ಕಾಮನ್ ವೆಲ್ತ್ ಗೇಮ್ಸ್ – ಟಿ20 ಕ್ರಿಕೆಟ್ | ಇಂಗ್ಲೆಂಡ್ ವಿರುದ್ಧ ಗೆದ್ದು ಫೈನಲ್ ಪ್ರವೇಶಿಸಿದ ಭಾರತ

Prasthutha|

ಕಾಮನ್‌ ವೆಲ್ತ್‌ ಕ್ರೀಡಾಕೂಟದ ಮಹಿಳಾ ಟಿ20 ಕ್ರಿಕೆಟ್‌ ನಲ್ಲಿ ಭಾರತ ತಂಡ ಫೈನಲ್‌ ಪ್ರವೇಶಿಸಿದೆ. ಬರ್ಮಿಂಗ್‌ ಹ್ಯಾಮ್‌ ನಲ್ಲಿ ನಡೆದ ಮೊದಲ ಸೆಮಿಫೈನಲ್‌ ನಲ್ಲಿ ಹರ್ಮನ್‌ಪ್ರೀತ್ ಕೌರ್ ನಾಯಕತ್ವದ ಟೀಂ ಇಂಡಿಯಾ, ಇಂಗ್ಲೆಂಡ್‌ ತಂಡವನ್ನು ಅಂತಿಮ ಓವರ್‌ನಲ್ಲಿ 4 ರನ್‌ ಗಳಿಂದ ರೋಚಕವಾಗಿ ಮಣಿಸಿದೆ. ಆ ಮೂಲಕ ಭಾರತಕ್ಕೆ ಇನ್ನೊಂದು ಪದಕವನ್ನು ದೃಢಪಡಿಸಿದ್ದಾರೆ.

- Advertisement -

ಟಾಸ್‌ ಗೆದ್ದು ಮೊದಲು ಬ್ಯಾಟ್‌ ಮಾಡಿದ್ದ ಭಾರತ, ಸ್ಮೃತಿ ಮಂದಾನ ಗಳಿಸಿದ ಅರ್ಧಶತಕದ ನೆರವಿನಿಂದ ಐದು ವಿಕೆಟ್‌ ನಷ್ಟದಲ್ಲಿ 164 ರನ್‌ ಗಳಿಸಿತ್ತು. ಸವಾಲಿನ ಗುರಿ ಬೆನ್ನಟ್ಟಲು ಇನ್ನಿಂಗ್ಸ್‌ ನ ಕೊನೆಯ ಎಸೆತದವರೆಗೂ ಹೋರಾಡಿದ ಆಂಗ್ಲ ವನಿತೆಯರು ಆರು ವಿಕೆಟ್‌ ನಷ್ಟದಲ್ಲಿ 160 ರನ್‌ ಗಳಿಸಲಷ್ಟೇ ಶಕ್ತರಾದರು. ಆ ಮೂಲಕ ಫೈನಲ್‌ ಪಂದ್ಯದಿಂದ ನಾಲ್ಕು ರನ್‌ ಅಂತರದಲ್ಲಿ ದೂರ ಉಳಿದರು.

ಆಸ್ಟ್ರೇಲಿಯಾ ಮತ್ತು ನ್ಯೂಜಿಲ್ಯಾಂಡ್​ ತಂಡಗಳ ನಡುವಿನ  ಎರಡನೇ ಸೆಮಿಫೈನಲ್‌ ಪಂದ್ಯದ ವಿಜೇತರನ್ನು ಆಗಸ್ಟ್‌ 7ರಂದು ನಡೆಯುವ  ಫೈನಲ್‌ ಪಂದ್ಯದಲ್ಲಿ ಭಾರತ ಎದುರಿಸಲಿದೆ.

- Advertisement -

ಮೂವರು ಆಟಗಾರ್ತಿಯರು ರನೌಟ್‌!

ಇಂಗ್ಲೆಂಡ್‌ ತಂಡದ ಮೂವರು ಪ್ರಮುಖ ಆಟಗಾರ್ತಿಯರು ರನೌಟ್‌ ಗೆ ಬಲಿಯಾದದ್ದು ಪಂದ್ಯದ ಟರ್ನಿಂಗ್‌ ಪಾಯಿಂಟ್‌ ಆಯಿತು. ನಾಯಕಿ ನ್ಯಾಟ್‌ ಸ್ಕೀವಿರ್‌ (41 ರನ್‌), ಕೀಪರ್‌ ಅಮಿ ಜೋನ್ಸ್‌ (31ರನ್‌) ತಂಡವನ್ನು ಅತ್ತುತ್ತಮ ಜೊತೆಯಾಟದ ಮೂಲಕ ಗೆಲುವಿನತ್ತ ಕೊಂಡೊಯ್ಯುವ ಪ್ರಯತ್ನದಲ್ಲಿರುವಾಗಲೇ ರನೌಟ್‌ಗೆ ಬಲಿಯಾದರು.

ಮತ್ತೊಂದೆಡೆ ಭಾರತದ ಬೌಲಿಂಗ್‌ ವಿಭಾಗದಲ್ಲಿ ದೀಪ್ತಿ ಶರ್ಮಾ ತನ್ನ ನಾಲ್ಕು ಓವರ್‌ಗಳ ದಾಳಿಯಲ್ಲಿ ಕೇವಲ 18 ರನ್‌ ನೀಡಿ ಒಂದು ವಿಕೆಟ್‌ ಪಡೆದರು. ಆ ಮೂಲಕ ಭಾರತದ ಗೆಲುವಿನಲ್ಲಿ ಅಮೂಲ್ಯ ಪಾತ್ರ ವಹಿಸಿದರು.

ಕಾಮನ್‌ ವೆಲ್ತ್‌ ಗೇಮ್ಸ್‌ ನಲ್ಲಿ ಮೊದಲ ಬಾರಿ ಮಹಿಳಾ ಕ್ರಿಕೆಟ್‌ ಈ ಬಾರಿ ಅಳವಡಿಸಿದ್ದು, ಮೊದಲ ಟೂರ್ನಿಯಲ್ಲೇ ಭಾರತ ಫೈನಲ್ ಪ್ರವೇಶಿಸುವ ಮೂಲಕ ಇತಿಹಾಸ ನಿರ್ಮಿಸಿದೆ. ಎರಡನೇ ಸೆಮಿ ಫೈನಲ್‌ ಆಸ್ಟ್ರೇಲಿಯಾ ಮತ್ತು ನ್ಯೂಝಿಲ್ಯಾಂಡ್‌ ನಡುವೆ ನಡೆಯಲಿದ್ದು, ಗೆದ್ದ ತಂಡವು ಫೈನಲ್‌ ನಲ್ಲಿ ಟೀಮ್ ಇಂಡಿಯಾವನ್ನು ಎದುರಿಸಲಿದೆ.

Join Whatsapp