ಎತ್ತಿನಹೊಳೆ ಯೋಜನೆ ಅನುಷ್ಠಾನಕ್ಕೆ ಬದ್ಧ: ಗೋವಿಂದ ಕಾರಜೋಳ

Prasthutha|

ಬೆಂಗಳೂರು: ಕುಡಿಯುವ ನೀರಿನ ತೀವ್ರ ಅಭಾವ ಎದುರಿಸುತ್ತಿರುವ ಹಾಸನ, ಚಿಕ್ಕಮಗಳೂರು, ತುಮಕೂರು, ಬೆಂಗಳೂರು ಗ್ರಾಮಾಂತರ, ರಾಮನಗರ, ಚಿಕ್ಕಬಳ್ಳಾಪುರ ಹಾಗೂ ಕೋಲಾರ ಜಿಲ್ಲೆಗಳಿಗೆ ರಾಜ್ಯದ ಪಶ್ಚಿಮಾಭಿಮುಖವಾಗಿ ಹರಿಯುವ ಹಳ್ಳಗಳಿಂದ ಎತ್ತಿನ ಹೊಳೆಯ ಯೋಜನೆಯ ಕಾಮಗಾರಿಯನ್ನು ಕೈಗೆತ್ತಿಕೊಂಡಿದ್ದು, ಈ ಯೋಜನೆಯನ್ನು ತ್ವರಿತಗತಿಯಲ್ಲಿ ಅನುಷ್ಠಾನಗೊಳಿಸಲಾಗುತ್ತಿದೆ ಎಂದು ಜಲ ಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಹೇಳಿದ್ದಾರೆ.

- Advertisement -

ಆದಷ್ಟೂ ಶೀಘ್ರದಲ್ಲಿ ಯೋಜನೆಯ ಕಾಮಗಾರಿಯನ್ನು ಪೂರ್ಣಗೊಳಿಸಲಾಗುವುದು ಮತ್ತು ಯೋಜನೆಯ ಅನುಷ್ಠಾನಕ್ಕೆ ಸರ್ಕಾರ ಬದ್ಧವಾಗಿದೆ ಎಂದರು.

ಸದಸ್ಯರಾದ ವಿಧಾನ ಪರಿಷತ್ ನಲ್ಲಿ ರಾಜೇಂದ್ರ ರಾಜಣ್ಣ ಇವರ ಗಮನಸೆಳೆಯುವ ಸೂಚನೆಗೆ ಉತ್ತರಿಸಿದ ಸಚಿವರು, ಮೊದಲನೇ ಹಂತದ ಲಿಫ್ಟ್ ಕಾಮಗಾರಿಗಳನ್ನು ಒಟ್ಟು ರೂ.3716.77 ಕೋಟಿ ಮೊತ್ತದಲ್ಲಿ ಐದು ಪ್ಯಾಕೇಜ್ ಗಳಲ್ಲಿ ಮತ್ತು ಮೊದಲನೇ ಹಂತದ ಕಾಮಗಾರಿಗಳಿಗೆ ಅವಶ್ಯವಿರುವ 219.44 ಮೆ.ವ್ಯಾ ವಿದ್ಯುಚ್ಛಕ್ತಿ ಪೂರೈಸುವ ಸಬ್ ಸ್ಟೇಷನ್ ನಿರ್ಮಾಣದ ಕಾಮಗಾರಿ ಮತ್ತು ಟ್ರಾನ್ಸ್ ಮಿಷನ್ ಲೈನ್ ನಿರ್ಮಾಣ ಕಾಮಗಾರಿಗಳನ್ನು ಒಟ್ಟು ರೂ.398.56 ಕೋಟಿ ಮೊತ್ತದಲ್ಲಿ ಎರಡು ಪ್ಯಾಕೇಜ್ ಗಳಲ್ಲಿ ಕೈಗೆತ್ತಿಕೊಂಡಿದ್ದು, ಮೊದಲನೇ ಹಂತದ ಕಾಮಗಾರಿಗಳು ಬಹುತೇಕ ಪೂರ್ಣಗೊಳ್ಳುವ ಹಂತದಲ್ಲಿರುತ್ತದೆ. ಶೇ.95ರಷ್ಟು ಪೂರ್ಣಗೊಂಡಿರುತ್ತದೆ ಎಂದು ಹೇಳಿದರು.

- Advertisement -

ಎತ್ತಿನಹೊಳೆ ಸಮಗ್ರ ಕುಡಿಯುವ ನೀರಿನ ಯೋಜನೆಯ ಹಂತ2ರಡಿಯ 260.00 ಕಿ.ಮೀ. ಉದ್ದದ ಗುರುತ್ವ ಕಾಲುವೆ, ಭೈರಗೊಂಡ್ಲು ಜಲಾಶಯದ ಕಾಮಗಾರಿ ಮತ್ತು ಭೈರಗೊಂಡ್ಲು ಜಲಾಶಯದ ವರೆಗಿನ ಫೀಡರ್ ಕಾಲುವೆ ಕಾಮಗಾರಿಗಳನ್ನು ಒಟ್ಟಾರೆ ರೂ.12,160.69 ಕೋಟಿ ಮೊತ್ತದಲ್ಲಿ 35 ಪ್ಯಾಕೇಜ್ ಗಳಲ್ಲಿ ಕೈಗೆತ್ತಿಕೊಂಡಿದ್ದು, ಈಗಾಗಲೇ ಗುರುತ್ವ ಕಾಲುವೆಯ ಕಾಮಗಾರಿಯು ಶೇ.70ರಷ್ಟು ಪೂರ್ಣಗೊಂಡಿದ್ದು, ಉಳಿದ ಭಾಗಗಳಲ್ಲಿಕಾಮಗಾರಿಗಳು ಪ್ರಗತಿಯಲ್ಲಿದೆ ಎಂದರು.

ಟಿ.ಜಿ.ಹಳ್ಳಿ ಜಲಾಶಯ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲ್ಲೂಕು ಮತ್ತು ರಾಮನಗರ ಜಿಲ್ಲೆಗಳಿಗೆ ಕುಡಿಯುವ ನೀರನ್ನು ಒದಗಿಸುವ ಹಾಗೂ ನೆಲಮಂಗಲ ತಾಲ್ಲೂಕಿನ 2 ಕೆರೆಗಳನ್ನು ತುಂಬಿಸುವ ರೂ.1325.96 ಕೋಟಿ ಮೊತ್ತದಲ್ಲಿ ಕೈಗೊಂಡಿರುವ ಟಿ.ಜಿ.ಹಳ್ಳಿ ರಾಮನಗರ ಫೀಡರ್ ಕಾಲುವೆಯ ಒಟ್ಟು 52.89 ಕಿ.ಮೀ. ಉದ್ದದ ಪೈಕಿ, 36.00 ಕಿಮೀ. ಪೈಪ್ ಲೈನ್ ಕಾಮಗಾರಿ ಪೂರ್ಣಗೊಂಡಿದ್ದು, ಉಳಿದ ಭಾಗಗಳಲ್ಲಿ ಕಾಮಗಾರಿಗಳು ಪ್ರಗತಿಯಲ್ಲಿದೆ ಎಂದು ವಿವರಿಸಿದರು.

ತುಮಕೂರು, ಕೊರಟಗೆರೆ, ಮಧುಗಿರಿ ಮತ್ತು ಪಾವಗಡ ತಾಲ್ಲೂಕುಗಳಿಗೆ ಕುಡಿಯುವ ನೀರು ಮತ್ತು ಈ ಭಾಗದ 79 ಸಣ್ಣ ನೀರಾವರಿ ಕೆರೆಗಳಿಗೆ ನೀರನ್ನು ಒದಗಿಸುವ ರೂ.1361.95 ಕೋಟಿ ಮೊತ್ತದ ಮಧುಗಿರಿ ಫೀಡರ್ ಕಾಲುವೆ ಕಾಮಗಾರಿ (2 ಪ್ಯಾಕೇಜ್ ಗಳಲ್ಲಿ) ಕೈಗೊಳ್ಳಲಾಗಿರುತ್ತದೆ. ಸದರಿ ಫೀಡರ್ ಕಾಲುವೆಯ ಒಟ್ಟು ಉದ್ದ 120.48 ಕಿ.ಮೀ. ಇದ್ದು, ಇದರಲ್ಲಿ 78.00 ಕಿ.ಮೀ. ಉದ್ದದ ಪೈಕಿ,63.00 ಕಿಮೀ. ಉದ್ದಕ್ಕೆ ಪೈಪ್ ಲೈನ್ ಕಾಮಗಾರಿಯು ಪೂರ್ಣಗೊಂಡಿದ್ದು, ಉಳಿದ ಭಾಗಗಳಲ್ಲಿ ಕಾಮಗಾರಿಗಳು ಪ್ರಗತಿಯಲ್ಲಿದೆ ಎಂದು ಹೇಳಿದರು.

Join Whatsapp