ಚಿಕ್ಕಮಗಳೂರು: ಮಲೆನಾಡು ಹಾಗೂ ಕರಾವಳಿ ಜಿಲ್ಲೆಗಳಲ್ಲಿ ಕೆಲದಿನಗಳಿಂದ ಉಷ್ಣಾಂಶ ಕುಸಿದಿದ್ದು, ಮೈ ಕೊರೆಯುವ ಚಳಿ ಕಾಡುತ್ತಿದೆ.
ಚಿಕ್ಕಮಂಗಳೂರಿನಲ್ಲಿ ಚಳಿಗೆ ಹೆದರಿ ಬಹಳಷ್ಟು ಜನರು ಬೆಳಿಗ್ಗೆ ಹಾಗೂ ಇಳಿಸಂಜೆಯ ವಿಹಾರವನ್ನು ನಿಲ್ಲಿಸಿದ್ದಾರೆ.
ಮಲೆನಾಡು ಮತ್ತು ಬಯಲುಸೀಮೆಯಲ್ಲಿ ಚಳಿಯ ತೀವ್ರತೆ ಹೆಚ್ಚಿದ್ದು. ಮೂಡಿಗೆರೆಯಲ್ಲಿ ಎರಡು ದಿನಗಳ ಹಿಂದೆ ಕನಿಷ್ಠ 7.2 ಡಿಗ್ರಿ ಸೆಲ್ಸಿಯಸ್, ಬಯಲುಸೀಮೆ ಭಾಗದ ಕಡೂರಿನಲ್ಲಿ 10.2 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದೆ.
ಮಲೆನಾಡಿನಲ್ಲಿ ಬೆಳಿಗ್ಗೆ, ಸಂಜೆ ಹಾಗೂ ರಾತ್ರಿ ಹೆಚ್ಚಿನ ಚಳಿ ಇದ್ದು, ಚಳಿಯಿಂದ ರಕ್ಷಣೆ ಪಡೆಯಲು ಜನರು ಸ್ವೆಟರ್, ಟೋಪಿಗಳ ಮೊರೆ ಹೋಗಿದ್ದಾರೆ. ಚಳಿಯಿಂದ ರಕ್ಷಣೆ ಪಡೆಯಲು ಕೆಲವರು ಬೆಳಗಿನ ವೇಳೆ ಬೀದಿ ಬದಿಯಲ್ಲಿ ಕಾಗದ–ಪ್ಲಾಸ್ಟಿಕ್, ತರಗೆಲೆ ಗುಡ್ಡೆಮಾಡಿ ಬೆಂಕಿ ಹೊತ್ತಿಸಿ, ದೇಹ ಬೆಚ್ಚಗೆ ಮಾಡಿಕೊಳ್ಳುತ್ತಾರೆ.
ಕರಾವಳಿಯಲ್ಲಿ ಚಳಿಯ ತೀವ್ರತೆ ಹೆಚ್ಚಾಗುತ್ತಿದ್ದು, ಕನಿಷ್ಠ ಉಷ್ಣಾಂಶ ಇಳಿಮುಖಗೊಳ್ಳುತ್ತಿದೆ. ಜನರಲ್ಲಿ ಸಾಂಕ್ರಾಮಿಕ ರೋಗದ ಭೀತಿ ಎದುರಾಗಿದೆ. ಬೆಳಗ್ಗೆ, ಸಂಜೆ ಶೀತ ಗಾಳಿ ಜತೆಗೆ ಇಬ್ಬನಿ ಬೀಳುತ್ತಿದ್ದು, ಜ್ವರ, ಶೀತ- ಕೆಮ್ಮು, ಗಂಟಲು ನೋವು ಇತ್ಯಾದಿ ಕಾಣಿಸಿಕೊಳ್ಳುತ್ತಿದೆ. ಇನ್ನು ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಉಷ್ಣಾಂಶ ತೀವ್ರವಾಗಿ ಕುಸಿದಿದ್ದು, ಕಡಿಮೆಯಾಗಿರುವ ತಾಪಮಾನ ಹಲವರಲ್ಲಿ ಆರೋಗ್ಯ ಸಮಸ್ಯೆಯನ್ನುಂಟು ಮಾಡುತ್ತಿದೆ.