►ತುರ್ತು ಸಂದರ್ಭಗಳಲ್ಲಿ ರೋಗಿಗಳು ಇರುವಲ್ಲಿಗೆ PFI ಆಕ್ಸಿಜನ್ ಸೇವೆ !
►ಕಾರ್ಪೊರೇಶನ್ ಕಮಿಷನರ್ ಕುಮಾರವೇಲು ಈ ಕುರಿತು ಹೇಳುವುದೇನು?
ತಮಿಳುನಾಡು ಸೇರಿದಂತೆ ಇಡೀ ದೇಶದಾದ್ಯಂತ ಕೋವಿಡ್ ನಿರ್ವಹಣೆ ಮಾಡುವಲ್ಲಿ ಉತ್ತಮ ಕೆಲಸ ಕಾರ್ಯಗಳನ್ನು ಮಾಡುತ್ತಿರುವ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಸಂಘಟನೆಯ ಜೊತೆಗೆ ಕೊಯಮತ್ತೂರು ಮುನ್ಸಿಪಲ್ ಕಾರ್ಪೊರೇಶನ್ ಕೈಜೋಡಿಸಿದೆ. ನಗರದಲ್ಲಿ ಉಚಿತ ಕೋವಿಡ್ ವಿಪತ್ತು ಪರಿಹಾರ ಕೇಂದ್ರಗಳನ್ನು ನಿರ್ವಹಣೆ ಮಾಡಲು ಪಿಎಫೈ ಜೊತೆಗೆ ಕಾರ್ಪೊರೇಶನ್ ಅಧಿಕೃತವಾಗಿ ಒಪ್ಪಂದವನ್ನು ಮಾಡಿಕೊಂಡಿದೆ.
ಲಘು ಕೋವಿಡ್ ರೋಗ ಲಕ್ಷಣವಿರುವ ರೋಗಿಗಳು ಹೋಮ್ ಐಸೋಲೇಷನ್ ನಲ್ಲಿರುತ್ತಾರೆ. ಹಠಾತ್ ಆಗಿ ಉಸಿರಾಟದ ತೊಂದರೆ ಕಂಡು ಬಂದ ಸಂದರ್ಭಗಳಲ್ಲಿಅವರಿಗೆ ಆಮ್ಲಜನಕ ಸೌಲಭ್ಯ ಹೊಂದಿರುವ ಆಸ್ಪತ್ರೆಗೆ ವರ್ಗಾಯಿಸುವ ಅವಶ್ಯಕತೆಯಿರುತ್ತದೆ. ಈ ವೇಳೆ ಕೊಯಮತ್ತೂರು ಪರಿಸರದಲ್ಲಿರುವ ರೋಗಿಗಳು ಆಸ್ಪತ್ರೆಯ ಆವರಣದಲ್ಲಿ ಆಸ್ಪತ್ರೆ ಬೆಡ್ ಗಾಗಿ ಅಥವಾ ಆಮ್ಲಜನಕಕ್ಕಾಗಿ ಕಾಯುವ ವೇಳೆ ರೋಗಿಗಳಿಗೆ ಅವರಿರುವ ಸ್ಥಳದಲ್ಲೇ ಪೋರ್ಟೇಬಲ್ ಆಕ್ಸಿಜನ್ ಸೇವೆಯನ್ನು ನೀಡಲಾಗುತ್ತದೆ. ಇದನ್ನು PFI ಇದೀಗಾಗಲೇ ಮಾಡುತ್ತಿದೆ. ಆದರೆ ಮೇ 17 ರ ಬಳಿಕ ಕಾರ್ಪೊರೇಶನ್ ಜೊತೆಗೆ ಒಪ್ಪಂದ ಮಾಡಿರುವುದರಿಂದ ಈ ಮಾನವೀಯ ಸೇವೆಗೆ ಇದೀಗ ಸರಕಾರದ ಅಧಿಕೃತ ಮುದ್ರೆ ಬಿದ್ದಂತಾಗಿದೆ.
ಕೊಯಮತ್ತೂರು ಕಾರ್ಪೊರೇಶನ್ ಆಯುಕ್ತ ಕುಮಾರವೇಲು ಪಾಂಡಿಯನ್ ಮಾತನಾಡುತ್ತಾ, “ ಇದೀಗಾಗಲೇ ಜನರು ಈ ಸೇವೆಯನ್ನು ಪಡೆಯುತ್ತಿದ್ದಾರೆ. ಆದರೆ ಕೆಲವರಿಗೆ ಈ ಕುರಿತು ಇನ್ನೂ ಮಾಹಿತಿ ಇಲ್ಲ. ಮುನ್ಸಿಪಲ್ ಕಾರ್ಪೊರೇಶನ್ ವತಿಯಿಂದ ನಾವು ಜನರಿಗೆ ಈ ಸೇವೆಯ ಕುರಿತು ಜಾಗೃತಿ ಮೂಡಿಸುತ್ತಿದ್ದೇವೆ. ಜನರು ಕೋವಿಡ್ ಪಾಸಿಟಿವ್ ವರದಿ ಬಂದ ಬಳಿಕ ಆತಂಕದಿಂದಲೇ ಉಸಿರಾಟದ ಸಮಸ್ಯೆಗೆ ಒಳಗಾಗುತ್ತಾರೆ. ಇಂತಹ ಸಂದರ್ಭದಲ್ಲಿ PFI ತನ್ನ ಮೊಬೈಲ್ ಆಕ್ಸಿಜನ್ ಸೇವೆಯ ಮೂಲಕ ಇಂತಹವರಿಗೆ ಆಕ್ಸಿಜನ್ ನೀಡಿ ನೆರವಾಗುತ್ತದೆ. ನಾವು PFIಯ ಮೊಬೈಲ್ ಆಕ್ಸಿಜನ್ ಸೇವೆಯನ್ನು ಪ್ರೋತ್ಸಾಹಿಸುತ್ತೇವೆ” ಎಂದಿದ್ದಾರೆ.
ಈ ಕುರಿತು ಮಾದ್ಯಮಗಳ ಜೊತೆ ಮಾತನಾಡಿದ ಕೊಯಮತ್ತೂರು PFI ನ ಜಿಲ್ಲಾ ಕಾರ್ಯದರ್ಶಿ ಉಬೈದೂರ್ ರಹಮಾನ್, “ಕೊರೋನಾ ಎರಡನೇ ಅಲೆ ಏಕಾಏಕಿ ಉದ್ಭವಿಸಿದೆ. ನಾವು ಈ ಉಚಿತ ಕೊರೋನಾ ವಿಪತ್ತು ಪರಿಹಾರ ಕೇಂದ್ರವನ್ನು ಪ್ರಾರಂಭಿಸಿದ್ದು, ಅದರಲ್ಲಿ ನಾವು 10 ರೀತಿಯ ಸೇವೆಗಳನ್ನು ಮಾಡುತ್ತಿದ್ದೇವೆ. ಈ ಪರಿಸರದಲ್ಲಿ ರೋಗಿಗಳಿಗೆ ಅಗತ್ಯ ತುರ್ತು ಸಂದರ್ಭಗಳಲ್ಲಿ ಮೊಬೈಲ್ ಆಕ್ಸಿಜನ್ ಸೇವೆಯನ್ನು ನೀಡುತ್ತಿದ್ದೇವೆ. ನಾವೀಗ 5 ಮೊಬೈಲ್ ಆಕ್ಸಿಜನ್ ವಾಹನಗಳೊಂದಿಗೆ ಕೋವಾಯಿಯಲ್ಲಿ ಈ ಸೇವೆಯನ್ನು ಪ್ರಾರಂಭಿಸಿದ್ದೇವೆ. ಪ್ರತಿದಿನ ಆಮ್ಲಜನಕದ ಅಗತ್ಯವಿರುವ ಸರಾಸರಿ 250 ಜನರು ನಮ್ಮನ್ನು ಸಂಪರ್ಕಿಸುತ್ತಾರೆ ಎಂದು ಹೇಳಿದ್ದಾರೆ.