ಕಿಂಗ್ ಕೊಹ್ಲಿ ಬಿಸಿಸಿಐ ನಡುವೆ ಶೀತಲ ಸಮರ !

Prasthutha|

ಮುಂಬೈ: ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿಯ ಬ್ಯಾಡ್ ಟೈಮ್ ಶುರುವಾಗಿರುವ ಎಲ್ಲಾ ಲಕ್ಷಣಗಳು ಕಾಣಿಸತೊಡಗಿವೆ. ಕಾರ್ಯಭಾರದ ಒತ್ತಡದಿಂದಾಗಿ ಟಿ-20 ವಿಶ್ವಕಪ್ ಬಳಿಕ ಟಿ-20 ತಂಡದ ನಾಯಕತ್ವ ಸ್ಥಾನದಿಂದಾಗಿ ಕೆಳಗಿಳಿಯುವುದಾಗಿ ಕೊಹ್ಲಿ ಘೋಷಿಸಿದ್ದರು. ಆದರೆ ನಿಜವಾದ ಕಾರಣ ಬೇರೆಯೇ ಇದೆ ಎಂಬುದು ಇದೀಗ ಬಯಲಾಗಿದೆ.

- Advertisement -


ವಿರಾಟ್ ಕೊಹ್ಲಿ ಹಾಗೂ ಬಿಸಿಸಿಐ ನಡುವೆ ಎಲ್ಲವೂ ಸರಿಯಿಲ್ಲ ಎಂಬುದು ಒಂದೊಂದಾಗಿ ಬಯಲಾಗುತ್ತಿದೆ. ಟಿ-20 ವಿಶ್ವಕಪ್ ಟೂರ್ನಿಗೆ ಟೀಮ್ ಇಂಡಿಯಾದಲ್ಲಿ ಯಜುವೇಂದ್ರ ಚಾಹಲ್’ಗೆ ಸ್ಥಾನ ಕಲ್ಪಿಸಲು ಕೊಹ್ಲಿ ಪಟ್ಟು ಹಿಡಿದಿದ್ದರು. ಆದರೆ ಇದಕ್ಕೆ ಸೊಪ್ಪು ಹಾಕದ ಬಿಸಿಸಿಐ ಹಿರಿಯ ಸ್ಪಿನ್ನರ್ ಆರ್. ಆಶ್ವಿನ್’ಗೆ ಸ್ಥಾನ ನೀಡಿತ್ತು. ಇದು ಕೊಹ್ಲಿಗೆ ನುಂಗಲಾರದ ತುತ್ತಾಗಿತ್ತು. ಆ ಬಳಿಕ ಮಾಜಿ ನಾಯಕ ಎಂಎಸ್ ಧೋನಿಯನ್ನು ತಂಡದ ಮೆಂಟರ್ ಆಗಿ ನೇಮಿಸಿದ ನಿರ್ಧಾರ ತೆಗೆದುಕೊಳ್ಳುವ ವೇಳೆ ಕೊಹ್ಲಿಯ ಜೊತೆ ಬಿಸಿಸಿಐ ಯಾವುದೇ ಮಾತುಕತೆ ನಡೆಸಿರಲಿಲ್ಲ. ಇನ್ನು ರವಿಶಾಸ್ತ್ರಿಯ ಬಳಿಕ ಕೋಚ್ ಹುದ್ದೆಗೆ ಅನಿಲ್ ಕುಂಬ್ಳೆಯನ್ನು ಪರಿಗಣಿಸುತ್ತಿರುವುದು ಕೊಹ್ಲಿಯ ಕಣ್ಣು ಕೆಂಪಾಗುವಂತೆ ಮಾಡಿತ್ತು.


ಇಷ್ಟೆಲ್ಲಾ ಆದ ಬಳಿಕವೂ ಕೊಹ್ಲಿಯ ಸಂಕಷ್ಟ ಮುಗಿದಂತೆ ಕಾಣುತ್ತಿಲ್ಲ. ಟೀಮ್ ಇಂಡಿಯಾದ ಮೂವರು ಹಿರಿಯ ಆಟಗಾರರು ವಿರಾಟ್ ಕೊಹ್ಲಿ ವಿರುದ್ಧ ಬಿಸಿಸಿಐಗೆ ದೂರು ಸಲ್ಲಿಸಿರುವುದಾಗಿ ವರದಿಯಾಗಿದೆ. ನ್ಯೂಜಿಲೆಂಡ್ ವಿರುದ್ಧದ ವಿಶ್ವ ಟೆಸ್ಟ್ ಚಾಂಪಿಯನ್’ಶಿಪ್ ಫೈನಲ್ ಪಂದ್ಯದ ಹೀನಾಯ ಸೋಲಿನ ಬಳಿಕ ಡ್ರೆಸ್ಸಿಂಗ್ ರೂಮ್’ನಲ್ಲಿ ಕೊಹ್ಲಿಯ ಅತಿರೇಕದ ವರ್ತನೆ ಕುರಿತು ಇಬ್ಬರು ಹಿರಿಯ ಬ್ಯಾಟ್ಸ್’ಮೆನ್’ಗಳು, ಬಿಸಿಸಿಐ ಕಾರ್ಯದರ್ಶಿ ಜೇ ಶಾರಿಗೆ ದೂರವಾಣಿ ಕರೆಮಾಡಿ ದೂರು ಸಲ್ಲಿಸಿದ್ದಾರೆ ಎಂಬುದು ಇದೀಗ ಬಹಿರಂಗವಾಗಿದೆ. ಡ್ರೆಸ್ಸಿಂಗ್ ರೂಮ್’ನಲ್ಲಿ ಸಹ ಆಟಗಾರರ ವಿರುದ್ಧ ಕೂಗಾಡಿದ್ದ ಕೊಹ್ಲಿ, ಚೇತೇಶ್ವರ ಪೂಜಾರ ಹಾಗೂ ಅಜಿಂಕ್ಯಾ ರಹಾನೆಯನ್ನು ತಳ್ಳಿರುವುದಾಗಿ ವರದಿಯಾಗಿದೆ.

- Advertisement -


ಮತ್ತೊಂದೆಡೆ ವಿರಾಟ್ ಕೊಹ್ಲಿ ಕಾರಣದಿಂದಾಗಿ ತನಗೆ ಅಭದ್ರತೆ ಕಾಡುತ್ತಿದೆ ಎಂದು ಹಿರಿಯ ಸ್ಪಿನ್ನರ್ ಆರ್. ಆಶ್ವಿನ್, ಬಿಸಿಸಿಐ ಕಾರ್ಯದರ್ಶಿಗೆ ದೂರು ಕೊಟ್ಟಿದ್ದಾರೆ. ಅತ್ಯುತ್ತಮ ಸ್ಪಿನ್ನರ್ ಆಗಿದ್ದರೂ ಸಹ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಅಶ್ವಿನ್ ಗೆ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಸಿಕ್ಕಿರಲಿಲ್ಲ. ಕೋಚ್ ರವಿಶಾಸ್ತ್ರಿ ಸ್ವತಃ ಆರ್ ಆಶ್ವಿನ್’ರನ್ನು ಆಡಿಸಲು ಮುಂದಾಗಿದ್ದರೂ ವಿರಾಟ್ ಕೊಹ್ಲಿ ಅದಕ್ಕೆ ಅವಕಾಶ ನೀಡಿರಲಿಲ್ಲ. ಇದರಿಂದ ಸಾಕಷ್ಟು ಮನನೊಂದಿದ್ದ ಆಶ್ವಿನ್ ತನಗೆ ಅಭದ್ರತೆ ಕಾಡುತ್ತಿದೆ ಎಂದು ಆರೋಪಿಸಿ ಬಿಸಿಸಿಐಗೆ ದೂರು ನೀಡಿದ್ದರು.


ಈ ಎಲ್ಲಾ ಬೆಳವಣಿಗೆಗಳನ್ನು ನೋಡಿದಾಗ ಬಿಸಿಸಿಐ ಹಾಗೂ ಕೊಹ್ಲಿಯ ನಡುವೆ ಸಾಕಷ್ಟು ಭಿನ್ನಬಿಪ್ರಾಯಗಳು ಇರುವುದು ಸ್ಪಷ್ಟವಾಗುತ್ತದೆ. ಪ್ರಮುಖ ಆಂಗ್ಲ ದೈನಿಕವೊಂದರ ವರದಿಯ ಪ್ರಕಾರ ಮುಂದಿನ ದಿನಗಳಲ್ಲಿ ಎಕದಿನ ತಂಡದ ನಾಯಕತ್ವಕ್ಕೂ ಕೊಹ್ಲಿಯಿಂದ ರಾಜೀನಾಮೆ ಕೊಡಿಸಲು ಬಿಸಿಸಿಐ ಆಲೋಚಿಸುತ್ತಿದೆ ಎನ್ನಲಾಗುತ್ತಿದೆ.

Join Whatsapp