ಹುತಾತ್ಮ ಯೋಧನ ಬದಲು, ಕರ್ತವ್ಯ ನಿರತ ಯೋಧನ ಕುಟುಂಬಕ್ಕೆ ಸಾಂತ್ವನ: ಕೇಂದ್ರ ಸಚಿವರ ಮಹಾ ಎಡವಟ್ಟು

Prasthutha|

ಗದಗ: ಹುತಾತ್ಮ ಯೋಧನ ಕುಟುಂಬಕ್ಕೆ ಭೇಟಿ ನೀಡಬೇಕಿದ್ದ ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ಅವರು ಕರ್ತವ್ಯ ನಿರತ ಯೋಧನ ಮನೆಗೆ ತೆರಳಿ ಕುಟುಂಬಕ್ಕೆ ಸಾಂತ್ವನ ಹೇಳಿರುವ ಘಟನೆ ಜಿಲ್ಲೆಯ ಮುಳಗುಂದ ಪಟ್ಟಣದಲ್ಲಿ ನಡೆದಿದೆ.

- Advertisement -

ಗುರುವಾರ ರಾತ್ರಿ ಗದಗನಲ್ಲಿ ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ಅವರು ಜನಾಶೀರ್ವಾದ ಕಾರ್ಯಕ್ರಮಕ್ಕೆ ಆಗಮಿಸಿದ್ದರು. ಈ ವೇಳೆ ಮುಳಗುಂದ ಪಟ್ಟಣದ ಹುತಾತ್ಮ ಯೋಧನ ಕುಟುಂಬಕ್ಕೆ ಭೇಟಿ ನೀಡಿ, ಸಾಂತ್ವನ ಹೇಳಿಬರುವ ಪ್ಲಾನ್ ಹಾಕಿಕೊಂಡಿದ್ದರು. ಈ ವೇಳೆ ಬಿಜೆಪಿ ಸ್ಥಳೀಯ ಕಾರ್ಯಕರ್ತರ ಮಾಹಿತಿ ಕೊರತೆಯಿಂದಾಗಿ ಎಡವಟ್ಟಾಗಿದೆ.

ಒಂದೂವರೆ ವರ್ಷದ ಹಿಂದೆ ಮುಳಗುಂದ ಪಟ್ಟಣದ ಯೋಧ ಬಸವರಾಜ್ ಹಿರೇಮಠ ಮಹಾರಾಷ್ಟ್ರದ ಪುಣೆಯಲ್ಲಿ ಕರ್ತವ್ಯನಿರತರಾಗಿದ್ದ ವೇಳೆ ಅಪಘಾತದಲ್ಲಿ ಮೃತಪಟ್ಟಿದ್ದರು. ಈ ಬಸವರಾಜ್ ಹಿರೇಮಠ ಮನೆಗೆ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ಹೇಳಿ, ಧೈರ್ಯ ತುಂಬಬೇಕಿತ್ತು. ಆದರೆ ಸ್ಥಳೀಯ ಕಾರ್ಯಕರ್ತರ ಎಡವಟ್ಟಿನಿಂದ ಸದ್ಯ ಜಮ್ಮು ಕಾಶ್ಮೀರದಲ್ಲಿ ಕರ್ತವ್ಯದಲ್ಲಿರುವ ಯೋಧ ರವಿಕುಮಾರ್ ಹನುಮಂತಪ್ಪ ಕಟ್ಟಿಮನಿ ಅವರ ಮನೆಗೆ ಭೇಟಿ ನೀಡಿದ್ದರು.

- Advertisement -


ಸೈನಿಕ ರವಿಕುಮಾರ ಪತ್ನಿ ಅವರೊಂದಿಗೆ ಮಾತನಾಡುತ್ತಾ, ಯೋಗಕ್ಷೇಮ ವಿಚಾರಿಸಿದ್ದಾರೆ. ಆ ವೇಳೆ, ಸರ್ಕಾರಿ ನೌಕರಿ ಹಾಗೂ ಜಮೀನು ಕೊಡುವ ಭರವಸೆ ನೀಡಿದ್ದಾರೆ. ಸಚಿವರ ತರಾತುರಿ ಹೇಳಿಕೆಯಿಂದ ಹಾಲಿ ಯೋಧನ ಕುಟುಂಬಸ್ಥರು ಒಂದು ಕ್ಷಣ ತಬ್ಬಿಬ್ಬು ಆಗಿದ್ದಾರೆ. ಸ್ಥಳೀಯ ಬಿಜೆಪಿ ಮುಖಂಡರ ಮಾಹಿತಿ ಕೊರತೆಯಿಂದ ಕೇಂದ್ರ ಸಚಿವರಿಂದ ಎಡವಟ್ಟಾಗಿದೆ ಎಂದು ತಿಳಿದುಬಂದಿದೆ.



Join Whatsapp