ಕರಾವಳಿ ಅಭಿವೃದ್ಧಿ ಪ್ರಾಧಿಕಾರದಿಂದ ಸದ್ಯವೇ 151 ಕಾಮಗಾರಿಗಳ ಲೋಕಾರ್ಪಣೆ: ರತ್ನಾಕರ ಹೆಗ್ಡೆ

Prasthutha|

ಮಂಗಳೂರು: ಕರಾವಳಿ ಅಭಿವೃದ್ಧಿ ಪ್ರಾಧಿಕಾರವು ತನ್ನ ವ್ಯಾಪ್ತಿಯ ಕರ್ನಾಟಕದ ಮೂರು ಜಿಲ್ಲೆಗಳಲ್ಲಿ ಅಭಿವೃದ್ಧಿ ಕಾರ್ಯಕ್ರಮ ಕೈಗೊಳ್ಳಲು ಈ ಸಾಲಿನ ಆಯವ್ಯಯದಲ್ಲಿ ಹಿಂದೆಂದಿಗಿಂತಲೂ ಹೆಚ್ಚಿನ 35 ಕೋಟಿ ರೂ. ಅನುದಾನ ಕಾಯ್ದಿರಿಸಿದ್ದು, ಇನ್ನೂ 10 ಕೋಟಿ ರೂ.ಹೆಚ್ಚುವರಿ ಅನುದಾನ ಸದ್ಯವೇ ಸಿಗಲಿದೆ ಎಂದು ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರ್ ರತ್ನಾಕರ ಹೆಗ್ಡೆ ತಿಳಿಸಿದ್ದಾರೆ.

- Advertisement -

ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 2021-22ನೇ ಸಾಲಿನ 151 ಕಾಮಗಾರಿಗಳ ಪೈಕಿ ಬಹುತೇಕ ಮುಗಿದಿದ್ದು, 78 ಕಾಮಗಾರಿಗಳು ನಾನಾ ಹಂತದಲ್ಲಿ ಪ್ರಗತಿಯಲ್ಲಿವೆ. ಉತ್ತರ ಕನ್ನಡದ ತೆಂಗಿನಗುಂಡಿ, ಮೂಲ್ಕಿ ಬಳಿ ಶಾಂಭವಿ ನದಿಗೆ, ಬೆಟ್ಟಂಪಾಡಿ, ಪಾಲ್ತಾಡಿ ಗೌರಿ ಹೊಳೆಗೆ ಎಂದು ನಾಲ್ಕು ತೂಗು ಸೇತುವೆಗಳ ನಿರ್ಮಾಣ ಆಗಲಿದೆ. ತುಳು ತೆರೆದ ರಂಗ ಮಂಟಪಕ್ಕಾಗಿ 30 ಲಕ್ಷ ರೂಪಾಯಿಗಳನ್ನು ನೀಡಲಾಗಿದೆ. ಕಾರ್ಕಳ ಕೋಟಿ ಚೆನ್ನಯ ಥೀಮ್ ಪಾರ್ಕ್ಗೆ 30 ಲಕ್ಷ  ರೂ.ನೀಡಿದ್ದೇವೆ. ಬೆಳ್ತಂಗಡಿ ಕ್ರೀಡಾಂಗಣಕ್ಕೆ ಒಂದು ಕೋಟಿ ರೂಪಾಯಿ ನೀಡಿರುವುದಾಗಿ ರತ್ನಾಕರ ಹೆಗ್ಡೆ ತಿಳಿಸಿದರು.

  104 ರಸ್ತೆ ಅಭಿವೃದ್ಧಿ, 12 ಕಿರು ಸೇತುವೆ, 12 ಸಮುದಾಯ ಭವನ, 2 ಉದ್ಯಾನ, ಗ್ರಾಪಂ ಕಟ್ಟಡ 4, ಹಲವು ಹೊಸ ಮೀನು ಮಾರುಕಟ್ಟೆ ಇತ್ಯಾದಿ ಕೆಲಸ ಆಗಿದ್ದು, ಕೆಲವು ಪ್ರಗತಿಯಲ್ಲಿವೆ. ಅಲ್ಲದೆ ಒಣ ಮೀನು ಸಂಸ್ಕರಣ ತರಬೇತಿ, ಮಲ್ಲಿಗೆ ಹೂ ಬೆಳೆ ತರಬೇತಿ, ಹಲಸು ಮೇಳದ ಆಯೋಜನೆ ಇತ್ಯಾದಿ ಕೆಲಸಗಳನ್ನು ಸಹ ಅಭಿವೃದ್ಧಿ ಪ್ರಾಧಿಕಾರ ಮಾಡಿದೆ ಎಂದು ಮಟ್ಟಾರ್ ಹೆಗ್ಡೆ ಹೇಳಿದರು.

- Advertisement -

ಕರಾವಳಿಯಲ್ಲಿ ಕಡಲ ನೀರು ಕಲುಷಿತ ಆಗುತ್ತಿರುವುದರ ಬಗ್ಗೆ 30ಕ್ಕೂ ಹೆಚ್ಚು ಕಡೆ ಪರೀಕ್ಷಿಸಲು ವ್ಯವಸ್ಥೆ ಮಾಡಿ ಹಣ ಒದಗಿಸಲಾಗಿದೆ. ಪ್ರಧಾನಮಂತ್ರಿಯವರ ಮತ್ಸ್ಯ ಸಂಪದ, ಮೀನು ಗ್ರಾಮ ಯೋಜನೆ ಇತ್ಯಾದಿ ಮುನ್ನಡೆ ಕಾಣುತ್ತಿದೆ. ಸೋಲಾರ್ ಒಣ ಮೀನು ಯೋಜನೆ ಆರಂಭಿಸಿದರೂ ಅದು ಸರಿಯಾಗಿ ಒಣಗದ ಕಾರಣಕ್ಕೆ ಮುಂದೂಡಲಾಗಿದೆ ಎಂದು ಅವರು ಹೇಳಿದರು.

ಕರಾವಳಿಯಲ್ಲಿ ಅತಿಯಾದ ಮಳೆ ಬರುವುದರಿಂದ ಇಲ್ಲಿನ ಹಳ್ಳಿಗಳಲ್ಲಿ ಡಾಮಾರು ರಸ್ತೆಗಳು ಸೂಕ್ತವಲ್ಲ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಕೇಸರಿ ಯುವರಾಜ್, ಪ್ರದೀಪ್ ಮೊದಲಾದವರು ಉಪಸ್ಥಿತರಿದ್ದರು.



Join Whatsapp