ಬೆಂಗಳೂರು: ಗುತ್ತಿಗೆ ಕಾಮಗಾರಿಗಳಿಗೆ ಶೇ.40ರಷ್ಟು ಕಮಿಷನ್ ನೀಡವುದಾದರೆ, ಇದು ಪ್ರತಿ ವರ್ಷ ಪ್ರತಿಶತ ಎಷ್ಟು ಏರಿಕೆಯಾಗಬಹುದು ಎಂಬುದನ್ನು ಊಹಿಸಿಕೊಳ್ಳಿ. ಇಂತಹ ಪ್ರವೃತ್ತಿಗೆ ಕಡಿವಾಣ ಹಾಕಬೇಕಿದೆ ಎಂದು ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಹೇಳಿದರು.
ಬೆಂಗಳೂರಿನ ಎಸ್ ಜೆ ಆರ್ ಸಭಾಂಗಣದಲ್ಲಿ ನಡೆದ ಅಂತಾರಾಷ್ಟ್ರೀಯ ಮಾನವ ಹಕ್ಕುಗಳ ದಿನಾಚರಣೆ ಹಾಗೂ ರಾಷ್ಟ್ರೀಯ ಮಾನವ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಭ್ರಷ್ಟಾಚಾರ ದಿನೇ ದಿನೇ ಏರಿಕೆಯಾಗುತ್ತಿದೆ. ಇದಕ್ಕೆ ಕಡಿವಾಣ ಹಾಕಬೇಕಾದರೆ ಮನುಷ್ಯನಲ್ಲಿ ತೃಪ್ತಿ ಎನ್ನುವ ಗುಣವನ್ನು ಅಳವಡಿಸಿಕೊಂಡಾಗ ಮಾತ್ರ ಸಾಧ್ಯ. ನಾನು ಇನ್ನಷ್ಟು ಶ್ರೀಮಂತನಾಗ ಬೇಕು, ಹಣ ಮಾಡುವುದಕ್ಕಾಗಿ ಇನ್ನಷ್ಟು ಅಧಿಕಾರ ಬೇಕು ಎನ್ನುವ ಮನೋಭಾವನೆಯಿಂದ ಭ್ರಷ್ಟಾಚಾರ ಮಿತಿ ಮೀರಿ ಬೆಳೆಯುತ್ತಿದೆ ಎಂದು ವಿಷಾದ ವ್ಯಕ್ತಪಡಿಸಿದರು.
ಸರ್ಕಾರಿ ನೌಕರರು ಇಂದು ನೌಕರರಲ್ಲ. ಅವರು ಸರ್ಕಾರಿ ಮಾಲೀಕರು. ಸಚಿವರುಗಳು ನ್ಯಾಯ ಕೇಳಬಂದರೆ ಅವರಿಗೆ ಕೆನ್ನೆಗೆ ಹೊಡೆಯುತ್ತಾರೆ. ಶಾಸಕರು ಸಮಾರಂಭ ಕಾಲೇಜಿನ ಪಾಂಶುಪಾಲರಿಗೆ ಹೊಡೆಯುತ್ತಾರೆ ಎಲ್ಲಿಗೆ ಬಂದಿದೆ ನಮ್ಮ ವ್ಯವಸ್ಥೆ ಎಂದು ಪ್ರಶ್ನಿಸಿದರು.
ನ್ಯಾಯಾಧೀಶ ಎಂ.ಪುರುಷೋತ್ತಮ್ ಮಾತನಾಡಿ, ಇವತ್ತಿನ ದಿನಗಳಲ್ಲಿ ಪೋಕ್ಸೊದಂತಹ ಪ್ರಕರಣಗಳು ದಿನೇ ದಿನೇ ಏರಿಕೆಯಾಗುತ್ತಿವೆ. ಪೋಕ್ಸೋ ಪ್ರಕರಣ ಕುರಿತು ಇಂದಿನ ಯುವ ಜನಾಂಗ ಹಾಗೂ ಯುವಕರಲ್ಲಿ ಅರಿವು ಮೂಡಿಸುವ ಅಗತ್ಯವಿದೆ ಎಂದರು.
ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ಸದಸ್ಯರಾದ ಡಾ.ಮೋಹನ್ ಕುಮಾರ್ ನಲವಡೆ ಸೇರಿದಂತೆ ಅನೇಕರು ಹಾಜರಿದ್ದರು.