ಗುರ್ಗಾಂವ್: ಗುರ್ಗಾಂವ್ ನಿವಾಸಿಗಳು ಮತ್ತು ಬಲಪಂಥೀಯ ಗುಂಪುಗಳು ನಮಾಝ್ ವಿರುದ್ಧ ಬಹಿರಂಗವಾಗಿ ಪ್ರತಿಭಟನೆ ನಡೆಸುತ್ತಿರುವ ಮಧ್ಯೆಯೇ 40 ವರ್ಷದ ಅಕ್ಷಯ್ ಯಾದವ್ ಅವರು “ ಮುಸ್ಲಿಮರೇ ಬನ್ನಿ ನನ್ನ ಅಂಗಡಿಯಲ್ಲಿ ನಮಾಝ್ ನಿರ್ವಹಿಸಿ” ಎಂದು ಹೇಳುವ ಮೂಲಕ ಸೌಹಾರ್ದ ಮೆರೆದಿದ್ದಾರೆ.
ಗುರ್ಗಾಂವ್ ನ ಸೆಕ್ಟರ್ 12 ರಲ್ಲಿ ಖಾಲಿ ಇರುವ ತಮ್ಮ ಅಂಗಡಿಯನ್ನು ಮುಸ್ಲಿಮ್ ಸಮುದಾಯದ ಜನರಿಗೆ ನೀಡಿರುವ ಅಕ್ಷಯ್ ಯಾದವ್ ಅವರು, ಈ ಸ್ಥಳದಲ್ಲಿ ನೀವು ನಮಾಝ್ ಮಾಡಬಹುದು ಎಂದು ಹೇಳಿದ್ದಾರೆ. ಕಳೆದ ಶುಕ್ರವಾರ ಈ ಸ್ಥಳದಲ್ಲಿ ಕನಿಷ್ಠ 15 ಮಂದಿ ಮುಸ್ಲಿಮರು ಪ್ರಾರ್ಥನೆ ಸಲ್ಲಿಸಿದ್ದು, ಭವಿಷ್ಯದಲ್ಲೂ ಈ ಜಾಗವನ್ನು ನಮಾಝ್ ಗಾಗಿ ನೀಡುತ್ತೇನೆ ಎಂದು ಯಾದವ್ ಹೇಳಿದ್ದಾರೆ.
ನವೆಂಬರ್ 12 ರಂದು, ಸೆಕ್ಟರ್ 12ಎ ನಲ್ಲಿ ನಮಾಝ್ ಸ್ಥಳದಲ್ಲಿ ಸಂಘಪರಿವಾರ ಸಂಘಟನೆಯ 80ಕ್ಕೂ ಅಧಿಕ ಕಾರ್ಯಕರ್ತರು ಜಮಾಯಿಸಿ ಘೋಷಣೆ ಕೂಗಿ ನಮಾಝ್ ಗೆ ಅಡ್ಡಿ ಪಡಿಸಿದ್ದರು. ಮಾತ್ರವಲ್ಲ ಈ ಸ್ಥಳವನ್ನು ವಾಲಿಬಾಲ್ ಕೋರ್ಟ್ ಮಾಡುವುದಾಗಿ ಹೇಳಿದ್ದರು.
ಯಾದವ್ ಅವರ ಅಂಗಡಿ ಇರುವ ಸೆಕ್ಟರ್ 12 ಪ್ರದೇಶದಲ್ಲಿ ಇತ್ತೀಚಿನ ವಾರಗಳಲ್ಲಿ ಕೆಲವು ಸ್ಥಳೀಯ ನಿವಾಸಿಗಳು ಮತ್ತು ಹಿಂದೂ ಸಂಘರ್ಷ ಸಮಿತಿಯ ಸದಸ್ಯರು ಪ್ರತಿಭಟನೆ ನಡೆಸಿ ನಮಾಝ್ ಸ್ಥಳದಲ್ಲಿ ಗೋವರ್ಧನ ಪೂಜೆಯನ್ನು ಆಯೋಜಿಸಿದ್ದರು.ಶುಕ್ರವಾರದ ಪ್ರಾರ್ಥನೆಗೆ ಅಡ್ಡಿಪಡಿಸುತ್ತಿರುವ ಬಗ್ಗೆ ಪತ್ರಿಕೆಗಳಲ್ಲಿ ಓದಿದ್ದೆ. ತಮ್ಮ ಬಾಡಿಗೆದಾರರಲ್ಲಿ ಒಬ್ಬರಾದ ತೌಫಿಕ್ ಅಹ್ಮದ್ ಅವರೊಂದಿಗೆ ಈ ವಿಷಯದ ಬಗ್ಗೆ ಚರ್ಚಿಸಿದ್ದೆ. “ನನ್ನ ಮನೆಯ ಬಳಿ ಖಾಲಿ ಅಂಗಡಿ ಇದೆ, ಅದನ್ನು ಪ್ರಾರ್ಥನೆಗೆ ಬಳಸಬಹುದು ಎಂದು ನಾನು ಅವರಿಗೆ ಹೇಳಿದೆ. ಈ ಭಾಗದ ಮುಸ್ಲಿಮರು ಹತ್ತಿರದ ವಾಹನ ಮಾರುಕಟ್ಟೆ ಮತ್ತು ಸೇವಾ ಕೇಂದ್ರಗಳಲ್ಲಿ ಕೆಲಸ ಮಾಡುತ್ತಾರೆ. ಸಮುದಾಯಗಳ ನಡುವೆ ಶಾಂತಿ ಮತ್ತು ಸಾಮರಸ್ಯಕ್ಕಾಗಿ ನಾನು ಆಶಿಸುತ್ತೇನೆ. ಪ್ರತಿಯೊಬ್ಬ ನಾಗರಿಕನಿಗೂ ಪ್ರಾರ್ಥನೆ ಮಾಡುವ ಹಕ್ಕಿದೆ ಮತ್ತು ಅದನ್ನು ಯಾರೂ ಆಕ್ಷೇಪಿಸಲು ಸಾಧ್ಯವಿಲ್ಲ ಎಂದು ಸಂವಿಧಾನ ಹೇಳುತ್ತದೆ” ಎಂದು ಯಾದವ್ ಹೇಳುತ್ತಾರೆ.
ಸುಮಾರು 1,000 ಚದರ ಅಡಿಯ ಈ ಅಂಗಡಿಯು ಸೆಕ್ಟರ್ 12 ರ ಹಳೆಯ ದೆಹಲಿ ರಸ್ತೆಯ ದೂರವಾಣಿ ವಿನಿಮಯ ಕೇಂದ್ರದ ಬಳಿ ಇದೆ ಮತ್ತು ಕೆಲವು ಸಮಯದಿಂದ ಖಾಲಿಯಾಗಿದೆ ಎಂದು ಈ ಪ್ರದೇಶದಲ್ಲಿ ಹಲವಾರು ಆಸ್ತಿಗಳನ್ನು ಹೊಂದಿರುವ ಯಾದವ್ ಹೇಳಿದರು.”ನಾನು ಉದ್ಯಮಿ. ನನಗೆ ಯಾವುದೇ ರಾಜಕೀಯ ಪಕ್ಷದೊಂದಿಗೆ ಯಾವುದೇ ಸಂಬಂಧವಿಲ್ಲ ಎಂದು ಯಾದವ್ ಹೇಳುತ್ತಾರೆ.
ಅಗತ್ಯಬಿದ್ದರೆ, ಶುಕ್ರವಾರದ ಪ್ರಾರ್ಥನೆಗಾಗಿ ತಮ್ಮ ನಿವಾಸ ಅಥವಾ ಮತ್ತೊಂದು ಭೂಮಿಯನ್ನು ನೀಡಲು ಸಿದ್ಧ ಎಂದು ಯಾದವ್ ಹೇಳಿದರು.
“ಯಾವುದೇ ದೇವರಿಗೆ ಪ್ರಾರ್ಥನೆ ಸಲ್ಲಿಸಲು ನಮ್ಮ ಸ್ಥಳವನ್ನು ಬಳಸುತ್ತಿದ್ದರೆ, ಅದು ಒಳ್ಳೆಯ ಕೆಲಸ ಎಂದು ನನ್ನ ಕುಟುಂಬ ಹೇಳಿದೆ. ನಾನು ದಶಕಗಳಿಂದ ಗುರ್ಗಾಂವ್ ನಲ್ಲಿ ವಾಸಿಸಿದ್ದೇನೆ. ಅದು ಯಾವಾಗಲೂ ಸಾಮರಸ್ಯ ಮತ್ತು ಸಹೋದರತ್ವದ ಸ್ಥಳವಾಗಿದೆ” ಎಂದು ಯಾದವ್ ಹೇಳಿದರು.
ನವೆಂಬರ್ 2 ರಂದು, “ಸ್ಥಳೀಯ ನಿವಾಸಿಗಳ ಆಕ್ಷೇಪಣೆಯನ್ನು ಉಲ್ಲೇಖಿಸಿ ಈ ಹಿಂದೆ 37 ಸೈಟ್ ಗಳ ಪೈಕಿ ಎಂಟರಲ್ಲಿ ನಮಾಝ್ ಗೆ ನೀಡಿದ್ದ ಅನುಮತಿಯನ್ನು ಜಿಲ್ಲಾಡಳಿತ ಹಿಂಪಡೆದುಕೊಂಡಿತ್ತು.
ಪ್ರಾರ್ಥನೆ ಸಲ್ಲಿಸಿದವರಲ್ಲಿ ಒಬ್ಬರಾದ ತೌಫಿಕ್ ಅಹ್ಮದ್ ಅವರು ಯಾದವ್ ಅವರ ಬಾಡಿಗೆದಾರರಾಗಿದ್ದಾರೆ, ನವೆಂಬರ್ 12 ರಂದು ಅಂಗಡಿಯಲ್ಲಿ 15-20 ಜನರು ನಮಾಜ್ ಮಾಡಿದೆವು ಎಂದು ತಿಳಿಸಿದರು.