ಮಂಗಳೂರು: ನಾಗಬನದ ಮೂರ್ತಿಗಳನ್ನು ಧ್ವಂಸಗೊಳಿಸಿದ ಪ್ರಕರಣವನ್ನು ಭೇದಿಸಿದರೆ ಚಿನ್ನದ ಪದಕ ನೀಡುವುದಾಗಿ ಹೇಳಿದ್ದ ವಜ್ರದೇಹಿ ಮಠದ ರಾಜಶೇಖರಾನಂದ ಸ್ವಾಮೀಜಿಯವರ ಕೊಡುಗೆಯನ್ನು ಮಂಗಳೂರು ನಗರ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ತಿರಸ್ಕರಿಸಿದ್ದಾರೆ.
ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಪೊಲೀಸ್ ಆಯುಕ್ತರು, ಪ್ರಕರಣದ ಆರೋಪಿಗಳನ್ನು 24 ದಿನಗಳಲ್ಲಿ ಬಂಧಿಸಿದರೆ ಪೊಲೀಸರಿಗೆ ಚಿನ್ನದ ಪದಕ ನೀಡುವುದಾಗಿ ಸ್ವಾಮೀಜಿಯೊಬ್ಬರು ಹೇಳಿದ್ದರು. ಅವರ ಪ್ರೋತ್ಸಾಹಕ್ಕೆ ಧನ್ಯವಾದ. ಆದರೆ ಅವರ ಕೊಡುಗೆಯನ್ನು ನಾವು ಸ್ವೀಕರಿಸುವುದಿಲ್ಲ. ನಮಗೆ ಅದರ ಅಗತ್ಯವಿಲ್ಲ ಎಂದು ನಯವಾಗಿಯೇ ಕೊಡುಗೆಯನ್ನು ತಿರಸ್ಕರಿಸಿದರು.
ನಮಗೆ ಜನರ ತೆರಿಗೆ ಹಣದಿಂದ ವೇತನ ಮತ್ತು ಪೋತ್ಸಾಹಧನ ನೀಡಲಾಗುತ್ತಿದೆ. ಇಲಾಖೆಯಲ್ಲಿ ಅತ್ಯುತ್ತಮ ಕೆಲಸ ಮಾಡಿದವರಿಗೆ ನೀಡಲೆಂದೇ ಸಿಎಂ ಚಿನ್ನದ ಪದಕ, ರಾಷ್ಟ್ರಪತಿ ಪದಕಗಳಿವೆ. ಈ ಪ್ರಕರಣದಲ್ಲೂ ತನಿಖೆ, ಆರೋಪಿಗಳ ಪತ್ತೆಯಲ್ಲಿ ಅಹರ್ನಿಶಿ ದುಡಿದವರಿಗೆ ಇಲಾಖೆ ವತಿಯಿಂದ 20 ಸಾವಿರ ರೂ.ಬಹುಮಾನ ಘೋಷಿಸಲಾಗಿದೆ. ಅಗತ್ಯವಿದ್ದರೆ ಸಿಬ್ಬಂದಿಯ ಹೆಸರನ್ನು ಈ ಪದಕಗಳಿಗೆ ಶಿಫಾರಸು ಮಾಡುತ್ತೇವೆ. ಸ್ವಾಮೀಜಿಯವರ ಬಂಗಾರದ ಪದಕ ನಮಗೆ ಬೇಡ. ಅವನ್ನು ಸ್ವೀಕರಿಸಲು ಇಲಾಖೆಯಲ್ಲಿ ಅವಕಾಶವಿಲ್ಲ. ಖಾಸಗಿ ವ್ಯಕ್ತಿಗಳು ನೀಡುವ ವೈಯಕ್ತಿಕ ಬಹುಮಾನ, ನಗದು ಬಹುಮಾನ ಸ್ವೀಕರಿಸುವಂತಿಲ್ಲ ಎಂದು ಸ್ಪಷ್ಟಪಡಿಸಿದರು.
ಪ್ರಕರಣ ನಡೆದಾಗ ಆರೋಪಿಗಳನ್ನು ಬಂಧಿಸಿ ನ್ಯಾಯಾಂಗದ ಮುಂದೆ ತರುವುದು ಪೊಲೀಸರ ಕರ್ತವ್ಯ. ಈ ಪ್ರಕರಣದಲ್ಲಿಯೂ ನಮ್ಮ ಕರ್ತವ್ಯ ನಿರ್ವಹಿಸಿದ್ದೇವೆ. ಇದುವರೆಗೆ ಶಾಂತಿ ಕಾಪಾಡಿ ನಮಗೆ ಪ್ರೋತ್ಸಾಹ ನೀಡಿದ್ದಕ್ಕೆ ಎಲ್ಲಾ ಸಂಘಟನೆಗಳು, ಸಾರ್ವಜನಿಕರಿಗೆ ಧನ್ಯವಾದಗಳು ಎಂದು ಶಶಿಕುಮಾರ್ ತಿಳಿಸಿದರು.