►ಸಂಪುಟದಿಂದ ಇಬ್ಬರನ್ನು ಕೈ ಬಿಟ್ಟು ಹೊಸಬರಿಗೆ ಅವಕಾಶ
ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಂಗಳವಾರ ನವದೆಹಲಿಗೆ ತೆರಳುತ್ತಿದ್ದು, ಸಂಪುಟ ವಿಸ್ತರಣೆ, ಪುನಾರಚನೆಯ ಅನಿಶ್ಚಿತತೆಗೆ ತೆರೆ ಬೀಳುವ ಸಂಭವವಿದೆ.
ರಾಜ್ಯ ಸರಕಾರದ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಇಲಾಖೆ ಹಾಗೂ ಐಟಿ-ಬಿಟಿ ಇಲಾಖೆಯಿಂದ ಹಮ್ಮಿಕೊಂಡಿರುವ ಹೂಡಿಕೆದಾರರ ಸಮಾವೇಶದ ಪೂರ್ವ ಸಿದ್ಧತಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಮುಖ್ಯಮಂತ್ರಿ ತೆರಳುತ್ತಿದ್ದು, ಇದೇ ಸಂದರ್ಭದಲ್ಲಿ ಬಿಜೆಪಿಯ ಕೆಲವು ರಾಷ್ಟ್ರೀಯ ನಾಯಕರನ್ನು ಭೇಟಿಯಾಗುವ ಸಂಭವವಿದೆ.
ದೆಹಲಿಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪಕ್ಷದ ಪ್ರಮುಖರನ್ನು ಭೇಟಿಯಾಗುವ ಯಾವ ಪೂರ್ವ ನಿಗದಿತ ಕಾರ್ಯಕ್ರಮ ಇಲ್ಲದಿದ್ದರೂ, ಅವಕಾಶ ಸಿಕ್ಕಿದ್ದಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಹಾಗೂ ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಜೊತೆ ಸಮಾಲೋಚನೆ ನಡೆಸುವ ಸಾಧ್ಯತೆ ಇದೆ ಎನ್ನಲಾಗಿದೆ.
ಕೇಂದ್ರ ಗೃಹ ಸಚಿವ ಅಮಿತ್ ಶಾ ಕಳೆದ ವಾರ ಬೆಂಗಳೂರಿಗೆ ಆಗಮಿಸಿದ್ದ ವೇಳೆ, ಸಚಿವ ಸಂಪುಟ ಪುನರ್ ರಚನೆ ಅಥವಾ ವಿಸ್ತರಣೆ ಕುರಿತು ದೆಹಲಿಗೆ ತೆರಳಿದ ನಂತರ ಮಾಹಿತಿ ನೀಡುವುದಾಗಿ ಮುಖ್ಯಮಂತ್ರಿಗೆ ತಿಳಿಸಿದ್ದರು. ವಿದೇಶ ಪ್ರವಾಸದಲ್ಲಿದ್ದ ಪ್ರಧಾನಿ ನರೇಂದ್ರ ಮೋದಿಯವರು ಸ್ವದೇಶಕ್ಕೆ ಹಿಂದಿರುಗಿ ನಾಲ್ಕೈದು ದಿನಗಳಾದರೂ ಸಚಿವ ಸಂಪುಟಕ್ಕೆ ಸಂಬಂಧಿಸಿದಂತೆ ವರಿಷ್ಠರಿಂದ ಯಾವುದೆ ಸೂಚನೆ ಬಾರದೆ ಇರುವುದು ಸಚಿವ ಸ್ಥಾನ ಆಕಾಂಕ್ಷಿಗಳಲ್ಲಿ ತಳಮಳ ಉಂಟು ಮಾಡಿದೆ.
ದುಬೈ ಪ್ರವಾಸಕ್ಕೆ ತೆರಳುವ ಮುನ್ನ ಮಾಜಿ ಸಿಎಂ ಯಡಿಯೂರಪ್ಪ, ಮೇ 10ರೊಳಗೆ ಸಚಿವ ಸಂಪುಟ ಪುನರ್ ರಚನೆಯಾಗಲಿದೆ ಎಂದು ಹೇಳಿದ್ದರು. ಇದೀಗ ಅವರು, ದುಬೈ ಪ್ರವಾಸ ಮುಗಿಸಿಕೊಂಡು ಬೆಂಗಳೂರಿಗೆ ಹಿಂದಿರುಗುತ್ತಿದ್ದಾರೆ. ದೆಹಲಿಯಲ್ಲಿ ಬಿಜೆಪಿ ವರಿಷ್ಠರ ಜೊತೆ ಮುಖ್ಯಮಂತ್ರಿ ಮಾತುಕತೆ ಸಾಧ್ಯವಾದಲ್ಲಿ ಇದೇ ವಾರದಲ್ಲಿ ಸಚಿವ ಸಂಪುಟ ವಿಸ್ತರಣೆ ಅಥವಾ ಪುನರ್ ರಚನೆಯಾಗುವ ಸಾಧ್ಯತೆಗಳನ್ನು ಅಲ್ಲಗೆಳೆಯುವಂತಿಲ್ಲ.
ಮುಂದಿನ ವರ್ಷ ರಾಜ್ಯ ವಿಧಾನಸಭೆಗೆ ಸಾರ್ವತ್ರಿಕ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ಪಕ್ಷದ ವರಿಷ್ಠರು, ಸಚಿವ ಸಂಪುಟವನ್ನು ಪುನರ್ ರಚನೆ ಮಾಡುತ್ತಾರೋ ಅಥವಾ ವಿಸ್ತರಣೆಗಷ್ಟೇ ಸೀಮಿತಗೊಳಿಸುತ್ತಾರೋ ಎನ್ನುವುದನ್ನು ಕಾದು ನೋಡಬೇಕಿದೆ. ಎಲ್ಲ ಪಕ್ಷಗಳಲ್ಲೂ ಪಕ್ಷಾಂತರ ಪರ್ವ ಆರಂಭವಾಗಿರುವುದರಿಂದ ಈಗಾಗಲೆ ಬಿಜೆಪಿ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳ ಪ್ರಮುಖ ಮುಖಂಡರು, ಮಾಜಿ ಶಾಸಕರು, ಸಚಿವರನ್ನು ತನ್ನತ್ತ ಸೆಳೆದುಕೊಳ್ಳುವ ಪ್ರಯತ್ನ ಆರಂಭಿಸಿದೆ.
ಸಚಿವ ಸಂಪುಟ ವಿಸ್ತರಣೆ ಅಥವಾ ಪುನರ್‌ರಚನೆ ಸಂದರ್ಭದಲ್ಲಿ ಆಡಳಿತ ಪಕ್ಷದ ವಿರುದ್ಧ ಅಸಮಾಧಾನಗೊಳ್ಳಲಿರುವ ಅತೃಪ್ತರನ್ನು ತಮ್ಮತ್ತ ಸೆಳೆದುಕೊಳ್ಳಲು ಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕರು ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದಾರೆ. ಕೋಲಾರ ಹಾಗೂ ಮಂಡ್ಯ ಜಿಲೆಯಲ್ಲಿ ನಡೆಸಿರುವ ಆಪರೇಷನ್ ಕಮಲ ರಾಜ್ಯದ ಇನ್ನಿತರ ಭಾಗಕ್ಕೂ ವಿಸ್ತರಿಸುವ ಸೂಚನೆಯನ್ನು ಈಗಾಗಲೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ನೀಡಿದ್ದಾರೆ.
ವಿಧಾನಸಭೆ ಚುನಾವಣೆಗೂ ಮುನ್ನ ಬಿಬಿಎಂಪಿ, ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಚುನಾವಣೆಗಳನ್ನು ಗಮನದಲ್ಲಿಟ್ಟುಕೊಂಡು ಹೆಚ್ಚು ಅವಧಿಗೆ ಸಚಿವ ಸ್ಥಾನದಲ್ಲಿ ಮುಂದುವರೆದಿರುವವರ ಪೈಕಿ ಕೆಲವರನ್ನು ಪಕ್ಷದ ಕೆಲಸಕ್ಕೆ ನಿಯೋಜಿಸಿ, ಹೊಸಬರು ಹಾಗೂ ಉತ್ಸಾಹಿಗಳನ್ನು ಸಂಪುಟಕ್ಕೆ ಸೇರ್ಪಡೆ ಮಾಡಿಕೊಳ್ಳುವ ನಿಟ್ಟಿನಲ್ಲಿಯೂ ವರಿಷ್ಠರು ಲೆಕ್ಕಾಚಾರ ಹಾಕಿದ್ದಾರೆ ಎಂದು ತಿಳಿದು ಬಂದಿದೆ.
ಆಕಾಂಕ್ಷಿಗಳ ದಂಡು: ವಿಧಾನಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್, ಶಾಸಕರಾದ ಎಸ್.ಎ.ರಾಮದಾಸ್, ಎನ್.ಮಹೇಶ್, ಹಾಲಾಡಿ ಶ್ರೀನಿವಾಸ್ ಶೆಟ್ಟಿ, ಶ್ರೀಮಂತ ಪಾಟೀಲ್, ಮಹೇಶ್ ಕುಮಟಹಳ್ಳಿ, ಅರವಿಂದ ಬೆಲ್ಲದ್, ಎಂ.ಪಿ.ರೇಣುಕಾಚಾರ್ಯ, ತಿಪ್ಪಾರೆಡ್ಡಿ, ಪೂರ್ಣಿಮಾ ಶ್ರೀನಿವಾಸ್, ದತ್ತಾತ್ರೇಯ ಪಾಟೀಲ್ ರೇವೂರ, ಬಸನಗೌಡ ಪಾಟೀಲ್ ಯತ್ನಾಳ್, ರಾಜುಗೌಡ ನಾಯಕ್ ಸೇರಿದಂತೆ ಇನ್ನಿತರ ಶಾಸಕರು ಸಚಿವ ಸಂಪುಟ ಪ್ರವೇಶಿಸಲು ಆಕಾಂಕ್ಷಿಗಳಾಗಿದ್ದಾರೆ.
ಸತೀಶ್ ರೆಡ್ಡಿಗೆ ಒಲಿಯುವುದೇ ಅದೃಷ್ಟ
ಸದ್ಯದ ಪರಿಸ್ಥಿತಿಯಲ್ಲಿ ಸಂಪುಟ ಪುನರ್ರಚನೆ ಮಾಡುವ ಬದಲು ಸಂಪುಟದಲ್ಲಿ ಖಾಲಿಯಿರುವ ಸ್ಥಾನಗಳನ್ನು ತುಂಬಲು ಆಸಕ್ತಿ ವಹಿಸಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಬೆಂಗಳೂರಿನಲ್ಲಿ ಹಾಲಿ ಸಚಿವರಾಗಿರುವ ಆರ್.ಅಶೋಕ್, ವಿ.ಸೋಮಣ್ಣ, ಭೈರತಿ ಬಸವರಾಜ, ಎಸ್.ಟಿ.ಸೋಮಶೇಖರ್, ಡಾ.ಸಿ.ಎನ್.ಅಶ್ವತ್ಥ ನಾರಾಯಣ, ಕೆ.ಗೋಪಾಲಯ್ಯ ಹಾಗೂ ಮುನಿರತ್ನ ಈ ಪೈಕಿ ಯಾರಾದರೂ ಇಬ್ಬರನ್ನು ಸಂಪುಟದಿಂದ ಕೈ ಬಿಟ್ಟು, ವಿಧಾನಸಭೆಯ ಸರಕಾರದ ಮುಖ್ಯ ಸಚೇತಕ ಎಂ.ಸತೀಶ್ ರೆಡ್ಡಿ ಹಾಗೂ ಮಹದೇವಪುರ ಕ್ಷೇತ್ರದ ಶಾಸಕ ಅರವಿಂದ ಲಿಂಬಾವಳಿ ಅವರನ್ನು ಸಂಪುಟದಲ್ಲಿ ಅವಕಾಶ ನೀಡುವ ಕುರಿತು ಚಿಂತನೆ ನಡೆಸಿದ್ದಾರೆ ಎನ್ನಲಾಗಿದೆ.