ಕೊಲಿಜಿಯಂ ವ್ಯವಸ್ಥೆ ತೃಪ್ತಿದಾಯಕವಾಗಿಲ್ಲ: ಕಾನೂನು ಸಚಿವ ಕಿರಣ್ ರಿಜಿಜು

Prasthutha|

ಮುಂಬೈ: ನ್ಯಾಯಮೂರ್ತಿಗಳನ್ನು ನೇಮಕ ಮಾಡುವ ಪ್ರಸ್ತುತ ಸುಪ್ರೀಮ್ ಕೋರ್ಟ್ ವ್ಯವಸ್ಥೆಯು ಅಪಾರದರ್ಶಕವಾಗಿದೆ ಎಂದ ಕೇಂದ್ರ ಕಾನೂನು ಸಚಿವ ಕಿರಣ್ ರಿಜಿಜು, ಅರ್ಹರನ್ನು ನ್ಯಾಯಾಧೀಶರನ್ನಾಗಿ ನೇಮಿಸಬೇಕು, ಕೊಲಿಜಿಯಂಗೆ ಬೇಕಾದವರನ್ನು ಅಲ್ಲ ಎಂದು ಅವರು ಹೇಳಿದ್ದಾರೆ.

- Advertisement -

ನ್ಯಾಯಾಂಗದಲ್ಲಿ ತೀವ್ರ ರಾಜಕೀಯವಿದ್ದು, ನ್ಯಾಯಾಧೀಶರು ಅದನ್ನು ಬಹಿರಂಗಪಡಿಸುತ್ತಿರಲಿಲ್ಲ ಎಂದು ಅವರು ಕೊಲಿಜಿಯಂ ವ್ಯವಸ್ಥೆಯನ್ನು ಉಲ್ಲೇಖಿಸುತ್ತಾ ಹೇಳಿದರು.

ಶುಕ್ರವಾರ ಇಂಡಿಯಾ ಟುಡೆ ಆಯೋಜಿಸಿದ್ದ ಸಮಾವೇಶದಲ್ಲಿ ‘ನ್ಯಾಯಾಂಗದ ಸುಧಾರಣೆ’ ಎಂಬ ವಿಷಯದ ಕುರಿತು ಮಾತನಾಡಿದ ಅವರು, ವಿಶ್ವಾದ್ಯಂತ ನ್ಯಾಯಾಧೀಶರನ್ನು ಸರ್ಕಾರ ನೇಮಿಸುತ್ತಿದೆ. ಆದರೆ ಭಾರತದಲ್ಲಿ ನ್ಯಾಯಾಧೀಶರು ಮಾತ್ರ ಈ ನೇಮಕಾತಿಯನ್ನು ನಿರ್ವಹಿಸುತ್ತಾರೆ ಎಂದು ತಿಳಿಸಿದರು.

- Advertisement -

ನಾನು ನ್ಯಾಯಾಂಗ ಅಥವಾ ನ್ಯಾಯಾಧೀಶರನ್ನು ಟೀಕಿಸುವುದಿಲ್ಲ. ಸುಪ್ರೀಮ್ ಕೋರ್ಟ್’ನ ಕೊಲಿಜಿಯಂ ವ್ಯವಸ್ಥೆಯಿಂದ ನನಗೆ ತೃಪ್ತಿಯಾಗಿಲ್ಲ. ಯಾವ ವ್ಯವಸ್ಥೆಯೂ ಪರಿಪೂರ್ಣವಲ್ಲ. ನಾವು ಯಾವಾಗಲೂ ಉತ್ತಮ ವ್ಯವಸ್ಥೆಗಾಗಿ ಶ್ರಮಿಸಬೇಕು ಮತ್ತು ಅದಕ್ಕಾಗಿ ಕೆಲಸ ಮಾಡಬೇಕು ಎಂದು ಸಚಿವ ಕಿರಣ್ ರಿಜಿಜು ತಿಳಿಸಿದ್ದಾರೆ.

ವ್ಯವಸ್ಥೆಯು ಜವಾಬ್ದಾರಿಯುತ ಮತ್ತು ಪಾರದರ್ಶಕವಾಗಿರಬೇಕು. ಇದು ಅಪಾರದರ್ಶಕವಾಗಿದ್ದರೆ, ಸಂಬಂಧಪಟ್ಟ ಸಚಿವರಲ್ಲದೆ, ಅದರ ವಿರುದ್ಧ ಬೇರೆ ಯಾರು ಮಾತನಾಡುತ್ತಾರೆ ಎಂದು ಅವರು ಪ್ರಶ್ನಿಸಿದ್ದಾರೆ.
ವಕೀಲರು ಮತ್ತು ಕೆಲವು ನ್ಯಾಯಾಧೀಶರು ಸೇರಿದಂತೆ ಜನರ ಚಿಂತನೆಯನ್ನು ನಾನು ಪ್ರತಿಬಿಂಬಿಸುತ್ತಿದ್ದೇನೆ ಎಂದು ಅವರು ತಿಳಿಸಿದರು.

“ಈಗಿನ ಕೊಲಿಜಿಯಂ ವ್ಯವಸ್ಥೆಯ ಮೂಲ ದೋಷವೆಂದರೆ ನ್ಯಾಯಾಧೀಶರು ತಮಗೆ ತಿಳಿದಿರುವ ಸಹೋದ್ಯೋಗಿಗಳನ್ನು ಶಿಫಾರಸು ಮಾಡುತ್ತಿದ್ದಾರೆ. ನಿಸ್ಸಂಶಯವಾಗಿ, ಅವರು ತಮಗೆ ತಿಳಿದಿಲ್ಲದ ನ್ಯಾಯಾಧೀಶರನ್ನು ಶಿಫಾರಸು ಮಾಡುವುದಿಲ್ಲ, ”ಎಂದು ರಿಜಿಜು ಒತ್ತಿ ಹೇಳಿದರು.

ಸರ್ಕಾರವು ನೇಮಕಾತಿ ಪ್ರಕ್ರಿಯೆಯಲ್ಲಿ ತೊಡಗಿಸಿಕೊಂಡರೆ ಹೇಗೆ ವಿಭಿನ್ನವಾಗಿರುತ್ತದೆ ಎಂದು ಪ್ರಶ್ನಿಸಿದಾಗ ಪ್ರತಿಕ್ರಿಯಿಸಿದ ರಿಜಿಜು, ಸರ್ಕಾರವು ಮಾಹಿತಿಯನ್ನು ಸಂಗ್ರಹಿಸಲು ಸ್ವತಂತ್ರ ಕಾರ್ಯವಿಧಾನವನ್ನು ಹೊಂದಿದೆ ಎಂದು ತಿಳಿಸಿದರು.

“ನಿರ್ಧಾರವನ್ನು ತೆಗೆದುಕೊಳ್ಳುವ ಮೊದಲು ಸರ್ಕಾರವು ಗುಪ್ತಚರ ಬ್ಯೂರೋ ಮತ್ತು ಹಲವಾರು ಇತರ ವರದಿಗಳನ್ನು ಪಡೆಯಲಿದೆ. ನ್ಯಾಯಾಂಗ ಅಥವಾ ನ್ಯಾಯಾಧೀಶರು ಇದನ್ನು ಮಾಡುವುದಿಲ್ಲ ”ಎಂದು ಅವರು ಆರೋಪಿಸಿದರು.

ಈ ಮಧ್ಯೆ ಪ್ರಪಂಚದಾದ್ಯಂತ ಎಲ್ಲಾ ಸರ್ಕಾರಗಳು ನ್ಯಾಯಾಧೀಶರನ್ನು ನೇಮಿಸುತ್ತವೆ ಎಂದು ಕಾನೂನು ಸಚಿವರು ಸಾಂದರ್ಭಿಕವಾಗಿ ತಿಳಿಸಿದರು.

ಸಚಿವರ ಮಾತಿನ ಪ್ರಮುಖಾಂಶಗಳು

  • ನಾವು ಪ್ರಜಾಸತ್ತಾತ್ಮಕ ವ್ಯವಸ್ಥೆಯಲ್ಲಿದ್ದು, ಭಾರತ  ಪ್ರಜಾಪ್ರಭುತ್ವ ರಾಷ್ಟ್ರವಾಗಿದೆ. ರಾಷ್ಟ್ರದ ಸಾರ್ವಭೌಮತ್ವವು ದೇಶದ ಜನರಲ್ಲಿ ಅಡಕವಾಗಿದೆ. ಭಾರತದ ಜನ ತಮ್ಮನ್ನು ತಾವು ಆಳಿಕೊಳ್ಳುತ್ತಾರೆ, ತಮ್ಮನ್ನು ತಾವು ಹೇಗೆ ಆಳಿಕೊಳ್ಳಬೇಕು ಎಂದು ಜನ ನಿರ್ಧರಿಸುತ್ತಾರೆ. ಚುನಾಯಿತ ಪ್ರತಿನಿಧಿಗಳ ಮೂಲಕ ಜನ ತಮ್ಮನ್ನು ತಾವು ಆಳಿಕೊಳ್ಳುತ್ತಾರೆ. ಹಾಗಾಗಿ, ದೇಶವನ್ನು ಯಾರು ನಡೆಸಬೇಕು? ನ್ಯಾಯಾಂಗ  ದೇಶವನ್ನು ನಡೆಸಬೇಕೆ ಅಥವಾ ಚುನಾಯಿತ ಸರ್ಕಾರ ನಡೆಸಬೇಕೆ?
  • ನ್ಯಾಯಾಂಗವೇ ನಿಯಮಾವಳಿ ರೂಪಿಸಲು ಹೊರಡುವುದಾದರೆ, ಎಲ್ಲಿ ರಸ್ತೆ ನಿರ್ಮಿಸಬೇಕೆಂದು ನಿರ್ಧರಿಸಲು ಮುಂದಾಗುವುದಾದರೆ, ಸೇವಾ ನಿಯಮಗಳಿಗೆ ಕೈ ಹಾಕುವುದಾದರೆ ಸರ್ಕಾರವಾದರೂ ಏತಕ್ಕಾಗಿ ಇರಬೇಕು?
  • ಕೋವಿಡ್‌ ವೇಳೆ ಕೊರೊನಾ ಸಂಬಂಧಿತ ವ್ಯವಹಾರಗಳನ್ನು ನಡೆಸಲು ತಜ್ಞರ ಸಮಿತಿ ರಚಿಸಬೇಕು ಎಂದು ದೆಹಲಿ ಹೈಕೋರ್ಟ್‌ನ ಪೀಠವೊಂದು ನಿರ್ದೇಶಿಸಿತು. ನಂತರ ನಾವು ಸಾಲಿಸಿಟರ್‌ ಜನರಲ್‌ (ತುಷಾರ್‌ ಮೆಹ್ತಾ) ಅವರನ್ನುದ್ದೇಶಿಸಿ ದಯವಿಟ್ಟು ಹಾಗೆ ನಿರ್ದೇಶಿಸುವುದು ನ್ಯಾಯಾಲಯದ ಕೆಲಸವಲ್ಲ ಎಂದು ಪೀಠಕ್ಕೆ ತಿಳಿಸುವಂತೆ ಹೇಳಿದೆವು. ನ್ಯಾಯಾಂಗ ಹಾಗೆ ಆದೇಶಿಸಲು ಸಾಧ್ಯವಿಲ್ಲ. ನಮ್ಮೆದುರು ನಿಲ್ಲುವ ಸವಾಲುಗಳನ್ನು ನಿಭಾಯಿಸಲು ಸರ್ಕಾರವೇ ಉತ್ತಮ ಸ್ಥಾನದಲ್ಲಿದೆ.
  • ದೇಶದ್ರೋಹ ಕಾನೂನನ್ನು ಬದಲಾಯಿಸಲು ಸರ್ಕಾರ ಚಿಂತನೆ ನಡೆಸುತ್ತಿದೆ ಎಂದು ನಾವು ಸುಪ್ರೀಂ ಕೋರ್ಟ್‌ಗೆ ತಿಳಿಸಿದೆವು. ಅದರ ಹೊರತಾಗಿಯೂ ಸುಪ್ರೀಂ ಕೋರ್ಟ್ ದೇಶದ್ರೋಹ ಕಾನೂನಿನ ನಿಬಂಧನೆಗಳನ್ನು ರದ್ದುಗೊಳಿಸಿತು. ನನಗೆ ಅದರ ಬಗ್ಗೆ ತುಂಬಾ ಅಸಮಾಧಾನ ಇದೆ. ಇವುಗಳು ನನಗೆ ನಿಜವಾಗಿಯೂ ಅತೃಪ್ತಿ ತರುವ ವಿಚಾರಗಳು. ನಾವು ಯಾವುದೇ ವಿಚಾರಕ್ಕೆ ಸಂಬಂಧಿಸಿದಂತೆ ಕಠೋರವಾಗಿ ನಡೆದುಕೊಂಡು ನ್ಯಾಯಾಂಗದ ಮಾತನ್ನು ಕೇಳುತ್ತಿಲ್ಲ ಎಂದಾದರೆ ಆಗ ನ್ಯಾಯಾಂಗ ನಮ್ಮನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಳ್ಳಬಹುದು. ಈಗಾಗಲೇ (ಕಾನೂನು ಕುರಿತು) ಪರಿಶೀಲನೆ ನಡೆಸುತ್ತಿರುವುದಾಗಿ ನಾವು ಹೇಳಿದ ಮೇಲೆಯೂ, ಉತ್ತಮ ನಿಯಮಾವಳಿ ನಿರೂಪಿಸುತ್ತೇವೆ ಎಂದು ತಿಳಿಸಿದ ನಂತರವೂ ನ್ಯಾಯಾಂಗ ಈ ತೀರ್ಪು ನೀಡುತ್ತದೆ ಎನ್ನುವುದಾದರೆ ಅದು ಒಳ್ಳೆಯ ಸಂಗತಿಯಲ್ಲ. ಹೀಗಾಗಿ ಆಗ ಕೂಡ ನಾನು ಪ್ರತಿಕ್ರಿಯಿಸಿದ್ದೆ. ಎಲ್ಲರಿಗೂ ಲಕ್ಷ್ಮಣ ರೇಖೆ ಇದೆ. ರಾಷ್ಟ್ರದ ಹಿತದೃಷ್ಟಿಯಿಂದ ಲಕ್ಷ್ಮಣ ರೇಖೆ ದಾಟಬಾರದು ಎಂದು.
  • ನಮ್ಮ ಸರ್ಕಾರ, ಅತ್ಯಂತ ಪ್ರಜಾಸತ್ತಾತ್ಮಕವಾಗಿದ್ದು,  ನಾವು ನ್ಯಾಯಾಂಗವನ್ನು ಗೌರವಿಸುತ್ತೇವೆ. ನಾವು ನ್ಯಾಯಾಂಗದ ಸಂಪೂರ್ಣ ಸ್ವಾತಂತ್ರ್ಯದಲ್ಲಿ ನಂಬಿಕೆ ಇರಿಸಿದ್ದೇವೆ. ಕಳೆದ ಎಂಟೂವರೆ ವರ್ಷಗಳಲ್ಲಿ ನರೇಂದ್ರ ಮೋದಿಯವರ ನೇತೃತ್ವದ ಸರ್ಕಾರ  ನ್ಯಾಯಾಂಗದ ಅಧಿಕಾರ ದುರ್ಬಲಗೊಳಿಸುವಂತಹ ಒಂದು ಹೆಜ್ಜೆಯನ್ನೂ ಇಟ್ಟಿಲ್ಲ. ನನ್ನನ್ನು ನಂಬಿ. ನ್ಯಾಯಾಂಗದ ಸ್ವಾತಂತ್ರ್ಯವನ್ನು ರಕ್ಷಿಸಬೇಕು ಮತ್ತು ಉತ್ತೇಜಿಸಬೇಕು ಎಂದು ನಾನು ದೃಢವಾಗಿ ನಂಬುತ್ತೇನೆ.
  • ನ್ಯಾಯಾಲಯದಲ್ಲಿ ಬಾಕಿ ಇರುವ ಪ್ರಕರಣಗಳು ನನಗೆ ದೊಡ್ಡ ಚಿಂತೆ ತಂದೊಡ್ಡಿದ್ದು ವ್ಯಕ್ತಿಯೊಬ್ಬ (ವಿಚಾರಣಾ) ದಿನಕ್ಕಾಗಿ 20-25 ವರ್ಷ ಕಾಯುವುದು ಆತಂಕಕಾರಿ ಸಂಗತಿ ಆಗವುದಿಲ್ಲವೇ?
Join Whatsapp