತ್ತು ಪೂರ್ವಾಗ್ರಹಪೀಡಿತ ಕಾರ್ಯಾಚರಣೆಗೆ ಸಾಕ್ಷಿಯಾಗಿದೆ.
ಗಲಭೆ ನಡೆಸುವ ದುರುದ್ದೇಶದೊಂದಿಗೆ ಗುಂಪು ಕಟ್ಟಿಕೊಂಡು ಕಿಡಿಗೇಡಿ ಕೃತ್ಯ ನಡೆಸಿರುವುದು ವಿಡಿಯೋ ದಾಖಲೆಗಳಲ್ಲಿ ಸ್ಪಷ್ಟವಾಗಿ ದಾಖಲಾಗಿದೆ. ಈ ನಿಟ್ಟಿನಲ್ಲಿ ಪೊಲೀಸರು ಕಿಡಿಗೇಡಿ ಕೃತ್ಯ ನಡೆಸಿದ ಸಂಘಪರಿವಾರದ ಗೂಂಡಾಗಳನ್ನು ಗುರುತಿಸಿ ಅವರ ವಿರುದ್ಧ ಕಠಿಣ ಸೆಕ್ಷನ್ ಗಳಡಿಯಲ್ಲಿ ಪ್ರಕರಣ ದಾಖಲಿಸಬೇಕು. ಮಹಿಳೆಯರು ಸಹಿತ ಘಟನೆಗೆ ಸಂಬಂಧವಿಲ್ಲದ ಮುಸ್ಲಿಮ್ ಯುವಕರ ವಿರುದ್ಧ ಎಫ್.ಐ.ಆರ್ ದಾಖಲಿಸಲಾಗಿದ್ದು, ಅವರ ಹೆಸರುಗಳನ್ನು ಕೈಬಿಡಬೇಕು. ಸಂತ್ರಸ್ತರ ಚಿಕಿತ್ಸಾ ವೆಚ್ಚ ಸರಕಾರವೇ ಭರಿಸಬೇಕು ಮತ್ತು ಅವರಿಗೆ ಸೊತ್ತು ನಾಶದ ಪರಿಹಾರವನ್ನು ನೀಡಬೇಕು. ಪೊಲೀಸರು ಪೂರ್ವಗ್ರಹಪೀಡಿತರಾಗಿ ವರ್ತಿಸದೇ, ನಿಷ್ಪಕ್ಷಪಾತ ಕಾರ್ಯಾಚರಣೆಯ ಮೂಲಕ ಸಂತ್ರಸ್ತ ಸಮುದಾಯಕ್ಕೆ ನ್ಯಾಯ ಕಲ್ಪಿಸಬೇಕೆಂದು ಅಸ್ಗರ್ ಅಲಿ ಒತ್ತಾಯಿಸಿದ್ದಾರೆ.