ಬೆಂಗಳೂರು: ಎಲ್ಲಾ ಸರ್ಕಾರದಲ್ಲೂ ಪರ್ಸೆಂಟ್ ವಿಚಾರ ನಡೆಯುತ್ತಿದೆ. ಯಾವ ಸರಕಾರದಲ್ಲಿ ನಡೆಯುವುದಿಲ್ಲ ಹೇಳಿ ಎಂದು ಸಚಿವ ಎಂ.ಟಿ.ಬಿ ನಾಗರಾಜ್ ಪ್ರಶ್ನಿಸಿದ್ದಾರೆ.
ಈಶ್ಚರಪ್ಪ 40% ಕಮಿಷನ್ ಪ್ರಕರಣದ ಕುರಿತು ಹೊಸಕೋಟೆಯಲ್ಲಿ ಮಾತನಾಡಿದ ಎಂಟಿಬಿ ನಾಗರಾಜ್, ‘ಕಮಿಷನ್ ದಂಧೆ ಎಲ್ಲಾ ಸರ್ಕಾರದಲ್ಲೂ ನಡೆದುಕೊಂಡು ಬಂದಿದೆ. ಇದರಲ್ಲಿ ಯಾರು ಸತ್ಯಹರಿಶ್ಚಂದ್ರ ಅಲ್ಲ, ಯಾರು ನಳ ಮಹಾರಾಜರಲ್ಲ. 40 ಪರ್ಸೆಂಟ್ ಕಮಿಷನ್ ಪಡೆದರೆ ಗುತ್ತಿಗೆದಾರ ಉತ್ತಮ ಗುಣಮಟ್ಟದ ಕಾಮಗಾರಿ ನಡೆಸಲು ಸಾಧ್ಯವಿಲ್ಲ ಎಂದು ಅವರು ಹೇಳಿದರು.
ಈಶ್ವರಪ್ಪ ಬಂಧನದ ಬಗ್ಗೆ ಪ್ರತಿಕ್ರಿಯೆ ನೀಡಿ, ಈಗಾಗಲೇ ಎಫ್.ಐ.ಆರ್. ದಾಖಲಾಗಿದೆ, ತನಿಖೆ ತಂಡದಿಂದ ತನಿಖೆ ನಡೆಯುತ್ತಿದೆ. ತನಿಖೆ ನಂತರ ಬಂಧಿಸುವುದು ಬಿಡುವುದರ ಬಗ್ಗೆ ತೀರ್ಮಾನ ತನಿಖೆ ತಂಡ ತೆಗೆದುಕೊಳ್ಳುತ್ತದೆ. ಪಕ್ಷದ ಮಾತಿಗೆ ಒಳಪಟ್ಟು ಈಶ್ವರಪ್ಪ ಅವರೇ ಖುದ್ದು ರಾಜೀನಾಮೆ ನೀಡಿದ್ದಾರೆ. ತನಿಖೆ ನಡೆಯುತ್ತಿದ್ದು ಸತ್ಯಾಸತ್ಯತೆ ಹೊರ ಬಂದ ನಂತರ ಪುನಃ ಸಚಿವ ಸಂಪುಟಕ್ಕೆ ಸೇರುತ್ತಾರೆ ಎಂದು ಅವರು ಹೇಳಿದರು.
ಎಲ್ಲಾ ಸರ್ಕಾರದಲ್ಲೂ ಪರ್ಸೆಂಟ್ ವಿಚಾರ ನಡೆಯುತ್ತಿದೆ ಯಾವ ಸರಕಾರದಲ್ಲಿ ನಡೆಯುವುದಿಲ್ಲ ಹೇಳಿ? 40% ಯಾರಾದರೂ ಒಬ್ಬ ಮಂತ್ರಿ ತೆಗೆದುಕೊಳ್ಳಕ್ಕೆ ಆಗುತ್ತಾ..? ಒಬ್ಬ ಮಂತ್ರಿ ಇಷ್ಟು ಪಡೆದರೆ ಗುತ್ತಿಗೆದಾರರು ಕೆಲಸ ಮಾಡಲು ಆಗುತ್ತದೆಯಾ.?ಎಲ್ಲರ ಕಾಲದಲ್ಲೂ ಎಲ್ಲಾ ನಡೆದುಕೊಂಡು ಬಂದಿದೆ, ಯಾರು ಏನು ಸತ್ಯಹರಿಶ್ಚಂದ್ರರು ಅಲ್ಲ, ನಳಮಹಾರಾಜರು ಅಲ್ಲ, ಆದರೆ ಶೇ 40% ಎನ್ನುವುದು ಮಾತ್ರ ಶುದ್ಧ ಸುಳ್ಳು ಎಂದು ಈಶ್ವರಪ್ಪ ಪರವಾಗಿ ಬ್ಯಾಟಿಂಗ್ ಮಾಡಿದರು.