►ಕೊಲಂಬಿಯಾ ಅಧ್ಯಕ್ಷರ ಹೆಲಿಕಾಪ್ಟರ್ ಮೇಲೆ ಗುಂಡಿನ ದಾಳಿ
►ಸಂಚಲನ ಸೃಷ್ಟಿಸಿದ ಪೊಲೀಸರ ರೇಖಾ ಚಿತ್ರ
ಬೊಗೋಟಾ: ಫೇಸ್ಬುಕ್ ಸಂಸ್ಥಾಪಕ ಮಾರ್ಕ್ ಜುಕರ್‌ಬರ್ಗ್ ಅವರು ‘ವಾಂಟೆಡ್ ಕ್ರಿಮಿನಲ್’. ಅವರನ್ನು ಪತ್ತೆ ಹಚ್ಚಿದರೆ 22 ಕೋಟಿ ಬಹುಮಾನ ನೀಡಲಾಗುವುದು ಎನ್ನುತ್ತಿದೆ ಕೊಲಂಬಿಯಾದ ಪೊಲೀಸರು ನೀಡಿದ ಜಾಹೀರಾತು!
ಮಾರ್ಕ್ ಜುಕರ್‌ಬರ್ಗ್ ಅವರ ತದ್ರೂಪಿ ಅಪರಾಧಿಯೊಬ್ಬನಿಗಾಗಿ ಕೊಲಂಬಿಯಾದ ಪೊಲೀಸರು ಗಾಳ ಬೀಸುತ್ತಿದ್ದು, ಆತನನ್ನು ಸೆರೆ ಹಿಡಿದು ಕೊಟ್ಟರೆ 3 ಮಿಲಿಯನ್ ಡಾಲರ್ (ರೂ. 22,30,23,000) ಬಹುಮಾನ ನೀಡುವುದಾಗಿ ಘೋಷಿಸಿದ್ದಾರೆ.
ಕಳೆದ ವಾರ, ಕೊಲಂಬಿಯಾದ ಅಧ್ಯಕ್ಷ ಇವಾನ್ ಡ್ಯೂಕ್ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ಮೇಲೆ ಗುಂಡಿನ ದಾಳಿ ನಡೆದಿದ್ದು, ಅದೃಷ್ಟವಷಾತ್ ಪ್ರಾಣಾಪಾಯದಿಂದ ಅವರು ಪಾರಾಗಿದ್ದರು. ಈ ಘಟನೆಯ ತನಿಖೆಯನ್ನು ಕೈಗೆತ್ತಿಕೊಂಡ ಕೊಲಂಬಿಯಾ ಪೊಲೀಸರು ಆರೋಪಿಗಳ ರೇಖಾಚಿತ್ರ ರಚಿಸಿದ್ದು, ಓರ್ವ ಕ್ರಿಮಿನಲ್ ಫೇಸ್‌ಬುಕ್‌ನ ಸಂಸ್ಥಾಪಕ ಮಾರ್ಕ್ ಜುಕರ್‌ಬರ್ಗ್ ನಂತೆ ಇದ್ದಾನೆ ಎನ್ನಲಾಗಿದೆ.
ಆರೋಪಿಗಳ ರೇಖಾ ಚಿತ್ರಗಳನ್ನು ಫೇಸ್ಬುಕ್ ನಲ್ಲಿ ಹಂಚಿಕೊಂಡ ಕೊಲಂಬಿಯಾದ ಪೊಲೀಸರು “ಈ ಫೋಟೋದಲ್ಲಿ ಇರುವವರನ್ನು ಪತ್ತೆ ಹಚ್ಚಲು ನಮಗೆ ಸಹಾಯ ಮಾಡಿ. ಇದು ಅಧ್ಯಕ್ಷ ಇವಾನ್ ಡ್ಯೂಕ್ ಮತ್ತು ಅವರ ಸಹೋದ್ಯೋಗಿಗಳು ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ಮೇಲೆ ದಾಳಿ ಮಾಡಿದ ಅಪರಾಧಿಗಳ ಚಿತ್ರಗಳಾಗಿದೆ. ಅವರನ್ನು ಪತ್ತೆ ಹಚ್ಚಿದವರಿಗೆ 3 ಮಿಲಿಯನ್ ಡಾಲರ್ ಬಹುಮಾನ ನೀಡಲಾಗುವುದು. ಇವರ ಬಗ್ಗೆ ಯಾವುದೇ ಮಾಹಿತಿ ಇದ್ದರೆ 3213945367 ಅಥವಾ 3143587212 ಸಂಖ್ಯೆಗೆ ಕರೆ ಮಾಡಿ ಎಂದು ಜಾಹೀರಾತು ಹಾಕಿದ್ದರು. ಫೋಟೋದಲ್ಲಿರುವ ಒಬ್ಬ ವ್ಯಕ್ತಿ ಮಾರ್ಕ್ ಜುಕರ್‌ಬರ್ಗ್ ರಂತೆಯೇ ಇರುವುದರಿಂದ ಇದು ವ್ಯಾಪಕ ವೈರಲಾಗಿದೆ.